ರಾಷ್ಟ್ರ ಶಕ್ತಿ ಕೇಂದ್ರ

ಸ್ವಾತಂತ್ರ್ಯೋತ್ಸವಕ್ಕೆ ಮುನ್ನ…

Posted in ನಮ್ಮ ಇತಿಹಾಸ by yuvashakti on ಆಗಷ್ಟ್ 7, 2008

ಇನ್ನೊಂದು ವಾರ ಅನ್ನುವಷ್ಟರಲ್ಲಿ ನಮ್ಮ ಸ್ವಾತಂತ್ರ್ಯೋತ್ಸವ ಬರಲಿದೆ. ಅದಕ್ಕೆ ಮುನ್ನ ಹೀಗೊಂದು  ಅವಲೋಕನ ಮಾಡಿಕೊಳ್ಳೋಣವೆನಿಸಿ ಬರೆಯುತ್ತಿದ್ದೇನೆ.

ಭಾರತ ಸ್ವಾತಂತ್ರ್ಯ ಹೋರಾಟ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಹುದೊಡ್ಡ ಪ್ರಕ್ರಿಯೆ. ಅದೇನೂ ಧಿಡೀರನೆ ಬಂದು ಕದ ತಟ್ಟಿದ್ದಲ್ಲ.
“ಆಂಗ್ಲರು ನಮ್ಮನ್ನು ಲೂಟಿ ಮಾಡಬಹುದಾಗಿದ್ದಷ್ಟನ್ನೂ ಮಾಡಿ ಮುಗಿಸಿ, ಇನ್ನು ಇಲ್ಲೇನೂ ದಕ್ಕುವುದಿಲ್ಲ ಎಂದು ಅರಿವಾದ ನಂತರವಷ್ಟೆ ಕಾಲು ಕಿತ್ತಿದ್ದು” ಎಂದು ಯುವಕನೊಬ್ಬ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹಾಗಾದರೆ…?
ಹಾಗಾದರೆ ನಮ್ಮವರು ಅಷ್ಟೆಲ್ಲ ಹೋರಾಡುವ ಅಗತ್ಯವೇ ಇರಲಿಲ್ಲವಾ?  ಹೇಗಿದ್ದರೂ ಮೆದ್ದು ಮುಗಿದ ನಂತರ ಅವರೇ ಜಾಗ ಖಾಲಿ ಮಾಡುತ್ತಿದ್ದರಲ್ಲ!?
– ಹೀಗಂತ ಯೋಚಿಸುವುದೇ ಬೇಡವೆನಿಸಿತು. ಏಕೆಂದರೆ “ಭಾರತದಲ್ಲಿ ಇನ್ನು ಏನೂ ಉಳಿದಿಲ್ಲ” ಅನ್ನೋದು ಆ ಯುವಕನ ತಪ್ಪು ತಿಳುವಳಿಕೆ ಮಾತ್ರ.
ನಿಜ… ನಮ್ಮಲ್ಲಿ ಅಮೆರಿಕೆಯಲ್ಲಿರುವಂಥ ರೋಡುಗಳಿಲ್ಲ. ಇಂಗ್ಲೆಂಡಿನಲ್ಲಿರುವಂಥ ಮೂಲಭೂತ ಸೌಕರ್ಯಗಳಿಲ್ಲ. ದೊಡ್ಡ ದೊಡ್ಡ ಕಟ್ಟಡಗಳಿಲ್ಲ.
ಆದರೆ…
ಆದರೆ,
ನಮ್ಮಲ್ಲಿ ಸಂತೃಪ್ತಿ ಇದೆ. ನಮ್ಮಲ್ಲಿ ಆಧ್ಯಾತ್ಮಿಕತೆ ಇದೆ. ಯೋಗವಿದೆ. ಬುದ್ಧಿವಂತಿಕೆಯಿದೆ. ಕೌಶಲ್ಯವಿದೆ. ಕುಟುಂಬಗಳಿವೆ! ಬಾಂಧವ್ಯಗಳು ಗಟ್ಟಿಯಾಗಿವೆ!! ( ಈಗೀಗ ಹೊಂದಾಣಿಕೆ ಕಡಿಮೆಯಾಗಿ ಛಿದ್ರವಾಗ್ತಿದೇವೆಂದರೂ ಅದು ಮೇರೆ ಮೀರಿ ಹೋಗಿಲ್ಲ ಅನ್ನುವುದು ವಾಸ್ತವ ಸತ್ಯ) ಕಳ್ಳ- ಕಾಕರು, ಭ್ರಷ್ಟರು, ಬಡ- ಭಿಕ್ಷುಕರು ಬಿಡಿ, ಎಲ್ಲೆಡೆಯೂ ಇರುವರು. ಅಮೆರಿಕ- ಯುರೋಪುಗಳಲ್ಲೂ! (ಅವೇನೂ ದೇವಲೋಕಗಳಲ್ಲ ಅನ್ನೋದು ನೆನಪಿರಲಿ)
ಅದೆಲ್ಲ ಯಾಕೆ? ನಮಗೆ ಇನ್ಯಾರೂ ಹೇಳಿಕೊಳ್ಳಲಾಗದಷ್ಟು ಭವ್ಯವಾದ ಇತಿಹಾಸವಿದೆ! ಆದರೆ ನಾವದನ್ನು ಹಳೆಯ ಪ್ರತಿಷ್ಠೆಗಳ ಗೋರಿ ಎಂದು ಬಗೆಯದೆ ಸದೃಢ ರಾಷ್ಟ್ರ ನಿರ್ಮಾಣದ ಬುನಾದಿ ಎಂದರಿತು ಸಾಗಿದರೆ ಯಶಸ್ಸು ಸದಾ ನಮ್ಮ ಜತೆಗಿರುತ್ತದೆ.

ಹೌದು. ಕಳೆದ ಸಾರ್ತಿಯೋ, ಅದರ ಹಿಂದಿನ ಸರ್ತಿಯೋ ಮನ ಮೋಹನ ಸಿಂಗರು ಹೇಳಿದ್ದರು. ಬ್ರಿಟಿಷರು ಬಾರದಿದ್ದರೆ ನಾವು ಇಷ್ಟೆಲ್ಲ ಮುಂದುವರೆಯುತ್ತಿರಲಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಇದು, “ಈಗ್ಯಾಕೆ ಮತ್ತೆ ಸಿಂಗ್ ಹೆಳಿದ ವಿಷಯ ಕೆದಕಬೇಕು?” ಅಂದು ಸುಮ್ಮನಾಗುವ ಸಂಗತಿಯಲ್ಲ… ಏಕೆಂದರೆ ರಾಷ್ಟ್ರದ ಜಾವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನ ಇಂತಹ ಅಪ್ರಬುದ್ಧ ಹೇಳಿಕೆ ಅದೆಷ್ಟು ಜನರನ್ನು ಅದೇ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ ಅನ್ನುವ ಅರಿವು ಇದೆಯೆ?
ವಾಸ್ತವವಾಗಿ ನಮಗೂ ಕೂಡ ಬಾಲ್ಯದಲ್ಲಿ (ಕಾನ್ವೆಂಟಿನಲ್ಲಿ) ಹೀಗೇ ಹೇಳಿಕೊಡಲಾಗಿತ್ತು. ನಾನು, ನನ್ನಂಥಲಕ್ಷ ಲಕ್ಷ ವಿದ್ಯಾರ್ಥಿನಿಯರು ಅದನ್ನೆ ನೆಚ್ಚಿಕೊಂಡಿದ್ದೆವು. ಆದರೆ, ಯಾವಾಗ ಸಂಸ್ಕೃತದ ಪರಿಚಯವಾಯ್ತೋ, ಜಾನಪದದ ಅಧ್ಯಯನ ಶುರುವಾಯ್ತೋ, ಆಯುರ್ವೇದ- ಮನೆ ಮದ್ದುಗಳ, ಹಳ್ಳಿ ಜನರ ತಾಂತ್ರಿಕ ಕೌಶಲಗಳ, ಹಳೆ ಹಳೆಯ ಗ್ರಂಥಗಳ ಪರಿಚಯವಾಯ್ತೋ ನನ್ನ ಆವರೆಗಿನ ತಿಳುವಳಿಕೆ ಬಗ್ಗೆ ಅತೀವ ನಾಚಿಕೆ ಶುರುವಾಯ್ತು.

ಮೆಹರೂಲಿ ಕಂಬ, ಕುತುಬ್ ಮಿನಾರ್, ಭವ್ಯ ದೇವಾಲಯಗಳು, ಏಕ ಶಿಲಾ ವಿಗ್ರಹಗಳು, ಕೋಟೆ ಕೊತ್ತಲಗಳು… ಇವೆಲ್ಲ ಆಂಗ್ಲರಿಗಿಂತ ಮೊದಲೇ ನಿರ್ಮಿಸಲ್ಪಟ್ಟಿದ್ದಲ್ಲವೆ?
ನಾಗಾರ್ಜುನ (ರಾಸಾಯನ ಶಾಸ್ತ್ರ), ಆರ್ಯಭಟ (ಖಗೋಳ), ಭಾಸ್ಕರ (ಗಣಿತ), ಕಲ್ಹಣ (ಇತಿಹಸಕಾರ), ಚರಕ, ಸುಶ್ರುತ (ಆಯುರ್ವೇದ) ಇವರೆಲ್ಲ ಈ ಕ್ಷಣಕ್ಕೆ ನೆನಪಾಗುವ ಹೆಸರುಗಳಾದರೆ, ಜ್ಯಮಿತಿ ತತ್ತ್ವಗಳಿಗನುಗುಣವಾಗಿ ಯಜ್ಞವೇದಿಗಳನ್ನು ರಚಿಸುತ್ತಿದ್ದ ಋಷಿ ಮುನಿಗಳು, ವಾಸ್ತು ಕಲೆಯಲ್ಲಿ ನಿಪುಣರಾಗಿದ್ದ ಸಾಮಾನ್ಯ ಶಿಲ್ಪಿಗಳು, ಬಿಡುವಿನ ವೇಳೆಯಲ್ಲಿ ಬ್ರಹ್ಮ ತತ್ತ್ವ ಹರಟುತ್ತಿದ್ದ ಬ್ರಹ್ಮವಾದಿನಿಯರು…ಇವರೆಲ್ಲ ಯವ ಆಂಗ್ಲ ಶಿಕ್ಷಣವನ್ನೂ ಪಡೆದವರಾಗಿರಲಿಲ್ಲ!

ಆದರೂ… ನಮ್ಮ ಪೀಳಿಗೆ ಹೇಳುತ್ತದೆ, ಇಂಗ್ಲೀಷಿಲ್ಲದಿದ್ದರೆ ನಾವು ಮುಂದುವರೆಯೋದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳೋದು ಸಾಧ್ಯವಾಗ್ತಲೇ ಇರಲಿಲ್ಲ!
ಹ್ಹ! ಜಪಾನ್, ಚೀನಾ, ಅರಬ್ ರಾಷ್ಟ್ರಗಳು, ಇಸ್ರೇಲ್… ಮತ್ತೂ ಉದಾಹರಣೆ ಬೇಕೆ, ಇಂಗ್ಲೀಶಿಗೆ ಮಣೆ ಹಾಕದೆ ಪ್ರಗತಿದೆಸೆಯಲ್ಲಿ ದಾಪುಗಾಲಿಕ್ಕುತ್ತಿರುವುದಕ್ಕೆ? ಹಾಗೆಂದು ಇಲ್ಲಿ ಪ್ರ ಭಾಷೆಗಳ ಕಲಿಕೆಗೆ ಯಾರ ವಿರೋಧವೂ ಇಲ್ಲ. ಆದರೆ ಆ ನೆವದಲ್ಲಿ ನಮ್ಮದನ್ನು ಕೀಳಾಗಿ ಕಂಡು ಹಳಿಯೋದಿದೆಯಲ್ಲ… ಅದು ಶುದ್ಧ ಮೂರ್ಖತನದ ಮಾತು.

ನಮ್ಮ ಮೊದಲ ಪ್ರಧಾನಿ ನೆಹರೂಗಂತೂ ಭಾರತದ ರಾಷ್ಟ್ರ ಭಾಷೆ ಇಂಗ್ಲೀಶ್ ಆಗಬೇಕು ಅನ್ನುವ ಕನಸಿತ್ತು. ನಮ್ಮ ಸುಕೃತ! ಅದು ಕನಸಾಗಿಯೆ ಉಳಿದುಬಿಡ್ತು!!
ಇಷ್ಟಕ್ಕೂ, ನಮ್ಮ ದೇಶದಿಂದ ‘ಸೊನ್ನೆ’ಯನ್ನು ಜಗತ್ತು ಎರವಲು ಪಡೆಯಿತಲ್ಲ, ಆಗ ನಾವದನ್ನ ಇಂಗ್ಲೀಶಲ್ಲಿ ಬರೆದಿಟ್ಟಿದ್ದೆವಾ? ಗ್ರೀಕಿನೊಂದಿಗೆ ವ್ಯಾಪಾರ ಸಂಬಂಧವಿರಿಸಿಕೊಂಡಿದ್ದೆವಲ್ಲ, ಆಗ ಇಂಗ್ಲೀಶ್ ಕಲಿತಿದ್ದೆವಾ? ಯಾವ ನಮ್ಮ ಮಸ್ಲಿನ್ ಬಟ್ಟೆಗೋಸ್ಕರ, ಮಸಾಲಾ ಪದಾರ್ಥಗಳಿಗೋಸ್ಕರ, ಚಿನ್ನ-ಮುತ್ತು-ವಜ್ರಗಳಿಗೋಸ್ಕರ ಅನ್ಯರು ಮತ್ತೆ ಮತ್ತೆ ದುರಾಕ್ರಮಣ ಮಾಡಿ ಕೊಳ್ಳೆ ಹೊಡೆದು ಹೋದರಲ್ಲ, ಆಗ ಅವರಿಗೆಲ್ಲ ನಮ್ಮಲ್ಲಿ ಸಂಪತ್ತಿರುವ ಮಾಹಿತಿ ಇಂಗ್ಲೀಶಿನ ಮೂಲಕವೇ ತಿಳಿದುದಾಗಿತ್ತಾ!?
ಇಷ್ಟಕ್ಕೂ ಈಗ ನಾವು ಇಂಗ್ಲಿಶ್ ಕಲಿತು ಕಡಿಯುತ್ತಿರೋದೇನು? ಪಾಶ್ಚಾತ್ಯರ ಗುಲಾಮಗಿರಿ! ಕಾಲ್ ಸೆಂಟರು, ಬಿಪಿಓಗಳಲ್ಲಿ ಪರಿಚಾರಿಕೆ!! ಪರಿಣಾಮ? ಕಷ್ಟ ಪಡದೆ ಉದ್ಯೋಗ, ಕೈ ತುಂಬಿ ಚೆಲ್ಲುವಷ್ಟು ಹಣ, ಮೌಲ್ಯಗಳ ಕುಸಿತ, ಪ್ರಗತಿಯಲ್ಲಿ ಇಳಿಕೆ!
ಇತ್ತೀಚೆಗೆ ಟೆಕಿಗಳು, ಕಾಲ್ಸೆಂಟರಿನ ಯುವಕರು ಒಂದಷ್ಟು ಸಮಾಜ ಮುಖಿ ಕೆಲಸಗಳಲ್ಲಿ ಆಸಕ್ತಿ ತೋರಿಸ್ತಿರೋದು ಒಳ್ಳೆಯ ಬೆಳವಣಿಗೆ. ಆದರೆ ಆ ಉದ್ಯೋಗಗಳಿಂದಾಗ್ತಿರೋ ಸೈಡ್ ಎಫೆಕ್ಟ್ ಗಳಿಗೆ ಅಷ್ಟು ಮಾತ್ರ ಸಾಲದು. ಆ ಬಗೆಯ ಉದ್ಯೋಗಿಗಳಲ್ಲಿ ರಾಷ್ಟ್ರ ಪ್ರಜ್ಞೆ ವ್ಯಾಪಕವಾಗಿ ಬೆಳೆಯಬೇಕು.

ಸದ್ಯಕ್ಕೆ ಈ ಹರಟೆ ನಿಲ್ಲಿಸುವೆ. ಅದಕ್ಕೆ ಮುನ್ನ, ಮೆಕಾಲೆ ಎನ್ನುವ ಆಂಗ್ಲನೊಬ್ಬ ನಮ್ಮ ರಾಷ್ಟ್ರವನ್ನು ನೋಡಿ ದಂಗುಬಡಿದು ಬಡಬಡಿಸಿದ್ದನ್ನು ಇಲ್ಲಿ ನೀಡುತ್ತಿರುವೆ.

                                                     

“ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದೆ. ಆದರೆ ಎಲ್ಲೂ ನನಗೆ ಒಬ್ಬ ಭಿಕ್ಷುಕನಾಗಲೀ ಕಳ್ಳನಾಗಲೀ ಕಾಣಸಿಗಲಿಲ್ಲ. ಈ ದೇಶದಲ್ಲಿ ನಾನು ಎಷ್ಟೊಂದು ಸಂಪತ್ತನ್ನು, ನೈತಿಕ ಮೌಲ್ಯಗಳನ್ನು, ಜನರ ಔದಾರ್ಯವನ್ನು, ಕೌಶಲ್ಯವನ್ನು ಕಂಡೆನೆಂದರೆ, ಈ ದೇಶದ ಬೆನ್ನೆಲುಬಾಗಿರುವ ಆಧ್ಯಾತ್ಮ ಮತ್ತು ಸಂಸ್ಕೃತಿಗಳನ್ನು ಮುರಿಯದೆ ನಾವು ಇದನ್ನು ವಶಪಡಿಸಿಕೊಳ್ಳೋದು ಸಾಧ್ಯವೇ ಇಲ್ಲ ಎಂದೆನಿಸುತ್ತದೆ. ಆದ್ದರಿಂದ ನನ್ನ ಸೂಚನೆಯೇನೆಂದರೆ, ನಾವು ಭಾರತದ ಶಿಕ್ಷಣ ಪದ್ಧತಿ ಮತ್ತು ಸಂಸ್ಕೃತಿಯ ಜಾಗದಲ್ಲಿ ನಮ್ಮದನ್ನು ತಂದು, ಭಾರತೀಯರೆಲ್ಲರೂ ಪರದೇಶದ ಮತ್ತು ಇಂಗ್ಲೀಶಿನ ಎಲ್ಲವೂ ನಮ್ಮದಕ್ಕಿಂತ ಉತ್ಕೃಷ್ಟ ಎಂದು ಯೋಚಿಸುವಂತಾಗಬೇಕು. ಆಗ ಖಚಿತವಾಗಿಯೂ ಅವರು ತಮ್ಮ ಸ್ವಾಭಿಮಾನ ಮತ್ತು ಸಂಸ್ಕೃತಿಗಳನ್ನು ಕಳೆದುಕೊಂಡು, ನಾವು ಬಯಸುವಂತೆ ನಿಜವಾಗಿಯೂ ನಮ್ಮ ಹಿಡಿತಕ್ಕೆ ಸಿಗುತ್ತಾರೆ”

ಹಾಗಾದರೆ… ಮೆಕಾಲೆ ಬಿತ್ತಿದ ವಿಷ ಬೀಜ  ನಿರಂತರವಾಗಿ ವಿಷ ಫಲಗಳನ್ನು ನೀಡುತ್ತಿರುವಂತೆ ನಾವು ಜತನದಿಂದ ಕಾಪಾಡಿಕೊಂದು ಬರುತ್ತಿದ್ದೇವಾ?

(ಚಿತ್ರ ಕೃಪೆ, moralstories.wordpress.com)

ಓ ಆಜಾದ್ ಥಾ… ಆಜಾದ್ ಹೀ ರೆಹ್ ಗಯಾ….

Posted in ನಮ್ಮ ವೀರರು by yuvashakti on ಜುಲೈ 22, 2008

ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೆ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ….. ಜೈ!!” “ವಂದೇ….. ಮಾತರಂ!!”

ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು… ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ….
ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ.

ಎಂದಿನಂತೆ ಆಂಗ್ಲರ ಕಟಕಟೆಯಲ್ಲಿ ವಿಚಾರಣೆಯ ನಾಟಕ. ಅಲ್ಲೊಂದು ಸ್ವಾರಸ್ಯಕರ ಸಂಭಾಷಣೆ:
ನ್ಯಾಯಾಧೀಶ: ನಿನ್ನ ಹೆಸರೇನು?
ಹುಡುಗ: ಆಜಾದ್!
ನ್ಯಾ: ತಂದೆಯ ಹೆಸರು?
ಹು: ಸ್ವಾತಂತ್ರ್ಯ
ನ್ಯಾ: ಮನೆ ಎಲ್ಲಿದೆ?
ಹು: ಸೆರೆಮನೆಯೇ ನನಗೆ ಮನೆ!!

ಎರಡೂ ಕೈಸೇರಿಸಿ ಹಾಕಿದರೂ ಕೋಳ ತುಂಬದ ಪುಟ್ಟ ಹುಡುಗನ ಕೆಚ್ಚೆದೆ ಆ ಬಿಳಿಯನಿಗೆ ಮತ್ಸರ ಮೂಡಿಸಿರಬೇಕು. ಹದಿನೈದು ಛಡಿ ಏಟುಗಳ ಶಿಕ್ಷೆ ವಿಧಿಸಿಬಿಟ್ಟ.
ಆದರೇನು? ‘ವಂದೇ ಮಾತರಂ’ ಎನ್ನುವ ಮತ್ತೇರಿಸುವ, ಮೈಮರೆಸುವ ಘೋಷ ವಾಕ್ಯದ ಎದುರು ಯಾವ ಪೆಟ್ಟು ತಾನೆ ನೋವುಂಟು ಮಾಡಬಹುದಾಗಿತ್ತು ಆ ಎಳೆಯ ದೇಶಭಕ್ತನಿಗೆ?
ಶಿಕ್ಷೆಯುಂಡು ಹೊರಬಂದ ಬಾಲಕ ಪ್ರತಿಜ್ಞೆ ಮಾಡಿದ.
“ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…
ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”

ಅಂದಿನಿಂದ ಚಂದ್ರ ಶೇಖರ ತಿವಾರಿ ಎನ್ನುವ ಭೀಮ ಬಲದ ಬಾಲಕ ರಾಷ್ಟ್ರಾರ್ಪಣೆಗೆ ಸಿದ್ಧನಾದ, ಚಂದ್ರ ಶೇಖರ ಆಜಾದ್ ಎಂದು ಪ್ರಸಿದ್ಧನಾದ.

~

ಆಜಾದ್ ತಾನು ಮಾಡಿಕೊಂಡಿದ್ದ ಪ್ರತಿಜ್ಞೆಯನ್ನು ಕೊನೆಯವರೆಗೂ ಪಾಲಿಸಿದ. ಕಾಕೋರಿ ಲೂಟಿ, ಸ್ಯಾಂಡರ್ಸ್ ಹತ್ಯೆ, ಲಾಹೋರ್ ಕಾನ್ಸ್ ಪಿರೆಸಿ ಸೇರಿದಂತೆ ಹತ್ತು ಹಲವು ಆರೋಪಗಳು ಆತನ ಮೇಲಿದ್ದು, ಸದಾ ಗೂಢಚಾರರು ಆತನ ಪ್ರತಿ ನಡೆಯನ್ನು ಹದ್ದಿನ ಕಣ್ಣಲ್ಲಿ ಕಾಯ್ತಿದ್ದರೂ ಆತನ ಕೂದಲು ಕೂಡ ಕೊಂಕಿಸಲಾಗಲಿಲ್ಲ. ಆಜಾದ್ ಹೀಗೆ ಗೂಢಚಾರರಿಗೆ, ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ‘ಆಜಾದ’ನಾಗಿಯೇ ಉಳಿದ ಘಟನೆಗಳಂತೂ ಸ್ವಾರಸ್ಯಕರ.

ಕಾಕೋರಿ ಲೂಟಿಯ ನಂತರ ಕ್ರಾಂತಿ ಕಾರ್ಯದ ಬಹುತೇಕ ಪ್ರಮುಖರು ಸಿಕ್ಕಿಬಿದ್ದರು. ಅವರೆಲ್ಲರಿಗೆ ಮರಣದಂಡನೆಯ ಶಿಕ್ಷೆಯೂ ಆಯ್ತು. ಆದರೆ ಆಜಾದ್ ಮಾತ್ರ ತನ್ನ ಸುಳಿವು ಸಿಗದಂತೆ ವೇಷಮರೆಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ. ಇಂಥದೊಂದು ಸಂದರ್ಭದಲ್ಲಿ ಆಜಾದ್ ಸನ್ಯಾಸಿ ವೇಷ ತೊಟ್ಟು ಹೋಗುತ್ತಿದ್ದ. ಆತನ ಕಟ್ಟುಮಸ್ತಾದ, ಹುರಿಗೊಳಿಸಿದ ದೇಹ ಅಲ್ಲೇ ಗಸ್ತು ತಿರುಗುತ್ತಿದ್ದ ಪೋಲಿಸನಿಗೆ ಅನುಮಾನ ತರಿಸಿತು. ಅವನ ಕಣ್ ಮುಂದೆ ಬಹುಮಾನ, ಭಡ್ತಿಗಳ ದುರಾಸೆ ಸುಳಿದು ನೇರವಾಗಿ ಆಜಾದನ ಹೆಗಲ ಮೇಲೆ ಕೈ ಹಾಕಿ ತಡೆದು ನಿಲ್ಲಿಸಿಬಿಟ್ಟ.
“ಓಯ್ ಬಹುರೂಪಿ! ನೀನು ಆಜಾದ್ ಅನ್ನೋದು ಗೊತ್ತಾಗಿದೆ ನನಗೆ. ನೀನು ಸಿಕ್ಕಿಬಿದ್ದಿರುವೆ. ನಡಿ ಠಾಣೆಗೆ!”
ಸನ್ಯಾಸಿ ಹಿಂತಿರುಗಿ ದುರುಗುಟ್ಟಿದ. ಅವನ ಕಣ್ಣುಗಳು ಕೆಂಡದುಂಡೆಯಾದವು. ಮೈಮೇಲೆ ಆವೇಶ ಬಂದವನ ಹಾಗೆ “ಭಂ ಭಂ ಭೋಲೇ… ಭೋಲೇ ನಾಥ್” ಅನ್ನುತ್ತ ಹೂಂ ಕರಿಸಿದ. “ಸಾಧುವಾದ ತನ್ನನ್ನು ಕೊಲೆಗಟುಕನಿಗೆ ಹೋಲಿಸುತ್ತಿರುವೆಯಾ?” ಎಂದೆಲ್ಲ ಕೂಗಾಡಿ ಶಾಪ ಕೊಡುವವನ ಹಾಗೆ ಕಮಂಡಲುವಿನ ನೀರು ಬಗ್ಗಿಸಿದ. ಅಷ್ಟು ಸಾಕಾಯ್ತು ಪೋಲಿಸನ ನಶೆ ಇಳಿಯಲು. ಆತ ನಿಜವಾದ ಸನ್ಯಾಸಿಯೇ ಅನ್ನುವುದು ಅವನಿಗೆ ಮನವರಿಕೆಯಾಗಿಹೋಯ್ತು. ಕೈಕೈ ಮುಗಿದು ಕಾಲಿಗೆ ಬುದ್ಧಿ ಹೇಳಿದ ಆತ, ಮತ್ತೆ ತಿರುಗಿ ನೋಡಲಿಲ್ಲ!
ನಮ್ಮ ಆಜಾದ್ ಒಳಗೊಳಗೆ ನಗುತ್ತ ಹೊರಗಿನಿಂದ ಸಿಡುಕುತ್ತ ತನ್ನ ಹಾದಿ ನಡೆದ.

ಮತ್ತೊಮ್ಮೆ ಹೀಗಾಯ್ತು. ರಾಜಗುರು, ಸುಖದೇವ್ ಮತ್ತು ಆಜಾದ್ ಹಳ್ಳಿ ಗಮಾರರಂತೆ ವೇಷ ತೊಟ್ಟು ಮಹಾರಾಷ್ಟ್ರದಲ್ಲಿ ಅಡ್ಡಾಡುತ್ತಿದ್ದರು. ರೈಲಿನಲ್ಲಿ ಅವರೊಮ್ಮೆ ಶಿವಾಜಿ ಮಹರಾಜರ ಕೋಟೆಕೊತ್ತಲಗಳ ಅವಶೇಷಗಳಿದ್ದ ಕಣಿವೆಯಲ್ಲಿ ಪ್ರಯಾಣಿಸಬೇಕಾಯ್ತು. ವೀರ ಮರಾಠಾ ರಾಜಗುರು ಶುದ್ಧ ಭಾವುಕ ಮನುಷ್ಯ. ಕಿಟಕಿಯಾಚೆ ಕಾಣುತ್ತಿದ್ದ ಕೋಟೆಗಳನ್ನ ನೋಡುತ್ತಲೇ ಉನ್ಮತ್ತನಾದ. “ಹಾ ಶಿವ್ ಬಾ… ಶಿವಾಜಿ ಮಹರಾಜ್.. ನೀನಿಲ್ಲದಿದ್ದರೆ ಇವತ್ತು ನಮ್ಮ ಗತಿ ಏನಾಗಿರುತ್ತಿತ್ತು.. ” ಎಂದೇನೇನೋ ಪ್ರಲಾಪಕ್ಕೆ ಶುರುವಿಟ್ಟ. ಪಕ್ಕ ಕುಳಿತ ಆಜಾದನ ಕೋಪ ನೆತ್ತಿಗೇರಿತು. ರಾಜ ಗುರುವನ್ನು ತಡೆದು ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸತೊಡಗಿದ. ಅವನ ಗುಣಗಾನ ಮಾಡಿದ ರಾಜಗುರುವನ್ನೂ ಬಯ್ದ. ಮೊದಲು ಕಕ್ಕಾಬಿಕ್ಕಿಯಾದ ರಾಜಗುರುವಿಗೆ ನಂತರ ಪರಿಸ್ಥಿತಿಯ ಅರಿವಾಯ್ತು. ಅದಾಗಲೇ ಆಂಗ್ಲರ ಗುಲಾಮರು ತಮ್ಮ ಗೂಢಚಾರಿಕೆ ಮಾಡುತ್ತಿರುವುದು ಅವನಿಗೂ ಗೊತ್ತಿತ್ತು. ತನ್ನ ಅತಿರೇಕದಿಂದ ಎಲ್ಲರೂ ಸಿಕ್ಕಿಬೀಳುತ್ತಿದ್ದೆವಲ್ಲ ಎಂದು ತುಟಿಕಚ್ಚಿಕೊಂಡ. ಪ್ರಯಾಣ ಮುಗಿದು ಕೆಳಗಿಳಿದನಂತರ ಆಜಾದ್ ರಾಜಗುರುವನ್ನು ಚೆನ್ನಾಗಿ ಬಯ್ದ. ಆತ ಸಮಯ ಪ್ರಜ್ಞೆ ತೋರಿಲ್ಲದಿದ್ದರೆ ಅವರಿಗೆ ಕಂಟಕ ಕಾದಿತ್ತು. ಆಜಾದನಿಗೆ ತಮ್ಮ ಉಳಿವಿಗಾಗಿ ಶಿವಾಜಿ ಮಹರಾಜರನ್ನು ನಿಂದಿಸಬೇಕಾಯ್ತು ಎನ್ನುವುದೇ ನೋವಿನ ಸಂಗತಿಯಾಗಿ ಕಾಡುತಿತ್ತು.

ಆಜಾದ್ ವೇಷ ಮರೆಸಿಕೊಳ್ಳುವುದರಲ್ಲಿ ಅದೆಷ್ಟು ನಿಪುಣನೆಂದರೆ, ಕೆಲವೊಮ್ಮೆ ಅವನ ಸಹಚರರಿಗೂ ಆತನ ಪರಿಚಯ ಸಿಗುತ್ತಿರಲಿಲ್ಲ. ಹೀಗೇ ಒಮ್ಮೆ ಆತ ಹಳ್ಳಿಯೊಂದರಲ್ಲಿ ಹನುಮಾನನ ಗುಡಿಯ ಪೂಜಾರಿಯಾಗಿ ಕೆಲವು ಕಾಲ ತಂಗಿದ್ದ. ಆಗ ಅಂಟಿಕೊಂಡ ‘ಪಂಡಿತ್ ಜೀ’ ಅಭಿದಾನ ಜೀವಮಾನದುದ್ದಕ್ಕೂ ಅವನ ಜೊತೆ ಸಾಗಿತು. ಹೀಗೆ ಆತನ ನೈಜ ಹೆಸರನ್ನೂ, ಪರಿಚಯವನ್ನೂ ಮರೆಸುವಷ್ಟು ಸಹಜವಾಗಿ ಆತ ತಾನು ಹಾಕಿಕೊಂಡ ವೇಷದಲ್ಲಿ ನಟಿಸುತ್ತಿದ್ದ. ಆದರೆ ಆಂತರ್ಯದಲ್ಲಿ ಮಾತ್ರ ತನ್ನ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಪ್ರಜ್ಞೆ ಹೊಂದಿದ್ದು ಅದರ ಕಾಳಜಿ ವಹಿಸುತ್ತಿದ್ದ.

ಒಮ್ಮೆ ಆತ ಮೆಕ್ಯಾನಿಕನಾಗಿ ವೇಷ ಧರಿಸಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಕೆಲಸ ಮಾಡುವಾಗೊಮ್ಮೆ ಆತನ ಕೈಮೂಳೆಗೆ ತೀವ್ರವಾಗಿ ಪೆಟ್ಟಾಯ್ತು. ವೈದ್ಯರು ಆಪರೇಶನ್ ಮಾಡಬೇಕೆಂದರು. ಆಜಾದ್ ತನಗೆ ಅನಸ್ತೇಶಿಯಾ ಕೊಡದೆ ಆಪರೇಶನ್ ಮಾಡಿ ಎಂದು ತಾಕೀತು ಮಾಡಿದ. ಅನಸ್ತೇಶಿಯಾದಿಂದ ಎಚ್ಚರ ತಪ್ಪಿದಾಗ ತಾನು ಸದಾ ಧ್ಯಾನಿಸುವ ಕ್ರಾಂತಿಕಾರ್ಯದ ವಿಷಯಗಳನ್ನು ಕನವರಿಸಿಬಿಟ್ಟರೆ? ತನ್ನ ಕಥೆಯಂತೂ ಮುಗಿಯುವುದು, ಆದರೆ ಇಡಿಯ ಸಂಘಟನೆಯ ರಹಸ್ಯವೂ ಬಯಲಾಬಿಡುವುದಲ್ಲ?
ಆಜಾದ್ ತನ್ನ ಧ್ಯೇಯಕ್ಕಾಗಿ ಆ ನೋವನ್ನು ಕೂಡ ಸಹಿಸಲು ಸಿದ್ಧನಾಗಿದ್ದ. ಆದರೆ ವೈದ್ಯರು ಮಾತು ಮಾತಲ್ಲಿ ಅನಸ್ತೇಶಿಯಾ ಕೊಟ್ಟೇಬಿಟ್ಟರು. ಚಿಕಿತ್ಸೆಯೂ ನಡೆಯಿತು. ಆತನಿಗೆ ಎಚ್ಚರವಾದಾಗ ವೈದ್ಯರು, ‘ಆಜಾದ್’ ಎಂದು ಕರೆದಿದ್ದು ಕೇಳಿ ಗಾಬರಿ! ಅಂದರೆ? ತನ್ನ ಪತ್ತೆಯಾಗಿಬಿಟ್ಟಿದೆ!?
ಆದರೆ ಅಲ್ಲಿ ಆತಂಕಕ್ಕೆ ಆಸ್ಪದವಿರಲಿಲ್ಲ. ಆಜಾದನ ರಾಷ್ಟ್ರಪ್ರೇಮ ವೈದ್ಯರ ಮನಸ್ಸು ತಟ್ಟಿತ್ತು. ಅವರು ಅಲ್ಲಿ ನಡೆದ ಯಾವ ಸಂಗತಿಯನ್ನೂ ಯಾರಿಗೂ ಹೆಳುವುದಿಲ್ಲವೆಂದು ಮಾತುಕೊಟ್ಟ ಬಳಿಕವೇ ಆಜಾದನಿಗೆ ನಿಶ್ಚಿಂತೆ.

ಆಜಾದ್ ಅದೆಷ್ಟು ಎಚ್ಚರಿಕೆಯಿಂದ ಇರುತ್ತಿದ್ದನೆಂದರೆ, ಬಹಳ ವರ್ಷಗಳ ನಂತರ ತಂದೆ ತಾಯಿಯರನ್ನು ಭೇಟಿಯಾಗಲು ಹೋದಾಗ ಕೂಡ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತ ನಿದ್ದೆಯನ್ನು ಕೂಡ ಮಾಡದೆ ತನ್ನನ್ನು ತಾನು ಕಾಯ್ದುಕೊಳ್ಳುತ್ತಿದ್ದ. ಊರಿಗೆ ಬಂದ ಮಗ ಮನೆಗೆ ಬರದೆ ಯಾರದೋ ಮನೆಯಲ್ಲಿರುವನೆಂದು ತಾಯಿಗೆ ಬೇಸರ. ಆದರೆ ದೇಶಕ್ಕಾಗಿ ಆತನನ್ನು ಅವರು ಅದೆಂದೋ ಬಿಟ್ಟುಕೊಟ್ಟಿದ್ದರಲ್ಲವೆ? ಆತ ಬದುಕಿರುವನೆಂಬುದೇ ಅವರ ಪಾಲಿಗೆ ಭಾಗ್ಯವಾಗಿತ್ತು.
ಊರಲ್ಲಿರುವಷ್ಟೂ ದಿನ ನಿದ್ದೆ ಕಳಕೊಂಡಿದ್ದ ಆಜಾದ್ ಕಾಡು ಸೇರಿದಾಗ ಮಾತ್ರ ಗಡದ್ದು ನಿದ್ರೆ ಹೊಡೆಯುತ್ತಿದ್ದ. ಕೇಳಿದರೆ, ‘ಊರಿನ ಮನುಷ್ಯರಿಗಿಂತ ಕಾಡಿನ ಪ್ರಾಣಿಗಳನ್ನು ನಂಬುವುದೇ ಮೇಲು’ ಅನ್ನುತ್ತಿದ್ದ.

ಇಂತಹ ಆಜಾದನನ್ನು ಹಿಡಿಯಲು ಕೊನೆಗೂ ಬಿಳಿಯರಿಗೆ ವಿದ್ರೋಹದ ನೆರವೇ ಬೇಕಾಯ್ತು. ದ್ರೋಹಿಯೊಬ್ಬ ಪಾರ್ಕಿನಲ್ಲಿ ಯಾರನ್ನೋ ಕಾದುಕುಳಿತಿದ್ದ ಆಜಾದನ ಪತ್ತೆ ಪೋಲಿಸರಿಗೆ ನೀಡಿದ. ಅವನನ್ನು ಬಂಧಿಸುವ ಇರಾದೆಯಿಂದ ಬಂದ ಪೋಲಿಸರು ಅವನ ಪಿಸ್ತೂಲಿನ ಉತ್ತರ ಎದುರಿಸಬೇಕಾಯ್ತು. ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ ಕೊನೆಯ ಗುಂಡು ಇರುವ ತನಕವೂ ಕಾದಾಡಿದ ಆಜಾದ್ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಪೋಲಿಸರು ಅವನನ್ನು ಸುತ್ತುಗಟ್ಟಿ ಬಂಧಿಸುವ ಮೊದಲೇ ಕೊನೆಯ ಗುಂಡಿನಿಂದ ತನಗೆ ತಾನೇ ಹೊಡೆದುಕೊಂಡು ಮುಕ್ತನಾದ.
ತನ್ನ ಪ್ರತಿಜ್ಞೆಯಂತೆ, ಸ್ವತಂತ್ರನಾಗಿಯೇ ಬದುಕಿದ್ದ. ಸ್ವತಂತ್ರನಾಗಿಯೇ ಪ್ರಾಣತೆತ್ತ.

~
ಜುಲೈ ೨೩ ಚಂದ್ರ ಶೇಖರ ಆಜಾದರ ಜನ್ಮ ದಿನ. ಈ ಸಂದರ್ಭದಲ್ಲಾದರೂ ಅವರನ್ನು ನೆನೆದು ಗೌರವ ಸಲ್ಲಿಸಬೇಕಾದುದು ನಮ್ಮ ಕರ್ತವ್ಯವಲ್ಲವೆ?

                                                                                            ಮಾಹಿತಿ ಆಕರ:  ಚಕ್ರವರ್ತಿ ಸೂಲಿಬೆಲೆಯವರ ಭಾಷಣ