ರಾಷ್ಟ್ರ ಶಕ್ತಿ ಕೇಂದ್ರ

ಶಿಕ್ಷಕನಾಗಲು ಅದೇಕೆ ಅಸಡ್ಡೆ?

Posted in ಚಕ್ರವರ್ತಿ ಅಂಕಣ by yuvashakti on ಡಿಸೆಂಬರ್ 4, 2008

ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಖೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?

ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!
ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು  ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.
ಅದೇಕೋ ಸದ್ಗುರುಗಳಾಗುವ ಹಂಬಲ  ಇಂದಿನ ಪೀಳಿಗೆಯಲ್ಲಿ  ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು  ಅಪ್ಪ-ಅಮ್ಮ  ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!
ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ  ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !
ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್‌ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ  ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು  ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು  ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ!  ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್‌ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.
ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ  ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.
ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ  ಅದಕ್ಕೇ.
ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.
ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರು. ಭಾರತ ತೊಂದರೆಯಲ್ಲಿ  ಸಿಲುಕಿಕೊಂಡಾಗಲೆಲ್ಲ ಆಚಾರ್ಯರು – ಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ  ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ  ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ  ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ  – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು  ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ  ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?

– ಚಕ್ರವರ್ತಿ ಸೂಲಿಬೆಲೆ

ಸದ್ಗುರುವಿನಿಂದಲೇ ಜಗದ್ಗುರು ಭಾರತ

Posted in ಕಾರ್ಯಕ್ರಮ- ವರದಿ by yuvashakti on ಜುಲೈ 10, 2008

“ಸದ್ಗುರುವಿನಿಂದಲೇ ಜಗದ್ಗುರು ಭಾರತ” ಇದು  ರಾಷ್ಟ್ರಶಕ್ತಿ ಕೇಂದ್ರದಿಂದ ಜಿಗಣಿಯಲ್ಲಿ ಜರುಗಿದ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರಕ್ಕೆ ನಾವಿಟ್ಟ ಶೀರ್ಷಿಕೆ.
ಗಿರಿನಗರ ಯೋಗಾಶ್ರಮದ “ಸ್ವಾಮಿ ಯೋಗೇಶ್ವರಾನಂದ ಜೀ ಮಹಾರಾಜ್‌” ಭಾರತ ಮಾತೆಯ ಭೂ ಪಟದ ಮೇಲೆ ಇಡಲಾಗಿದ್ದ ಹಣತೆಯನ್ನು ಬೆಳೆಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ “ಶಿಕ್ಷಕ, ಗುರುವಾಗುವ ಬಗೆಯನ್ನು” ಗಾಯನ-ಪ್ರವಚನದ ಮೂಲಕ ವಿವರಿಸಿದರು. ಸದೃಡ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಎಷ್ಟಿದೆ ಎಂಬುದನ್ನು ಅವರು ಇತಿಹಾಸದ ಪುಟಗಳಿಂದ, ಉಪನಿಷತ್ತ್ ವಚನಗಳಿಂದ ಎಳೆ ಎಳೆಯಾಗಿ ವಿವರಿಸಿದರು. ಇದು ಶಿಬಿರದ ಮೊದಲ ಅವಧಿಯ ಹೂರಣ.
ನಂತರ ಶಿಕ್ಷಕರಿಗೆ ತರಗತಿ ತೆಗೆದುಕೊಂಡವರು ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷರಾದ, ಕ್ಷಣ ಹೊತ್ತು ಅಣಿ ಮುತ್ತು ಖ್ಯಾತಿಯ ಷಡಕ್ಷರಿಯವರು. ಅದೊಂತರಹ ಪ್ರಾಕ್ಟಿಕಲ್‌ ಕ್ಲಾಸು. ಪ್ರೊಜೆಕ್ಟರ್‌ ಬಳಸಿ ಷಡಕ್ಷರಿ ಮೇಷ್ಟ್ರು ತೆಗೆದುಕೊಂಡ ಕ್ಲಾಸು. “ನವಿರಾದ ಹಾಸ್ಯದ ಜತೆಗೆ ಗಂಭಿರವಾದ ವಿಚಾರವನ್ನು ನಮ್ಮ ಮುಂದಿಟ್ಟ ಷಡಕ್ಷರಿ ಓರ್ವ ಬರಹಗಾರರೆಂದು ಗೊತ್ತಿತ್ತು. ಮಾತುಗಾರರು ಎಂಬುದನ್ನು ಕೇಳಿದ್ದೆವು. ಆದರೆ ಒಬ್ಬ ಶಿಕ್ಷಕ ಎಂಬುದನ್ನು ಕಣ್ಣಾರೆ ಕಂಡೆವು” ಷಡಕ್ಷರಿ ಉಪನ್ಯಾಸ ಮುಗಿದ ನಂತರ ಶಿಬಿರದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯ ಶಿಕ್ಷಕ ಡಿ.ಎಲ್‌.ಎನ್ ಮೇಷ್ಟ್ರು ಉದ್ಗರಿಸಿದ ಸಾಲುಗಳಿವು. “ಬದುಕು ಬದಲಾಯಿಸಬಲ್ಲ ಶಿಕ್ಷಕ” ಇದು ಷಡಕ್ಷರಿಯವರ ಉಪನ್ಯಾಸದ ವಿಚಾರ. ಬದುಕು ಬದಲಾಯಿಸಬಲ್ಲ ಶಿಕ್ಷಕ ತರಗತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಯಶಸ್ವಿ ಶಿಕ್ಷಕರ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರೆ ಕುಳಿತವರಿಗೆ ಘಂಟೆ ೧.೩೦ ಆಗಿದ್ದು ತಿಳಿಯಲೇ ಇಲ್ಲ! ಕೊನೆಗೆ ಷಡಕ್ಷರಿಯವರೇ ೧.೩೦ ಆಯಿತು ಈಗ ಊಟದ ಸಮಯ ಅಂತಾ ಉಪನ್ಯಾಸ ನಿಲ್ಲಿಸಿದರು. ಸುಮಾರು ೧.೪೫ ಘಂಟೆ ಕಾಲದ ಉಪನ್ಯಾಸವಾದರೂ ಹೇಳಿದ ವಿಚಾರಗಳು ಜೀವನ ಪರ್ಯಂತಕ್ಕೂ ಸಾಕಾಗುವಷ್ಟು.
ಪ್ರಶಾಂತಿ ಕುಟೀರ ಹೆಸರಿಗೆ ತಕ್ಕಂತೆ ಪ್ರಶಾಂತವಾದ ಕುಟೀರ. ಜಿಗಣಿಯಿಂದ ಮೈಲು ದೂರದಲ್ಲಿರುವ ವಿವೇಕಾನಂದ ಯೋಗ ಅನುಸಂದಾನ ವಿಶ್ವವಿದ್ಯಾನಿಲಯದ ಇನ್ನೊಂದು ಹೆಸರೇ ಪ್ರಶಾಂತಿ ಕುಟೀರ. ಅಲ್ಲಿನ ವಾತವರಣವೇ ಒಂತರಹ ಋಷಿ ಮುನಿಗಳ ಕಾಲದ ಪರಿಸರ. ಪುಟ್ಟ,ಪುಟ್ಟ ಕುಟೀರಗಳು, ನಡುನಡುವೆ ಪ್ರಾರ್ಥನಾ ಮಂದಿರ….ಒಂದು ಅದ್ಬುತ ಸ್ಥಳವದು. ಅಲ್ಲಿನ ಊಟೋಪಚಾರವೂ ಯೋಗಕ್ಕೆ ತಕ್ಕಂತಹದ್ದೇ. ಊಟ ಮುಗಿದ ನಂತರ ಸಂಗೀತ ರಸಮಂಜರಿ.
ಹೊಡಿಮಗ, ಹೊಡಿಮಗ ಬಿಡಬೇಡ ಅವನ್ನಾ….ರಸಮಂಜರಿ ಅಂದ್ರೆ ಇಂತಹದ್ದೆ ಗೀತೆಗಳಲ್ವಾ? “ಸಾರ್ ನಮಗೆ ಈ ತರಹದ್ದು ಒಂದು ಸಂಗೀತ ರಸ ಮಂಜರಿ ನಡೆಸಬಹುದು ಅಂತಾ ಗೊತ್ತೆ ಇರಲಿಲ್ಲ. ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಇಂತಹದ್ದೆ ರಸಮಂಜರಿ ಆಯೋಜಿಸುತ್ತೇವೆ” ಶಂಕರ್‌ ಶ್ಯಾನುಬೋಗರ ದೇಶಭಕ್ತಿಗೀತೆಗಳ ರಸ ಮಂಜರಿ ಸವಿದ ನಂತರ ಪ್ರಾಧ್ಯಾಪರೊಬ್ಬರು ಹೇಳಿದ ಸಾಲಿದು. “ವಂದೇ ಮಾತರಂ’ ಎಂಬ ಅದ್ಬುತವಾದ ರಾಷ್ಟ್ರಪ್ರೇಮ ಸಾರುವ ವಿಭಿನ್ನ ದೇಶ ಭಕ್ತಿಗೀತೆಗಳ ರಸಮಂಜರಿಯಿಂದ ಖ್ಯಾತರಾದ ಗಾಯಕ ಶಂಕರ್‌ಶ್ಯಾನುಬೋಗ್‌ ನಡೆಸಿಕೊಟ್ಟ ಸುಮಾರು ಒಂದುವರೆ ತಾಸುಗಳ ದೇಶಭಕ್ತಿ ಗೀತೆ ಗಾಯನ ಇಡೀ ಕಾರ್ಯಕ್ರಮದ ಯಶಸ್ಸಿನ ಘಟ್ಟ ಬಿಡ್ರಿ ಅಂತಾ ಶಿಕ್ಷರೊಬ್ಬರು ಉದ್ಗಾರ ತೆಗೆಯುವ ಹೊತ್ತಿಗೆ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಆರಂಭವಾಗಿತ್ತು.

kamala

“ಸಮರ್ಥ ಶಿಕ್ಷಕ-ರಾಷ್ಟ್ರ ರಕ್ಷಕ” ವಿಚಾರವಾಗಿ ಮಾತನಾಡಿದ ಸೂಲಿಬೆಲೆ ಎಲ್ಲರ ಕಣ್ಣಲ್ಲೂ ನೀರಿಳಿಸಿದರು. “ಅವರ ಭಾಷಣ ಅದೆಷ್ಟು ಪ್ರಖರವಾಗಿತ್ತೆಂದರೆ ನಾನು ನಾಲ್ಕು ಜನರ ಕಣ್ಣಲ್ಲಿ ಕಣ್ಣೀರು ಕಂಡೆ. ಮಾತ್ರವಲ್ಲ ನಾನು ಕಣ್ಣಿರು ಹಾಕಿದೆ” ಎಂದು ಶಂಕರ್‌ಶ್ಯಾನುಬೋಗ್‌ ನಂತರ ಹೀಗೆ ಮಾತಾಡುತ್ತಾ ಹೇಳಿದರು. ಶಿಕ್ಷಕರ ಅಂತಸತ್ವವನ್ನು ಜಾಗೃತಗೊಳಿಸುವಲ್ಲಿ ಚಕ್ರವರ್ತಿಗಿಂತ ಅದ್ಬುತ ಮಾತುಗಾರ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಎಂಬುದು ನಮ್ಮ ಭಾವ. ಇದು ಹೊಗಳಿಕೆಯ ಮಾತಲ್ಲ ಶಿಕ್ಷಕರುಗಳು ಚಕ್ರವರ್ತಿ ಮಾತಾಡಿದ ನಂತರ ಹಂಚಿಕೊಂಡ ಅನುಭವದಿಂದ ಆಯ್ದ ಮಾತು.
ಶಿಕ್ಷಕರ ಅನುಭವ ಹಂಚಿಕೆ ಶಿಬಿರದ ಕೊನೆ ಭಾಗ. ಎಷ್ಟೋ ಜನ ಶಿಕ್ಷಕರಿಗೆ ಅನುಭವ ಹಂಚಿಕೊಳ್ಳಲು ಅವಕಾಶವೇ ಸಿಗಲಿಲ್ಲ ಸಮಯದ ಅಭಾವದಿಂದ. ಒಟ್ಟಿನಲ್ಲಿ ಒಂದು ಯಶಸ್ವಿ ಕಾರ್ಯಕ್ರಮ ಈ ಶಿಬಿರ. “ಸಾರ್ ಇಂತಹದ್ದೊಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲೂ ನಡೆಯಬೇಕು. ನೀವೇ ಬಂದು ನಡೆಸಿಕೊಡಬೇಕ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸೇರಿಸ್ತೇವೆ. ಹಣದ ಬಗ್ಗೆಯೂ ಚಿಂತೆಯಿಲ್ಲ, ಸ್ವತಃ ನಾವೇ ಹಾಕಿಕೊಂಡು ಏರ್ಪಾಡು ಮಾಡ್ತೇವೆ…” ಎಂದು ಕೋರಿರುವ ಮುಖ್ಯಶಿಕ್ಷಕರ ಮಾತುಗಳೇ ಶಿಬಿರದ ಯಶಸ್ಸಿಗೆ ಹಿಡಿದ ಕನ್ನಡಿ. ಈ ಶಿಬಿರದ ಯಶಸ್ಸಿನ ಹಿಂದೆ ರಾಷ್ಟ್ರಶಕ್ತಿ ಕೇಂದ್ರದ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವಿದೆ. ಮತ್ತು ಕಾರ್ಯಕ್ರಮದಿಂದಾಗಿ ಕೇಂದ್ರದ ಜವಬ್ದಾರಿಯೂ ಮತ್ತಷ್ಟು ಹೆಚ್ಚಾಗಿದೆ.
                                                                                                                     

                                                                                                                                                                                  ~ ಪಯಣಿಗ