ರಾಷ್ಟ್ರ ಶಕ್ತಿ ಕೇಂದ್ರ

ಭಾರತ ಭಾಗ್ಯವಿಧಾತರು- ೨

Posted in ನಮ್ಮ ವೀರರು by yuvashakti on ನವೆಂಬರ್ 12, 2008

ಚಾಫೇಕರ್ ಸಹೋದರರು

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಾವು ಆರಿದ ನಂತರ ಮೊತ್ತ ಮೊದಲ ಕ್ರಾಂತಿ ಕಹಳೆ ಊದಿದ್ದು ವಾಸುದೇವ ಫಡ್ಕೆ.  ಅದನ್ನು ಮುಂದುವರಿಸಿದ್ದು ಚಾಫೇಕರ್ ಸಹೋದರರು.  ಮಹಾರಾಷ್ಟ್ರದಲ್ಲಿ ಜನಿಸಿದ ದಾಮೋದರ, ಬಾಲಕೃಷ್ಣ, ವಾಸುದೇವ ಎಂಬ ಈ ಮೂವರು ಸಹೋದರರು ಬಲಿದಾನದ ಪಾಠವನ್ನು ಸಾರಿ ಸ್ಫೂರ್ತಿ ತುಂಬಿದವರು.  ಸ್ವಾತಂತ್ರ್ಯ ಹೋರಾಟಕ್ಕೆ ಸಮರ್ಪಣೆಯಾಗಬೇಕೆಂಬ ಅಸೀಮ ಉತ್ಸಾಹಕರೊಂದಿಗೆ ಅದಕ್ಕೆ ಅಗತ್ಯವಿರುವ ಪ್ರತಿಯೊಂದನ್ನೂ ರೂಢಿಸಿಕೊಂಡರು.  ಅವರು ಒಬ್ಬೊಬ್ಬರೂ ಪ್ರತಿ ದಿನವೂ ೧೨೦೦ ಸೂರ್ಯ ನಮಸ್ಕಾರಗಳನ್ನು ಹಾಕುತ್ತ ತಮ್ಮ ಶರೀರವನ್ನು ಹುರಿಗೊಳಿಸಿಕೊಂಡಿದ್ದರು, ಕೀರ್ತನೆ ನಡೆಯುತ್ತ ತಂದೆಯೊಂದಿಗೆ ಊರೂರು ಸುತ್ತುತ್ತಿದ್ದ ಅವರು ಈ ಪ್ರವಾಸಗಳಿಂದಲೇ ಸಾಕಷ್ಟು ಅನುಭವ ಗಳಿಸಿದರು, ’ಚಾಫೇಕರ್ ಕ್ಲಬ್’ ಆರಂಭಿಸಿ, ಗೆಳೆಯರನ್ನು ಕಲೆಹಾಕಿ ಕ್ರಾಂತಿಕಾರ್ಯಕ್ಕೆ ಸಜ್ಜಾದರು.  ಈ ಕಾಲಕ್ಕೆ ಹಿರಿಯ ದಾಮೋದರನಿಗೆ ೨೬ ವರ್ಷ, ಮಧ್ಯಮನಿಗೆ ೨೨ ವರ್ಷ, ಕಿರಿಯವನಿಗೆ ಕೇವಲ ೧೬ ವರ್ಷ!

ಮಹಾರಾಷ್ಟ್ರಕ್ಕೆ ತಗುಲಿಕೊಂಡ ಪ್ಲೇಗ್ ಮಾರಿ ದುಷ್ಟ ಅಧಿಕಾರಿ ರ್‍ಯಾಂಡನ್‌ನ ಕ್ರೂರ ಮುಖವನ್ನು ಪರಿಚಯಿಸಿತು. ರೋಗ ನಿರ್ಮೂಲನೆ ಹೆಸರಿನಲ್ಲಿ ಆತ ರೋಗಿಗಳ ಸಹಿತ ಅವರ ಮನೆಗಳನ್ನು ಸುಟ್ಟು ಹಾಕುವಂತೆ ಆದೇಶ ನೀಡಿಬಿಟ್ಟ! ಔಷಧ, ಅನ್ನ-ನೀರಿಗೂ ಕೊರತೆಯಾಗತೊಡಗಿತು.  ಜನರಿಗೆ ಅಕ್ಷರಶಃ ’ನರಕ’ದರ್ಶನವಾಗತೊಡಗಿತು.  ರ್‍ಯಾಂಡನ್‌ನ ಸಂಹಾರವಾಗದೆ ಅವರಿಗೆ ಮುಕ್ತಿಯೇ ಇರಲಿಲ್ಲ.  ಚಾಫೇಕರ್ ಸಹೋದರರು ತಡಮಾಡಲಿಲ್ಲ.  ಸೂಕ್ತ ಮುಹೂರ್ತ ಆರಿಸಿ ತೆಗೆದರು. ಧ್ಯಾನ, ಜಪ ಪೂರೈಸಿ, ಉಪವಾಸ ಮಾಡಿ ಯಶಸ್ಸಿಗೆ ಪ್ರಾರ್ಥಿಸಿದರು.  ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ವಜ್ರಮಹೋತ್ಸವದ ಆಚರಣೆಗೆ ಬಂದಿದ್ದ ರ್‍ಯಾಂಡನ್ ಪಾಲಿಗೆ ಆ ದಿನವೇ ಕೊನೆಯ ದಿನವಾಗಿತ್ತು.   ದಾಮೋದರ, ವಾಸುದೇವರು ಅವನ ಕಥೆ ಮುಗಿಸಿದರು. ಆದರೆ, ಚಾಣಾಕ್ಷಮತಿಗಳಾಗಿದ್ದ ಅವರು ಸಿಕ್ಕಿಬೀಳಲಿಲ್ಲ.  ಈ ನಡುವೆ ಗಣೇಶ ಶಂಕರ ದ್ರವಿಡ ಎಂಬ ದ್ರೋಹಿ ’ಚಾಫೇಕರ್ ಕ್ಲಬ್’ ವಿವರಗಳನ್ನು ಪೋಲಿಸರಲ್ಲಿ ಬಹಿರಂಗಗೊಳಿಸಿದ. ವಿಚಾರಣೆ ನಾಟಕ ನಡೆದು ದಾಮೋದರನಿಗೆ ಮರಣದಂಡನೆ ವಿಧಿಸಲಾಯ್ತು. ೧೮೯೮ ರ ಏಪ್ರಿಲ್ ೧೮ ರಂದು ಫಾಸಿಯಾಯ್ತು. ಈ ವೇಳೆಗೆ ರ್‍ಯಾಂಡನ್ ಹತ್ಯೆ ಸಂದರ್ಭದಲ್ಲಿ ಸಂಹರಿಸಲ್ಪಟ್ಟಿದ್ದ ಆರ್ಯಸ್ಟನ್ ಸಾವಿಗೆ ಬಾಲಕೃಷ್ಣನನ್ನು ಆರೋಪಿಯನ್ನಾಗಿಸಲಾಗಿತ್ತು, ಪೋಲಿಸರು ಅವನ ತಲಾಷೆಯಲ್ಲಿದ್ದರು.

ದ್ರವಿಡ ಸಹೋದರರ ವಿದ್ರೋಹ ಚಾಫೇಕರ್ ಸಹೋದರರಿಗೆ ಕಿಚ್ಚು ಹಚ್ಚಿತ್ತು. ಉಪಾಯದಿಂದ ಯೋಜನೆ ಹೆಣೆದ ಅವರು, ಅವರಿಬ್ಬರನ್ನು ಕೊಂದು ದ್ರೋಹಕ್ಕೆ ತಕ್ಕ ಶಿಕ್ಷೆ ವಿಧಿಸಿದರು.  ಮುಂದೆ ಬಾಲಕೃಷ್ಣ ಮತ್ತು ವಾಸುದೇವ ಬಂಧನವಾಯಿತು.  ಒಂದು ತಿಂಗಳ ಅವಧಿಯಲ್ಲಿಯೇ( ವಾಸುದೇವ- ೮/೫/೧೮೯೯, ಬಾಲಕೃಷ್ಣ ೧೨/೫/೧೮೯೯) ಅವರಿಬ್ಬರಿಗೂ ಫಾಸಿಯಾಯ್ತು.  ಅವರಿಗೆ ಸಹಕಾರ ನೀಡಿದ್ದ ರಾನಡೆ ಎಂಬಾತನೂ ಗಲ್ಲಿಗೇರಿಸಲ್ಪಟ್ಟ.
ಹೀಗೆ ಮಾತೃಭೂಮಿಯ ಪೂಜೆಗಾಗಿ ಒಂದೇ ಕುಟುಂಬದ ಮೂರು ಪುಷ್ಪಗಳು ಅರ್ಪಣೆಯಾದವು.

      ಶ್ರೀ ನಾರಾಯಣ ಗುರು

 ಪ್ರವಾದಿ, ಸಂತ, ಋಷಿ, ಸಮಾಜಸುಧಾರಕ… ಹೀಗೆ ಹಲವು  ಬಗೆಯಲ್ಲಿ ಗುರುತಿಸಲ್ಪಡುವ  ಕ್ರಾಂತಿಯೋಗಿ ಶ್ರೀನಾರಾಯಣ ಗುರುಗಳು. ಸಮಾಜದ ಏಳ್ಗೆಗೆ ಆಧ್ಯಾತ್ಮಿಕ ಬದುಕು ಪೂರಕವಾಗಿರಬೇಕೆಂದು ಸಾಧಿಸಿತೋರಿದರು. ಮುಖ್ಯವಾಗಿ ಅವರು ಹಿಂದೂ ಧರ್ಮಕ್ಕೆ ಮುಸುಕಿನಂತೆ ಆವರಿಸಿಕೊಂಡಿರುವ ಜಾತಿಪದ್ಧತಿ-ಅಸಮಾನತೆಗಳ ನಿರ್ಮೂಲನಕ್ಕೆ ಬಹುವಾಗಿ ಶ್ರಮಿಸಿದರು.

ನಾರಾಯಣ ಗುರುಗಳು ಜನಿಸಿದ್ದು ಕೇರಳದ ತಿರುವನಂತಪುರ ಸಮೀಪದ ಒಂದು ಹಳ್ಳಿಯಲ್ಲಿ.  ಅವರ ತಂದೆ ಕೃಷಿ ಕಾರ್ಯದ ಜೊತೆಗೆ ಪುರಾಣ ವಾಚನವನ್ನು ಮಾಡುತ್ತಿದ್ದರು.  ಇದರಿಂದಾಗಿ ನಾರಾಯಣರಿಗೆ ಬಾಲ್ಯದಿಂದಲೇ ಧಾರ್ಮಿಕ ಸಂಗತಿಗಳಲ್ಲಿ ಆಸಕ್ತಿ ಬೆಳೆಯುವಂತಾಯಿತು.  ವಯಸ್ಕರಾದಂತೆಲ್ಲ ಅವರ ಆಂತರಿಕ ಜಗತ್ತಿನ ಹಂಬಲ ಬಲಿತು, ತಮ್ಮ ತಂದೆ ಮತ್ತು ಪತ್ನಿ ತೀರಿಕೊಂಡ ಬಳಿಕ ಮನೆಬಿಟ್ಟು ಹೊರಟು ಪರಿವ್ರಾಜಕ ಬದುಕನ್ನು ಪ್ರವೇಶಿಸಿದರು.  ಮುಂದಿನ ದಿನಗಳಲ್ಲಿ ಹಠಯೋಗ ಸಾಧನೆ ಬದುಕನ್ನು ಪ್ರವೇಶಿಸಿದರು.  ಇದು ಅವರ ಆಧ್ಯಾತ್ಮಿಕ ಬದುಕನ್ನು ಮತ್ತಷ್ಟು ಪ್ರಕರಗೊಳಿಸಿತು.  ಅವರು ಕನ್ಯಾಕುಮಾರಿ ಬಳಿಯ ಗುಹೆಯೊಂದರಲ್ಲಿ ಏಳೆಂಟು ವರ್ಷಗಳ ಕಾಲ ನಿರಂತರ ತಪಶ್ಚರ್ಯೆಯಲ್ಲಿ ತೊಡಗಿಕೊಂಡಿದ್ದರು.
ಶಕ್ತಿಯನ್ನು(ಅಂಬಾ) ಇಷ್ಟದೇವತೆಯಾಗಿ ಸ್ವೀಕರಿಸಿದ ಗುರುಗಳು ದೇವಾಲಯ ಕಟ್ಟಿ ಪೂಜೆಯಲ್ಲಿ ನಿರತರಾಗುವುದಕ್ಕಿಂತ ಶಾಲೆಯನ್ನು ತೆರೆದು ಜ್ಞಾನದಾಸೋಹ ಮಾಡುವುದೇ ಶ್ರೇಷ್ಠವೆಂದು ಬಗೆದರು.

ತ್ರಿಶೂರ್, ಕಣ್ಣೂರ್, ಕಲ್ಲಿಕೋಟೆ, ಮಂಗಳೂರುಗಳಲ್ಲಿ ದೇವಾಲಯಗಳನ್ನು ತೆರೆದು ಅಲ್ಲಿ ಎಲ್ಲ ವರ್ಗದ ಜನರಿಗೂ ಮಕ್ತ ಪ್ರವೇಶ ಘೋಷಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ನಾಂದಿ ಹಾಡಿದರು.  ೧೯೧೩ರ ಸುಮಾರಿಗೆ ’ಅದ್ವೈತ ಆಶ್ರಮ’ ವೊಂದನ್ನು ಸ್ಥಾಪಿಸಿ ಓಂ ಸಹೋದರ್ಯಮ್  ಸರ್ವತ್ರ (ಭಗವಂತನ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು) ಎಂಬ ಧ್ಯೇಯ ವಾಕ್ಯವನ್ನು ಹೊರಡಿಸಿದರು ಮತ್ತು ಅದನ್ನು ನೆರವೇರಿಸಲು ತಮ್ಮ ಬದುಕನ್ನು ಮುಡಿಪಾಗಿಟ್ಟರು.  ಆಧ್ಯಾತ್ಮಿಕ ಬಲದ ಜೊತೆ ಜೊತೆಗೆ ಪ್ರತಿಯೊಬ್ಬ ಮನುಷ್ಯನ ಶಿಕ್ಷಣ, ಶುಚಿತ್ವ , ಭಕ್ತಿ , ಕೃಷಿಗಾರಿಕೆ, ವ್ಯವಹಾರ-ಕುಶಲತೆ, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅದನ್ನು ಪಡೆಯಲು ಎಲ್ಲಾ ವರ್ಗದವರಿಗೂ ಅಧಿಕಾರವಿದೆ ಎಂದು ಶ್ರೀ ನಾರಾಯಣ ಗುರುಗಳು ನುಡಿದರು.  ೧೯೨೮ ರಲ್ಲಿ ತಮ್ಮ ೭೩ನೇ ವಯಸ್ಸಿನಲ್ಲಿ ಚಿರಸಮಾಧಿಗೆ ತೆರಳಿದ ನಾರಯಣಗುರುಗಳು ಇಂದಿಗೂ ಕೇರಳದಲ್ಲಿ ’ಸಾಮಾಜಿಕ ಕ್ರಾಂತಿಯ ಹರಿಕಾರ’ ಎಂದು ನೆನೆಯಲ್ಪಡುತ್ತಾರೆ .  ೧೯೯೯ ರಲ್ಲಿ ಕೇರಳದ ಪ್ರಮುಖ ವೃತ್ತಪತ್ರಿಕೆ ’ಮಲಯಾಳ ಮನೋರಮಾ’ ನಾರಾಯಣ ಗುರುಗಳನ್ನು ಶತಮಾನದ ವ್ಯಕಿ ಎಂದು ಕರೆದು ಗೌರವಿಸಿದೆ.

ಕಿತ್ತೂರು ಚೆನ್ನಮ್ಮ

ಬ್ರಿಟಿಷರ ದೆಬ್ಬಾಳಿಕೆ ಮಿತಿ ಮೀರಿದಾಗ ಮೊಟ್ಟ ಮೊದಲ ಬಾರಿಗೆ ಅದಕ್ಕೆ ಸೆಡ್ಡುಹೊಡೆದು ನಿಂತು ಸ್ವಾತಂತ್ರ್ಯಹೋರಾಡಿದ ಕಹಳೆಯೂದಿದ ಭಾರತದ ವೀರನಾರಿ ನಮ್ಮ ಹೆಮ್ಮೆಯ ಚೆನ್ನಮ್ಮಾಜಿ.

ಚೆನ್ನಮ್ಮ ಹುಟ್ಟಿದ್ದು ಬೆಳಗಾವಿಯಲ್ಲಿ.  ಮದುವೆಯಾಗಿ ಸೇರಿದ್ದು ಮಲ್ಲಸರ್ಜನ ಪತ್ನಿಯಾಗಿ-ಕಿತ್ತೂರು ಸಂಸ್ಥಾನವನ್ನು, ಚೆನ್ನಮ್ಮಳಿಗೆ ಮಕ್ಕಳಾಗದ ಕಾರಣ ಅವಳು ತನ್ನ ಮಲ ಮಗ ಶಿವಲಿಂಗರುದ್ರ ಸರ್ಜನನ್ನೇ ತನ್ನ ಮಗನಂತೆ ಕಾಣುತ್ತಿದ್ದಳು.  ಪತಿಯ ಮರಣಾನಂತರ ಆತನಿಗೇ ಪಟ್ಟಕಟ್ಟಿ ಆಡಳಿತ ನಡೆಸಿದಳು.  ಆದರೆ ಶಿವಲಿಂಗರುದ್ರನೂ ಮಕ್ಕಳಿಲ್ಲದೆ ತೀರಿಕೊಂಡ.  ಅದಕ್ಕೆ ಮುನ್ನ ಆತ ಶಿವಲಿಂಗಪ್ಪ ಎನ್ನುವ ಬಾಲಕನನ್ನು ದತ್ತುತಗೆದುಕೊಂಡ.  ಆ ವೇಳೆಗೆ ಬ್ರಿಟಿಷರು’ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎನ್ನುವ ದುರ್ನೀತಿಯನ್ನು ಜಾರಿ ಮಾಡಿದ್ದರು.  ಇದೇ ಕಾರಣವೊಡ್ಡಿ ಧಾರವಾಡದ ಕಲೆಕ್ಟರನಾಗಿದ್ದ ಥ್ಯಾಕರೆ ಈ ದತ್ತಕವನ್ನು ಪ್ರಶ್ನಿಸಿ ತನಗೆ ನಿಷ್ಠರಾಗಿದ್ದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯನನ್ನು ಪ್ರತಿನಿಧಿಯಾಗಿ ನೇಮಿಸಿಬಿಟ್ಟ.

ಆದರೆ ಚೆನ್ನಮ್ಮ ಸುಮ್ಮನಗಲಿಲ್ಲ, ರಾಜಮನೆತನಕ್ಕೆ ಬೆಂಬಲವಾಗಿದ್ದವರ ಸಹಕಾರದಿಂದ ಮೊಮ್ಮಗನಿಗೆ ಪಟ್ಟಕಟ್ಟಿ, ತಾನು ರಕ್ಷಣೆಗೆ ನಿಂತಳು. ಕಪ್ಪ ಕೇಳಲು ಬಂದ ಥ್ಯಾಕರೆಗೆ ಮಾರುತ್ತರ ನೀಡಿ ಕಳುಹಿಸಿ ತನ್ನ ಕೆಚ್ಚು ಮೆರೆದಳು.  ಮುಂದೆ, ಕೋಟೆಗೆ ಮುತ್ತಿಗೆ ಹಾಕಲು ಬಂದ ಥ್ಯಾಕರೆ ತನ್ನ ಜೀವ ಕಳೆದುಕೊಂಡ. ಇಷ್ಟೆಲ್ಲ ಹೋರಾಟದ ನಡುವೆಯೂ ಸ್ವಜನರ ದ್ರೋಹದಿಂದ ಚೆನ್ನಮ್ಮ ಬ್ರಿಟಿಷರ ಸೆರೆಯಾಳಾಗುವ ದುರ್ದಿನ ಬಂದೇ ಬಂತು.  ಆದರೂ ಈ ವೀರರಾಣಿ ಅಂತಿಮ ಕ್ಷಣದವರೆಗೂ ತನ್ನ ಪ್ರತಿರೋಧ ತೋರಿದಳು.  ಸೆರೆಮನೆಯಿಂದಲೇ ಸಂಗೊಳ್ಳಿ ರಾಯಣ್ಣ ಎಂಬ ವೀರನಿಗೆ ಮಾರ್ಗದರ್ಶನ ನೀಡುತ್ತಿದ್ದಳು.  ಆದರೂ ಸ್ವಾತಂತ್ರ್ಯ ಕಳೆದುಕೊಂಡು ಬೋನಿಗೆ ಬಿದ್ದ ಸಿಂಹಿಣಿಯಂತಾಗಿದ್ದ ಕಿತ್ತೂರಿನ ರಾಣಿ ಚೆನ್ನಮ್ಮ ಜರ್ಝರಿತಳಾಗಿ ಹೋಗಿದ್ದಳು.  ನಾಲ್ಕು ವರ್ಷ ಸೆರೆವಾಸ ಅನುಭವಿಸಿ ಅಸುನೀಗಿದಳು.

Tagged with:

ಭಾರತ ಭಾಗ್ಯ ವಿಧಾತರು- ೧

Posted in ನಮ್ಮ ವೀರರು by yuvashakti on ನವೆಂಬರ್ 11, 2008

ಕನ್ನಡದಲ್ಲಿಭಾರತದ ಮಹಾನ್ ವ್ಯಕ್ತಿಗಳ ಕಿರುಪರಿಚಯ ಬೇಕೆಂದಾದಲ್ಲಿ ಇದೊಂದು ಸಣ್ಣ ಆಕರವಾಗಲಿ ಎಂಬ ಬಯಕೆಯಿಂದ ‘ಭಾರತ ಭಾಗ್ಯ ವಿಧಾತರು’ ಎಂಬ ಅಂಕಣವನ್ನು ಇಲ್ಲಿ ಆರಂಭಿಸಲಾಗಿದೆ.
ಸಹಕಾರವಿರಲಿ.
ಧನ್ಯವಾದ.

ಸಮರ್ಥ ರಾಮದಾಸರು

ಸ್ವದೇಶ, ಸ್ವಧರ್ಮದ ರಕ್ಷಣೆಗಾಗಿ ಹೋರಾಡಿ ಹಿಂದು ಧರ್ಮದ ಉನ್ನತಿಗೆ ಕಾರಣರಾದ ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಯ ಹಿಂದೆ ಇದ್ದ ಮಹಾಪುರುಷರು ಸಮರ್ಥ ರಾಮದಾಸರು. ತುಕಾರಾಮರ ಭಕ್ತಿ ಭಾವ ಕಂಡು ಉದ್ವಿಗ್ನರಾಗಿ ಶಿವಾಜಿ, ತಾವು ಆಧ್ಯಾತ್ಮ ಸಾಧನೆಯಲ್ಲಿ ತೊಡಗಬೇಕೆಂದು ಬಯಸಿದಾಗ, ಅವರಿಗೆ ತಮ್ಮ ಕರ್ತವ್ಯದ ನೆನಪುಮಾಡಿಕೊಟ್ಟು ಸೂಕ್ತ ನಿರ್ದೇಶನ ಮಾಡಿ, ಮೊದಲು ಸ್ವದೇಶದ ಚಿಂತನೆ, ಆಧ್ಯಾತ್ಮಕ್ಕೆ ಅದರ ನಂತರದ ಸ್ಥಾನ ಎಂದು ಶಿವಾಜಿಗೆ ರಾಮದಾಸರು ಉಪದೇಶ ನೀಡಿದರು, ಅವರಿಗೆ ಪ್ರೇರಣೆಯಾಗಿ ನಿಂತರು. 

ಸಮರ್ಥ ರಾಮದಾಸರ ಮೂಲ ಹೆಸರು ನಾರಾಯಣ ಪಂತ, ಬಾಲ್ಯದಿಂದಲೇ ಹನುಮನ ಆರಾಧಕರಾಗಿ, ತಾನು ಆತನಂತೆಯೇ ಅಖಂಡ ಬ್ರಹ್ಮಚಾರಿಯಾಗಬೇಕೆಂದು ಸಂಕಲ್ಪ ತೊಟ್ಟಿದ್ದರು.  ಅಂತೆಯೇ ತಾಯಿಯ ಒತ್ತಾಯಕ್ಕೆ ಮಣಿದು ಹಸೆಮಣೆಯಮೇಲೆ ನಿಂತಾಗ ಸುಲಗ್ನೇ ಸಾವಧಾನ.. ಮಂತ್ರ ಕಿವಿಗೆ ಬೀಳುತ್ತಲೇ ಅಲ್ಲಿಂದ ಪರಾರಿ ಆಗಿ, ಪರಿವ್ರಾಜಕರಾಗಿ ಊರೂರು ಅಲೆದರು. ಭಾರತ ದರ್ಶನಮಾಡಿ ಅನ್ಯರ ಆಡಳಿತದಿಂದ
ಮುಕ್ತರಾಗದೇ ಧರ್ಮ ಉಳಿಯದು, ದೇಶ ಉಳಿಯದು ಎಂಬ ಸತ್ಯವನ್ನು ಮನಗಂಡರು. ಕಾಶಿಯಲ್ಲಿ ಹನುಮಾನ್ ಘಟ್ಟದಲ್ಲಿ ಹನುಮಂತನನ್ನು ಪ್ರತಿಷ್ಠಾಪಿಸಿ ತಾವೂ ರಾಮದಾಸ ಆದರು.  ಅವರ ಸಾಮರ್ಥ್ಯವೇ ಅವರಿಗೆ ಸಮರ್ಥ ಎನ್ನುವ ಅಭಿದಾನವನ್ನು ತಂದುಕೊಟ್ಟಿತು. ಸಮರ್ಥ ರಾಮದಾಸರು, ತಮ್ಮ ಹೆಸರಿಗೆ ತಕ್ಕಂತೆ ಶ್ರೀರಾಮನ ವಿನಮ್ರ ಸೇವಕನಾಗಿ ಆತನ ಆದರ್ಶಗಳನ್ನು ಬೋಧಿಸುವ, ಕಾರ್ಯರೂಪಕ್ಕೆ ತರುವ ಹೊಣೆಹೊತ್ತರು.

ಸಮರ್ಥ ರಾಮದಾಸರು ಮರಾಠಿಯಲ್ಲಿ ಹಲವು ಗೀತೆಗಳನ್ನು ರಚಿಸಿದರು.  ಅವರ ದಾಸಬೋಧೆ ಒಂದು ಪ್ರಬೋಧಕರ ಜನಪ್ರಿಯ ಮಹಾಕೃತಿ. ಅವರು ಶಿವಾಜಿ ಮಹಾರಾಜರ ಕೊನೆಯ ಘಳಿಗೆಯವರೆಗೂ ಅವರ ಗುರುಗಳಾಗಿದ್ದು ಮಾರ್ಗದರ್ಶನ ಮಾಡಿದರು.  ೧೬೦೮ರ ರಾಮನವಮಿಯಂದು ಜನಿಸಿದ ಸಮರ್ಥ ರಾಮದಾಸರು ೧೬೮೨ರ ಮಾಘ ಬಹುಳ ನವಮಿಯಂದು ಕಾಲವಾದರು. ಅವರು ತೀರಿಕೊಂಡ ದಿನವನ್ನು
ಇಂದಿಗೂ ದಾಸ ನವಮಿಯೆಂದು ಆಚರಿಸಲಾಗುತ್ತದೆ.

ತಾತ್ಯಾಟೋಪಿ

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತಾರನಾಗಿ ಕೊನೆಕ್ಷಣದವರೆಗೂ ಹೋರಾಡಿದ ಪುರುಷಸಿಂಹ ತಾತ್ಯಾಟೋಪಿ. ಇವರ ಮೂಲ ಹೆಸರು ರಘುನಾಥ ಪಂತ. ಇವರು ಜನಿಸಿದ್ದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೇವಲೆ ಎಂಬಲ್ಲಿ, ೧೮೧೪ರಲ್ಲಿ. ರಘುನಾಥ ಅತ್ಯಂತ ತೇಜಸ್ವಿ ಬಾಲಕನಾಗಿದ್ದು, ಪೇಶ್ವೆ ೨ನೇ ಬಾಜೀರಾಯರ ಪ್ರೀತಿಗೆ ಪಾತ್ರನಾಗಿದ್ದನು. ಬಾಜೀರಾಯರು ಅವನ ಮೇಲಿನ ವಿಶ್ವಾಸದಿಂದ ರತ್ನ ಖಚಿತವಾದ ಟೋಪಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಎಲ್ಲರ ತಾತ್ಯಾ (ರಘುನಾಥನ ಮುದ್ದಿನ ಹೆಸರು) ತಾತ್ಯಾಟೋಪಿಯಾದರು.
ತನ್ನ ಬಾಲ್ಯದ ಸಂಗಾತಿಗಳಾದ ನಾನಾಸಾಹೇಬ(ಬಾಜೀರಾಯರ ದತ್ತುಪುತ್ರ), ಲಕ್ಷ್ಮೀಬಾಯಿ(ಬಾಲ್ಯದಲ್ಲಿ ಛಬೇಲಿ) ಇವರೊದಿಗೆ ಸ್ವಾತಂತ್ರ್ಯದ, ಬ್ರಿಟಿಷ್ ಮುಕ್ತ ಭಾರತದ ಕನಸು, ತಾತ್ಯಾಟೋಪಿ ಅದರ ಸಾಕಾರಕ್ಕೆ ಜೀವವನ್ನೇ ಮುಡುಪಿಟ್ಟರು. ಮರಾಠಿಗರಿಗೆ ವಿಶಿಷ್ಠವೆನಿಸಿದ ಗೆರಿಲ್ಲಾ ಯುದ್ಧದಲ್ಲಿ ನಿಪುಣನಾಗಿದ್ದ ತಾತ್ಯಾ ಬ್ರಿಟಿಷರಿಗೆ ಸಾಕಷ್ಟು ಪೆಟ್ಟು ನೀಡಿದನು. ಕಾಲ್ಫಿಯನ್ನು ಕೇಂದ್ರವಾಗಿಟ್ಟುಕೊಂಡು ದೇಶದುದ್ಧಗಲಕ್ಕೂ ಮಿಂಚಿನ ಸುಳಿಯಂತೆ ಓಡಾಡಿ ರಾಜರನ್ನು, ಸೈನ್ಯವನ್ನು ಒಗ್ಗೂಡಿಸಿದನು. ಈತನ ಬಲಿಷ್ಟ ಸವಾಲನ್ನು ನೇರವಾಗಿ ಎದುರಿಸಿ ಸೆರೆಹಿಡಿಯಲಾಗದ ಬ್ರಿಟಿಷ್ ಸೇನೆ ವಂಚನೆಯಿಂದ ಅದನ್ನು ಸಾಧಿಸಿತು. ಮಾನಸಿಂಗ ಎಂಬುವವನಿಂದ ಮಿತ್ರದ್ರೋಹ ಮಾಡಿಸಿ, ಕಾಡಿನಲ್ಲಿ ಸಿಂಹವನ್ನು ಸೆರೆಹಿಡಿದಂತೆ ಪಾರಣವೆಂಬ ನಿಬಿಡಾರಣ್ಯದಲ್ಲಿ ಅರ್ಧರಾತ್ರಿಯಲ್ಲಿ ನಿದ್ರಿಸುತ್ತಿದ್ದ ತಾತ್ಯಾನನ್ನು ಸೆರೆ ಹಿಡಿಯಲಾಯಿತು. ೧೮೫೯ರ ಏಪ್ರಿಲ್ ೧೮ರಂದು ಈ ಮಹಾನ್ ಕ್ರಾಂತಿವೀರನನ್ನು ಬ್ರಿಟಿಷ್ ಸರ್ಕಾರ ದಂಗೆಕೋರನೆಂದು ತೀರ್ಪಿತ್ತು ನೇಣಿಗೇರಿಸಿತು. 
ಆದರೇನು? ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾ ಸೇನಾನಿಯೆಂದು
ತಾತ್ಯಾಟೋಪಿಯ ಹೆಸರು ಇಂದಿಗೂ ಅಜರಾಮರವಾಗಿದೆ.

 

 

ಲೋಕಮಾನ್ಯ ಬಾಲಗಂಗಾಧರ್ ತಿಲಕ್

 ಸ್ವಾತಂತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು. ಅದನ್ನು ನಾನು ಪಡೆದೇ ತೀರುತ್ತೇನೆ ಹೀಗೆಂದು ಕೆಚ್ಚಿನಿಂದ ಘರ್ಜಿಸಿ, ಅದರಂತೇ ಹೋರಾಡಿದವರು ಲೋಕಮಾನ್ಯ ಬಾಲಗಂಗಾಧರ್ ತಿಲಕ್. ಭಾರತದ ಸ್ವಾತಂತ್ರ್ಯ ಜೊತೆಜೊತೆಗೆ ಅದರ ಉಳಿಕೆಗೆ  ಅಗತ್ಯವಿರುವ ಭಾರತೀಯ ಸಮಾಜದ ಸುಧಾರಣೆ – ಇವೆರಡು ಉದ್ದೇಶಕ್ಕಾಗಿ ಜೀವನ ಮುಡಿಪಿಟ್ಟರು. ಆದ್ದರಿಂದಲೇ ಲೋಕಮಾನ್ಯ ಎನಿಸಿದರು.                                                      
ತಿಲಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲನೇ ಜನಪ್ರಿಯ ನಾಯಕರೆಂದು ಗುರುತಿಸಲ್ಪಡುತ್ತಾರೆ. ಭಾರತೀಯ ಶಿಕ್ಷಣ, ಆಚಾರ-ವಿಚಾರಗಳು, ಆರೋಗ್ಯ ಮೊದಲಾದ ಸಂಗತಿಯಲ್ಲಿ ಸುಧಾರಣೆ ತಂದು ಆಧುನಿಕ ಭಾರತದ ಜನಕ ಎಂದು ಕರೆಯಲ್ಪಡುತ್ತಾರೆ. ಅವರಿಗೆ ಈ ಅಭಿದಾನ ನೀಡಿದವರು ಮತ್ತೋರ್ವ ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರು.

ತಿಲಕರು ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಅವರು ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದು ಪತ್ರಕರ್ತರಾಗಿ ಕಾರ್ಯ ನಿರ್ವಹಿಸತೊಡಗಿದ ನಂತರ. ಅವರು ನಡೆಸುತ್ತಿದ್ದ ಕೇಸರಿ ಮತ್ತು ಮರಾಠಾ ಪತ್ರಿಕೆಗಳು ಜನಮಾನಸದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿತು. ಅವರು ಬರೆಯುತ್ತಿದ್ದ ಲೇಖನ-ಸಂಪಾದಕೀಯಗಳು ಬ್ರಿಟಿಷ್ ಸತ್ತೆಯ ಬೇರನ್ನು ನಡುಗಿಸುತ್ತಿದ್ದವು. ಕಾಂಗ್ರೆಸ್ಸಿನ ಸದಸ್ಯರಾಗಿದ್ದರೂ ಅವರೊಬ್ಬ ಅಪ್ಪಟ ರಾಷ್ಟ್ರೀಯವಾದಿಯಾಗಿ, ಕ್ರಾಂತಿಕಾರರಾಗಿ ಚಿಂತನೆ ನಡೆಸುತ್ತಿದ್ದರು.

ಸ್ವಾತಂತ್ರ್ಯ ಹೋರಾಟದ ಹೊರತಾಗಿ ತಿಲಕರು ಭಾರತೀಯರ ಶಿಕ್ಷಣ ಮಟ್ಟ ಸುಧಾರಣೆ, ಮದ್ಯಪಾನ ನಿಷೇಧ ಮೊದಲಾದ ಸಾಮಾಜಿಕ ಸಂಗತಿಗಳತ್ತ ಕಳಕಳಿಯಿಂದ ಸ್ಪಂದಿಸಿದರು. ಗಣಿತಜ್ಞರು, ಖಗೋಳಶಾಸ್ತ್ರಜ್ಞರೂ ಆಗಿದ್ದ ತಿಲಕರು ಆ ನಿಟ್ಟಿನಲ್ಲಿಯೂ ಸಾಕಷ್ಟು ಸಂಶೋಧನೆಗಳನ್ನು ನಡೆಸಿರುವರು. ಅವರು ರಚಿಸಿರುವ ‘ಗೀತಾ ರಹಸ್ಯ’ ಭಗವದ್ಗೀತಾ ಭಾಷ್ಯ ಒಂದು ಪ್ರಸಿದ್ಧ ಕೃತಿ.
೧೮೫೬ರ ಜುಲೈ ೨೩ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ತಿಲಕರು ಅಗಸ್ಟ್ ೧, ೧೯೨೦ರಂದು ವಿಧಿವಶರಾದರು.

Tagged with:

ಓ ಆಜಾದ್ ಥಾ… ಆಜಾದ್ ಹೀ ರೆಹ್ ಗಯಾ….

Posted in ನಮ್ಮ ವೀರರು by yuvashakti on ಜುಲೈ 22, 2008

ವಾರಣಾಸಿಯ ಬೀದಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜಾಥಾ ನಡೆದಿತ್ತು. ಹದಿನೈದನೆ ವಯಸ್ಸಿಗಾಗಲೇ ತಾಯ್ನಾಡಿನ ಹಂಬಲ ಹತ್ತಿಸಿಕೊಂಡಿದ್ದ ಹುಡುಗನೊಬ್ಬ ಚಳುವಳಿಗಾರರ ಆಗಮನವನ್ನು ದೂರದಿಂದಲೇ ನೋಡುತ್ತ, ಕಾತರನಾಗಿ ಕಾಯುತ್ತಿದ್ದ. ಆ ಗುಂಪು ಹತ್ತಿರ ಬರುತ್ತಿದ್ದಂತೆ ತಾನೂ ಅವರಲ್ಲೊಂದಾಗಿ ನಡೆದ. “ಬೋಲೋ ಭಾರತ್ ಮಾತಾ ಕೀ….. ಜೈ!!” “ವಂದೇ….. ಮಾತರಂ!!”

ಹದಿನೈದಿಪ್ಪತ್ತು ಹೆಜ್ಜೆ ಸರಿದಿರಬೇಕು… ಪೋಲಿಸರ ದಂಡು ಜೇನ್ನೊಣಗಳ ಹಾಗೆ ಎಗರಿತು. ಘೋಷಣೆ ಕೂಗುತ್ತ ತನ್ನ ಪಾಡಿಗೆ ಸಾಗುತ್ತಿದ್ದ ಚಳುವಳಿಗಾರರನ್ನು ಮನಬಂದಂತೆ ಥಳಿಸಲಾಯ್ತು. ಎಂಭತ್ತರ ಆಸುಪಾಸಿನ ವೃದ್ಧರೊಬ್ಬರ ಎದೆ ಮೇಲೆ ಆಂಗ್ಲರ ಗುಲಾಮನೊಬ್ಬ ಲಾಠಿ ಬೀಸಿದ. ಆ ಹಿರಿಯ ಜೀವ ನೋವಿನಿಂದ ಚೀರುತ್ತ ಕೆಳಗುರುಳಿತು. ಪೆಟ್ಟು ತಿನ್ನುತ್ತಿದ್ದ ಹಿರಿಯರನ್ನು ನೋಡುತ್ತ ಸಂಕಟಪಡುತ್ತಿದ್ದ ಪೋರನಿಗೆ ಇನ್ನು ತಡಿಯಲಾಗಲಿಲ್ಲ. ಅಲ್ಲೇ ಕಾಲಬುಡದಲ್ಲಿ ಬಿದ್ದಿದ್ದ ಕಲ್ಲನ್ನೆತ್ತಿ ಒಗೆದ….
ವಾಹ್! ಎಂಥ ಗುರಿ! ಕಲ್ಲು ನೇರವಾಗಿ ಕ್ರೂರ ಗುಲಾಮನ ಹಣೆಯೊಡೆಯಿತು. ಅಷ್ಟೇ. ಮರು ಘಳಿಗೆಯಲ್ಲಿ ಬಾಲಕ ಜೈಲುಪಾಲಾಗಿದ್ದ.

ಎಂದಿನಂತೆ ಆಂಗ್ಲರ ಕಟಕಟೆಯಲ್ಲಿ ವಿಚಾರಣೆಯ ನಾಟಕ. ಅಲ್ಲೊಂದು ಸ್ವಾರಸ್ಯಕರ ಸಂಭಾಷಣೆ:
ನ್ಯಾಯಾಧೀಶ: ನಿನ್ನ ಹೆಸರೇನು?
ಹುಡುಗ: ಆಜಾದ್!
ನ್ಯಾ: ತಂದೆಯ ಹೆಸರು?
ಹು: ಸ್ವಾತಂತ್ರ್ಯ
ನ್ಯಾ: ಮನೆ ಎಲ್ಲಿದೆ?
ಹು: ಸೆರೆಮನೆಯೇ ನನಗೆ ಮನೆ!!

ಎರಡೂ ಕೈಸೇರಿಸಿ ಹಾಕಿದರೂ ಕೋಳ ತುಂಬದ ಪುಟ್ಟ ಹುಡುಗನ ಕೆಚ್ಚೆದೆ ಆ ಬಿಳಿಯನಿಗೆ ಮತ್ಸರ ಮೂಡಿಸಿರಬೇಕು. ಹದಿನೈದು ಛಡಿ ಏಟುಗಳ ಶಿಕ್ಷೆ ವಿಧಿಸಿಬಿಟ್ಟ.
ಆದರೇನು? ‘ವಂದೇ ಮಾತರಂ’ ಎನ್ನುವ ಮತ್ತೇರಿಸುವ, ಮೈಮರೆಸುವ ಘೋಷ ವಾಕ್ಯದ ಎದುರು ಯಾವ ಪೆಟ್ಟು ತಾನೆ ನೋವುಂಟು ಮಾಡಬಹುದಾಗಿತ್ತು ಆ ಎಳೆಯ ದೇಶಭಕ್ತನಿಗೆ?
ಶಿಕ್ಷೆಯುಂಡು ಹೊರಬಂದ ಬಾಲಕ ಪ್ರತಿಜ್ಞೆ ಮಾಡಿದ.
“ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…
ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”

ಅಂದಿನಿಂದ ಚಂದ್ರ ಶೇಖರ ತಿವಾರಿ ಎನ್ನುವ ಭೀಮ ಬಲದ ಬಾಲಕ ರಾಷ್ಟ್ರಾರ್ಪಣೆಗೆ ಸಿದ್ಧನಾದ, ಚಂದ್ರ ಶೇಖರ ಆಜಾದ್ ಎಂದು ಪ್ರಸಿದ್ಧನಾದ.

~

ಆಜಾದ್ ತಾನು ಮಾಡಿಕೊಂಡಿದ್ದ ಪ್ರತಿಜ್ಞೆಯನ್ನು ಕೊನೆಯವರೆಗೂ ಪಾಲಿಸಿದ. ಕಾಕೋರಿ ಲೂಟಿ, ಸ್ಯಾಂಡರ್ಸ್ ಹತ್ಯೆ, ಲಾಹೋರ್ ಕಾನ್ಸ್ ಪಿರೆಸಿ ಸೇರಿದಂತೆ ಹತ್ತು ಹಲವು ಆರೋಪಗಳು ಆತನ ಮೇಲಿದ್ದು, ಸದಾ ಗೂಢಚಾರರು ಆತನ ಪ್ರತಿ ನಡೆಯನ್ನು ಹದ್ದಿನ ಕಣ್ಣಲ್ಲಿ ಕಾಯ್ತಿದ್ದರೂ ಆತನ ಕೂದಲು ಕೂಡ ಕೊಂಕಿಸಲಾಗಲಿಲ್ಲ. ಆಜಾದ್ ಹೀಗೆ ಗೂಢಚಾರರಿಗೆ, ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ‘ಆಜಾದ’ನಾಗಿಯೇ ಉಳಿದ ಘಟನೆಗಳಂತೂ ಸ್ವಾರಸ್ಯಕರ.

ಕಾಕೋರಿ ಲೂಟಿಯ ನಂತರ ಕ್ರಾಂತಿ ಕಾರ್ಯದ ಬಹುತೇಕ ಪ್ರಮುಖರು ಸಿಕ್ಕಿಬಿದ್ದರು. ಅವರೆಲ್ಲರಿಗೆ ಮರಣದಂಡನೆಯ ಶಿಕ್ಷೆಯೂ ಆಯ್ತು. ಆದರೆ ಆಜಾದ್ ಮಾತ್ರ ತನ್ನ ಸುಳಿವು ಸಿಗದಂತೆ ವೇಷಮರೆಸಿಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದ. ಇಂಥದೊಂದು ಸಂದರ್ಭದಲ್ಲಿ ಆಜಾದ್ ಸನ್ಯಾಸಿ ವೇಷ ತೊಟ್ಟು ಹೋಗುತ್ತಿದ್ದ. ಆತನ ಕಟ್ಟುಮಸ್ತಾದ, ಹುರಿಗೊಳಿಸಿದ ದೇಹ ಅಲ್ಲೇ ಗಸ್ತು ತಿರುಗುತ್ತಿದ್ದ ಪೋಲಿಸನಿಗೆ ಅನುಮಾನ ತರಿಸಿತು. ಅವನ ಕಣ್ ಮುಂದೆ ಬಹುಮಾನ, ಭಡ್ತಿಗಳ ದುರಾಸೆ ಸುಳಿದು ನೇರವಾಗಿ ಆಜಾದನ ಹೆಗಲ ಮೇಲೆ ಕೈ ಹಾಕಿ ತಡೆದು ನಿಲ್ಲಿಸಿಬಿಟ್ಟ.
“ಓಯ್ ಬಹುರೂಪಿ! ನೀನು ಆಜಾದ್ ಅನ್ನೋದು ಗೊತ್ತಾಗಿದೆ ನನಗೆ. ನೀನು ಸಿಕ್ಕಿಬಿದ್ದಿರುವೆ. ನಡಿ ಠಾಣೆಗೆ!”
ಸನ್ಯಾಸಿ ಹಿಂತಿರುಗಿ ದುರುಗುಟ್ಟಿದ. ಅವನ ಕಣ್ಣುಗಳು ಕೆಂಡದುಂಡೆಯಾದವು. ಮೈಮೇಲೆ ಆವೇಶ ಬಂದವನ ಹಾಗೆ “ಭಂ ಭಂ ಭೋಲೇ… ಭೋಲೇ ನಾಥ್” ಅನ್ನುತ್ತ ಹೂಂ ಕರಿಸಿದ. “ಸಾಧುವಾದ ತನ್ನನ್ನು ಕೊಲೆಗಟುಕನಿಗೆ ಹೋಲಿಸುತ್ತಿರುವೆಯಾ?” ಎಂದೆಲ್ಲ ಕೂಗಾಡಿ ಶಾಪ ಕೊಡುವವನ ಹಾಗೆ ಕಮಂಡಲುವಿನ ನೀರು ಬಗ್ಗಿಸಿದ. ಅಷ್ಟು ಸಾಕಾಯ್ತು ಪೋಲಿಸನ ನಶೆ ಇಳಿಯಲು. ಆತ ನಿಜವಾದ ಸನ್ಯಾಸಿಯೇ ಅನ್ನುವುದು ಅವನಿಗೆ ಮನವರಿಕೆಯಾಗಿಹೋಯ್ತು. ಕೈಕೈ ಮುಗಿದು ಕಾಲಿಗೆ ಬುದ್ಧಿ ಹೇಳಿದ ಆತ, ಮತ್ತೆ ತಿರುಗಿ ನೋಡಲಿಲ್ಲ!
ನಮ್ಮ ಆಜಾದ್ ಒಳಗೊಳಗೆ ನಗುತ್ತ ಹೊರಗಿನಿಂದ ಸಿಡುಕುತ್ತ ತನ್ನ ಹಾದಿ ನಡೆದ.

ಮತ್ತೊಮ್ಮೆ ಹೀಗಾಯ್ತು. ರಾಜಗುರು, ಸುಖದೇವ್ ಮತ್ತು ಆಜಾದ್ ಹಳ್ಳಿ ಗಮಾರರಂತೆ ವೇಷ ತೊಟ್ಟು ಮಹಾರಾಷ್ಟ್ರದಲ್ಲಿ ಅಡ್ಡಾಡುತ್ತಿದ್ದರು. ರೈಲಿನಲ್ಲಿ ಅವರೊಮ್ಮೆ ಶಿವಾಜಿ ಮಹರಾಜರ ಕೋಟೆಕೊತ್ತಲಗಳ ಅವಶೇಷಗಳಿದ್ದ ಕಣಿವೆಯಲ್ಲಿ ಪ್ರಯಾಣಿಸಬೇಕಾಯ್ತು. ವೀರ ಮರಾಠಾ ರಾಜಗುರು ಶುದ್ಧ ಭಾವುಕ ಮನುಷ್ಯ. ಕಿಟಕಿಯಾಚೆ ಕಾಣುತ್ತಿದ್ದ ಕೋಟೆಗಳನ್ನ ನೋಡುತ್ತಲೇ ಉನ್ಮತ್ತನಾದ. “ಹಾ ಶಿವ್ ಬಾ… ಶಿವಾಜಿ ಮಹರಾಜ್.. ನೀನಿಲ್ಲದಿದ್ದರೆ ಇವತ್ತು ನಮ್ಮ ಗತಿ ಏನಾಗಿರುತ್ತಿತ್ತು.. ” ಎಂದೇನೇನೋ ಪ್ರಲಾಪಕ್ಕೆ ಶುರುವಿಟ್ಟ. ಪಕ್ಕ ಕುಳಿತ ಆಜಾದನ ಕೋಪ ನೆತ್ತಿಗೇರಿತು. ರಾಜ ಗುರುವನ್ನು ತಡೆದು ಶಿವಾಜಿಯನ್ನು ಬಾಯಿಗೆ ಬಂದಂತೆ ನಿಂದಿಸತೊಡಗಿದ. ಅವನ ಗುಣಗಾನ ಮಾಡಿದ ರಾಜಗುರುವನ್ನೂ ಬಯ್ದ. ಮೊದಲು ಕಕ್ಕಾಬಿಕ್ಕಿಯಾದ ರಾಜಗುರುವಿಗೆ ನಂತರ ಪರಿಸ್ಥಿತಿಯ ಅರಿವಾಯ್ತು. ಅದಾಗಲೇ ಆಂಗ್ಲರ ಗುಲಾಮರು ತಮ್ಮ ಗೂಢಚಾರಿಕೆ ಮಾಡುತ್ತಿರುವುದು ಅವನಿಗೂ ಗೊತ್ತಿತ್ತು. ತನ್ನ ಅತಿರೇಕದಿಂದ ಎಲ್ಲರೂ ಸಿಕ್ಕಿಬೀಳುತ್ತಿದ್ದೆವಲ್ಲ ಎಂದು ತುಟಿಕಚ್ಚಿಕೊಂಡ. ಪ್ರಯಾಣ ಮುಗಿದು ಕೆಳಗಿಳಿದನಂತರ ಆಜಾದ್ ರಾಜಗುರುವನ್ನು ಚೆನ್ನಾಗಿ ಬಯ್ದ. ಆತ ಸಮಯ ಪ್ರಜ್ಞೆ ತೋರಿಲ್ಲದಿದ್ದರೆ ಅವರಿಗೆ ಕಂಟಕ ಕಾದಿತ್ತು. ಆಜಾದನಿಗೆ ತಮ್ಮ ಉಳಿವಿಗಾಗಿ ಶಿವಾಜಿ ಮಹರಾಜರನ್ನು ನಿಂದಿಸಬೇಕಾಯ್ತು ಎನ್ನುವುದೇ ನೋವಿನ ಸಂಗತಿಯಾಗಿ ಕಾಡುತಿತ್ತು.

ಆಜಾದ್ ವೇಷ ಮರೆಸಿಕೊಳ್ಳುವುದರಲ್ಲಿ ಅದೆಷ್ಟು ನಿಪುಣನೆಂದರೆ, ಕೆಲವೊಮ್ಮೆ ಅವನ ಸಹಚರರಿಗೂ ಆತನ ಪರಿಚಯ ಸಿಗುತ್ತಿರಲಿಲ್ಲ. ಹೀಗೇ ಒಮ್ಮೆ ಆತ ಹಳ್ಳಿಯೊಂದರಲ್ಲಿ ಹನುಮಾನನ ಗುಡಿಯ ಪೂಜಾರಿಯಾಗಿ ಕೆಲವು ಕಾಲ ತಂಗಿದ್ದ. ಆಗ ಅಂಟಿಕೊಂಡ ‘ಪಂಡಿತ್ ಜೀ’ ಅಭಿದಾನ ಜೀವಮಾನದುದ್ದಕ್ಕೂ ಅವನ ಜೊತೆ ಸಾಗಿತು. ಹೀಗೆ ಆತನ ನೈಜ ಹೆಸರನ್ನೂ, ಪರಿಚಯವನ್ನೂ ಮರೆಸುವಷ್ಟು ಸಹಜವಾಗಿ ಆತ ತಾನು ಹಾಕಿಕೊಂಡ ವೇಷದಲ್ಲಿ ನಟಿಸುತ್ತಿದ್ದ. ಆದರೆ ಆಂತರ್ಯದಲ್ಲಿ ಮಾತ್ರ ತನ್ನ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಪ್ರಜ್ಞೆ ಹೊಂದಿದ್ದು ಅದರ ಕಾಳಜಿ ವಹಿಸುತ್ತಿದ್ದ.

ಒಮ್ಮೆ ಆತ ಮೆಕ್ಯಾನಿಕನಾಗಿ ವೇಷ ಧರಿಸಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಕೆಲಸ ಮಾಡುವಾಗೊಮ್ಮೆ ಆತನ ಕೈಮೂಳೆಗೆ ತೀವ್ರವಾಗಿ ಪೆಟ್ಟಾಯ್ತು. ವೈದ್ಯರು ಆಪರೇಶನ್ ಮಾಡಬೇಕೆಂದರು. ಆಜಾದ್ ತನಗೆ ಅನಸ್ತೇಶಿಯಾ ಕೊಡದೆ ಆಪರೇಶನ್ ಮಾಡಿ ಎಂದು ತಾಕೀತು ಮಾಡಿದ. ಅನಸ್ತೇಶಿಯಾದಿಂದ ಎಚ್ಚರ ತಪ್ಪಿದಾಗ ತಾನು ಸದಾ ಧ್ಯಾನಿಸುವ ಕ್ರಾಂತಿಕಾರ್ಯದ ವಿಷಯಗಳನ್ನು ಕನವರಿಸಿಬಿಟ್ಟರೆ? ತನ್ನ ಕಥೆಯಂತೂ ಮುಗಿಯುವುದು, ಆದರೆ ಇಡಿಯ ಸಂಘಟನೆಯ ರಹಸ್ಯವೂ ಬಯಲಾಬಿಡುವುದಲ್ಲ?
ಆಜಾದ್ ತನ್ನ ಧ್ಯೇಯಕ್ಕಾಗಿ ಆ ನೋವನ್ನು ಕೂಡ ಸಹಿಸಲು ಸಿದ್ಧನಾಗಿದ್ದ. ಆದರೆ ವೈದ್ಯರು ಮಾತು ಮಾತಲ್ಲಿ ಅನಸ್ತೇಶಿಯಾ ಕೊಟ್ಟೇಬಿಟ್ಟರು. ಚಿಕಿತ್ಸೆಯೂ ನಡೆಯಿತು. ಆತನಿಗೆ ಎಚ್ಚರವಾದಾಗ ವೈದ್ಯರು, ‘ಆಜಾದ್’ ಎಂದು ಕರೆದಿದ್ದು ಕೇಳಿ ಗಾಬರಿ! ಅಂದರೆ? ತನ್ನ ಪತ್ತೆಯಾಗಿಬಿಟ್ಟಿದೆ!?
ಆದರೆ ಅಲ್ಲಿ ಆತಂಕಕ್ಕೆ ಆಸ್ಪದವಿರಲಿಲ್ಲ. ಆಜಾದನ ರಾಷ್ಟ್ರಪ್ರೇಮ ವೈದ್ಯರ ಮನಸ್ಸು ತಟ್ಟಿತ್ತು. ಅವರು ಅಲ್ಲಿ ನಡೆದ ಯಾವ ಸಂಗತಿಯನ್ನೂ ಯಾರಿಗೂ ಹೆಳುವುದಿಲ್ಲವೆಂದು ಮಾತುಕೊಟ್ಟ ಬಳಿಕವೇ ಆಜಾದನಿಗೆ ನಿಶ್ಚಿಂತೆ.

ಆಜಾದ್ ಅದೆಷ್ಟು ಎಚ್ಚರಿಕೆಯಿಂದ ಇರುತ್ತಿದ್ದನೆಂದರೆ, ಬಹಳ ವರ್ಷಗಳ ನಂತರ ತಂದೆ ತಾಯಿಯರನ್ನು ಭೇಟಿಯಾಗಲು ಹೋದಾಗ ಕೂಡ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತ ನಿದ್ದೆಯನ್ನು ಕೂಡ ಮಾಡದೆ ತನ್ನನ್ನು ತಾನು ಕಾಯ್ದುಕೊಳ್ಳುತ್ತಿದ್ದ. ಊರಿಗೆ ಬಂದ ಮಗ ಮನೆಗೆ ಬರದೆ ಯಾರದೋ ಮನೆಯಲ್ಲಿರುವನೆಂದು ತಾಯಿಗೆ ಬೇಸರ. ಆದರೆ ದೇಶಕ್ಕಾಗಿ ಆತನನ್ನು ಅವರು ಅದೆಂದೋ ಬಿಟ್ಟುಕೊಟ್ಟಿದ್ದರಲ್ಲವೆ? ಆತ ಬದುಕಿರುವನೆಂಬುದೇ ಅವರ ಪಾಲಿಗೆ ಭಾಗ್ಯವಾಗಿತ್ತು.
ಊರಲ್ಲಿರುವಷ್ಟೂ ದಿನ ನಿದ್ದೆ ಕಳಕೊಂಡಿದ್ದ ಆಜಾದ್ ಕಾಡು ಸೇರಿದಾಗ ಮಾತ್ರ ಗಡದ್ದು ನಿದ್ರೆ ಹೊಡೆಯುತ್ತಿದ್ದ. ಕೇಳಿದರೆ, ‘ಊರಿನ ಮನುಷ್ಯರಿಗಿಂತ ಕಾಡಿನ ಪ್ರಾಣಿಗಳನ್ನು ನಂಬುವುದೇ ಮೇಲು’ ಅನ್ನುತ್ತಿದ್ದ.

ಇಂತಹ ಆಜಾದನನ್ನು ಹಿಡಿಯಲು ಕೊನೆಗೂ ಬಿಳಿಯರಿಗೆ ವಿದ್ರೋಹದ ನೆರವೇ ಬೇಕಾಯ್ತು. ದ್ರೋಹಿಯೊಬ್ಬ ಪಾರ್ಕಿನಲ್ಲಿ ಯಾರನ್ನೋ ಕಾದುಕುಳಿತಿದ್ದ ಆಜಾದನ ಪತ್ತೆ ಪೋಲಿಸರಿಗೆ ನೀಡಿದ. ಅವನನ್ನು ಬಂಧಿಸುವ ಇರಾದೆಯಿಂದ ಬಂದ ಪೋಲಿಸರು ಅವನ ಪಿಸ್ತೂಲಿನ ಉತ್ತರ ಎದುರಿಸಬೇಕಾಯ್ತು. ಚಕ್ರವ್ಯೂಹದೊಳಗೆ ಸಿಲುಕಿದ ಅಭಿಮನ್ಯುವಿನಂತೆ ಕೊನೆಯ ಗುಂಡು ಇರುವ ತನಕವೂ ಕಾದಾಡಿದ ಆಜಾದ್ ಸೋಲೊಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಪೋಲಿಸರು ಅವನನ್ನು ಸುತ್ತುಗಟ್ಟಿ ಬಂಧಿಸುವ ಮೊದಲೇ ಕೊನೆಯ ಗುಂಡಿನಿಂದ ತನಗೆ ತಾನೇ ಹೊಡೆದುಕೊಂಡು ಮುಕ್ತನಾದ.
ತನ್ನ ಪ್ರತಿಜ್ಞೆಯಂತೆ, ಸ್ವತಂತ್ರನಾಗಿಯೇ ಬದುಕಿದ್ದ. ಸ್ವತಂತ್ರನಾಗಿಯೇ ಪ್ರಾಣತೆತ್ತ.

~
ಜುಲೈ ೨೩ ಚಂದ್ರ ಶೇಖರ ಆಜಾದರ ಜನ್ಮ ದಿನ. ಈ ಸಂದರ್ಭದಲ್ಲಾದರೂ ಅವರನ್ನು ನೆನೆದು ಗೌರವ ಸಲ್ಲಿಸಬೇಕಾದುದು ನಮ್ಮ ಕರ್ತವ್ಯವಲ್ಲವೆ?

                                                                                            ಮಾಹಿತಿ ಆಕರ:  ಚಕ್ರವರ್ತಿ ಸೂಲಿಬೆಲೆಯವರ ಭಾಷಣ