ಆಕ್ರಮಣಗಳು ಮತ್ತು ಸಾಂಸ್ಕೃತಿಕ ಪಲ್ಲಟ
“ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” – ಸಾನೆ ಗುರೂಜಿ
ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?
ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.
ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ. ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.
ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.
ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.
ಇರಲಿ. ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!
ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.
ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.
ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.
ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.
“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!
~
ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.
ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!
ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!
ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.
ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ, “ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!
ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?
ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.
ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.
ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’. ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.
ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.
~ ಚಕ್ರವರ್ತಿ ಸೂಲಿಬೆಲೆ
ಹಿಂದೂ… ಧರ್ಮ ಮತ್ತು ಸಂಸ್ಕೃತಿ
ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. ಆಂತರಿಕ ಬೆಳವಣಿಗೆಯ ಪರಿಣಾಮವಾದ ‘ಭಾರತೀಯ ಸಂಸ್ಕೃತಿ’ ಇಂದಿಗೂ ಉಳಿದುಬಂದಿದ್ದರೆ, ಬಾಹ್ಯ ಬೆಳವಣಿಗೆಯ ಭವ್ಯ ಕುರುಹಾಗಿದ್ದ ‘ಸಿಂಧೂ ನಾಗರಿಕತೆ’ ನಶಿಸಿಹೋಯ್ತು.
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.
ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರ್ಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ.
ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ. ಅಥವಾ ಕೆಲವೇ ಮೇಲ್ವರ್ಗದ ಜನರ ಸೊತ್ತೂ ಅಲ್ಲ. ವೇದಗಳಲ್ಲಿ ಉಲ್ಲಿಖಿತವಾಗಿರುವಂತೆ ಇದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ. ಸಿಂಧೂ ನದಿಯ ತಟದಲ್ಲಿ ಅಭಿವೃದ್ಧಿ ಹೊಂದಿದ ಈ ಸಂಸ್ಕೃತಿಯನ್ನು ಸಹಸ್ರಮಾನಗಳ ಹಿಂದಿನಿಂದಲೂ ಒಡನಾಟದಲ್ಲಿರುವ ಪರ್ಷಿಯನ್ನರು ೧ಹಿಂದೂ’ ಎಂದು ಕರೆದರು. (ಅವರಲ್ಲಿ ‘ಸ’ಕಾರ ‘ಹ’ಕಾರವಾಗಿ ಉಚ್ಚರಿಸಲ್ಪಡುತ್ತದೆ)
ಕ್ರಮೇಣ ಹಿಂದೂ ಸಂಸ್ಕೃತಿಯವರು ಆಚರಿಸುತ್ತಿದ್ದ ಸನಾತನ ಧರ್ಮ- ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದೂಗಳಾಗಿಯೂ ಸ್ಥಾಪಿತರಾದರು. ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.
ಸನಾತನ ಧರ್ಮವನ್ನು ‘ಆಧ್ಯಾತ್ಮದ ತೊಟ್ಟಿಲು’ ಎಂದೂ, ‘ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ.
(ಮುಂದುವರೆಯುವುದು…)
ಸಂಸ್ಕೃತಿ ಮತ್ತು ವಿಕೃತಿ…
ಬೆಳಗಾದರೆ ರಾಷ್ಟ್ರ ಹಬ್ಬ. ತಾಯಿ ಭಾರತಿ ಆಂಗ್ಲರ ದಾಸ್ಯದಿಂದ ಮುಕ್ತಳಾದ ಸಂಸ್ಮರಣೆಯ ಹಬ್ಬ. ಈ ಸಂದರ್ಭದಲ್ಲಿ ಏನದರೂ ಬರೆಯಬೇಕು ಅಂದುಕೊಂಡು, ತುರ್ತಾಗಿ ಎಲ್ಲೋ ಹೋಗಬೇಕಾಗಿ ಬಮ್ದು, ಕೊನೆಗೆ ಭಾರತ ಮಾತೆಯ ಚಿತ್ರವನ್ನಾದರೂ ಹಕಿ ಎರಡು ನುಡಿ- ನಮನ ಬರೆಯೋಣವೆಂದು ನೆಟ್ಟು ಜಾಲಾಡಿದರೆ… ಒಂದಷ್ಟು ಚಿತ್ರಗಳು ಸಿಕ್ಕಿದ್ದು ಹೌದು… ಮನಸ್ಸು ಕಹಿಯಾಗಿದ್ದೂ ಹೌದು.
ಇಲ್ಲಿ ಮೂರು ಚಿತ್ರಗಳನ್ನು ಕೊಡುತ್ತಿದ್ದೇನೆ ನೋಡಿ. ಒಂದು ಅವನೀಂದ್ರ ಠಾಕುರ್ ಅವರು ರಚಿಸಿದ್ದು. ಇನ್ನೊಂದು ಮಕ್ಬೂಲ್ ಫಿದಾ ಹುಸೇನರ ರಚನೆ. ಮತ್ತೊಂದು- ಮೂಲ ಚಿತ್ರಕಾರರ ಹೆಸರು ಗೊತ್ತಿಲ್ಲದ, ಇಂದು ಎಲ್ಲೆಡೆ ಕಂಡು ಬರುವ ಭಾರತ ಮಾತೆಯ ಚಿತ್ರ. ಇಲ್ಲಿ ಎರಡು ಚಿತ್ರಗಳು ಸುಸಂಸ್ಕೃತ ಹಿನ್ನೆಲೆಯದ್ದಾಗಿದ್ದು, ಒಂದು ತನ್ನ ಚಿತ್ರಕಾರನ ಕಲಾವಂತಿಕೆಯ ‘ಔನ್ನತ್ಯ’ವನ್ನು ಸೂಚಿಸುತ್ತದೆ. ಆತ ಭಾರತಮಾತೆಯನ್ನು ಯಾವ ಬಗೆಯಲ್ಲಿ ನೋಡುವವ ಎಂದು ಸಾರುತ್ತದೆ. ಅದು ಯಾವುದು ಅನ್ನೋದನ್ನ ನಾನು ಬಾಯಿ ಬಿಟ್ಟು ಹೇಳಬೇಕಿಲ್ಲ ಅಲ್ಲವೇ?
ಇರಲಿ. ಕೊಚ್ಚೆಗೆ ಕಲ್ಲೆಸೆಯಲು ಇದು ಕಾಲವಲ್ಲ. ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಆಗಸ್ಟ್ ಹದಿನೇಳರಂದು ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ಯುವ ಸಮಾವೇಶವಿದೆ. ಮುಗಿಸಿಕೊಂಡು ಮತ್ತೆ ಹಾಜರಾಗುತ್ತೇನೆ. ಈ ಬ್ಲಾಗಿಗೆ ಮತ್ತೊಂದು ಕೈ ಬೇಕಿದೆ. ಅದನ್ನೂ ಆದಷ್ಟು ಬೇಗ ಹುಡುಕಿ ತರ್ತೇನೆ!
~
ರಾಷ್ಟ್ರ ಹಬ್ಬಕ್ಕಾಗಿ ನಿಮಗಿದೋ ರಾಷ್ಟ್ರಗಾನ…
ದಯವಿಟ್ಟು ಒಂದೊಮ್ಮೆ ಸಂಪೂರ್ಣ ಓದಿಕೊಳ್ಳಿ. ಭಾರತ ಮಾತೆಯ ವೈಭವವನ್ನು ನೆನೆಯಿರಿ.
~
ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಮ್ ||
ಶುಭ್ರಜ್ಯೊತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ಧ್ರುಮದಲ ಶೊಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ||
ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೆ
ಕೋಟಿ ಕೋಟಿ ಭುಜೈರ್ಧೃತ ಖರಕರವಾಲೆ
ಅಬಲಾ ಕೆನೊ ಮಾ ಎತೊ ಬಲೇ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||
ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಭಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಈ ಪ್ರತಿಮಾ ಗಡಿ
ಮಂದಿರೇ ಮಂದಿರೇ ||
ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ |
ವಂದೇ ಮಾತರಂ
~ ಬಂಕಿಮ ಚಂದ್ರ ಚಟರ್ಜಿ
4 comments