ಆತ್ಮನೋ ಮೋಕ್ಷಾರ್ಥಮ್….
ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
‘ನಾವೆಲ್ಲ ಸಮಾಜ ಸುಧಾರಕರು’ ಹಾಗಂತ ಹೇಳಿಕೊಂಡು ತಿರುಗಾಡುವ, ನಾಲ್ಕು ರುಪಾಯಿಯಷ್ಟು ಖರ್ಚು ಮಾಡಿ ನಾನೂರು ರುಪಾಯಿಯಷ್ಟು ಪ್ರಚಾರ ಪಡೆಯುವ ಜನರನ್ನು ನೀವು ಕಂಡಿರುತ್ತೀರಿ. ನಿಮಗೆ ಆ ಚಾಳಿ ಇಲ್ಲವಾದರೆ ಖಂಡಿತ ಅವರನ್ನು ಕಂಡು ಮೂಗೂ ಮುರಿದಿರುತ್ತೀರಿ. ಅಕಸ್ಮಾತ್ ನೀವೂ ಪ್ರಚಾರಪ್ರಿಯರಾಗಿದ್ದರೆ, ಅವರೊಡನೆ ನೀವೂ ಅಲ್ಲಲ್ಲಿ ನಿಂತೋ ಕುಳಿತೋ ಸಮಾಜ ಸುಧಾರಣೆಯ ಬಗ್ಗೆ ಒಂದಷ್ಟು ಭಾಷಣ ಬಿಗಿದಿರುತ್ತೀರಿ. ಇದೊಂಥರಾ ಸಹಜ ದೃಶ್ಯಾವಳಿ. ಪ್ರಚಾರಕ್ಕೆ ಫ್ಲೆಕ್ಸುಗಳು ಬಂದಮೇಲಂತೂ ಸಮಾಜ ಸುಧಾರಕರು ನಾಯಿಕೊಡೆಗಳಂತೆ ಬೆಳೆದುಬಿಟ್ಟಿದಾರೆ! ದೌರ್ಭಾಗ್ಯವೆಂದರೆ ಸಮಾಜ ಮಾತ್ರ ಇದರಿಂದ ಒಂದಿನಿತೂ ವಿಚಲಿತವಾಗದೆ ಹಾಗೇ ಉಳಿದುಬಿಟ್ಟಿದೆ.
ನಮ್ಮ ನಡೆ ಎಲ್ಲಿ ತಪ್ಪಿದೆ ಎಂದು ವಿಶ್ಲೇಷಿಸಲು ವಿವೇಕಾನಂದರ ಚಿಂತನೆಗಳಿಗೇ ಮೊರೆಹೋಗಬೇಕು. ಅವರ ದೃಷ್ತಿಯ ಸಮಾಜ ಸುಧಾರಣೆ ಎಂದರೆ ಆಮೂಲಾಗ್ರ ಬದಲಾವಣೆಯೇ ಸರಿ. ವಿಧವೆಯರು ಮರುವಿವಾಹವಾಗುವುದನ್ನೆ ಸಮಾಜ ಸುಧಾರಣೆ ಎಂದು ಒಪ್ಪಲು ಅವರೆಂದೂ ಸಿದ್ಧರಿರಲಿಲ್ಲ. ಜನಾಂಗವೊಂದು ತನ್ನಲ್ಲಿನ ಸತ್ವವನ್ನು ಗುರುತಿಸಿಕೊಂಡು ಹೊಸಯುಗಕ್ಕೆ ಸೂಕ್ತವಾಗುವ ರೀತಿಯಲ್ಲಿ ಹೆಜ್ಜೆ ಹಾಕುವುದನ್ನು ಅವರು ಬಯಸುತ್ತಿದ್ದರು.
ಸಮಜದ ನಿರ್ಮಾಣ ಕಾರ್ಯದಲ್ಲಿ ವಿವೇಕಾನಂದರ ಮೇಲೆ ರಾಮಕೃಷ್ಣರ ಪ್ರಭಾವ ಢಾಳಾಢಾಳಾಗಿ ಕಾಣುತ್ತದೆ. ಜೀವದಯೆ ಎನ್ನುವುದು ಸರಿಯಲ್ಲ, ‘ಜೀವಸೇವೆ’ ಎಂಬುದೇ ಸರಿಯಾದುದು ಎಂಬ ಗುರುವಿನ ವಾಕ್ಯವನ್ನು ಅವರು ಅಕ್ಷರಶಃ ಸ್ವೀಕರಿಸಿದರು. ಬದುಕಿನುದ್ದಕ್ಕೂ ಈ ವಾಕ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಂಡರು. ಹೀಗಾಗಿ ಅವರ ಪಾಲಿಗೆ ಸಮಾಜ ಸುಧಾರಣೆ ‘ಸಮಾಜದ ಕನಿಷ್ಠ ವ್ಯಕ್ತಿಗಳ ಸೇವೆ’ ಎಂದಾಗಿಬಿಡ್ತು. ತಮ್ಮ ಅನೇಕ ಭಾಷಣಗಳಲ್ಲಿ, ಅನೇಕ ಪತ್ರಗಳಲ್ಲಿ ಈ ಮಾತನ್ನು ಅವರು ದೃಢೀಕರಿಸಿದ್ದಾರೆ. ‘ಎಲ್ಲಿಯವರೆಗೆ ಒಂದು ನಾಯಿಯೂ ಹಸಿವಿನಿಂದ ಬಳಲುವುದೋ ಅಲ್ಲಿಯವರೆಗೆ ನಾನು ಕ್ರಿಯಾಶೀಲನಾಗಿರುತ್ತೇನೆ’ ಎಂಬಲ್ಲಿ ಅವರ ಈ ಭಾವವೇ ವ್ಯಕ್ತವಾಗಿರುವುದು.
ಸ್ವಾಮಿ ವಿವೇಕಾನಂದರ ಪಾಲಿಗೆ ಧ್ಯಾನ, ಸುಧಾರಣೆ ಎಲ್ಲವೂ ಅಂತ್ಯಜರ ಉದ್ಧಾರವೇ. ಬಹುಶಃ ಇಂತಹದೊಂದು ಕ್ರಾಂತಿಕಾರಿ ಚಿಂತನೆಯನ್ನ ಭಾರತ ಈ ಹಿಂದೆ ಕೇಳಿರಲೇ ಇಲ್ಲವೇನೋ? ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
ಸಮಾಜ ಎಂಬುದು ವ್ಯಕ್ತಿಗಳಿಂದ ನಿರ್ಮಾಣವಾದಂಥದು. ವ್ಯಕ್ತಿನಿರ್ಮಾಣವಾಗದ ಹೊರತು ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಸ್ವಾಮೀಜಿ ಚೆನ್ನಾಗಿ ಅರಿತಿದ್ದರು. ಹೀಗಾಗಿ ವ್ಯಕ್ತಿತ್ವ ನಿರ್ಮಾಣಕ್ಕೆ ಅವರು ಕೊಟ್ಟ ಬೆಲೆ ಅಪಾರ. ಆದರೆ ಅದರ ದಿಕ್ಕು ಬೇರೆ ಅಷ್ಟೆ. ‘ಪ್ರತಿಯೊಬ್ಬನೂ ತನ್ನನ್ನು ತಾನು ರೂಪಿಸಿಕೊಂಡು ಇತರರ ಏಳ್ಗೆಗೆ ಮುಂದಾಗಬೇಕು’ ಎಂದು ಇತರರು ಹೇಳಿದರೆ, ಸ್ವಾಮೀಜಿ ಇತರರ ಅಭ್ಯುದಯಕ್ಕಾಗಿ ಶ್ರಮಿಸುತ್ತಲೇ ನಿನ್ನುದ್ಧಾರ ಎಂದುಬಿಟ್ಟರು. ‘ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ’ ಎಂಬುದು ಅವರು ಕೊಟ್ಟ ಋಷಿವಾಕ್ಯವಾಯ್ತು. ಇತರರಿಗೋಸ್ಕರ ಕಣ್ಣೀರಿಡುವುದರಲ್ಲಿಯೆ ನಿಜವಾದ ಶಕ್ತಿಸ್ರೋತವಿದೆಯೆಂಬುದನ್ನು ಅವರು ಘಂಟಾಘೋಷವಾಗಿ ಸಾರಿದರು. ‘ಬಡವರಿಗಾಗಿ, ಅಜ್ಞಾನಿಗಳಿಗಾಗಿ, ತುಳಿತಕ್ಕೊಳಗಾದವರಿಗಾಗಿ ಮರುಗಿ. ಅನಂತರ ನಿಮ್ಮಾತ್ಮವನ್ನು ಭಗವಂತನ ಪಾದಕ್ಕೆ ಅರ್ಪಿಸಿ. ಆಮೇಲೆ ನೋಡಿ. ಅದಮ್ಯವಾದ ಶಕ್ತಿ ನಿಮ್ಮದಾಗುವುದು’ ಎಂಬ ಅವರ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ.
ಬಹುಶಃ ಈ ಆತ್ಮವಿಶ್ವಾಸವೇ ಅವರಿಂದ ಇಷ್ಟೊಂದು ಕೆಲಸ ಮಾಡಿಸಿದ್ದು. ಪ್ರತಿಕ್ಷಣವೂ ಬಿಟ್ಟೂಬಿಡದೆ ಕೃತಿಶೀಲರಾಗುವಲ್ಲಿ ಅವರಿಗೆ ಶಕ್ತಿ ದೊರೆಯುತ್ತಿದ್ದುದೇ ಈ ಮಾರ್ಗದಿಂದ. ಇದನ್ನವರು ಸುಧಾರಣೆ ಎಂದು ಕರೆದು ಪ್ರಚಾರದ ಹಿಂದೋಡಲಿಲ್ಲ. ತಾನೊಬ್ಬ ಸುಧಾರಕ ಎಂದೂ ಹೇಳಿಕೊಳ್ಳಲಿಲ್ಲ. ತನ್ನ ತೃಪ್ತಿಗೋಸ್ಕರ ಇತರರ ಸೇವೆ ಮಾಡುತ್ತ ನಡೆದರು.
ಬೇಲೂರು ಮಠದಲ್ಲಿ ಕೆಲಸಗಾರರಿಗೆ ಮೃಷ್ಟಾನ್ನ ಭೋಜನ ತಯಾರಿಸಿ ಬಡಿಸಿದ್ದನ್ನು ನೆನೆಸಿಕೊಳ್ಳಿ. ಅವತ್ತು ಅವರೆಲ್ಲರಿಗೂ ಗಾಳಿ ಬೀಸುತ್ತ ಅವರು ಉಣ್ಣುವುದನ್ನೇ ಆನಂದದಿಂದ ನೋಡುತ್ತ ಕಣ್ಣೀರ್ಗರೆದ ವಿವೇಕಾನಂದರು ಕಣ್ಮುಂದೆ ಬಂದರೆ ಒಮ್ಮೆ ರೋಮಾಂಚನವಾದೀತು! ಈ ಪರಿಯ ಹೃದಯವೈಶಾಲ್ಯವೇ ದೂರದಲ್ಲೆಲ್ಲೋ ಭೂಕಂಪವಾದಾಗ ವಿವೇಕಾನಂದರ ಹೃದಯವನ್ನು ತಲ್ಲಣಗೊಳಿಸುತ್ತಿದ್ದುದು. ಅವರ ಪಾಲಿಗೆ ಸಮಾಜವೆಂದರೆ, ಹಿಂದೂ ಸಮಾಜವೆಂತಲೋ ಭಾರತೀಯ ಸಮಾಜವೆಂತಲೋ ಆಗಿರದೆ, ಅವರು ವಿಶ್ವಮಾನವರಾಗಿ ಬೆಳೆದುನಿಂತಿದ್ದರು.
ಜಗತ್ತಿನ ಪ್ರತಿಯೊಬ್ಬ ಜೀವಿಯ ಬಗೆಗೂ ಕಾಳಜಿವಹಿಸುವಷ್ಟು ಸ್ವಾಮಿ ವಿವೇಕಾನಂದರು ಉದಾರಿಗಳಾಗಿದ್ದರು. ಪ್ರತಿಯೊಬ್ಬರ ಬದುಕೂ ಸುಧಾರಿಸಬೇಕೆಂಬ ವಾಂಚೆ ಅವರಲ್ಲಿ ಅದೆಷ್ಟು ಬಲವಾಗಿತ್ತೆಂದರೆ, ‘ನಾನು ಈ ದೇಹವನ್ನು ಹರಿದ ಬಟ್ಟೆಯಂತೆ ಬಿಸುಟು ಹೊರಡುತ್ತೇನೆ. ಆದರೆ ಎಲ್ಲಿಯವರೆಗೂ ಪ್ರತಿಯೊಬ್ಬ ವ್ಯಕ್ತಿಯೂ ನಾನು ಭಗವಂತನೊಂದಿಗೆ ಒಂದಾಗಿರುವೆನೆಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೆ ಕೆಲಸ ಮಾಡುತ್ತಲೇ ಇರುತ್ತೇನೆ’ ಎಂದುಬಿಟ್ಟರು!
ಹೌದು. ಇದುವೇ ನಿಜವಾದ ಸುಧಾರಕನ ಲಕ್ಷಣ. ಅಂದುಕೊಂಡ ಕಾರ್ಯಕ್ಕಾಗಿ ಮತ್ತೆ ಜನ್ಮವೆತ್ತಲೂ ಅವನು ಹಿಂದುಮುಂದು ನೋಡಲಾರ. ಪ್ರತಿಯೊಬ್ಬನನ್ನು ಮೇಲೆತ್ತಿ ಅವನನ್ನು ಶ್ರೇಷ್ಠನನ್ನಾಗಿಸುವವರೆಗೂ ವಿಶ್ರಮಿಸಲಾರ. ಸುಧಾರಣೆ ಏನಾದರೂ ಸಾಧ್ಯವಿದ್ದರೆ ಅಂತಹ ಸುಧಾರಕರಿಂದ ಮಾತ್ರ. ಉಳಿದಂತೆ ಪೋಸ್ಟರು-ಬ್ಯಾನರುಗಳ ಮೂಲಕ ಸುಧಾರಣೆಯ ಡಿಂಡಿಮ ಬಾರಿಸುವವರು ಅದೆಷ್ಟು ಬೊಬ್ಬೆ ಹೊಡೆದರೂ ಸುಧಾರಣೆ ಕಾಣದಿರುವುದು ಏಕೆಂದು ಈಗಲಾದರೂ ಅರ್ಥವಾಗಿರಬೇಕಲ್ಲ?
ನಾವಾದರೂ ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಹೆಜ್ಜೆಯಿಡೋಣ. ಸೇವೆಯ ಮೂಲಕ ಸುಧಾರಣೆಯ ಪಣತೊಡೋಣ.
– ಚಕ್ರವರ್ತಿ ಸೂಲಿಬೆಲೆ
ನೆರೆ ಸಂತ್ರಸ್ತರ ನಿಧಿಗೆ ಜಾಗೋಭಾರತ್ ‘ಅಳಿಲು ಕಾಣಿಕೆ’
ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.
ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.
ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….
~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ
ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.
IF YOU CAN’T MAKE IT, FAKE IT!!- ಗಂಭೀರ ಚರ್ಚೆಗೆ ಸಿಲುಕದ ಮೋಸದ ಸಂಗತಿ
ಅದು ಆಗೋದು ಹಾಗೇ. ಎತ್ತರದ ಜಾಗದಲ್ಲಿ ಕುಳಿತವನೊಬ್ಬ ಅದೇನೇ ತಪ್ಪು ಮಾಡಿದರೂ, ಅವನ ಸ್ಥಾನದ ಮಹಿಮೆಯಿಂದ ಅವೆಲ್ಲವೂ ಮುಚ್ಚಿ ಹೋಗ್ತದೆ. ಆತ ಅದೆಷ್ಟು ವಂಚನೆಗಳನ್ನು ಮೆಟ್ಟಿಲಾಗಿಸಿಕೊಂಡು ಆ ಎತ್ತರವನ್ನು ಏರಿರುತ್ತಾನೆಂದರೆ, ಸ್ವತಃ ಅವನಿಗೇ ಅದನ್ನು ನೋಡಲು ಭಯ. ಅದಕ್ಕೇ ಆತ ಆದಷ್ಟೂ ಆ ಹಳೆ ವಂಚನೆಗಳನ್ನು ತನ್ನ ಕೋಟಿನ ತುದಿಗೂ ತಗುಲದ ಹಾಗೆ ಚಾಲಾಕಿ ತನದಿಂದ ವರ್ತಿಸ್ತಾನೆ. ಈ ಮಾತು ಅಮೆರಿಕಕ್ಕೂ ಸಲ್ಲುತ್ತದೆ. ಅದು ತನ್ನ ಚಂದ್ರಯಾನದ ಬಗ್ಗೆ ಈಗ / ಈಗ ಯಾಕೆ, ಹೋಗಿ ಬಂದು ಒಂದು ಸುತ್ತು ಪ್ರಚಾರ ಕೊಟ್ಟುಕೊಂಡ ನಂತರದಿಂದಲೂ ಮಾತೇ ಆಡುವುದಿಲ್ಲ.
ಸುಮಾರು ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಈ ಮಹಾನ್ ಚಂದ್ರಯಾನ ಸಾಧನೆಯ ಕುರಿತು ಅಂತರ್ಜಾಲದ ಅಧಿಕೃತ ಮಾಹಿತಿಯನ್ನಾಧರಿಸಿ ಬರೆದಿದ್ದ ಲೇಖನವನ್ನು ಈಗ ಮತ್ತೆ ಗಮನಕ್ಕೆ ತರುವುದು ಸೂಕ್ತವೆನಿಸುತ್ತಿದೆ. ಇದಕ್ಕೆ ಕಾರಣವೂ ಇದೆ.
ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಡಚ್ ರಾಷ್ಟ್ರೀಯ ವಸ್ತು ಸಂಗ್ರಹಾಲಯ ರಿಜ್ಕ್ಸ್ ಮ್ಯೂಸಿಯಮ್ ಒಂದು ಸಂಗತಿಯನ್ನು ಬಹಿರಂಗಪಡಿಸಿತು. ತನ್ನ ಸಂಗ್ರಹದಲ್ಲಿರುವ, ಚಂದ್ರನಿಂದ ತಂದಿದ್ದೆಂದು ಹೇಳಲಾದ ಕಲ್ಲು ವಾಸ್ತವದಲ್ಲಿ ಚಂದ್ರನಿಂದ ತಂದುದಾಗಿರದೆ, ಕಲ್ಲಾಗಿರುವ (ಜಡಗಟ್ಟಿದ) ಮರದ ತುಂಡು ಎಂದು ಸಾಬೀತಾಗಿರುವ ವಿಷಯವನ್ನು ಅದು ಹೇಳಿತು. ಬಾಹ್ಯಾಕಾಶ ಸಂಶೋಧಕರೊಬ್ಬರು ವಿವಿಧ ಪರೀಕ್ಷೆಗಳ ನಂತರ ಅದನ್ನು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ ಮ್ಯೂಸಿಯಮ್ಮ್ಮಿನ ವಕ್ತಾರ ಕ್ಸಾಂಡ್ರಾ ವಾನ್ ಜೆಲ್ಡರ್, ತಾವು ಕುತೂಹಲಕ್ಕಾಗಿಯಾದರೂ ಈ ಕಲ್ಲನ್ನು ತಮ್ಮ ಸಂಗ್ರಹಾಲಯದಲ್ಲಿ ಇನ್ನು ಮುಂದೆಯೂ ಇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದರು.
ಈ ಕಲ್ಲನ್ನು ೧೯೬೯ರಲ್ಲಿ ನೆದರ್ ಲ್ಯಾಂಡಿಗೆ ಭೇಟಿ ನೀಡಿದ್ದ ಅಮೆರಿಕನ್ ರಾಯಭಾರಿ ಜೆ.ವಿಲಿಯಮ್ ವಿಡೆನ್ ಡಾರ್ಫ್, ಅಂದಿನ ಪ್ರಧಾನಿ ವಿಲ್ಲೆಮ್ ಡ್ರೀಸ್ ಮೆನ್ನರಿಗೆ ಉಡುಗೊರೆಯಾಗಿ ನೀಡಿದ್ದರು. ೧೯೯೮ರಲ್ಲಿ ಡ್ರೀಸ್ ಮೆನ್ನರ ಮರಣದ ನಂತರ ಸಂಗ್ರಹಾಲಯವು ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
ಇದು ಉತ್ತರ ಪಡೆಯಲಾಗದಂತಹ ಪ್ರಶ್ನೆಗಳುಳ್ಳ ಒಂದು ಕಥೆಯಂತಿದೆ. ಈ ಬಗ್ಗೆ ನಾವು ನಗಬಹುದಷ್ಟೆ! ಎನ್ನುತ್ತಾರೆ ಮಿಸ್ ಕ್ಸಾಂಡ್ರಾ. ನಾವೂ ಅಷ್ಟೇ… ಏನಂತೀರಿ!?
~ ಚಕ್ರವರ್ತಿ ಸೂಲಿಬೆಲೆ
ಮೋಸ, ಕೊಲೆ ಏನಾದರೂ ಸರಿ. ಮೇಲೆ ಬರಬೇಕು ಅಷ್ಟೆ!
ಮಾನವನಿಟ್ಟ ಪುಟ್ಟ ಹೆಜ್ಜೆ, ಮನುಕುಲದ್ದೊಂದು ದಿಟ್ಟ ನೆಗೆತ ಚಂದ್ರನ ಮೇಲೆ ಕಾಲಿಟ್ಟೊಡನೆ ನೀಲ್ ಆರ್ಮ್‌ಸ್ಟ್ರಾಂಗ್ ಹೇಳಿದ ಮಾತಿದು. ಇಡಿಯ ಜಗತ್ತು ಅವತ್ತು ಚಂದ್ರನೊಂದಿಗೆ ಏಕಾತ್ಮವಾಗಿಬಿಟ್ಟಿತ್ತು. ಅಮೆರಿಕದ ಸಾಧನೆಗೆ ತಲೆದೂಗಿ ನಿಂತಿತ್ತು. ಈ ಘಟನೆ ನಡೆದ ೩೬ ವರ್ಷಗಳ ನಂತರ ಅದೇ ಅಮೆರಿಕ ಧೂಮಕೇತುವಿಗೆ ಗುದ್ದಿ ಸಾಧನೆಯ ಪುಟದಲ್ಲಿ ಮತ್ತೊಮ್ಮೆ ಹೆಸರು ಬರೆದಿದೆ.
ಆದರೆ ಒಂದ್ನಿಮಿಷ ಆಲೋಚಿಸಿ ನೋಡಿ. ತಮ್ಮ ಪಾಡಿಗೆ ತಾವಿದ್ದ ಆಕಾಶಕಾಯಗಳನ್ನು ಮುಟ್ಟುವ, ತಟ್ಟುವ, ಅದೇ ಹೆಸರಿನಲ್ಲಿ ಆನಂದದಿಂದ ಕುಣಿದಾಡುವ ಹಕ್ಕು ನಮಗೆಲ್ಲಿಯದು? ಇತರ ರಾಷ್ಟ್ರಗಳಿಗಿಂತ ಮುಂದಿದ್ದೇವೆ, ಎತ್ತರದಲ್ಲಿದ್ದೇವೆ ಎನ್ನುವ ತವಕದಿಂದ ಅಮೆರಿಕ ನಾಸಾದ ಮೂಲಕ ಮಾಡಿಸುವ ಕೆಲಸಗಳೆಲ್ಲ ಮನುಕುಲಕ್ಕೊಂದು ದೊಡ್ಡ ಹೊಡೆತವೇ ಅಲ್ಲವೇ? ಇಷ್ಟಕ್ಕೂ ಅಮೆರಿಕ ಮಾಡಿರುವ ಸಾಧನೆಗಳು ಎಷ್ಟರ ಮಟ್ಟಿಗೆ ಸಾರ್ಥಕವಾದುದು, ಸತ್ಯವಾದುದು ಎಂಬುದೇ ಗಂಭೀರವಾದ ಪ್ರಶ್ನೆ.
ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಕೆಲವು ವರ್ಷಗಳ ನಂತರ, ಈ ಪ್ರಶ್ನೆ ವಿಜ್ಞಾನಿಗಳನ್ನು ವ್ಯಾಪಕವಾಗಿ ಕಾಡಲಾರಂಭಿಸಿತ್ತು. ಬಿಲ್ ಕೇಸಿಂಗ್ ಎಂಬ ಖಗೋಳ ವಿಜ್ಞಾನಿಯಂತೂ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದ್ದೇ ಸುಳ್ಳು ಎಂದು ಪುರಾವೆಗಳೊಂದಿಗೆ ವಾದಿಸಿದರು. ಆರ್ಮ್‌ಸ್ಟ್ರಾಂಗ್ ನಿಂತ ಜಾಗದ ಹಿಂಭಾಗದಲ್ಲೆಲ್ಲೂ ನಕ್ಷತ್ರಗಳೇ ಇಲ್ಲ. ಆತ ಚಂದ್ರನ ಮೇಲೆ ನೆಟ್ಟ ಬಾವುಟ ಗಾಳಿಗೆ ಪಟಪಟಿಸುತ್ತಿದೆ. ಆದರೆ ಚಂದ್ರನ ಮೇಲೆ ವಾತಾವರಣವೇ ಇಲ್ಲ; ಗಾಳಿಯೆಲ್ಲಿಯದು? ರಾಕೆಟ್ಟುಗಳ, ಇಂಜಿನ್ನುಗಳ ಸದ್ದು ಅದೆಷ್ಟು ಜೋರೆಂದರೆ, ಅಕ್ಕ ಪಕ್ಕದವರು ಅರಚಿದರೂ ಕೇಳುವುದಿಲ್ಲ. ಅಂತಹುದರಲ್ಲಿ ಆರ್ಮ್‌ಸ್ಟ್ರಾಂಗ್ ಮಾತನಾಡಿದ್ದನ್ನು ಭೂಮಿಯ ಜನರಿಗೆ ಕೇಳಿಸಲಾಗಿದೆ. ಆ ಮಾತುಗಳ ಹಿಂದೆ ಎಲ್ಲೂ ಎಂಜಿನ್ನಿನ ಸದ್ದೇ ಇಲ್ಲವಲ್ಲ! ಸೂರ್ಯನ ಬೆಳಕು ಬಿಟ್ಟರೆ ಬೇರೆ ಬೆಳಕೇ ಇಲ್ಲದ ಜಾಗದಲ್ಲಿ ಚಂದ್ರದ ಮೇಲೆ ಕಾಲಿಟ್ಟವರ ಚಿತ್ರಗಳು ಸ್ಫುಟವಾಗಿ ಬಂದದ್ದು ಹೇಗೆ? ಕೇಸಿಂಗ್ ಈ ಪ್ರಶ್ನೆಗಳನ್ನು ಮುಂದಿಟ್ಟಾಗ ನಾಸಾದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರು. ಕೇಸಿಂಗ್‌ನ ತಲೆ ಕೆಟ್ಟಿದೆ ಎಂದು ವಾದಿಸಿದರು!
ನಿಜ ಹೇಳಬೇಕೆಂದರೆ, ಅಮೆರಿಕ ಖಗೋಳ ವಿಜ್ಞಾನದಲ್ಲಿ ಸಾರ್ವಭೌಮತೆ ಸಾಧಿಸುವ ನೆಪದಲ್ಲಿ ಹೀಗೊಂದು ನಾಟಕ ಹೂಡಿತ್ತು. ೧೯೫೭ ರಲ್ಲಿ ಸ್ಫುಟ್ನಿಕ್ ಉಪಗ್ರಹವನ್ನು ಕಕ್ಷೆಗೆ ಬಿಟ್ಟ ರಷ್ಯಾ ಬಲುದೊಡ್ಡ ಸಾಧನೆ ಮಾಡಿತ್ತು. ಶೀತಲ ಸಮರದ ವೇಳೆಗೆ ರಷ್ಯಾವನ್ನು ಶತಾಯಗತಾಯ ಮೆಟ್ಟಬೇಕೆಂದುಕೊಂಡಿದ್ದ ಅಮೆರಿಕಕ್ಕೆ ಇದು ಬಲುದೊಡ್ಡ ಆಘಾತ. ತಾವು ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಅವರ ಯತ್ನ ವಿಫಲವಾಗಿತ್ತು. ಆಗ ಅಮೆರಿಕಾ ಅಧ್ಯಕ್ಷರು ‘ಹೇಗಾದರೂ ಸರಿಯೇ’ ತಾವು ರಷ್ಯಾಕ್ಕೆ ಪ್ರತ್ಯುತ್ತರ ಕೊಡಲೇಬೇಕೆಂದು ತಾಕೀತು ಮಾಡಿದರು.
ಆ ಮಾತನ್ನು ಪ್ರಸಾದವಾಗಿ ಸ್ವೀಕರಿಸಿದ ನಾಸಾದ ವಿಜ್ಞಾನಿಗಳು, ಚಂದ್ರನ ಮೇಲೆ ಕಾಲಿಟ್ಟು ಬರುವ ಎನ್ನುವುದು ಅವರಿಗೆ ಗೊತ್ತಿತ್ತು. ಆದರೂ ಜನರ ಕಣ್ಣಿಗೆ ಮಣ್ಣೆರಚತೊಡಗಿದರು. ಗ್ರಿಸಮ್ ನೇತೃತ್ವದ ತಂಡವನ್ನು ರಚಿಸಿದರು. ವಿಜ್ಞಾನಿಗಳು ಮೋಸ ಮಾಡುವ ವಿಚಾರ ಗೊತ್ತಾದೊಡನೆ, ಗ್ರಿಸಮ್ ಪ್ರತಿಭಟಿಸಿದ. ಅವನ ಹತ್ಯೆಯೇ ಆಗಿ ಹೋಯಿತು! ಚಂದ್ರನತ್ತ ಹೋಗಬೇಕಿದ್ದ ಅವನ ನೌಕೆ ಭೂಮಿ ಬಿಡುವ ಮುನ್ನವೇ ಭಸ್ಮವಾಯಿತು. ಅವನ ಇತರ ಜತೆಗಾರರು ನಿಗೂಢವಾಗಿ ಕೊಲೆಯಾಗಿಬಿಟ್ಟರು. ಆನಂತರವೇ ನೀಲ್ ಆರ್ಮ್‌ಸ್ಟ್ರಾಂಗ್‌ನ ತಂಡ ರೆಡಿಯಾಗಿದ್ದು. ಆ ತಂಡ ನೌಕೆಯಲ್ಲಿ ಕುಳಿತು ಎಂಟು ದಿನಗಳ ಕಾಲ ಜಗತ್ತಿನ ಪ್ರದಕ್ಷಣೆ ಮಾಡಿ ಏರಿಯಾ ಎನ್ನುವ ಅಮೆರಿಕದ ರಕ್ಷಿತ ಪ್ರದೇಶಕ್ಕೆ ಹೋಗಿ, ಬಗೆಬಗೆಯ ಫೋಟೊ ತಂದಿತು. ಅಲ್ಲಿಂದಲೇ ಆರ್ಮ್‌ಸ್ಟ್ರಾಂಗ್ ಮಾತನಾಡಿ ಭುವಿಯ ಜನರನ್ನು ರೋಮಾಂಚನಗೊಳಿಸಿದ. ಚಂದ್ರ ನೋಡಲಿಕ್ಕೆ ಥೇಟ್ ಅಮೆರಿಕದ ಮರುಭಮಿಯಂತೆ ಇದೆ ಎಂದೂ ನೀಲ್ ಉದ್ಗರಿಸಿದ್ದ. ವಾಸ್ತವವಾಗಿ ಅವನು ಅಮೆರಿಕದ ಮರುಭೂಮಿಯ ಮೇಲೆಯೇ ಇದ್ದ !
ಅಮೆರಿಕ ಜಗತ್ತಿನ ಕಂಗಳಲ್ಲಿ ರಷ್ಯಾಕ್ಕಿಂತಲೂ ಎತ್ತರಕ್ಕೇರಿಬಿಟ್ಟಿತು. ಅವರನ್ನು ಮೀರಿಸುವರೇ ಇಲ್ಲವಾಗಿಬಿಟ್ಟರು. ಇದೇ ಸಂದಭದಲ್ಲಿಯೇ ಅಮೆರಿಕದ ಪೌಲ್ ಲಾಜೆರಸ್, ಮಂಗಳನ ಮೇಲೆ ಕಾಲಿಡುವ ಕ್ಯಾಪ್ರಿಕಾರ್ನ್ ಒನ್ ಎಂಬ ಚಿತ್ರ ನಿರ್ಮಿಸಿದ್ದು. ಈ ಚಿತ್ರ ಇದೇ ರೀತಿ ರಾಷ್ಟ್ರವೊಂದು ಜನರಿಗೆ ಮೋಸ ಮಾಡುವುದನ್ನೇ ಬಂಡವಾಳವಾಗಿಸಿಕೊಂಡಿತ್ತು. ನನ್ನ ಕಡಿಮೆ ಬಜೆಟ್ಟಿನಲ್ಲಿಯೇ ನಾನು ಮಂಗಳನ ಮೇಲೆ ಕಾಲಿಟ್ಟ ಅನುಭವ ನೀಡಲಬಲ್ಲೆನಾದರೆ, ನಲವತ್ತು ಬಿಲಿಯನ್ ಡಾಲರ್‌ಗಳನ್ನು ಸುರಿದ ಅಮೆರಿಕ ಸರಕಾರ ಚಂದ್ರನ ಮೇಲೆ ಕಾಲಿರಿಸಿದ್ದನ್ನು ನಂಬಿಸುವುದು ಕಷ್ಟವಲ್ಲ ಎಂದು ಲಾಜೆರಸ್ ಯಾವಾಗಲೂ ಹೇಳುತ್ತಿದ್ದ! ಹೌದು. ಅದು ಭೂಮಿಯ ಮೇಲಿನ ಇದುವರೆಗಿನ ಕಾಸ್ಟ್ಲಿ ಮೋಸ, ಕಾಸ್ಟ್ಲಿಯೆಸ್ಟ್ ಸಿನಿಮಾ!
ಈ ಹಿನ್ನೆಲೆಯಲ್ಲಿಯೇ ಅಮೆರಿಕ ಯಾವುದಕ್ಕೆ ಕೈಯಿಟ್ಟರೂ ಹೆದರಿಕೆಯಾಗೋದು. ಅಲ್ಲಿ ಕೊಲೆಗಳಾಗಿಬಿಡುತ್ತವೆ. ಸತ್ಯ ಹುದುಗಿಸುವ ಪ್ರಯತ್ನಗಳ ಹಿಂದೆ ಘೋರ ಪಾತಕಗಳೂ ನಡೆದುಬಿಡುತ್ತವೆ! ಕಲ್ಪನಾ ಚಾವ್ಲಾಳ ಸಾವು ಕೂಡ ಅನುಮಾನವಾಗಿ ಕಾಡುವುದು ಇದಕ್ಕೇ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳೆಂದು ಕರೆದುಕೊಳ್ಳುವ ನಾಸಾದವರು ಸಂಪೂರ್ಣ ವಿಫಲರಾಗಿಬಿಟ್ಟ ಯೋಜನೆ ಅದು. ತಮ್ಮ ವಿಫಲತೆಯನ್ನು ಮರೆಮಾಚಲು ಸತ್ತವರ ಬಗೆಗಿನ ಭಾವನೆಗಳನ್ನು ಬಡಿದೆಬ್ಬಿಸಿದರು. ತಾವು ಮತ್ತೆ ಗ್ರೇಟ್ ಆಗಿಬಿಟ್ಟರು! ಧೂಮಕೇತುವಿಗೆ ಡೀಪ್ ಇಂಪ್ಯಾಕ್ಟ್ ಮಾಡಿದ್ದೂ ಅದೇ ಹಿನ್ನೆಲೆಯ ಕಥೆ. ತನ್ನ ಪಾಡಿಗೆ ತಾನು ಸೂರ್ಯನ ಸುತ್ತುವ ಕಾಯವೊಂದಕ್ಕೆ ಹೋಗಿಡಿಕ್ಕಿ ಹೊಡೆದು ಇವರು ಮಾಡುವುದಾದರೂ ಏನು ಹೇಳಿ? ಅಕಸ್ಮಾತ್ ಇವರಿಟ್ಟ ಒಂದು ತಪ್ಪು ಹೆಜ್ಜೆ, ಇಡಿಯ ವಿಶ್ವ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿಬಿಟ್ಟರೆ ಗತಿ ಯಾರು? ನಾಲ್ಕಾರು ನದಿಗಳನ್ನು ಜೋಡಿಸೋಣ ಎನ್ನುವ ಮಾತಿಗೇ ನಾವು ಚರ್ಚೆಗಿಳಿಯುತ್ತೇವೆ, ಬಡಿದಾಡುತ್ತೇವೆ. ದೇಶ ಮರುಭೂಮಿಯಾಗಿಬಿಡುತ್ತದೆಂದು ಗೋಳಿಡುತ್ತೇವೆ. ಅಂತಹುದಲ್ಲಿ ಯಾರೊಂದಿಗೂ ಚರ್ಚಿಸದೇ, ತನ್ನ ಮೂಗಿನ ನೇರಕ್ಕೇ ಆಲೋಚಿಸಿ ಅಕಾಶಕಾಯಗಳ ಸುದ್ದಿಗಿಳಿಯುವ ಹಕ್ಕು ಅಮೆರಿಕಕ್ಕೆ ಕೊಟ್ಟವರು ಯಾರು?
ಆದರೆ ಅಮೆರಿಕವನ್ನು ಹೀಗೆ ಪ್ರಶ್ನಿಸಲಿಕ್ಕೆ ಯಾರೂ ಮುಂದಾಗೋದೇ ಇಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ದಿನ, ಅದು ಮೋಸ ಎಂದು ಯಾರಾದರೂ ಹೇಳಿದ್ದರೆ ಅವರು ಪೆಟ್ಟು ತಿನ್ನುತ್ತಿದ್ದರು. ಡಬ್ಲು ಟಿ ಸಿ ಕಟ್ಟಡಗಳು ಉರುಳಿದಾಗ ಅದರ ಹಿಂದೆಯೂ ಅಮೆರಿಕದ್ದೇ ಕೈವಾಡವಿದೆ ಎಂದಾಗ ಬೊಗಳೆ ಎಂದಿದ್ದರು. ಅಪ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲು ಅಮೆರಿಕ ಹೂಡಿದ ನಾಟಕವಿದು ಎಂದರೂ ಯಾರೂ ಕೇಳಿರಲಿಲ್ಲ. ಈಗ ನೋಡಿ, ಪರದೆ ಸರಿದು ಸತ್ಯ ಹೊರಬರಲಾರಂಭಿಸಿದೆ. ಅಮೆರಿಕದ ರಾದ್ಧಾಂತಗಳು ಅಥವಾಗುತ್ತಿವೆ!
‘ಜಾಗೋ ಭಾರತ್’ನ ಕೈಜೋಡಿಸಬೇಕೆಂದರೆ….
ನಿರಂತರ ಓಡಾಟ, ಪುಸ್ತಕ ಬರಹದ ಒತ್ತಡಗಳಿಂದಾಗಿ ನಿಮ್ಮ ಜೊತೆ ಬೆರೆಯಲಾಗ್ತಿಲ್ಲ. ದಯವಿಟ್ಟು ಕ್ಷಮಿಸಿ.
ಈ ನಡುವೆ, ‘ರಾಷ್ಟ್ರ ಶಕ್ತಿ ಕೇಂದ್ರ’ ಹಾಗೂ ‘ಜಾಗೋ ಭಾರತ್’ ಕುರಿತು ಮಾಹಿತಿ ಕೇಳಿ, ನಾವೂ ಬಾಗವಹಿಸಬಹುದೆ ಎಂದು ವಿಚಾರಿಸಿ ಸಾಕಷ್ಟು ಸಂದೇಶ, ಮೇಲ್ ಹಾಗೂ ಕರೆಗಳು ಬಂದಿವೆ. ಆದ್ದರಿಂದ, ಹೀಗೆ ಬ್ಲಾಗಿಗೆ ಹಾಕಿಬಿಟ್ಟರೆ, ಕಮ್ಯುನಿಕೇಟ್ ಮಾಡೋದು ಸುಲಭ, ಹಾಗೂ ಮಾಹಿತಿ ನೀಡಲು ಅನುಕೂಲ ಎನ್ನಿಸಿ ಇಲ್ಲಿ ಬರೆಯುತ್ತಿರುವೆ.
ಬದಲಾದ ಅವಶ್ಯಕತೆ ಹಾಗೂ ಸನ್ನಿವೇಶಗಳಿಗೆ ತಕ್ಕಂತೆ ರಾಷ್ಟ್ರ ಶಕ್ತಿ ಕೇಂದ್ರವನ್ನು ಪುನರ್ ರೂಪಿಸುವ ಯೋಜನೆ ಕಣ್ಣ ಮುಂದಿದೆ. ಒಂದು ವಿನ್ಯಾಸ ರೆಡಿ ಮಾಡಿಕೊಂಡು ನಿಮ್ಮೆದುರು ಹಾಜರಾಗುವೆ. ನಾವೆಲ್ಲ ಸದಸ್ಯರೂ ಈ ಬಗ್ಗೆ ಯೋಚಿಸುತ್ತಿದ್ದೇವೆ.
ಇನ್ನು, ಜಾಗೋ ಭಾರತ್ ಕುರಿತು…
ದೇಶ ಪ್ರೇಮದ, ದೇಶ ಭಕ್ತಿಯ ಗೀತೆಗಳನ್ನು ಭಾವ ತುಂಬಿ ಹಾಡಬಲ್ಲ ಸ್ಕಿಲ್ ನಿಮ್ಮಲ್ಲಿದ್ದರೆ ಆಯಿತು. ಅಥವಾ ಯಾವುದೇ ವಾದ್ಯ ಸಂಗೀತದಲ್ಲಿ ನಿಮಗೆ ಪರಿಶ್ರಮವಿದೆಯೆಂದಾದರೂ ಸರಿಯೇ.
ನಿಮ್ಮಲ್ಲಿ ಉತ್ಸಾಹ ಹಾಗೂ ದೇಶ ಪ್ರೇಮಗಳು ಭೋರ್ಗರೆಯುತ್ತಿರಬೇಕೆನ್ನುವುದೇ ನಿಮಗಿರಬೇಕಾದ ಮೊದಲ ಅರ್ಹತೆ.
ಹಾಗೆ ನೀವು ನಿಮ್ಮ ಬಿಡುವಿನ ಸಮಯ, ಅಥವಾ, ಸಮಯ ಮಾಡಿಕೊಳ್ಳುವ ಅವಕಾಶ ಹೊಂದಿರುವಿರೆಂದಾದರೆ ನಮಗೆ ಕರೆ ಮಾಡಿ. ನಿಮ್ಮಲ್ಲಿ ದೇಶದ ಬಗ್ಗೆ, ನಾಡು ನುಡಿಯ ಬಗ್ಗೆ ಅಪಾರ ಗೌರವಾಭಿಮಾನಗಳಿದ್ದು, ಅಧಿಕಾರಯುತವಾಗಿ, ಭಾವೋದ್ದೀಪನಗೊಳಿಸುವಂತೆ ಮಾತನಾಡುವ ಕೌಶಲವಿದ್ದರೂ ಸರಿಯೇ…
ನಮ್ಮದು ಈಗಾಗಲೇ ಒಂದು ತಂಡವಿದೆ. ಆದರೆ ಜಾಗೋ ಭಾರತ್ ಎಲ್ಲ ರಾಷ್ಟ್ರಾಸಕ್ತರ ತಂಡವಾಗಬೇಕು ಎನ್ನುವುದು ನಮ್ಮ ಬಯಕೆ. ನಿಮ್ಮಲ್ಲಿ ಆಸಕ್ತಿ ಇದ್ದರೆ, ನಮ್ಮನ್ನು ಸಂಪರ್ಕಿಸಿ.
ಹತ್ತಾರು ತಂಡಗಳ ರಚನೆಯಾಗಲಿ… ಹೊತ್ತಿಕೊಂಡ ಒಂದು ಹಣತೆ ನೂರು- ಸಾವಿರ ದೀಪಗಳನ್ನು ಬೆಳಗಲಿ…
ಸಂಪರ್ಕ ಸಂಖ್ಯೆಗಳು: ಚಕ್ರವರ್ತಿ ಸೂಲಿಬೆಲೆ- 9448423963
ಅಥವಾ 9480544508
ವಂದೇ,
ಚಕ್ರವರ್ತಿ ಸೂಲಿಬೆಲೆ
ಜನವರಿ ೧೨- ಯುವ ದಿನೋತ್ಸವ
ಜನವರಿ ೧೨, ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಜನ್ಮದಿನ. ವಿವೇಕಾನಂದರ ಚಿಂತನೆಗಳು ಅತ್ಯಂತ ವಿಶಾಲ ಮತ್ತು ಸಾರ್ವಕಾಲಿಕ. ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.
ನಿಮಗೆ-ನಮಗೆಲ್ಲರಿಗೂ ಯುವದಿನದ ಶುಭಾಶಯ.
ಸ್ವಾಮಿ ವಿವೇಕಾನಂದರು ತೋರಿದ ಹಾದಿಯಲ್ಲಿ ನಾಲ್ಕು ಹೆಜ್ಜೆ ಒಟ್ಟಾಗಿ ನಡೆಯೋಣ ಬನ್ನಿ…
‘ಯೂತ್ ಫಾರ್ ಸೇವಾ’ ವತಿಯಿಂದ ಯುವದಿನ
ಯೂತ್ ಫಾರ್ ಸೇವಾ, ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ, ಅವರಿಗೆ ಸೇವೆಯ ಅವಕಾಶ ಕಲ್ಪಿಸಿಕೊದುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಗೆ ಸಾಫ್ಟ್ ವೇರ್ ಉದ್ಯಮದ ಮಂದಿಗೂ ಸಮಾಜ ಸ್ಪಂದನೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಯದು. ಯೂತ್ ಫಾರ್ ಸೇವಾ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು www.youthforseva.org ತಾಣವನ್ನು ನೋಡಬಹುದು, ಅವರ ಕಾರ್ಯದಲ್ಲಿ ನೀವೂ ಸಹಭಾಗಿಗಳಾಗಬಹುದು.
ಪ್ರಸ್ತುತ, ಯೂತ್ ಫಾರ್ ಸೇವಾ, ದಿನಾಂಕ ೩.೦೧.೨೦೦೯ರ ಶನಿವಾರದಂದು ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಯುವದಿನದ ಅಂಗವಾಗಿ (ಸ್ವಾಮಿ ವಿವೇಕಾನಂದರ ಜನ್ಮದಿನ- ಜನವರಿ ೧೨) ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸವನ್ನು ಏರ್ಪಡಿಸಿದೆ. ಸಂಜೆ ೪.೩೦ರಿಂದ ೬.೩೦ರವರೆಗೆ ಯುವದಿನದ ಅಂಗವಾಗಿ ಕಾರ್ಯಕ್ರಮಗಳಿರುತ್ತವೆ. ಚಕ್ರವರ್ತಿ ಸೂಲಿಬೆಲೆಯವರು ಸ್ವಾಮಿ ವಿವೇಕಾನಂದರ ಜೀವನವನ- ಸಂದೇಶವನ್ನು ಬಿಚ್ಚಿಡಲಿದ್ದಾರೆ.
ಯುವದಿನದ ಕಾರ್ಯಕ್ರಮಗಳಿಗಾಗಿ ಎಲ್ಲ ಆಸಕ್ತರನ್ನು ಯೂತ್ ಫಾರ್ ಸೇವಾ ಪ್ರೀತಿಯಿಂದ ಆಹ್ವಾನಿಸಿದೆ.
ಆಕ್ರಮಣಗಳು ಮತ್ತು ಸಾಂಸ್ಕೃತಿಕ ಪಲ್ಲಟ
“ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” – ಸಾನೆ ಗುರೂಜಿ
ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?
ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.
ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ. ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.
ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.
ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.
ಇರಲಿ. ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!
ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.
ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.
ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.
ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.
“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!
~
ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.
ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!
ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!
ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.
ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ, “ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!
ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?
ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.
ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.
ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’. ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.
ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.
~ ಚಕ್ರವರ್ತಿ ಸೂಲಿಬೆಲೆ
ಶಿಕ್ಷಕನಾಗಲು ಅದೇಕೆ ಅಸಡ್ಡೆ?
ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಖೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?
ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!
ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.
ಅದೇಕೋ ಸದ್ಗುರುಗಳಾಗುವ ಹಂಬಲ ಇಂದಿನ ಪೀಳಿಗೆಯಲ್ಲಿ ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು ಅಪ್ಪ-ಅಮ್ಮ ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!
ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !
ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್‌ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ! ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್‌ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.
ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.
ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ ಅದಕ್ಕೇ.
ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.
ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರು. ಭಾರತ ತೊಂದರೆಯಲ್ಲಿ ಸಿಲುಕಿಕೊಂಡಾಗಲೆಲ್ಲ ಆಚಾರ್ಯರು – ಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
– ಚಕ್ರವರ್ತಿ ಸೂಲಿಬೆಲೆ
ಭಾರತ ಭಾಗ್ಯ ವಿಧಾತರು- ೪
ರಾಜಾ ರಾಮಮೋಹನ ರಾಯ್
ರಾಮಮೋಹನ ರಾಯರು ಜನಿಸಿದ್ದು ಮುರ್ಷಿದಾಬಾದ್ (ಪ. ಬಂಗಾಳ) ಜಿಲ್ಲೆಯ ರಾಧಾ ನಗರ ಎಂಬಲ್ಲಿ. ರಾಜಾ ಎನ್ನುವುದು ಎರಡನೆ ಅಕ್ಬರ್ ಅವರಿಗೆ ನೀಡಿದ ಬಿರುದು.
ರಾಮಮೋಹನ ರಾಯ್ ಅವರನ್ನು ಭಾರತೀಯ ಪುನರುಜ್ಜೀವನದ ಶಕಪುರುಷ ಎಂದು ಕರೆಯುವರು. ಭಕ್ತ ಭಾಗವತರ ಮನೆತನದಲ್ಲಿ ಜನಿಸಿದ ರಾಮಮೋಹನ ರಾಯರು ಬಾಲ್ಯದಲ್ಲಿ ದೈವಭಕ್ತರಾಗಿದ್ದರು. ಮುಂದೆ ತಮ್ಮ ವಿಭಿನ್ನ ಚಿಂತನೆಗಳಿಂದ ವಿಚಾರವಾದಿ ಎನಿಸಿಕೊಂಡರೂ
ಅವರ ಆಧ್ಯಾತ್ಮಿಕತೆಗೆ ಭಂಗ ಬರಲಿಲ್ಲ. ಆದರೆ ಧರ್ಮದಲ್ಲಿ ಬೇರೂರಿದ್ದ ಮೌಢ್ಯ – ಆಚರಣೆಗಳನ್ನು, ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿದ್ದ ಸ್ತ್ರೀಶೋಷಣೆಯನ್ನು ಅವರು ಕಟುವಾಗಿ ವಿರೋಧಿಸಿದರು.
ರಾಮಮೋಹನರದು ಅಸೀಮ ಬುದ್ಧಿಶಕ್ತಿ , ಅವರು ಸಂಸ್ಕೃತ, ಪರ್ಶಿಯನ್ ಭಾಷೆಗಳ ಜೊತೆಗೆ ಗ್ರೀಕ್, ಹೀಬ್ರೂ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿದ್ದರು. ಆಂಗ್ಲಭಾಷೆಯಲ್ಲಿ ಪರಿಣತಿ ಪಡೆದು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು.
ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಶಿಕ್ಷಣಗಳು ಮೋಹನರಾಯರ ಪ್ರಮುಖ ಆದ್ಯತೆಗಳಾಗಿದ್ದವು. ಅವರ ಹೋರಾಟದಿಂದಾಗಿ ಸತಿ ಪದ್ಧತಿಗೆ ಕಾನೂನಾತ್ಮಕ ನಿಷೇಧ ಬಿತ್ತು. ಅವರು ಸ್ತ್ರೀಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯಬೇಕೆಂದು ಪ್ರಬಲ ವಾದ ಮಂಡಿಸಿದ್ದರು. ಬಹಳ ವರ್ಷಗಳ ನಂತರ ಅದು ಅಂಗೀಕೃತವಾಯಿತು.
ಮೋಹನರಾಯರು ಅಪಾರ ಸಾಮಾಜಿಕ ಕಳಕಳಿಯಿದ್ದ ವ್ಯಕ್ತಿ ; ಉಳುವವನಿಗೆ ಹೊಲ ಎಂಬ ಘೋಷಣೆಯನ್ನು ಮೊತ್ತ ಮೊದಲು ಹೊರಡಿಸಿದ್ದು ಇವರೇ. ಭಾರತೀಯ ಭಾಷೆಯಲ್ಲಿ ಮೊದಲ ಬಾರಿಗೆ ಪತ್ರಿಕೆ ಹೊರ ತಂದವರೂ ಇವರೇ. ಅವರ ಆತ್ಮೀಯ ಸಭಾ- ಬಾಂಗ್ಲಾ ಗೆಜೆಟ್ ಹೊರಡಿಸಿದರೆ, ಅವರು ಪರ್ಷಿಯನ್ ಭಾಷೆಯಲ್ಲಿ ಮಿರತ್ ಉಲ್ ಅಖಬಾರ್ ಮತ್ತು ಬಂಗಾಳಿಯಲ್ಲಿ ಸಂವಾದ ಕೌಮುದಿಗಳನ್ನು ಹೊರತಂದರು.
ಮೋಹನರಾಯರು ಹಿಂದೂ ಧರ್ಮಿಯರ ಮೌಢ್ಯತೆಯನ್ನು ವಿರೋಧಿಸಿದರೂ ಧರ್ಮದ ಬಗ್ಗೆ ಅಸಡ್ಡೆ ತಾಳಲಿಲ್ಲ. ಬದಲಿಗೆ ಅದರ ಪುನರುತ್ಥಾನಕ್ಕಾಗಿ ಬ್ರಹ್ಮ ಸಮಾಜ ವನ್ನು ಸ್ಥಾಪಿಸಿ ತಮ್ಮ ವಿಚಾರಧಾರೆಗಳನ್ನು ವ್ಯಾಪಕಗೊಳಿಸುವ ಯತ್ನ ಮಾಡಿದರು. ಹಿಂದೂಗಳು ನಿರಂತರ ಆಕ್ರಮಣಗಳಿಂದ ಅಂಜುಕುಳಿಗಳಾಗಿ ಸಾಗರದಾಚೆ ವಿದೇಶಪ್ರಯಾಣ ಮಾಡಬಾರದು ಎಂದು ತಮಗೆ ತಾವೇ ವಿಧಿಸಿಕೊಂಡಿದ್ದ ಕಟ್ಟಳೆ ಮುರಿದು ಹಡಗಿನಲ್ಲಿ ಇಂಗ್ಲೆಂಡಿಗೆ ಹೋದರು.
೧೮೩೧ ರಲ್ಲಿ ಮೊಘಲ್ ರಾಜನ ಪರ ವಾದ ನಡೆಸಲು ಇಂಗ್ಲೆಂಡಿಗೆ ತೆರಳಿದ್ದ ಮೋಹನ ರಾಯರು ಅಲ್ಲಿಯೇ ಮೃತರಾದರು. ಭಾರತದ ಸಮಾಜ ಸುಧಾರಕರ ಯಾದಿಯಲ್ಲಿ ರಾಜಾ ರಾಮಮೋಹನ ರಾಯರ ಹೆಸರು ಇಂದಿಗೂ ಮೊದಲನೆಯದಾಗಿ ಪರಿಗಣಿಸಲ್ಪಡುತ್ತದೆ.
ಮೀರಾಬಾಯಿ
ಮೀರಾಬಾಯಿ ಭಾರತ ಕಂಡ ಸಂತಶ್ರೇಷ್ಠರಲ್ಲಿ ಒಬ್ಬಳು. ಅವಳು ಶ್ರೀ ಕೃಷ್ಣನ ಅಪ್ರತಿಮ ಭಕ್ತೆ ; ಆಕೆಯು ಕೃಷ್ಣಭಕ್ತಿಯ ಉನ್ಮಾದದಲ್ಲಿ ರಚಿಸಿರುವ ಗೀತೆಗಳು ಇಂದಿಗೂ ಜನರ ನಾಲಗೆಯಲ್ಲಿ ಹರಿದಾಡುತ್ತಿವೆ.
ಮೀರಾಬಾಯಿಯ ಕಾಲ ೧೬ನೇ ಶತಮಾನ, ರಜಪೂತ ವಂಶದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೂ ಕೃಷ್ಣನ ಗೊಂಬೆಗಳೊಡನೆ ಆಡುತ್ತಾ ಬೆಳೆದಳು. ಮುಂದೆ ಅದು ಭಕ್ತಿಗೆ ತಿರುಗಿ ಅಲೌಕಿಕ ಪ್ರೇಮ ಸ್ಥಾಪಿತವಾಯಿತು. ಮೀರಾಬಾಯಿ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಆಕೆಯ ವಿವಾಹ ಮೇವಾಡದ ದೊರೆ ಬೋಜರಾಜನೊಂದಿಗೆ ನಡೆಸಲಾಯಿತು ಆದರೆ ಆ ವೇಳೆಗಾಗಲೇ ಎಲ್ಲಾ ಲೌಕಿಕ ಪ್ರಕ್ರಿಯೆಗಳಿಂದ ಹೊರತಾಗಿ ಬಿಟ್ಟಿದ್ದ ಮೀರಾ ತನ್ನ ಪತಿಯೊಂದಿಗೆ ಸಂಸಾರ ನಡೆಸಲು ಒಪ್ಪಲಿಲ್ಲ. ಅವಳು ತನ್ನನ್ನುತಾನು ಸಂಪೂರ್ಣವಾಗಿ ಶ್ರೀಕೃಷ್ಣನಿಗೆ ಸಮರ್ಪಿಸಿಕೊಂಡುಬಿಟ್ಟಿದ್ದಳು. ಮುಂದೆ ತನ್ನ ಮನೆಯನ್ನು ತೊರೆದು ಹೊರಟ ಮೀರಾಬಾಯಿ ಶ್ರೀಕೃಷ್ಣಭಕ್ತಿಯಲ್ಲಿ ಪರವಶಳಾಗಿ ಹಾಡುತ್ತಾ, ನರ್ತಿಸುತ್ತ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿದಳು. ಅವಳ ಭಕ್ತಿಪರಾಕಾಷ್ಠೆಗೆ ಸೋತ ಜನರು ಆಕೆಯ ಅನುಯಾಯಿಗಳಾದರು.
ಮೀರಾಬಾಯಿ ಜೀವಿಸಿದ್ದ ಕಾಲಘಟ್ಟದಲ್ಲಿ ಭಾರತದ ಸ್ತ್ರೀಯರ ಜೀವನ ಬಹಳ ದುಸ್ತರವಾಗಿತ್ತು. ಅನ್ಯದೇಶೀಯರ ಆಕ್ರಮಣಭೀತಿಯಿಂದ ಅವರು ಬಂಧಿಗಳಾಗಿದ್ದರು, ಅವರಿಗೆ ತಮ್ಮ ಯಾವ ವೈಯಕ್ತಿಕ ಬಯಕೆಯನ್ನು ಹೊಂದುವ ಅಧಿಕಾರವಿರಲಿಲ್ಲ, ಆದರೆ ಮೀರಾ ಈ ಎಲ್ಲಾ ಕಟ್ಟಳೆಗಳನ್ನು ಮುರಿದಳು, ಅವಳ ಸಾಹಸಕ್ಕೆ ಭಗವದ್ಭಕ್ತಿಯ ಬಲವೇ ಮೂಲಸ್ರೋತವಾಯಿತು. ತನ್ನ ಪತಿಯ ಪರಿವಾರವು ಹತ್ಯೆಗೆ ನಡೆಸಿದ ಎಲ್ಲಾ ಸಂಚುಗಳನ್ನು ಗೆದ್ದುಬಂದ ಮೀರಾ ತನ್ನ ಜೀವಿತವನ್ನು ಕೃಷ್ಣದೇಗುಲಗಳಲ್ಲಿ ಕಳೆದಳು. ತನ್ನ ಅಂತ್ಯಕಾಲದಲ್ಲಿ ಆಕೆ ದ್ವಾರಕಾನಗರಿಯಲ್ಲಿ ನೆಲೆಸಿದ್ದಳು.
ಸರ್ದಾರ್ ವಲ್ಲಭಾಯಿ ಪಟೇಲ್
ಉಕ್ಕಿನ ಮನುಷ್ಯ ಎಂದು ಖ್ಯಾತರಾದ ಸ್ವಾತಂತ್ರ್ಯ ಹೋರಾಟಗಾರ ವಲ್ಲಭಾಯಿ ಪಟೇಲರು ಜನಿಸಿದ್ದು ಗುಜರಾತಿನ ನಡಿಯಾರ್ ಎಂಬಲ್ಲಿ , ಆದರೆ ಅವರ ಸಾಮರ್ಥ್ಯ ಕೇವಲ ಆ ಪ್ರಾಂತ್ಯಕ್ಕೆ ಸೀಮಿತವಾಗದೆ ಇಡಿಯ ಭಾರತದ ಏಕೀಕರಣಕ್ಕೆ ವಿನಿಯೋಗವಾಯಿತು. ಸ್ವಾತಂತ್ರಾನಂತರ ಹೈದರಾಬಾದ್ ಅನ್ನು ಭಾರತದೊಂದಿಗೆ ಜೋಡಿಸುವುದರಲ್ಲಿ ಅವರ ಪಾತ್ರ ಮಹತ್ತರವಾದುದು. ಪಾಟೀಲರ ಗಡಸುತನದ ಆಧಾರವಿಲ್ಲದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲವೆಂದೇ ಹೇಳಬಹುದು.
೧೯೧೮ ರಲ್ಲಿ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದಾಗ ಅವರ ವಕೀಲಿವೃತ್ತಿ ಉಚ್ಛ್ರಾಯದಲ್ಲಿತ್ತು. ತಮ್ಮ ವೃತ್ತಿ, ಸಂಪತುಗಳೆಲ್ಲವನ್ನೂ ತ್ಯಜಿಸಿಬಂದ ಪಟೇಲರು ಗಾಂಧೀಜಿಯವರ ಅನುಯಾಯಿಯಾದರು. ಗಾಂಧೀಜಿಯವರ’ನಿವಾರಣ್ ಸತ್ಯಾಗ್ರಹ’ ಅವರಿಗೆ ಸತ್ಯಾಗ್ರಹ ಚಳುವಳಿಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿತು. ಮುಂದೆ ಇದು ಅವರ ಬರ್ಸಾಕ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳ ಯಶಸ್ಸಿಗೆ ಕಾರಣವಾಯಿತು. ಇವುಗಳ ಜೊತೆಗೆ ಪಟೇಲರು ಅಸ್ಪೃಶ್ಯತೆ, ಮದ್ಯಪಾನ ಹಾಗೂ ಅಸಮಾನತೆಯ ವಿರುದ್ಧವೂ ವ್ಯಾಪಕ ಚಳುವಳಿ ನಡೆಸಿದರು. ಬಾರ್ಡೇಲಿನ ಸತ್ಯಾಗ್ರಹದಿಂದ ಪಟೇಲರಿಗೆ ’ಸರ್ದಾರ್’ ಅಭಿದಾನ ದೊರಕಿತು.
ಆರಂಭದಿಂದಲೂ ಕಾಂಗ್ರೇಸ್ಸಿನ ಸಕ್ರಿಯ ಸದಸ್ಯರಾಗಿದ್ದ ಪಟೇಲರು ಅಲ್ಲಿಯೂ ತಮ್ಮ ವಿಶಿಷ್ಟ ಛಾಪನ್ನೆತ್ತಿ, ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗುವ ಮಟ್ಟದವರೆಗೂ ಏರಿದ್ದರು, ಆದರೆ ಕಾರಣಾಂತರಗಳಿಂದ ಅವರು ಉಪಪ್ರದಾನಿಯಾಗಿ ಅಧಿಕಾರವಹಿಸಿಕೊಂಡು, ಗೃಹಖಾತೆಯ ಉಸ್ತುವಾರಿ ಕೈಗೆತ್ತಿಕೊಂಡರು.
ಪಟೇಲರು ಸ್ವಾತಂತ್ರ್ಯಾನಂತರದ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರೆಂದು ನೆನೆಯಲ್ಪಡುತ್ತಾರೆ. ಅವರು ಬಿಟ್ಟು ೫೬೫ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಅಲ್ಲಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆತಂದರು. ಅಧಿಕಾರದ ವಿಕೇಂದ್ರೀಕರಣ ಧಾರ್ಮಿಕ ಸ್ವಾತಂತ್ರ್ಯ – ಸಮಾನತೆ ಇತ್ಯಾದಿ ವಿಷಯಗಳನ್ನು ವಿಶ್ಲೇಷಿಸಿ ಭಾರತದ ಸಂವಿಧಾನ ರಚನೆಯಲ್ಲಿಯೂ ಮಹತ್ವದ ಕೊಡುಗೆ ನೀಡಿದರು.
ಸಂತ ಕಬೀರ
ಸಂತ ಕಬೀರರು ’ಸಾಮರಸ್ಯದ ನೇಕಾರ’ ಎಂದು ಖ್ಯಾತರು. ಇವರು ವೃತ್ತಿಯಿಂದಲೂ ನೇಕಾರರೇ ಆಗಿದ್ದರು. ತಮ್ಮ ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ವಿಚಾರಗಾಥೆಗಳಿಂದ ಅಪಾರ ಜನಮನ್ನಣೆಯನ್ನೂ, ಅನುಯಾಯಿಗಳನ್ನೂ ಪಡೆದರು.
ಕಬೀರರು ಜನ್ಮತಃ ಯಾವ ಕುಲದವರೆಂದು ತಿಳಿದವರಿಲ್ಲ. ಆದರೆ ಮಕ್ಕಳಿಲ್ಲದ ಮುಸ್ಲಿಮ್ ದಂಪತಿಗಳು ಅವರನ್ನು ಬೆಳೆಸಿದರು. ಯುವಕ ಕಬೀರರು ಸ್ವಾಮಿ ರಾಮಾನಂದರ ಶಿಷ್ಯರಾಗಿ ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದರು. ಮುಂದೆ ತಮ್ಮ ಅನುಭವ, ಕಳಕಳಿ, ಜ್ಞಾನಗಳೆಲ್ಲವನ್ನು ಹದವಾಗಿ ನೇಯ್ದು ವಿಶಿಷ್ಠ ಪಂಥವೊಂದರ ಉಗಮಕ್ಕೆ ಕಾರಣರಾದರು.
ಕಬೀರರ ಬೋಧನಾವಿಧಾನ ಬಹಳ ಸ್ವಾರಸ್ಯಕರವಾದುದು. ಕನ್ನಡದ ವಚನಗಳಂತೆ, ದಾಸರ ಕೀರ್ತನೆಗಳಂತೆ ಕಬೀರರ ’ದೋಹೆ’ಗಳು ಭಕ್ತಿ ಸಾಹಿತ್ಯಕ್ಕೂ ಹಿಂದೀ ಭಾಷೆಗೂ ನೀಡಿರುವ ಕೊಡುಗೆ ಅಪಾರ. ಹಾಗೆಂದು ಕಬೀರರು ಶ್ಲೋಕ, ವಚನ – ಕೀರ್ತನಗಳಂತೆ ಯಾವುವನ್ನೂ ಸ್ವತಃ ಲೇಖಿಸಿಡಲಿಲ್ಲ. ಅವೆಲ್ಲವೂ ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಇಂದಿನವರೆಗೂ ಉಳಿದುಬಂದಿವೆ. ಆದರೆ ಅವರ ಕೆಲವು ಅನುಯಾಯಿಗಳು ಕಬೀರರ ಬೋಧನೆಗಳನ್ನು ದಾಖಲಿಸಿದ್ದಾರೆ. ಹೀಗೆ ಅವರ ಹೆಸರಿನಲ್ಲಿ ಒಟ್ಟು ೭೨ ಗ್ರಂಥಗಳು ದೊರೆತಿವೆ. ಕಬೀರ ಪಂಥ ಇಂದಿಗೂ ಅಸ್ತಿತ್ವದಲ್ಲಿದ್ದು ಸುಮಾರು ಹತ್ತು ಲಕ್ಷ ಕಬೀರ ಪಂಥಿಗಳು ದೇಶದೆಲ್ಲೆಡೆ ಇದ್ದಾರೆ.
ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಕಬೀರರು ಮೊತ್ತಮೊದಲ ಬಾರಿಗೆ ’ರಾಮ-ರಹೀಮ’ರಿಬ್ಬರೂ ಒಂದೇ ಎಂದು ಘೋಷಿಸಿದರು. ಅದರಿಂದ ಎರಡೂ ಪಂಗಡಗಳ ದ್ವೇಷ ಕಟ್ಟಿಕೊಂಡರು. ಆದರೇನು? ಅವರು ನೆಟ್ಟ ಸಾಮರಸ್ಯದ ಸಸಿ ಕಾಲಕ್ರಮದಲ್ಲಿ ಬೆಳೆದು ಫಲ ನೀಡಿತು. ಪಂಜಾಬ್ ಪ್ರಾಂತ್ಯದಲ್ಲಿ ಬೆಳಕು ಕಂಡ ಸಿಖ್ಖ ಪಂಥ ಕಬೀರರ ವಿವರಗಳನ್ನು ಸ್ವೀಕರಿಸಿತು.
ತುಂಬುಜೀವನ ನಡೆಸಿದ ಕಬೀರರು ತಮ್ಮ ೧೧೮ನೇ ವಯಸ್ಸಿನಲ್ಲಿ ದೇಹ ತೊರೆದರು.
ಜೀವನ ಪ್ರಯಾಣದ ಪರಿಪೂರ್ಣ ಮಾರ್ಗ
ಹಿಂದೂ- ಧರ್ಮ ಮತ್ತು ಸಂಸ್ಕೃತಿ ಸರಣಿಯ ಮುಂದುವರೆದ ಭಾಗ.
‘ಹಿಂದುತ್ವ’ವನ್ನು ಜಾತಿಯಾಗಿ ತೆಗೆದುಕೊಮ್ಡರೂ, ಧರ್ಮವಾಗಿ ತೆಗೆದುಕೊಂಡರೂ ಭಾರತದ ಬಗ್ಗೆ ಮತನಾಡುವಾಗ ಅದನ್ನು ಬಿಟ್ಟು ಮಾತನಡುವುದು ಸಾಧ್ಯವೇ ಇಲ್ಲ. ದಕ್ಷಿಣ ಏಷ್ಯಾದ ಭೂಭಾಗವೊಂದು ‘ಭರತ’ ಎಂಬ ಹೆಸರನ್ನು ಪಡೆದಿರುವುದೇ ಹಿಂದುತ್ವದ ಕಾರಣದಿಂದ. ಹಿಂದುತ್ವ- ತಮಸೋಮಾ ಜ್ಯೋತಿರ್ಗಮಯ’ ಎನ್ನುತ್ತದೆ. ಅಂದರೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಎಂದು. ಅಂತೆಯೇ, ‘ಭ’ ಧಾತುವು ಬೆಳಕನ್ನೂ, ‘ರತ’ವು ಚಲನೆಯನ್ನೂ ಸೂಚಿಸುತ್ತವೆ. ಒಟ್ಟಾರೆ, ‘ಭಾರತ’ ಪದದ ಅರ್ಥವೂ ‘ಬೆಳಕಿನೆಡೆಗೆ ಚಲಿಸೋಣ’ ಎಂದೇ.
ಹಿಂದೂ ಧರ್ಮದ ಮೂಲಭೂತ ತತ್ತ್ವ- “ಸತ್ಯವು ಏಕಮೇವಾದ್ವಿತೀಯವಾಗಿದೆ’ ಎಂಬುದು. ಮತ್ತು, ಈ ಸತ್ಯವು ಮಾನವನ ಅರಿವಿನಾಚೆ ಇದೆ. ಅದನ್ನು ಅರಿಯುವ ನಿರಂತರ ಪ್ರಯತ್ನವೇ ಬೆಳಕಿನೆಡೆಗಿನ ಚಲನೆ. ಈ ಚಲನೆಯ ಸಂದರ್ಭದಲ್ಲಿ, ಅಂತಿಮ ಗುರಿಯನ್ನು ಹೊಂದುವ ಯತ್ನದಲ್ಲಿ ಹೊರಹೊಮ್ಮಿದ್ದು- ಅತ್ಯದ್ಭುತ ಜ್ಞಾನ ಭಂಡಾರ. ವಿಜ್ಞಾನ, ಕಲೆ, ಸಂಗೀತಗಳೆಲ್ಲವೂ ಪರಮ ಸತ್ಯದ ಆರಾಧನೆಗಾಗಿಯೇ ರೂಪುಗೊಂಡಂಥವು. ಆಧುನಿಕ ವಿಜ್ಞಾನ ಜಗತ್ತಿಗೂ ಸವಾಲೆನಿಸುವ ವಾಸ್ತು ವಿನ್ಯಾಸಗಳು, ಲೋಹ- ಪಷಾಣ- ಕಾಷ್ಠ ಶಿಲ್ಪಗಳು, ಆರೋಗ್ಯ ವಿಜ್ಞಾನ, ಖಗೋಳ ಶಾಸ್ತ್ರ, ಕಾಲಮಾಪನದ ನಿಖರತೆ ಇವೆಲ್ಲದರ ಗುರಿಯೂ ಅದೇ ಆಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿ, ಭಾರತದ ನಾಗರಿಕತೆ, ಭರತೀಯ ಇತಿಹಾಸಗಳೆಂದರೆ ಅದು; ಹಿಂದೂ ಸಂಸ್ಕೃತಿ, ಹಿಂದೂ ನಾಗರಿಕತೆ, ಹಿಂದೂ ಇತಿಹಾಸವಲ್ಲದೆ ಬೇರೆಯಲ್ಲ.
~ ಹಿಂದೂ ಧರ್ಮ ~
ಛಂದೋಗ್ಯ ಉಪನಿಷತ್ತು (೨:೧) ಹೇಳುವಂತೆ, “ಬ್ರಹ್ಮವು ಅನಂತವೂ ಅಲೌಕಿಕವೂ ಪರಿಪೂರ್ಣವೂ ಆದ ಅಸ್ತಿತ್ವ. ಈ ಪೂರ್ಣದಿಂದಲೇ ಎಲ್ಲವೂ ಉದ್ಭವಿಸುತ್ತವೆ. ಎಲ್ಲವೂ ಈ ಪೂರ್ಣದಲ್ಲೇ ವಿಲೀನವಾಗುತ್ತವೆ”
ಹಿಂದೂ ಧರ್ಮವು ಪರಮ ಸತ್ಯದ ಕುರಿತು ದೃಢ ಧ್ವನಿಯಲ್ಲಿ, “ಸತ್ಯವು ಒಂದೇ ಆಗಿದೆ, ವಿದ್ವಾಂಸರು ಅದನ್ನು ವಿವಿಧ ಹೆಸರುಗಳಿಂದ ಕರೆಯುವರು” (ಏಕೋಹಮ್, ವಿಪ್ರಾ ಬಹುಧಾಃ ವದನ್ತಿ- ಋಗ್ವೇದ) ಎಂದು ಸಾರಿದೆ. ಆದರೆ, ಇವತ್ತಿನ ಹಿಂದೂ ಜಾತಿ, ಮೂಲ ಧರ್ಮದ ಉದಾತ್ತ ಧ್ಯೇಯಗಳನ್ನು ಕೈಬಿಡುತ್ತ, ಸಂಕುಚಿತವಾಗುತ್ತ ಮುನ್ನಡೆದಿದೆ. ಆದ್ದರಿಂದ, ಹಿಂದೂ ಧರ್ಮದ ಕುರಿತು ಮಾತನಾಡುವಾಗ, ಹಿಂದೂ ಜಾತಿಯ ಆಚೆ ನಿಂತು ನೋಡಬೇಕಾದುದು ಅತಿ ಮುಖ್ಯ.
ಸನಾತನ ಧರ್ಮದ ಅರಾಧ್ಯ ದೇವತೆಯೆಂದರೆ, ಅದು ಪ್ರಕೃತಿಯೇ. ಜೀವಧಾರಣೆಗೆ ಅಗತ್ಯಬಿರುವ ಪಂಚಭೂತಗಳ ಆರಾಧನೆಯೇ ಅಂಡಿನ ರೂಢಿಯಾಗಿತ್ತು. ಶಾಖ-ಬೆಳಕು ನೀಡುವ ಪೂಷನ್ (ಸೂರ್ಯ), ದೈನಂದಿನ ಕಾರ್ಯಗಳಿಗೆ ಅಗತ್ಯನಾದ ಜಾತವೇದಸ (ಅಗ್ನಿ), ಕೃಷಿಗೆ ಅನುಕೂಲನಾದ ವರುಣ, ಮಳೆಯ ಅಧಿಪತಿಯಾದ ಇಂದ್ರ, ಜೀವನಾಧಾರನಾದ ವಾಯು- ಇವರೆಲ್ಲ ವೇದಕಾಲದ ದೇವತೆಗಳು.
ಹಿಂದೂ ಧರ್ಮದ ವ್ಯಾಖ್ಯೆಯಂತೆ, ಭಗವಂತ ಎಂದರೆ ಪ್ರಕೃತಿ. ಭಗವಂತ ಎಂಡರೆ ಪುರುಷ. ಭಗವಂತ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಲಕ್ಷ್ಮಿ, ಪಾರ್ವತಿ, ಸರಸ್ವತಿ… ಯಾರು ಬೇಕಾದರೂ. ಜೀವನದ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಭಗವಂತ ರೂಪುಗೊಳ್ಳುತ್ತಾನೆ. ಅಂತೆಯೇ ರೈತನಿಗೆ ಮಣ್ಣೂ ದೇವರಾಗುತ್ತದೆ. ಸೈನಿಕನಿಗೆ ಮಾತೃಭೂಮಿ ದೇವತೆಯಾಗುತ್ತಾಳೆ. ಬೆಸ್ತನಿಗೆ ನದಿ ದೇವಿಯಾಗುತ್ತಾಳೆ. ವಿದ್ಯುಚ್ಛಕ್ತಿಯನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ, ಅಗತ್ಯಕ್ಕೆ ತಕ್ಕ ರೂಪದಲ್ಲಿ ಪಡೆಯುವುದಿಲ್ಲವೆ? ಹಾಗೆ…
ಅಗೋಚರ ಶಕ್ತಿಯಾದ ಭಗವಂತನನ್ನು ಗ್ರಹಿಕೆಯ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆಯೋ ಅಷ್ಟನ್ನು ಗ್ರಹಿಸಿ, ಆರಾಧಿಸುವುದು. ಆ ಮೂಲಕ ಭೂಮಿಯ ಮೆಲಿನ ತನ್ನ ಜೀವನ ನಿರ್ವಹಣೆಗೆ ಅಗತ್ಯ ಸಹಾಯವನ್ನು ಪಡೆಯುವುದು. ಈ ಗ್ರಹಿಕೆಯ ವ್ಯಾಪ್ತಿ ವಿಸ್ತರವಾಗುತ್ತಾ ಸಾಗಿದಂತೆ, ಭಗವತ್ ಶಕ್ತಿಯ ಅಗಾಧತೆಯ ಅರಿವಾಗುತ್ತ ಹೋದಂತೆ, ಲೌಕಿಕ ವಾಂಛೆಗಳು ಕುಗ್ಗುತ್ತ ಸಾಗಿ ಆಧ್ಯಾತ್ಮಿಕ ಉನ್ನತಿಗೆ ಆ ಶಕ್ತಿಯ ಸಹಕಾರವನ್ನು ಬಳಸಿಕೊಳ್ಳುವ ಪ್ರಬುದ್ಧತೆ ಬೆಳೆಯುತ್ತದೆ. ಬ್ರಹ್ಮ ಎಂದು ಕರೆಯಲ್ಪಡುವ ಆ ಅಗಾಧ ಶಕ್ತಿಯ ಅರಿವನ್ನು ಪಡೆಯುವಿಕೆಯು ಜ್ಞಾನೋದಯವೆಂದು ಕರೆಯಲ್ಪಡುತ್ತದೆ.
ಹಿಂದೂ ಧರ್ಮವು ‘ಧಾರ್ಮಿಕ ಮುಖಂದ’ನೆಂದು ಕರೆಯಲ್ಪೌವವನ ನಂಬಿಕೆ ಮತ್ತು ಅನುಭವಗಳಿಗಿಂತ ಹೆಚ್ಚಾಗಿ ಆತನ ನಡವಳಿಕೆಯ ಮೇಲೆ ತನ್ನ ನಂಬಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ. ಹಿಂದುತ್ವದ ಮೇಲಿರುವ ‘ಪುರೋಹಿತಷಾಹಿ’ ಅಪವಾದ, ವಾಮಪಂಥೀಯರು ಹೊರಿಸಿದ ಮಿಥ್ಯಾರೋಪವಷ್ಟೆ. ಇಲ್ಲವಾದಲ್ಲಿ ಭಾರತದ ಅನೇಕಾನೇಕ ಅಧ್ಯಾತ್ಮಿಕ ಪಂಥಗಳ ಮುಖಂಡರು, ಸಂತರು, ಅಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. “ನಾನು ನಿಮ್ಮ ಮುಂದಾಳು, ನನ್ನನ್ನು ಅನುಸರಿಸಿ” ಎಂದು ಆದೇಶ ಮಾಡುವವನ ಅರ್ಹತೆಯನ್ನು ಜನರೇ ನಿರ್ಧರಿಸುತ್ತಿದ್ದರು. ಇಲ್ಲಿ ಮೌಢ್ಯಕ್ಕೆ, ಅಂಧ ಶ್ರದ್ಧೆಗೆ ಅವಕಾಶವಿರಲಿಲ್ಲ. (ಕಲುಷಿತ ಹಿಂದೂ ಜಾತಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಇಲ್ಲಿ ಢೋಂಗಿ ಗುರು ಶಿಷ್ಯರಿದ್ದಾರೆ, ಮೂಢ ಭಕ್ತರೂ ಇದ್ದಾರೆ)
ಭಾರತ ಕಂಡ ಅಪ್ರತಿಮ ತತ್ತ್ವಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ, “ ಪ್ರವಾದಿಯೊಬ್ಬನನ್ನೇ ಆಧಾರವಾಗಿಟ್ಟುಕೊಂಡ ಧರ್ಮವು ಸಂಕುಚಿತ , ತೀವ್ರಗಾಮಿ, ಅಸಹಿಷ್ಣು ಮತ್ತು ಸ್ನೇಹಭಾವದ ಕೊರತೆಯಿಂದ ಕೂಡಿರುತ್ತದೆ. ಸನಾತನ ಧರ್ಮವು ಪರಿತ್ಯಾಗ ಮತ್ತು ಶಾಂತಿ- ಸೌಹರ್ದತೆಗಳಿಂದ ಕೂಡಿರುತ್ತವೆ”. ಅವರು ಪ್ರಶ್ನಿಸುತ್ತಾರೆ, “ ಯಾವುದೆ ಅಧಿಕೃತ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶವಿಲ್ಲದ ರೋಮನ್ ಕ್ಯಾಥೊಲಿಕ್ ಸಮಾಜಗಳಲ್ಲಿ ಹಿಟ್ಲರ್, ಮುಸೊಲಿನಿಯಂಥವರು ಜನಿಸಿದ್ದು ಒಂದು ಆಕಸ್ಮಿಕವೇ?” ಎಂದು.
ಹಿಂದೂ ಧರ್ಮದ ಅತ್ಯಂತ ಪ್ರಮುಖ ಧನಾತ್ಮಕ ಅಂಶ- ಅದರ ವೈಶಾಲ್ಯತೆ. ಅದು, ತನಗೆ ಸೇರದ ಇತರರನ್ನು ದ್ರೋಹಿಗಳೆಂದು ಬಗೆಯುವುದಿಲ್ಲ. ಕ್ರೌರ್ಯದಿಂಡ, ಬಲವಂತದಿಂದ ಇತರ ಮತಗಳ ಜನರನ್ನು ತನ್ನ ವ್ಯಾಪ್ತಿಗೆ ಕರೆತಂದು, ವೈವಿಧ್ಯತೆಯನ್ನು ನಾಶ ಮಾಡಿ, ಯಾಂತ್ರೀಕೃತ ತನ್ನನ್ನು ಅನುಸರಿಸುವ ಬಣವನ್ನು ಸೃಷ್ಟಿಸುವುದು ಅದಕ್ಕೆ ಬೇಕಿಲ್ಲ. ಇತಿಹಾಸದ ಯಾವ ಹಂತದಲ್ಲಿಯೂ ಹಿಂದೂಗಳು ಬಲಾತ್ಕಾರದ ಮತಾಂತರ ನಡೆಸಿದ್ದನ್ನು ನೀವು ನೋಡಲಾರಿರಿ.
ಇವತ್ತಿನ ಹಿಂದೂಗಳೂ ತಮ್ಮನ್ನು ತಾವು ಹಾಗೆಂದು ಕರೆದುಕೊಳ್ಳುವ ಮುನ್ನ ತಾವು ತಮ್ಮ ಧರ್ಮದ ಮೌಲ್ಯಗಳನ್ನು ಒಳಗೊಂಡಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಹೃದಯ ವೈಶಾಲ್ಯತೆ ಇರದ ಯಾವೊಬ್ಬನಿಗೂ ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ಅರ್ಹತೆ ಇರುವುದಿಲ್ಲ.
( ಮುಂದುವರೆಯುವುದು…….. )
1 comment