ಆತ್ಮನೋ ಮೋಕ್ಷಾರ್ಥಮ್….
ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
‘ನಾವೆಲ್ಲ ಸಮಾಜ ಸುಧಾರಕರು’ ಹಾಗಂತ ಹೇಳಿಕೊಂಡು ತಿರುಗಾಡುವ, ನಾಲ್ಕು ರುಪಾಯಿಯಷ್ಟು ಖರ್ಚು ಮಾಡಿ ನಾನೂರು ರುಪಾಯಿಯಷ್ಟು ಪ್ರಚಾರ ಪಡೆಯುವ ಜನರನ್ನು ನೀವು ಕಂಡಿರುತ್ತೀರಿ. ನಿಮಗೆ ಆ ಚಾಳಿ ಇಲ್ಲವಾದರೆ ಖಂಡಿತ ಅವರನ್ನು ಕಂಡು ಮೂಗೂ ಮುರಿದಿರುತ್ತೀರಿ. ಅಕಸ್ಮಾತ್ ನೀವೂ ಪ್ರಚಾರಪ್ರಿಯರಾಗಿದ್ದರೆ, ಅವರೊಡನೆ ನೀವೂ ಅಲ್ಲಲ್ಲಿ ನಿಂತೋ ಕುಳಿತೋ ಸಮಾಜ ಸುಧಾರಣೆಯ ಬಗ್ಗೆ ಒಂದಷ್ಟು ಭಾಷಣ ಬಿಗಿದಿರುತ್ತೀರಿ. ಇದೊಂಥರಾ ಸಹಜ ದೃಶ್ಯಾವಳಿ. ಪ್ರಚಾರಕ್ಕೆ ಫ್ಲೆಕ್ಸುಗಳು ಬಂದಮೇಲಂತೂ ಸಮಾಜ ಸುಧಾರಕರು ನಾಯಿಕೊಡೆಗಳಂತೆ ಬೆಳೆದುಬಿಟ್ಟಿದಾರೆ! ದೌರ್ಭಾಗ್ಯವೆಂದರೆ ಸಮಾಜ ಮಾತ್ರ ಇದರಿಂದ ಒಂದಿನಿತೂ ವಿಚಲಿತವಾಗದೆ ಹಾಗೇ ಉಳಿದುಬಿಟ್ಟಿದೆ.
ನಮ್ಮ ನಡೆ ಎಲ್ಲಿ ತಪ್ಪಿದೆ ಎಂದು ವಿಶ್ಲೇಷಿಸಲು ವಿವೇಕಾನಂದರ ಚಿಂತನೆಗಳಿಗೇ ಮೊರೆಹೋಗಬೇಕು. ಅವರ ದೃಷ್ತಿಯ ಸಮಾಜ ಸುಧಾರಣೆ ಎಂದರೆ ಆಮೂಲಾಗ್ರ ಬದಲಾವಣೆಯೇ ಸರಿ. ವಿಧವೆಯರು ಮರುವಿವಾಹವಾಗುವುದನ್ನೆ ಸಮಾಜ ಸುಧಾರಣೆ ಎಂದು ಒಪ್ಪಲು ಅವರೆಂದೂ ಸಿದ್ಧರಿರಲಿಲ್ಲ. ಜನಾಂಗವೊಂದು ತನ್ನಲ್ಲಿನ ಸತ್ವವನ್ನು ಗುರುತಿಸಿಕೊಂಡು ಹೊಸಯುಗಕ್ಕೆ ಸೂಕ್ತವಾಗುವ ರೀತಿಯಲ್ಲಿ ಹೆಜ್ಜೆ ಹಾಕುವುದನ್ನು ಅವರು ಬಯಸುತ್ತಿದ್ದರು.
ಸಮಜದ ನಿರ್ಮಾಣ ಕಾರ್ಯದಲ್ಲಿ ವಿವೇಕಾನಂದರ ಮೇಲೆ ರಾಮಕೃಷ್ಣರ ಪ್ರಭಾವ ಢಾಳಾಢಾಳಾಗಿ ಕಾಣುತ್ತದೆ. ಜೀವದಯೆ ಎನ್ನುವುದು ಸರಿಯಲ್ಲ, ‘ಜೀವಸೇವೆ’ ಎಂಬುದೇ ಸರಿಯಾದುದು ಎಂಬ ಗುರುವಿನ ವಾಕ್ಯವನ್ನು ಅವರು ಅಕ್ಷರಶಃ ಸ್ವೀಕರಿಸಿದರು. ಬದುಕಿನುದ್ದಕ್ಕೂ ಈ ವಾಕ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಂಡರು. ಹೀಗಾಗಿ ಅವರ ಪಾಲಿಗೆ ಸಮಾಜ ಸುಧಾರಣೆ ‘ಸಮಾಜದ ಕನಿಷ್ಠ ವ್ಯಕ್ತಿಗಳ ಸೇವೆ’ ಎಂದಾಗಿಬಿಡ್ತು. ತಮ್ಮ ಅನೇಕ ಭಾಷಣಗಳಲ್ಲಿ, ಅನೇಕ ಪತ್ರಗಳಲ್ಲಿ ಈ ಮಾತನ್ನು ಅವರು ದೃಢೀಕರಿಸಿದ್ದಾರೆ. ‘ಎಲ್ಲಿಯವರೆಗೆ ಒಂದು ನಾಯಿಯೂ ಹಸಿವಿನಿಂದ ಬಳಲುವುದೋ ಅಲ್ಲಿಯವರೆಗೆ ನಾನು ಕ್ರಿಯಾಶೀಲನಾಗಿರುತ್ತೇನೆ’ ಎಂಬಲ್ಲಿ ಅವರ ಈ ಭಾವವೇ ವ್ಯಕ್ತವಾಗಿರುವುದು.
ಸ್ವಾಮಿ ವಿವೇಕಾನಂದರ ಪಾಲಿಗೆ ಧ್ಯಾನ, ಸುಧಾರಣೆ ಎಲ್ಲವೂ ಅಂತ್ಯಜರ ಉದ್ಧಾರವೇ. ಬಹುಶಃ ಇಂತಹದೊಂದು ಕ್ರಾಂತಿಕಾರಿ ಚಿಂತನೆಯನ್ನ ಭಾರತ ಈ ಹಿಂದೆ ಕೇಳಿರಲೇ ಇಲ್ಲವೇನೋ? ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
ಸಮಾಜ ಎಂಬುದು ವ್ಯಕ್ತಿಗಳಿಂದ ನಿರ್ಮಾಣವಾದಂಥದು. ವ್ಯಕ್ತಿನಿರ್ಮಾಣವಾಗದ ಹೊರತು ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಸ್ವಾಮೀಜಿ ಚೆನ್ನಾಗಿ ಅರಿತಿದ್ದರು. ಹೀಗಾಗಿ ವ್ಯಕ್ತಿತ್ವ ನಿರ್ಮಾಣಕ್ಕೆ ಅವರು ಕೊಟ್ಟ ಬೆಲೆ ಅಪಾರ. ಆದರೆ ಅದರ ದಿಕ್ಕು ಬೇರೆ ಅಷ್ಟೆ. ‘ಪ್ರತಿಯೊಬ್ಬನೂ ತನ್ನನ್ನು ತಾನು ರೂಪಿಸಿಕೊಂಡು ಇತರರ ಏಳ್ಗೆಗೆ ಮುಂದಾಗಬೇಕು’ ಎಂದು ಇತರರು ಹೇಳಿದರೆ, ಸ್ವಾಮೀಜಿ ಇತರರ ಅಭ್ಯುದಯಕ್ಕಾಗಿ ಶ್ರಮಿಸುತ್ತಲೇ ನಿನ್ನುದ್ಧಾರ ಎಂದುಬಿಟ್ಟರು. ‘ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ’ ಎಂಬುದು ಅವರು ಕೊಟ್ಟ ಋಷಿವಾಕ್ಯವಾಯ್ತು. ಇತರರಿಗೋಸ್ಕರ ಕಣ್ಣೀರಿಡುವುದರಲ್ಲಿಯೆ ನಿಜವಾದ ಶಕ್ತಿಸ್ರೋತವಿದೆಯೆಂಬುದನ್ನು ಅವರು ಘಂಟಾಘೋಷವಾಗಿ ಸಾರಿದರು. ‘ಬಡವರಿಗಾಗಿ, ಅಜ್ಞಾನಿಗಳಿಗಾಗಿ, ತುಳಿತಕ್ಕೊಳಗಾದವರಿಗಾಗಿ ಮರುಗಿ. ಅನಂತರ ನಿಮ್ಮಾತ್ಮವನ್ನು ಭಗವಂತನ ಪಾದಕ್ಕೆ ಅರ್ಪಿಸಿ. ಆಮೇಲೆ ನೋಡಿ. ಅದಮ್ಯವಾದ ಶಕ್ತಿ ನಿಮ್ಮದಾಗುವುದು’ ಎಂಬ ಅವರ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ.
ಬಹುಶಃ ಈ ಆತ್ಮವಿಶ್ವಾಸವೇ ಅವರಿಂದ ಇಷ್ಟೊಂದು ಕೆಲಸ ಮಾಡಿಸಿದ್ದು. ಪ್ರತಿಕ್ಷಣವೂ ಬಿಟ್ಟೂಬಿಡದೆ ಕೃತಿಶೀಲರಾಗುವಲ್ಲಿ ಅವರಿಗೆ ಶಕ್ತಿ ದೊರೆಯುತ್ತಿದ್ದುದೇ ಈ ಮಾರ್ಗದಿಂದ. ಇದನ್ನವರು ಸುಧಾರಣೆ ಎಂದು ಕರೆದು ಪ್ರಚಾರದ ಹಿಂದೋಡಲಿಲ್ಲ. ತಾನೊಬ್ಬ ಸುಧಾರಕ ಎಂದೂ ಹೇಳಿಕೊಳ್ಳಲಿಲ್ಲ. ತನ್ನ ತೃಪ್ತಿಗೋಸ್ಕರ ಇತರರ ಸೇವೆ ಮಾಡುತ್ತ ನಡೆದರು.
ಬೇಲೂರು ಮಠದಲ್ಲಿ ಕೆಲಸಗಾರರಿಗೆ ಮೃಷ್ಟಾನ್ನ ಭೋಜನ ತಯಾರಿಸಿ ಬಡಿಸಿದ್ದನ್ನು ನೆನೆಸಿಕೊಳ್ಳಿ. ಅವತ್ತು ಅವರೆಲ್ಲರಿಗೂ ಗಾಳಿ ಬೀಸುತ್ತ ಅವರು ಉಣ್ಣುವುದನ್ನೇ ಆನಂದದಿಂದ ನೋಡುತ್ತ ಕಣ್ಣೀರ್ಗರೆದ ವಿವೇಕಾನಂದರು ಕಣ್ಮುಂದೆ ಬಂದರೆ ಒಮ್ಮೆ ರೋಮಾಂಚನವಾದೀತು! ಈ ಪರಿಯ ಹೃದಯವೈಶಾಲ್ಯವೇ ದೂರದಲ್ಲೆಲ್ಲೋ ಭೂಕಂಪವಾದಾಗ ವಿವೇಕಾನಂದರ ಹೃದಯವನ್ನು ತಲ್ಲಣಗೊಳಿಸುತ್ತಿದ್ದುದು. ಅವರ ಪಾಲಿಗೆ ಸಮಾಜವೆಂದರೆ, ಹಿಂದೂ ಸಮಾಜವೆಂತಲೋ ಭಾರತೀಯ ಸಮಾಜವೆಂತಲೋ ಆಗಿರದೆ, ಅವರು ವಿಶ್ವಮಾನವರಾಗಿ ಬೆಳೆದುನಿಂತಿದ್ದರು.
ಜಗತ್ತಿನ ಪ್ರತಿಯೊಬ್ಬ ಜೀವಿಯ ಬಗೆಗೂ ಕಾಳಜಿವಹಿಸುವಷ್ಟು ಸ್ವಾಮಿ ವಿವೇಕಾನಂದರು ಉದಾರಿಗಳಾಗಿದ್ದರು. ಪ್ರತಿಯೊಬ್ಬರ ಬದುಕೂ ಸುಧಾರಿಸಬೇಕೆಂಬ ವಾಂಚೆ ಅವರಲ್ಲಿ ಅದೆಷ್ಟು ಬಲವಾಗಿತ್ತೆಂದರೆ, ‘ನಾನು ಈ ದೇಹವನ್ನು ಹರಿದ ಬಟ್ಟೆಯಂತೆ ಬಿಸುಟು ಹೊರಡುತ್ತೇನೆ. ಆದರೆ ಎಲ್ಲಿಯವರೆಗೂ ಪ್ರತಿಯೊಬ್ಬ ವ್ಯಕ್ತಿಯೂ ನಾನು ಭಗವಂತನೊಂದಿಗೆ ಒಂದಾಗಿರುವೆನೆಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೆ ಕೆಲಸ ಮಾಡುತ್ತಲೇ ಇರುತ್ತೇನೆ’ ಎಂದುಬಿಟ್ಟರು!
ಹೌದು. ಇದುವೇ ನಿಜವಾದ ಸುಧಾರಕನ ಲಕ್ಷಣ. ಅಂದುಕೊಂಡ ಕಾರ್ಯಕ್ಕಾಗಿ ಮತ್ತೆ ಜನ್ಮವೆತ್ತಲೂ ಅವನು ಹಿಂದುಮುಂದು ನೋಡಲಾರ. ಪ್ರತಿಯೊಬ್ಬನನ್ನು ಮೇಲೆತ್ತಿ ಅವನನ್ನು ಶ್ರೇಷ್ಠನನ್ನಾಗಿಸುವವರೆಗೂ ವಿಶ್ರಮಿಸಲಾರ. ಸುಧಾರಣೆ ಏನಾದರೂ ಸಾಧ್ಯವಿದ್ದರೆ ಅಂತಹ ಸುಧಾರಕರಿಂದ ಮಾತ್ರ. ಉಳಿದಂತೆ ಪೋಸ್ಟರು-ಬ್ಯಾನರುಗಳ ಮೂಲಕ ಸುಧಾರಣೆಯ ಡಿಂಡಿಮ ಬಾರಿಸುವವರು ಅದೆಷ್ಟು ಬೊಬ್ಬೆ ಹೊಡೆದರೂ ಸುಧಾರಣೆ ಕಾಣದಿರುವುದು ಏಕೆಂದು ಈಗಲಾದರೂ ಅರ್ಥವಾಗಿರಬೇಕಲ್ಲ?
ನಾವಾದರೂ ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಹೆಜ್ಜೆಯಿಡೋಣ. ಸೇವೆಯ ಮೂಲಕ ಸುಧಾರಣೆಯ ಪಣತೊಡೋಣ.
– ಚಕ್ರವರ್ತಿ ಸೂಲಿಬೆಲೆ
1 comment