ರಾಷ್ಟ್ರ ಶಕ್ತಿ ಕೇಂದ್ರ

ಚಕ್ರವರ್ತಿ ಸೂಲಿಬೆಲೆಯ ಮೇ ತಿಂಗಳ ಕಾರ್ಯಕ್ರಮಗಳು

Posted in ಕಾರ್ಯಕ್ರಮ- ವರದಿ by yuvashakti on ಮೇ 3, 2010

ಚಕ್ರವರ್ತಿ ಸೂಲಿಬೆಲೆಯವರ ಕಾರ್ಯಕ್ರಮಗಳ ಲಿಸ್ಟ್ ಅನ್ನು ನೀಡಲಾಗಿದೆ. ಅವರ ಬಿಡುವಿನ ದಿನಗಳ ಬಗ್ಗೆ ವಿಚಾರಿಸುತ್ತಿರುವವರಿಗೆ ಅನುಕೂಲ ಮಾಡಿಕೊಡುವುದಷ್ಟೆ ಇದರ ಉದ್ದೇಶ.

ಮೇ ೧  – ಬೆಂಗಳೂರು-  ವಿಶ್ವಮಾನವ ವಿವೇಕಾನಂದ; ಏಕವ್ಯಕ್ತಿ ಪ್ರದರ್ಶನ

ಮೇ ೫  –  ಸುಳ್ಯ

ಮೇ ೬  –  ಮಂಜೇಶ್ವರ-  ಜಾಗೋ ಭಾರತ್

ಮೇ ೭  –  ಅಥಣಿ-  ಮೋಟಗಿಮಠ

ಮೇ ೯ರಿಂದ ೧೫  –  ಶಿವಮೊಗ್ಗ ಶಿಬಿರ

ಮೇ  ೨೨  –  ಬೆಂಗಳೂರು; ಸ್ವಾಮಿ ರಾಮತೀರ್ಥ ಫೌಂಡೇಶನ್; ಸ್ವಾಮಿ ರಾಮತೀರ್ಥರ ಕುರಿತು ಉಪನ್ಯಾಸ

ಮೇ ೨೩  –  ಕೂಡ್ಲಿಗಿ; ಸಂತ ಸಮಾವೇಶ

ಮೇ ೨೭  –  ಬೆಂಗಳೂರು; ಹಾಸ್ಟೆಲ್ ಕಾರ್ಯಕ್ರಮ

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು

Posted in ಕಾರ್ಯಕ್ರಮ- ವರದಿ by yuvashakti on ಮಾರ್ಚ್ 26, 2010
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟ
ಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆ
ಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳ
ಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರು- ಗೋಖಲೆ ಇನ್ಸ್ಟಿಟ್ಯೂಟ್- ಸಂಜೆ ೫ರಿಂದ
ಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ

ಏಪ್ರಿಲ್ ತಿಂಗಳ ಕಾರ್ಯಕ್ರಮಗಳು
ಚಕ್ರವರ್ತಿ ಸೂಲಿಬೆಲೆ ಅವರ ಏಪ್ರಿಲ್ ತಿಂಗಳ ಕಾರ್ಯಕ್ರಮಗಳು:
ಏಪ್ರಿಲ್ ೨ – ಜಾಗೋ ಭಾರತ್- ಕೋಟಏಪ್ರಿಲ್ ೭ – ಜಾಗೋ ಭಾರತ್- ಮಲ್ಪೆಏಪ್ರಿಲ್ ೧೦ – ಜಾಗೋ ಭಾರತ್- ಕಾರ್ಕಳಏಪ್ರಿಲ್ ೧೧ – ವಚನ ಗಂಗಾ- ಬೆಂಗಳೂರುಏಪ್ರಿಲ್ ೧೮ – ಜಾಗೋ ಭಾರತ್- ನೆತ್ತರಕೆರೆ

ನೆರೆ ಸಂತ್ರಸ್ತರ ನಿಧಿಗೆ ಜಾಗೋಭಾರತ್ ‘ಅಳಿಲು ಕಾಣಿಕೆ’

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2009

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.

ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.

ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….

~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ

ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.

ಜನವರಿ ೧೨- ಯುವ ದಿನೋತ್ಸವ

Posted in ಕಾರ್ಯಕ್ರಮ- ವರದಿ by yuvashakti on ಜನವರಿ 10, 2009

ಜನವರಿ ೧೨, ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರ ಚಿಂತನೆಗಳು ಅತ್ಯಂತ ವಿಶಾಲ ಮತ್ತು ಸಾರ್ವಕಾಲಿಕ. ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

swami_vivekananda-1893-09-signed

ನಿಮಗೆ-ನಮಗೆಲ್ಲರಿಗೂ ಯುವದಿನದ ಶುಭಾಶಯ.

ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆ ಒಟ್ಟಾಗಿ ನಡೆಯೋಣ ಬನ್ನಿ…

‘ಯೂತ್ ಫಾರ್ ಸೇವಾ’ ವತಿಯಿಂದ ಯುವದಿನ

Posted in ಕಾರ್ಯಕ್ರಮ- ವರದಿ by yuvashakti on ಡಿಸೆಂಬರ್ 31, 2008

ಯೂತ್ ಫಾರ್ ಸೇವಾ, ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ, ಅವರಿಗೆ ಸೇವೆಯ ಅವಕಾಶ ಕಲ್ಪಿಸಿಕೊದುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಗೆ ಸಾಫ್ಟ್ ವೇರ್ ಉದ್ಯಮದ ಮಂದಿಗೂ ಸಮಾಜ ಸ್ಪಂದನೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಯದು. ಯೂತ್ ಫಾರ್ ಸೇವಾ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು  www.youthforseva.org  ತಾಣವನ್ನು ನೋಡಬಹುದು, ಅವರ ಕಾರ್ಯದಲ್ಲಿ ನೀವೂ ಸಹಭಾಗಿಗಳಾಗಬಹುದು.

ಪ್ರಸ್ತುತ, ಯೂತ್ ಫಾರ್ ಸೇವಾ, ದಿನಾಂಕ ೩.೦೧.೨೦೦೯ರ ಶನಿವಾರದಂದು ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಯುವದಿನದ ಅಂಗವಾಗಿ (ಸ್ವಾಮಿ ವಿವೇಕಾನಂದರ ಜನ್ಮದಿನ- ಜನವರಿ ೧೨) ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸವನ್ನು ಏರ್ಪಡಿಸಿದೆ. ಸಂಜೆ ೪.೩೦ರಿಂದ ೬.೩೦ರವರೆಗೆ ಯುವದಿನದ ಅಂಗವಾಗಿ ಕಾರ್ಯಕ್ರಮಗಳಿರುತ್ತವೆ. ಚಕ್ರವರ್ತಿ ಸೂಲಿಬೆಲೆಯವರು ಸ್ವಾಮಿ ವಿವೇಕಾನಂದರ ಜೀವನವನ- ಸಂದೇಶವನ್ನು ಬಿಚ್ಚಿಡಲಿದ್ದಾರೆ.

ಯುವದಿನದ ಕಾರ್ಯಕ್ರಮಗಳಿಗಾಗಿ ಎಲ್ಲ ಆಸಕ್ತರನ್ನು ಯೂತ್ ಫಾರ್ ಸೇವಾ ಪ್ರೀತಿಯಿಂದ ಆಹ್ವಾನಿಸಿದೆ.

Tagged with:

‘ಜಾಗೋ ಭಾರತ್’… ಒಂದು ಹೊಸ ಪ್ರಯತ್ನ

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2008

ರಾಷ್ಟ್ರ ಪ್ರಜ್ಞೆ ಹೊಂದಿರುವುದು ಅಂದ್ರೆ ಏನು?
ದೈನಂದಿನ ಬದುಕಿನ ಪ್ರತಿಯೊಂದು ಸಂಗತಿಯಲ್ಲೂ ರಾಷ್ಟ್ರದ ಏಳಿಗೆ, ತನ್ಮೂಲಕ ಜಾಗತಿಕ ಪ್ರಗತಿ ಬಯಸುವುದಷ್ಟೆ. ರಾಷ್ಟ್ರ ಪ್ರಜ್ಞಾವಂತರಾಗುವುದೆಂದರೆ ಅದೇನೂ ಘನಘೋರ ವಿಚಾರವಲ್ಲ.
ಸರ್ವೇ ಸಾಧಾರಣ ಜೀವನ ನಡೆಸುತ್ತಲೇ ನಾವು ಇದನ್ನು ಮಾಡಬಹುದು. ದೇಶಹಿತವನ್ನು ಚಿಂತಿಸುವಲ್ಲಿ ನಾವು ಕಳೆದುಕೊಳ್ಳುವಾದದರೂ ಏನು ಹೇಳಿ?

ಹೀಗೆ ಭಾಷಣ, ಸಾಹಿತ್ಯ ಮಾತ್ರವಲ್ಲದೆ ನಾಡು- ನುಡಿಯೆಡೆಗಿನ ಪ್ರೇಮವನ್ನು ಜಾಗೃತಗೊಳಿಸುವ ಇನ್ನಿತರ ಮಾಧ್ಯಮಗಳತ್ತ ಗಮನ ಹೊರಳಿದಾಗ ಉದಿಸಿದ್ದೇ, ‘ಜಾಗೋ ಭಾರತ್’ ಎನ್ನುವ ಕಾನ್ಸೆಪ್ಟು. ಹಾಗಂತ ಈ ಪ್ರಯತ್ನ ಮಾಡ್ತಿರುವವರಲ್ಲಿ ನಾವೇ ಮೊದಲಿಗರೇನಲ್ಲ. ಆದರೆ, ಕನ್ನಡದಲ್ಲಿ ನಮ್ಮದು ವಿಭಿನ್ನ ಪ್ರಯೋಗ ಎಂದು ಹೆಮ್ಮೆಯಿಂದ ಹೇಳಬಲ್ಲೆವು.

ಜಾಗೋ ಭಾರತ್ ತಂಡದ ಸಂಪೂರ್ಣ ಪ್ರಮಾಣದ ಮೊದಲ ಕಾರ್ಯಕ್ರಮ ನಡೆದಿದ್ದು ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ, ನೂರಾರು ಯುವ ವಿದ್ಯಾರ್ಥಿಗಳ ಮುಂದೆ. ಅಂದು ಸಿಕ್ಕ ಸ್ಪಂದನ ನಮ್ಮನ್ನು ಧೈರ್ಯದಿಂದ ಮುನ್ನಡಿಯಿಡುವಂತೆ ಪ್ರೇರೇಪಿಸಿತು. ಈ ಕಾರ್ಯಕ್ರಮದ ವಿವರವನ್ನು ನೀವು ಇಲ್ಲಿ ನೋಡಬಹುದು.

ನಮ್ಮ ತಂಡದ ಎರಡನೆ ಪ್ರಯೋಗ ನಡೆದಿದ್ದು, ಜಯನಗರದ ಮಾನಂದಿ ಸಭಾ ಭವನದಲ್ಲಿ.
ಶ್ರೀ ರಾಘವೇಂದ್ರ ಶೆಣೈ ಅವರು ಸ್ವಾಮಿ ರಾಮ ತೀರ್ಥ ಫೌಂಡೇಶನ್ ವತಿಯಿಂದ ಪ್ರತಿ ಮೂರನೆಯ ಶನಿವಾರದಂದು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಬಾರಿ ರಾಜ್ಯೋತ್ಸವದ ಅಂಗವಾಗಿ ನಮ್ಮ ತಂಡದಿಂದ ‘ನಿತ್ಯೋತ್ಸವ’ ಎನ್ನುವ ಕಾರ್ಯಕ್ರಮದ ಅಯೋಜನೆಯಾಗಿತ್ತು.
ಆರಂಭದಲ್ಲಿ ‘ಜೈ ಭರತ ಜನನಿಯ ತನುಜಾತೆ’ ಸಮೂಹ ಗಾನ. ಅನಂತರ ‘ಹಚ್ಚೇವು ಕನ್ನಡದ ದೀಪ…’ ಎನ್ನುತ್ತ ಸಭಿಕರಲ್ಲಿ ಭಾವೋದ್ದೀಪನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
ಕವಿ ರಾಜ ಮಾರ್ಗದಿಂದ ಆರಂಭವಾದ ಗೀತ ಗಾಯನ, ನಿಸಾರರ ನಿತ್ಯೋತ್ಸವ ಗೀತೆಯೊಂದಿಗೆ ಮುಕ್ತಾಯಗೊಂಡಿತು. ಗಣೇಶ್ ದೇಸಾಯಿ ಅತ್ಯಂತ ಸ್ಫುಟವಾಗಿ ಕವಿರಾಜ ಮಾರ್ಗದ ಚರಣವೊಂದನ್ನು ಹಾಡಿದರು. ಮಾಲಿನಿ ಕೇಶವ ಪ್ರಸಾದರು ಕುಮಾರ ವ್ಯಾಸ ಭಾರತದ ಗಮಕವನ್ನು ಹಾಡಿದರು. ಹೀಗೆ ಹಳೆಗನ್ನಡದಿಂದ ಇಂದಿನವರೆಗಿನ ಒಟ್ಟು ಹನ್ನೆರಡು ಗೀತೆಗಳನ್ನು ಪ್ರಸ್ತುತಪಡಿಸಲಾಯ್ತು. ಇದಕ್ಕೆ ಸರಿಯಗಿ ಚಕ್ರವರ್ತಿ ಸೂಲಿಬೆಲೆ ಅವರ ಕಥನ ಶೈಲಿಯ ನಿರೂಪಣೆ, ಗೀತೆಗಳ ಅರ್ಥೈಸುವಿಕೆಗೊಂದು ಭೂಮಿಕೆ ಒದಗಿಸಿಕೊಡುತ್ತಿತ್ತು. ಅವರು, ಖ್ಯಾತ ಕವಿಗಳ ಜೀವನ ಚಿತ್ರಣವನ್ನು ಬಿಡಿಸಿಡುತ್ತಾ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದ್ದು ಬಹಳ ಸ್ವಾರಸ್ಯಕರವಾಗಿತ್ತು.

ಗಣೇಶ್ ದೇಸಾಯಿ ಅವರ ‘ಬ್ರಮ್ಮ ನಿಂಗೆ ಜೋಡಿಸ್ತೀನಿ..’ ಗಾಯನ ಕೇಳುಗರನ್ನು ಮತ್ತರನ್ನಾಗಿಸಿಬಿಟ್ಟಿತ್ತೆಂದರೆ ಅತಿಶಯವಲ್ಲ. ಅದಕ್ಕೆ ಸರಿಯಾಗಿ ಪಕ್ಕ ವಾದ್ಯಗಳೂ ಭರ್ಜರಿ ಸಾಥು ಕೊಟ್ಟವು. ಮಾಲಿನಿ, ‘ನಾಗರ ಹಾವೇ, ಹಾವೊಳು ಹೂವೇ…’ ಎನ್ನುತ್ತ ಮೈಮರೆಸಿದರೆ, ಭವಾನಿ ಹೆಗಡೆ- ಕರುಣಾಳು ಬಾ ಬೆಳಕೆ ಹಾಡಿ ತಣಿಸಿದರು. ಇದೇ ಮಾಲಿನಿ ಅವರು ಟೀಚರ್ಸ್ ಕಾಲೇಜಿನ ಕಾರ್ಯಕ್ರಮದಲ್ಲಿ ‘ಐ ಲವ್ ಮೈ ಇಂಡಿಯಾ…’ ಹಾಡಿ ಅಪಾರ ಮೆಚ್ಚುಗೆ ಗಳಿಸಿದ್ದರು.

ಸಂಜೆ ಆರೂವರೆಗೆ ಆರಂಭವಾದ ಕಾರ್ಯಕ್ರಮ ಮುಗಿದಿದ್ದು ರಾತ್ರಿ ಒಂಭತ್ತಕ್ಕೆ! ಅಲ್ಲೀವರೆಗೂ ಜಯನಗರಿಗರು ಉಲ್ಲಾಸದಿಂದ ಕುಳಿತಿದ್ದರು. ಅಲ್ಲಿನ ಶಾಸಕ ಶ್ರೀ ವಿಜಯ್ ಕುಮಾರ್ ಅವರೂ ಕೊನೆವರೆಗೆ ಕುಳಿತಿದ್ದು, ವೇದಿಕೆಯೇರಿ ಮೆಚ್ಚುಗೆಯ ಮಾತುಗಳನ್ನಾಡಿದ್ದೊಂದು ವಿಶೇಷ.

ಜಾಗೋ ಭಾರತ್ ತಂಡದ ವೈಶಿಷ್ಟ್ಯವೆಂದರೆ, ಕೇವಲ ನಾಡುನುಡಿಗೆ ಸಂಬಂಧಿಸಿದಂತಹ ವಿಶಿಷ್ಟ ಹಾಡುಗಳ ಗಾಯನ. ಅದು ಸಿನೆಮಾದ್ದಾಗಿದ್ದರೂ ಸರಿಯೇ. ‘ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ’ ಎನ್ನುವುದು ನಮ್ಮ ಆಶಯ. ಚಕ್ರವರ್ತಿಯ ನಿರೂಪಣೆ ಈ ತಂಡದ ಕಾರ್ಯಕ್ರಮಗಳಿಗೊಂದು ಗರಿ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ತಂಡದ ಕಾರ್ಯಕ್ರಮಗಳು ಚಿತ್ರದುರ್ಗ, ಚಿಕ್ಕ ಮಗಳೂರು ಮತ್ತು ಮೈಸೂರುಗಳಲ್ಲಿ ನಡೆಯಲಿವೆ.

‘ಜಾಗೋ ಭಾರತ್’, ರಾಷ್ಟ್ರ ಶಕ್ತಿ ಕೇಂದ್ರದ ಮನರಂಜನಾ ವಿಭಾಗ. ಇದೊಂದು ಸಾಂಘಿಕ ಪ್ರಯತ್ನ.
ನಿಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತಾ….

ವಂದೇ.
ರಾಷ್ಟ್ರ ಶಕ್ತಿ ಕೇಂದ್ರ ಬಳಗದ ಪರವಾಗಿ,
ಚೇತನಾ ತೀರ್ಥಹಳ್ಳಿ.

ಕೇಂದ್ರದ ಶಿಬಿರದಲ್ಲಿ ಲೆಫ್ಟಿನೆಂಟ್ ಕರ್ನಲ್ ಹರದೇವ ಕಾಟ್ಕರ್

Posted in ಕಾರ್ಯಕ್ರಮ- ವರದಿ by yuvashakti on ಆಗಷ್ಟ್ 20, 2008

ಅವರು ಹುಟ್ಟಿದ ಸಂದರ್ಭದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದರು. ಅವರಪ್ಪ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಮನೆ ಇದ್ದುದು ರಾಮನಗರದಲ್ಲಿ. ಮಳೆ- ನೆರೆಯ ಕಾರಣದಿಂದ ಗಾಂಧೀಜಿ ಅಲ್ಲೇ ಒಂದು ರಾತ್ರಿಯ ಮಟ್ಟಿಗೆ ತಂಗಬೇಕಾಗಿ ಬಂತು. ಆಗ ಆ ಶಿಶುವಿನ ತಂದೆಗೆ ಗಾಂಧೀಜಿಯವರೊಡನಾಡುವ ಸೌಭಾಗ್ಯ!
ಮಾರನೇ ಬೆಳಗ್ಗೆ ಹೀಗಾಯ್ತು. ರಾಷ್ಟ್ರಪಿತ ಸ್ನಾನಕ್ಕೆಂದು ಹೊಳೆಯತ್ತ ನಡೆದರು. ತಮ್ಮ ಬಟ್ಟೆ (ಬಟ್ಟೆ ಏನು? ತುಂಡು ಪಂಚೆ!) ತಾವೆ ಒಗೆದುಕೊಂದರು. ಈ ತಂದೆ ಆ ಬಟ್ಟೆಯನ್ನು ತಾವೇ ಹಿಡಿದುಕೊಂಡರು. ಮುಂದೆ ಮುಂದೆ ಗಾಂಧೀ, ಹಿಂದೆಹಿಂದೆ ಈತ. ನಡುವೆಯೆಲ್ಲೋ ಕೆಲ ನಿಮಿಷ ಅವರ ಪತ್ತೆಯಿಲ್ಲ. ಎಲ್ಲಿ ಹೋಗಿದ್ದರು!?

ಅವತ್ತಿನ ಸಂಜೆ ಲೋಕಾಭಿರಾಮದಲ್ಲಿ ಮಹಾತ್ಮಾ ಆತನನ್ನು ಕೇಳಿದರು, “ಬೆಳಗ್ಗೆ ನದಿಯಿಂದ ಬರುವಾಗ ನೀವು ಎಲ್ಲಿ ಮಾಯವಾಗಿಬಿಟ್ಟಿದ್ದಿರಿ!?
ಆತ ಸಂಕೋಚದಿಂದ ನುಡಿದರು. “ನನಗೆ ಕಳೆದ ವಾರವಷ್ಟೇ ಗಂಡು ಮಗು ಹುಟ್ಟಿದೆ. ನಿಮ್ಮ ಬಟ್ಟೆಯಿಂದ ಜಿನುಗುತ್ತಿದ್ದ  ಪವಿತ್ರ ಜಲವನ್ನ ಅವನಿಗೆ ಚಿಮುಕಿಸಿ ಪವಿತ್ರಗೊಳಿಸೋಣವೆಂದು ಮನೆಗೆ ಹೋಗಿದ್ದೆ. ಹೆಂದತಿ ಮಗುವಿಗೆ ನೀರು ಸೋಕಿ ಶೀತವಾಗುತ್ತದೆಂದು ಗೊಣಗಿದಳು. ಆದರೆ ನಿಮ್ಮ ಮೈ ಸೋಕಿದ ಬಟ್ಟೆಯ ನೀರು ನನಗೆ ಪರಮ ಪವಿತ್ರ!”

ಗಾಂಧೀಜಿ ಅವರ ಅಭಿಮಾನಕ್ಕೆ ಸೋತರು. ಆದರೂ, ತಮ್ಮಿಂದಾಗಿ ಆ ಮಗುವಿಗೇನಾದರೂ ಶೀತಬಾಧೆಯಾದರೆ ತಮಗೆ ಪಾಪ ತಟ್ಟುತ್ತದಲ್ಲವೇ? ಎಂದು ಅವರನ್ನು ಪ್ರಶ್ನಿಸಿದರು. ಕೊನೆಗೆ ತಾವೇ ನೂತ ನೂಲಿನಿಂದ ಮಾಡಿದ ಕೆಲವು ಬಟ್ಟೆಚೂರುಗಳನ್ನು ಅವರ ಕೈಲಿಟ್ಟು ಹರಸಿದರು.

ಆ ಶಿಶು ಮುಂದೊಮ್ಮೆ ತನ್ನ ರಾಷ್ಟ್ರಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡುವುದಿತ್ತು. ಅದರ ಮುನ್ಸೂಚನೆಯೋ ಎನ್ನುವಂತೆ ರಾಷ್ಟ್ರಪಿತನ ಆಶೀರ್ವಾದ ಅದಕ್ಕೆ ದಕ್ಕಿತ್ತು. ಸ್ವಾಭೀಮಾನ, ದೇಶಾಭಿಮಾನಗಳನ್ನು ಮೈಮನಗಳ ತುಂಬ ಹೊತ್ತಿದ್ದ ಅದು ಮುಂದೆ ದೇಶ ಕಾಯುವ ಸೈನಿಕನಾಗಿ ರೂಪುಗೊಂಡಿತು…

~
ಹೌದು. ಇದು ಸತ್ಯ ಸಂಗತಿ. ಇಂಥ ಘಟನೆಗಳು ಅದೆಷ್ಟೋ ಇವೆ ನಿಜ. ಪ್ರಸ್ತುತ ಇಲ್ಲಿ ಹೇಳಿದ ಸಂಗತಿಯನ್ನ ನೇರಾನೇರ ಪ್ರಮುಖ ಪಾತ್ರಧಾರಿಯ ಬಾಯಿಂದಲೇ ಕೇಳುವಾಗ ಆಗಿದ್ದ ರೋಮಾಂಚನವಿದೆಯಲ್ಲ, ಅದು ನಮಗೆ ವಿಶಿಷ್ಟ ಅನುಭವ ನೀಡಿತು.
ಅವರು, ಲೆಫ್ಟಿನೆಂಟ್ ಕರ್ನಲ್  ಹರದೇವ್ ಕಾಟ್ಕರ್. ಅವರೇ ಗಾಂಧೀಜಿಯವರಿಂದ ಸ್ವಾಭಿಮಾನದ ಪ್ರತೀಕವಾದ ಖಾದಿ ಬಟ್ಟೆಯ ಉಡುಗೊರೆ ಪಡೆದ ಧನ್ಯ ಶಿಶು. ಸೈನಿಕ ವೃತ್ತಿಯ ಹಿನ್ನೆಲೆಯ ವಂಶಸ್ಥರಾಗಿದ್ದ ಅವರಿಗೆ ಅದೇನೂ ಯಾಂತ್ರಿಕ ದುಡಿಮೆಯಾಗಿರಲಿಲ್ಲ. ಅವರು ಸಂಪೂರ್ಣವಾಗಿ ತಮ್ಮನ್ನು ಮಾತೃಭೂಮಿಗೆ ಸಮರ್ಪಿಸಿಕೊಂಡಿದ್ದರು. ಭಾರತದ ಮೇಲಿನ ಅವರ ಅಭಿಮಾನ ಅವರ ಪ್ರತಿ ಮಾತಿನಲ್ಲೂ ಎದ್ದು ತೋರುತ್ತದೆ. ಎಂಭತ್ತೊಂದರ ಈ ಇಳಿ ವಯಸ್ಸಿನಲ್ಲೂ ಅವರು ಭಾರತದ ಬಗ್ಗೆ, ಯುದ್ಧಗಳ ಬಗ್ಗೆ ಗಂಟೆಗಟ್ಟಲೆ ಹರಟಬಲ್ಲರು. ಆದರೆ ಕೇಳುವ ನಾವು ಸೂಕ್ತ ಪ್ರಶ್ನೆಗಳನ್ನು ತಯಾರಿಟ್ಟುಕೊಂಡಿರಬೇಕಷ್ಟೆ.

ಹರದೇವ್ ಕಾಟ್ಕರ್ ಅವರು ಚೀನಾ ಯುದ್ಧದಲ್ಲಿ ಒಂದಿಡೀ ಪ್ಲಟೂನ್ ಅನ್ನು ಸಮರ್ಥವಾಗಿ ಮುನ್ನಡೆಸಿದ ನಮ್ಮ ಹೆಮ್ಮೆಯ ಕನ್ನಡಿಗ. ಯುದ್ಧದ ಅವರ ಒಂದೊಂದು ಅನುಭವವೂ ರೋಮಾಂಚಕಾರಿ. ತಮ್ಮ ಅಂದಿನ ದಿನಗಳ ಸಾಥಿಗಳನ್ನು ಅವರು ಇಂದಿಗೂ ಮರೆತಿಲ್ಲ. ಯುದ್ಧದಲ್ಲಿ ಹೊಟ್ಟೆಗೆ ಗುಂಡುಹೊಕ್ಕು ಕರುಳು ಸುಟ್ಟು ಹೋಗಿ ಡಾಕ್ಟರು ಅವರು ಬದುಕುವುದಿಲ್ಲವೆಂದುಬಿಟ್ಟಿದ್ದರಂತೆ! ಅವರು ಹಾಗೆ ಹೇಳಿ ಮೂವತ್ತೈದು ವರ್ಷಗಳು ಸಂದಿವೆ!! ನಮ್ಮ ವೀರಯೋಧ ವಯಸ್ಸಿನ ಕೆಲವು ಸೈಡ್ ಎಫೆಕ್ಟ್ ಗಳನ್ನು ಬಿಟ್ಟರೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ಅವರ ಹೊಟ್ಟೆಯ ಅರ್ಧ ಭಾಗ ಬರೀ ಕೃತಕ ಅಂಗಾಂಗಗಳಿಂದಲೇ ಕೂಡಿದೆ. ಆದರೂ ಅವರು ಯಾಅ ಕಾಯಿಲೆಯ ನೆಪ ಹೇಳದೆ ಇಂದಿಗೂ ತಮ್ಮ ಶಿಸ್ತಿನ ಜೀವನಕ್ಕೆ ಬದ್ಧರಾಗಿದ್ದಾರೆ.

ಕಾಟ್ಕರ್ ಅವರನ್ನು ನಾವು ಭೇಟಿಯಾಗಿದ್ದು- ಮೊನ್ನೆ ನಡೆಯಿತಲ್ಲ, ರ್‍ಆ.ಶ.ಕೇಂದ್ರದ ಯುವ ಜಾಗೃತಿ ಶಿಬಿರ… ಆ ಸಂದರ್ಭದಲ್ಲಿ. ಶಿಬಿರದ ಮುಖ್ಯ ಅಂಗವಾಗಿ ‘ಸೈನಿಕನೊಡನೆ ಒಂದು ಗಂಟೆ’ ಸಂವಾದ ಏರ್ಪಡಿಸಲಾಗಿತ್ತು. ಯುವಕರನ್ನು ಕಂಡು ಸಂತೋಷದಿಂದ ಉಬ್ಬಿಹೋದ ಕಾಟ್ಕರ್, ತಮ್ಮ ಉಸಿರಾಟದ ತೊಂದರೆಯನ್ನೂ ಮರೆತು ಎಡೆಬಿಡದೆ ಸುರಿಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಕುಳಿತಿದ್ದರು. ಯುವಕರೂ ಕೂಡ ಕಾಲದ ಅರಿವಿಲ್ಲದೆ, ಹೊಟೆ ಹಸಿವನ್ನೂ ಮರೆತು ಅವರೊಂದಿಗೆ ಮಾತುಕಥೆಯಲ್ಲಿ ಲೀನವಾಗಿ ಹೋಗಿದ್ದರು.  ಮುಂದಿನ ಅವಧಿಯಲ್ಲಿ ಗಣೇಶ್ ದೇಸಾಯಿಯವರ ರಾಷ್ಟ್ರಭಕ್ತಿ ಗೀತ ಕಾರ್ಯಕ್ರಮವಿಲ್ಲದಿದ್ದರೆ ಬಹುಶಃ ಈ ಸಂವಾದವನ್ನು ಮಧ್ಯೆ ತುಂಡರಿಸುತ್ತಿರಲಿಲ್ಲವೇನೋ!?
ಯುವಕರಿಗಿರಲಿ, ಸ್ವತಃ ಕಾಟ್ಕರರಿಗೂ ಸಂವಾದ ಮುಗಿದದ್ದು ಬೇಸರವಾದಂತೆ ತೋರುತ್ತಿತ್ತು. ಅವರು ಇನ್ನಷ್ಟು, ಮತ್ತಷ್ಟು ಹೇಳುವ ಹುರುಪಿನಲ್ಲಿದ್ದರು. “ಛೆ! ನನ್ನ ಯೂನಿಫಾರಮ್ಮು, ಮೆಡಲುಗಳನ್ನು ನಿಮಗೆ ತೋರಿಸಲು ತರಬೇಕಿತ್ತು, ಇಷ್ಟು ಆಸಕ್ತ ಹುಡುಗರಿದ್ದೀರೆಂಬ ಕಲ್ಪನೆಯೂ ನನಗಿರಲಿಲ್ಲ!” ಎಂದು ಮತ್ತೆಮತ್ತೆ ಪೇಚಾಡಿಕೊಂಡರು.

ಶ್ರೀಯುತ ಕಾಟ್ಕರರು ಬರಹಗಾರರೂ ಹೌದು. ಇವರು ಬರೆದಿರುವ ‘ವಿಶ್ವ ಭರತಿ’ ಕೃತಿ ಇನ್ನೂ ಮುದ್ರಣ ಕಾಣಬೇಕಿದೆ. ಆರಂಭದಲ್ಲಿ ಇವರು ಶಿಕ್ಷಕ ವೃತ್ತಿಯನ್ನಾಯ್ದುಕೊಂಡಿದ್ದರು. ಆಗ ಶ್ರೀ ಪು ತಿ ನರಸಿಂಹಾಚಾರ್ ಇವರ ಸಹೋದ್ಯೋಗಿಯಾಗಿದ್ದರಂತೆ. ಆತ್ಮೀಯರೂ ಆಗಿದ್ದರಂತೆ. ಆಗಿಂದಲೂ ಇವರಿಗೆ ಸಾಹಿತ್ಯದತ್ತ ಒಲವು.
ಕವಿಯೂ ಆಗಿರುವ ಕಾಟ್ಕರರಿಗೆ ಗೀತೆ ರಚಿಸುವ, ಸಂಗೀತ ಸಂಯೋಜನೆ ಮಾಡುವ ಹವ್ಯಾಸಗಳೂ ಇದ್ದವಂತೆ. ಆದರೆ ತಾನೇನಾದರೂ ಸೇನೆಗೆ ಸೇರದೆ ಶಿಕ್ಷಕನಾಗಿಯೇ ಇದ್ದಿದ್ದರೆ ಮನಸ್ಸಿಗೆ ಖಂಡಿತ ನೆಮ್ಮದಿ- ಸಮಾಧಾನ ಸಿಗುತ್ತಿರಲಿಲ್ಲವೆನ್ನುತ್ತಾರೆ ಅವರು. ಸೇನೆಯ ಬಗ್ಗೆ ಅವರಿಗೆ ಅಂತಹ ಒಲವು!

ಕಾಟ್ಕರ್, ಸ್ವತಂತ್ರ್ಯಪೂರ್ವದಿಂದಲೂ ಸೇನೆಯಲ್ಲಿದ್ದವರು. ಹಾಗೆ ಆಂಗ್ಲರ ಅಧೀನರಾಗಿದ್ದ ಕಾಲದ ಒಂದು ಕಹಿ ಘಟನೆಯನ್ನು ಅವರು ನೆನೆಸಿಕೊಂಡರು.
ಅದೊಂದು ದಿನ ಕಾಟ್ಕರ್ ಕಂಟೋನ್ಮೆಂಟಿಗೆ ಹೋಗುತ್ತಾರೆ. ಅಲ್ಲಿ ವರಿಗೊಂದು ಮಿಲಿಟರಿ ಟೊಪ್ಪಿ ಕೊಳ್ಳುವುದಿರುತ್ತದೆ. ಅಲ್ಲೊಂದು ಟೊಪ್ಪಿ ಆಯ್ದು, ಅದಕ್ಕಾಗಿ ಅವರು ಎಂಟಾಣೆಯನ್ನೂ (ಅದರ ಬೆಲೆ)  ಕೊಟ್ಟು ಕಾಯುತ್ತ ನಿಲ್ಲುತ್ತಾರೆ…. ಆದರೆ, ಅಲ್ಲೊಂದು ನಿಯಮವಿರುತ್ತದೆ. ಸಂಜೆ ಆರರ ನಂತರ ಭಾರತೀಯರು ಯಾರೂ ಕಂಟೋನ್ಮೆಂಟಿಗೆ ಕಾಲಿಡುವಂತಿಲ್ಲ!
ಇತ್ತ ಸಮಯ ಜಾರುತ್ತಿದೆ… ಆರು ಗಂಟೆಗೆ ಇನ್ನೊಂದೇ ಒಂದು ನಿಮಿಷ ಬಾಕಿ… ಬಿಲ್ ಬರೆಯುತ್ತಿದ್ದ ಬಿಳಿಯ ಬೇಕಂತಲೇ ತಡ ಮಾಡುತ್ತಿದ್ದಾನೆ… ಕಾಟ್ಕರರಿಗೆ ತಳಮಳ. ತಾವಿರುವ ಸ್ಥಳದಿಂದ ಕಂಟೋನ್ಮೆಂಟಿಗೆ ಬರಲು ಮತ್ತೆ ಖರ್ಚು ಮಾಡಬೇಕು, ಸಮಯವೂ ಹಾಳು.
ಅಗೋ! ಆರು ಗಂಟೆ ಬಡಿದೇಬಿಡುತ್ತದೆ. ಕಾಟ್ಕರ್ ಅದೆಷ್ಟು ಕೇಳಿಕೊಂಡರೂ ಬಿಳಿಯರು ಅವರನ್ನು ಅಲ್ಲಿರಗೊಡುವುದಿಲ್ಲ. ಯುವಕ ಕಾಟ್ಕರ್, ಅವಮಾನದಿಂದ ತಲೆ ತಗ್ಗಿಸಿಕೊಂಡು ಹೊರಬರುತ್ತಾರೆ…

~
ಕಾಟ್ಕರ್ ಪರಾಧೀನತೆಯ ತಮ್ಮ ಅನುಭವ ಸಂಕಟಗಳನ್ನು ವಿವರಿಸುತ್ತಿದ್ದರೆ, ಇತ್ತ ಕೇಳುತ್ತ ಕುಳಿತಿದ್ದ ಹುಡುಗರು, ತಾವು ಮತ್ತೆಂದೂ ಅಂತಹ ಸ್ಥಿತಿಗೆ ಜಾರದಿರುವಂತಾಗಬೇಕು, ಅದಕ್ಕೆ ನಾವು ಎಚ್ಚರದಿಂದಿರಬೇಕು ಎಂದು ಪಣ ತೊಡುತ್ತಿದ್ದರು.

ಶಿಬಿರದ ದಿನ ಆರತಿ ಅಕ್ಕ, ಮಹಮದ್ ಅನ್ವರ್, ಚಕ್ರವರ್ತಿ ಅವರ ಅವಧಿಗಳೂ ಇದ್ದವು. ಆ ಬಗ್ಗೆ ಮತ್ತೆ ಬರೆಯುವೆ. ಕೊನೆಯಲ್ಲಿ ಗಣೇಶ್ ದೇಸಾಯಿ ಅವರ ಗೀತಗಾಯನವಂತೂ ನಮ್ಮನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತ್ತು. ಖುದ್ದು ಅವರಿಗೂ ತಾವು ಹಾಡಿದ್ದು ಸಾಲಲಿಲ್ಲ ಅನ್ನುವಷ್ಟರ ಮಟ್ಟಿಗೆ ಎಲ್ಲರೂ ಅದರಲ್ಲಿ ಲೀನವಾಗಿದ್ದರು!

ರಾಷ್ಟ್ರ ಶಕ್ತಿ ಕೇಂದ್ರದ ಮೂಲ ಉದ್ದೇಶ ಇಂದಿನ ಪೀಳಿಗೆಯನ್ನು ಒಳಗಿನಿಂದಲೂ ಗಟ್ಟಿಗೊಳಿಸುವುದು. ಸದೃಢ- ಸ್ವಾಭಿಮಾನೀ ಯುವ ಪಡೆಯನ್ನು ಸಜ್ಜುಗೊಳಿಸುವುದು. 

ನಮ್ಮೊಂದಿಗೆ ಕೈಜೋಡಿಸಬಯಸುವವರು ಸಂಪರ್ಕಿಸಬೇಕಾದ ಸಂಖ್ಯೆ: ೯೯೪೫೨೦೮೬೩೨; ೯೪೪೮೪೨೩೯೬೩

ನೀವೂ ಬನ್ನಿ…

Posted in ಕಾರ್ಯಕ್ರಮ- ವರದಿ by yuvashakti on ಆಗಷ್ಟ್ 16, 2008

ಸದ್ಗುರುವಿನಿಂದಲೇ ಜಗದ್ಗುರು ಭಾರತ

Posted in ಕಾರ್ಯಕ್ರಮ- ವರದಿ by yuvashakti on ಜುಲೈ 10, 2008

“ಸದ್ಗುರುವಿನಿಂದಲೇ ಜಗದ್ಗುರು ಭಾರತ” ಇದು  ರಾಷ್ಟ್ರಶಕ್ತಿ ಕೇಂದ್ರದಿಂದ ಜಿಗಣಿಯಲ್ಲಿ ಜರುಗಿದ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರಕ್ಕೆ ನಾವಿಟ್ಟ ಶೀರ್ಷಿಕೆ.
ಗಿರಿನಗರ ಯೋಗಾಶ್ರಮದ “ಸ್ವಾಮಿ ಯೋಗೇಶ್ವರಾನಂದ ಜೀ ಮಹಾರಾಜ್‌” ಭಾರತ ಮಾತೆಯ ಭೂ ಪಟದ ಮೇಲೆ ಇಡಲಾಗಿದ್ದ ಹಣತೆಯನ್ನು ಬೆಳೆಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ “ಶಿಕ್ಷಕ, ಗುರುವಾಗುವ ಬಗೆಯನ್ನು” ಗಾಯನ-ಪ್ರವಚನದ ಮೂಲಕ ವಿವರಿಸಿದರು. ಸದೃಡ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಎಷ್ಟಿದೆ ಎಂಬುದನ್ನು ಅವರು ಇತಿಹಾಸದ ಪುಟಗಳಿಂದ, ಉಪನಿಷತ್ತ್ ವಚನಗಳಿಂದ ಎಳೆ ಎಳೆಯಾಗಿ ವಿವರಿಸಿದರು. ಇದು ಶಿಬಿರದ ಮೊದಲ ಅವಧಿಯ ಹೂರಣ.
ನಂತರ ಶಿಕ್ಷಕರಿಗೆ ತರಗತಿ ತೆಗೆದುಕೊಂಡವರು ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷರಾದ, ಕ್ಷಣ ಹೊತ್ತು ಅಣಿ ಮುತ್ತು ಖ್ಯಾತಿಯ ಷಡಕ್ಷರಿಯವರು. ಅದೊಂತರಹ ಪ್ರಾಕ್ಟಿಕಲ್‌ ಕ್ಲಾಸು. ಪ್ರೊಜೆಕ್ಟರ್‌ ಬಳಸಿ ಷಡಕ್ಷರಿ ಮೇಷ್ಟ್ರು ತೆಗೆದುಕೊಂಡ ಕ್ಲಾಸು. “ನವಿರಾದ ಹಾಸ್ಯದ ಜತೆಗೆ ಗಂಭಿರವಾದ ವಿಚಾರವನ್ನು ನಮ್ಮ ಮುಂದಿಟ್ಟ ಷಡಕ್ಷರಿ ಓರ್ವ ಬರಹಗಾರರೆಂದು ಗೊತ್ತಿತ್ತು. ಮಾತುಗಾರರು ಎಂಬುದನ್ನು ಕೇಳಿದ್ದೆವು. ಆದರೆ ಒಬ್ಬ ಶಿಕ್ಷಕ ಎಂಬುದನ್ನು ಕಣ್ಣಾರೆ ಕಂಡೆವು” ಷಡಕ್ಷರಿ ಉಪನ್ಯಾಸ ಮುಗಿದ ನಂತರ ಶಿಬಿರದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯ ಶಿಕ್ಷಕ ಡಿ.ಎಲ್‌.ಎನ್ ಮೇಷ್ಟ್ರು ಉದ್ಗರಿಸಿದ ಸಾಲುಗಳಿವು. “ಬದುಕು ಬದಲಾಯಿಸಬಲ್ಲ ಶಿಕ್ಷಕ” ಇದು ಷಡಕ್ಷರಿಯವರ ಉಪನ್ಯಾಸದ ವಿಚಾರ. ಬದುಕು ಬದಲಾಯಿಸಬಲ್ಲ ಶಿಕ್ಷಕ ತರಗತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಯಶಸ್ವಿ ಶಿಕ್ಷಕರ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರೆ ಕುಳಿತವರಿಗೆ ಘಂಟೆ ೧.೩೦ ಆಗಿದ್ದು ತಿಳಿಯಲೇ ಇಲ್ಲ! ಕೊನೆಗೆ ಷಡಕ್ಷರಿಯವರೇ ೧.೩೦ ಆಯಿತು ಈಗ ಊಟದ ಸಮಯ ಅಂತಾ ಉಪನ್ಯಾಸ ನಿಲ್ಲಿಸಿದರು. ಸುಮಾರು ೧.೪೫ ಘಂಟೆ ಕಾಲದ ಉಪನ್ಯಾಸವಾದರೂ ಹೇಳಿದ ವಿಚಾರಗಳು ಜೀವನ ಪರ್ಯಂತಕ್ಕೂ ಸಾಕಾಗುವಷ್ಟು.
ಪ್ರಶಾಂತಿ ಕುಟೀರ ಹೆಸರಿಗೆ ತಕ್ಕಂತೆ ಪ್ರಶಾಂತವಾದ ಕುಟೀರ. ಜಿಗಣಿಯಿಂದ ಮೈಲು ದೂರದಲ್ಲಿರುವ ವಿವೇಕಾನಂದ ಯೋಗ ಅನುಸಂದಾನ ವಿಶ್ವವಿದ್ಯಾನಿಲಯದ ಇನ್ನೊಂದು ಹೆಸರೇ ಪ್ರಶಾಂತಿ ಕುಟೀರ. ಅಲ್ಲಿನ ವಾತವರಣವೇ ಒಂತರಹ ಋಷಿ ಮುನಿಗಳ ಕಾಲದ ಪರಿಸರ. ಪುಟ್ಟ,ಪುಟ್ಟ ಕುಟೀರಗಳು, ನಡುನಡುವೆ ಪ್ರಾರ್ಥನಾ ಮಂದಿರ….ಒಂದು ಅದ್ಬುತ ಸ್ಥಳವದು. ಅಲ್ಲಿನ ಊಟೋಪಚಾರವೂ ಯೋಗಕ್ಕೆ ತಕ್ಕಂತಹದ್ದೇ. ಊಟ ಮುಗಿದ ನಂತರ ಸಂಗೀತ ರಸಮಂಜರಿ.
ಹೊಡಿಮಗ, ಹೊಡಿಮಗ ಬಿಡಬೇಡ ಅವನ್ನಾ….ರಸಮಂಜರಿ ಅಂದ್ರೆ ಇಂತಹದ್ದೆ ಗೀತೆಗಳಲ್ವಾ? “ಸಾರ್ ನಮಗೆ ಈ ತರಹದ್ದು ಒಂದು ಸಂಗೀತ ರಸ ಮಂಜರಿ ನಡೆಸಬಹುದು ಅಂತಾ ಗೊತ್ತೆ ಇರಲಿಲ್ಲ. ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಇಂತಹದ್ದೆ ರಸಮಂಜರಿ ಆಯೋಜಿಸುತ್ತೇವೆ” ಶಂಕರ್‌ ಶ್ಯಾನುಬೋಗರ ದೇಶಭಕ್ತಿಗೀತೆಗಳ ರಸ ಮಂಜರಿ ಸವಿದ ನಂತರ ಪ್ರಾಧ್ಯಾಪರೊಬ್ಬರು ಹೇಳಿದ ಸಾಲಿದು. “ವಂದೇ ಮಾತರಂ’ ಎಂಬ ಅದ್ಬುತವಾದ ರಾಷ್ಟ್ರಪ್ರೇಮ ಸಾರುವ ವಿಭಿನ್ನ ದೇಶ ಭಕ್ತಿಗೀತೆಗಳ ರಸಮಂಜರಿಯಿಂದ ಖ್ಯಾತರಾದ ಗಾಯಕ ಶಂಕರ್‌ಶ್ಯಾನುಬೋಗ್‌ ನಡೆಸಿಕೊಟ್ಟ ಸುಮಾರು ಒಂದುವರೆ ತಾಸುಗಳ ದೇಶಭಕ್ತಿ ಗೀತೆ ಗಾಯನ ಇಡೀ ಕಾರ್ಯಕ್ರಮದ ಯಶಸ್ಸಿನ ಘಟ್ಟ ಬಿಡ್ರಿ ಅಂತಾ ಶಿಕ್ಷರೊಬ್ಬರು ಉದ್ಗಾರ ತೆಗೆಯುವ ಹೊತ್ತಿಗೆ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಆರಂಭವಾಗಿತ್ತು.

kamala

“ಸಮರ್ಥ ಶಿಕ್ಷಕ-ರಾಷ್ಟ್ರ ರಕ್ಷಕ” ವಿಚಾರವಾಗಿ ಮಾತನಾಡಿದ ಸೂಲಿಬೆಲೆ ಎಲ್ಲರ ಕಣ್ಣಲ್ಲೂ ನೀರಿಳಿಸಿದರು. “ಅವರ ಭಾಷಣ ಅದೆಷ್ಟು ಪ್ರಖರವಾಗಿತ್ತೆಂದರೆ ನಾನು ನಾಲ್ಕು ಜನರ ಕಣ್ಣಲ್ಲಿ ಕಣ್ಣೀರು ಕಂಡೆ. ಮಾತ್ರವಲ್ಲ ನಾನು ಕಣ್ಣಿರು ಹಾಕಿದೆ” ಎಂದು ಶಂಕರ್‌ಶ್ಯಾನುಬೋಗ್‌ ನಂತರ ಹೀಗೆ ಮಾತಾಡುತ್ತಾ ಹೇಳಿದರು. ಶಿಕ್ಷಕರ ಅಂತಸತ್ವವನ್ನು ಜಾಗೃತಗೊಳಿಸುವಲ್ಲಿ ಚಕ್ರವರ್ತಿಗಿಂತ ಅದ್ಬುತ ಮಾತುಗಾರ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಎಂಬುದು ನಮ್ಮ ಭಾವ. ಇದು ಹೊಗಳಿಕೆಯ ಮಾತಲ್ಲ ಶಿಕ್ಷಕರುಗಳು ಚಕ್ರವರ್ತಿ ಮಾತಾಡಿದ ನಂತರ ಹಂಚಿಕೊಂಡ ಅನುಭವದಿಂದ ಆಯ್ದ ಮಾತು.
ಶಿಕ್ಷಕರ ಅನುಭವ ಹಂಚಿಕೆ ಶಿಬಿರದ ಕೊನೆ ಭಾಗ. ಎಷ್ಟೋ ಜನ ಶಿಕ್ಷಕರಿಗೆ ಅನುಭವ ಹಂಚಿಕೊಳ್ಳಲು ಅವಕಾಶವೇ ಸಿಗಲಿಲ್ಲ ಸಮಯದ ಅಭಾವದಿಂದ. ಒಟ್ಟಿನಲ್ಲಿ ಒಂದು ಯಶಸ್ವಿ ಕಾರ್ಯಕ್ರಮ ಈ ಶಿಬಿರ. “ಸಾರ್ ಇಂತಹದ್ದೊಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲೂ ನಡೆಯಬೇಕು. ನೀವೇ ಬಂದು ನಡೆಸಿಕೊಡಬೇಕ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸೇರಿಸ್ತೇವೆ. ಹಣದ ಬಗ್ಗೆಯೂ ಚಿಂತೆಯಿಲ್ಲ, ಸ್ವತಃ ನಾವೇ ಹಾಕಿಕೊಂಡು ಏರ್ಪಾಡು ಮಾಡ್ತೇವೆ…” ಎಂದು ಕೋರಿರುವ ಮುಖ್ಯಶಿಕ್ಷಕರ ಮಾತುಗಳೇ ಶಿಬಿರದ ಯಶಸ್ಸಿಗೆ ಹಿಡಿದ ಕನ್ನಡಿ. ಈ ಶಿಬಿರದ ಯಶಸ್ಸಿನ ಹಿಂದೆ ರಾಷ್ಟ್ರಶಕ್ತಿ ಕೇಂದ್ರದ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವಿದೆ. ಮತ್ತು ಕಾರ್ಯಕ್ರಮದಿಂದಾಗಿ ಕೇಂದ್ರದ ಜವಬ್ದಾರಿಯೂ ಮತ್ತಷ್ಟು ಹೆಚ್ಚಾಗಿದೆ.
                                                                                                                     

                                                                                                                                                                                  ~ ಪಯಣಿಗ