ರಾಷ್ಟ್ರ ಶಕ್ತಿ ಕೇಂದ್ರ

ಭಾರತ ಭಾಗ್ಯ ವಿಧಾತರು- ೪

Posted in ನಮ್ಮ ಇತಿಹಾಸ by yuvashakti on ನವೆಂಬರ್ 26, 2008

ರಾಜಾ ರಾಮಮೋಹನ ರಾಯ್

ರಾಮಮೋಹನ ರಾಯರು ಜನಿಸಿದ್ದು ಮುರ್ಷಿದಾಬಾದ್ (ಪ. ಬಂಗಾಳ) ಜಿಲ್ಲೆಯ ರಾಧಾ ನಗರ ಎಂಬಲ್ಲಿ. ರಾಜಾ ಎನ್ನುವುದು ಎರಡನೆ ಅಕ್ಬರ್ ಅವರಿಗೆ ನೀಡಿದ ಬಿರುದು.
ರಾಮಮೋಹನ ರಾಯ್ ಅವರನ್ನು ಭಾರತೀಯ ಪುನರುಜ್ಜೀವನದ ಶಕಪುರುಷ ಎಂದು ಕರೆಯುವರು. ಭಕ್ತ ಭಾಗವತರ ಮನೆತನದಲ್ಲಿ ಜನಿಸಿದ ರಾಮಮೋಹನ ರಾಯರು ಬಾಲ್ಯದಲ್ಲಿ ದೈವಭಕ್ತರಾಗಿದ್ದರು. ಮುಂದೆ ತಮ್ಮ ವಿಭಿನ್ನ ಚಿಂತನೆಗಳಿಂದ ವಿಚಾರವಾದಿ ಎನಿಸಿಕೊಂಡರೂ
ಅವರ ಆಧ್ಯಾತ್ಮಿಕತೆಗೆ ಭಂಗ ಬರಲಿಲ್ಲ. ಆದರೆ ಧರ್ಮದಲ್ಲಿ ಬೇರೂರಿದ್ದ ಮೌಢ್ಯ – ಆಚರಣೆಗಳನ್ನು, ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿದ್ದ ಸ್ತ್ರೀಶೋಷಣೆಯನ್ನು ಅವರು ಕಟುವಾಗಿ ವಿರೋಧಿಸಿದರು.

ರಾಮಮೋಹನರದು ಅಸೀಮ ಬುದ್ಧಿಶಕ್ತಿ , ಅವರು ಸಂಸ್ಕೃತ, ಪರ್ಶಿಯನ್ ಭಾಷೆಗಳ ಜೊತೆಗೆ ಗ್ರೀಕ್, ಹೀಬ್ರೂ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿದ್ದರು. ಆಂಗ್ಲಭಾಷೆಯಲ್ಲಿ ಪರಿಣತಿ ಪಡೆದು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು.
ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಶಿಕ್ಷಣಗಳು ಮೋಹನರಾಯರ ಪ್ರಮುಖ ಆದ್ಯತೆಗಳಾಗಿದ್ದವು. ಅವರ ಹೋರಾಟದಿಂದಾಗಿ ಸತಿ ಪದ್ಧತಿಗೆ ಕಾನೂನಾತ್ಮಕ ನಿಷೇಧ ಬಿತ್ತು. ಅವರು ಸ್ತ್ರೀಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯಬೇಕೆಂದು ಪ್ರಬಲ ವಾದ ಮಂಡಿಸಿದ್ದರು. ಬಹಳ ವರ್ಷಗಳ ನಂತರ ಅದು ಅಂಗೀಕೃತವಾಯಿತು.

ಮೋಹನರಾಯರು ಅಪಾರ ಸಾಮಾಜಿಕ ಕಳಕಳಿಯಿದ್ದ ವ್ಯಕ್ತಿ ; ಉಳುವವನಿಗೆ ಹೊಲ ಎಂಬ ಘೋಷಣೆಯನ್ನು ಮೊತ್ತ ಮೊದಲು ಹೊರಡಿಸಿದ್ದು ಇವರೇ. ಭಾರತೀಯ ಭಾಷೆಯಲ್ಲಿ ಮೊದಲ ಬಾರಿಗೆ ಪತ್ರಿಕೆ ಹೊರ ತಂದವರೂ ಇವರೇ. ಅವರ ಆತ್ಮೀಯ ಸಭಾ- ಬಾಂಗ್ಲಾ ಗೆಜೆಟ್ ಹೊರಡಿಸಿದರೆ, ಅವರು ಪರ್ಷಿಯನ್ ಭಾಷೆಯಲ್ಲಿ ಮಿರತ್ ಉಲ್ ಅಖಬಾರ್ ಮತ್ತು ಬಂಗಾಳಿಯಲ್ಲಿ ಸಂವಾದ ಕೌಮುದಿಗಳನ್ನು ಹೊರತಂದರು.
ಮೋಹನರಾಯರು ಹಿಂದೂ ಧರ್ಮಿಯರ ಮೌಢ್ಯತೆಯನ್ನು ವಿರೋಧಿಸಿದರೂ ಧರ್ಮದ ಬಗ್ಗೆ ಅಸಡ್ಡೆ ತಾಳಲಿಲ್ಲ. ಬದಲಿಗೆ ಅದರ ಪುನರುತ್ಥಾನಕ್ಕಾಗಿ ಬ್ರಹ್ಮ ಸಮಾಜ ವನ್ನು ಸ್ಥಾಪಿಸಿ ತಮ್ಮ ವಿಚಾರಧಾರೆಗಳನ್ನು ವ್ಯಾಪಕಗೊಳಿಸುವ ಯತ್ನ ಮಾಡಿದರು. ಹಿಂದೂಗಳು ನಿರಂತರ ಆಕ್ರಮಣಗಳಿಂದ ಅಂಜುಕುಳಿಗಳಾಗಿ ಸಾಗರದಾಚೆ ವಿದೇಶಪ್ರಯಾಣ ಮಾಡಬಾರದು ಎಂದು ತಮಗೆ ತಾವೇ ವಿಧಿಸಿಕೊಂಡಿದ್ದ ಕಟ್ಟಳೆ ಮುರಿದು ಹಡಗಿನಲ್ಲಿ ಇಂಗ್ಲೆಂಡಿಗೆ ಹೋದರು.
೧೮೩೧ ರಲ್ಲಿ ಮೊಘಲ್ ರಾಜನ ಪರ ವಾದ ನಡೆಸಲು ಇಂಗ್ಲೆಂಡಿಗೆ ತೆರಳಿದ್ದ ಮೋಹನ ರಾಯರು ಅಲ್ಲಿಯೇ ಮೃತರಾದರು. ಭಾರತದ ಸಮಾಜ ಸುಧಾರಕರ ಯಾದಿಯಲ್ಲಿ ರಾಜಾ ರಾಮಮೋಹನ ರಾಯರ ಹೆಸರು ಇಂದಿಗೂ ಮೊದಲನೆಯದಾಗಿ ಪರಿಗಣಿಸಲ್ಪಡುತ್ತದೆ.

ಮೀರಾಬಾಯಿ

ಮೀರಾಬಾಯಿ ಭಾರತ ಕಂಡ ಸಂತಶ್ರೇಷ್ಠರಲ್ಲಿ ಒಬ್ಬಳು.  ಅವಳು ಶ್ರೀ ಕೃಷ್ಣನ ಅಪ್ರತಿಮ ಭಕ್ತೆ ; ಆಕೆಯು ಕೃಷ್ಣಭಕ್ತಿಯ ಉನ್ಮಾದದಲ್ಲಿ ರಚಿಸಿರುವ ಗೀತೆಗಳು ಇಂದಿಗೂ ಜನರ ನಾಲಗೆಯಲ್ಲಿ ಹರಿದಾಡುತ್ತಿವೆ.
ಮೀರಾಬಾಯಿಯ ಕಾಲ ೧೬ನೇ ಶತಮಾನ, ರಜಪೂತ ವಂಶದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೂ ಕೃಷ್ಣನ ಗೊಂಬೆಗಳೊಡನೆ ಆಡುತ್ತಾ ಬೆಳೆದಳು.  ಮುಂದೆ ಅದು ಭಕ್ತಿಗೆ ತಿರುಗಿ ಅಲೌಕಿಕ ಪ್ರೇಮ ಸ್ಥಾಪಿತವಾಯಿತು. ಮೀರಾಬಾಯಿ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಆಕೆಯ ವಿವಾಹ ಮೇವಾಡದ ದೊರೆ ಬೋಜರಾಜನೊಂದಿಗೆ ನಡೆಸಲಾಯಿತು ಆದರೆ ಆ ವೇಳೆಗಾಗಲೇ ಎಲ್ಲಾ ಲೌಕಿಕ ಪ್ರಕ್ರಿಯೆಗಳಿಂದ ಹೊರತಾಗಿ ಬಿಟ್ಟಿದ್ದ ಮೀರಾ ತನ್ನ ಪತಿಯೊಂದಿಗೆ ಸಂಸಾರ ನಡೆಸಲು ಒಪ್ಪಲಿಲ್ಲ. ಅವಳು ತನ್ನನ್ನುತಾನು ಸಂಪೂರ್ಣವಾಗಿ ಶ್ರೀಕೃಷ್ಣನಿಗೆ ಸಮರ್ಪಿಸಿಕೊಂಡುಬಿಟ್ಟಿದ್ದಳು.  ಮುಂದೆ ತನ್ನ ಮನೆಯನ್ನು ತೊರೆದು ಹೊರಟ ಮೀರಾಬಾಯಿ ಶ್ರೀಕೃಷ್ಣಭಕ್ತಿಯಲ್ಲಿ ಪರವಶಳಾಗಿ ಹಾಡುತ್ತಾ, ನರ್ತಿಸುತ್ತ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿದಳು. ಅವಳ ಭಕ್ತಿಪರಾಕಾಷ್ಠೆಗೆ ಸೋತ ಜನರು ಆಕೆಯ ಅನುಯಾಯಿಗಳಾದರು.

ಮೀರಾಬಾಯಿ ಜೀವಿಸಿದ್ದ ಕಾಲಘಟ್ಟದಲ್ಲಿ ಭಾರತದ ಸ್ತ್ರೀಯರ ಜೀವನ ಬಹಳ ದುಸ್ತರವಾಗಿತ್ತು.  ಅನ್ಯದೇಶೀಯರ ಆಕ್ರಮಣಭೀತಿಯಿಂದ ಅವರು ಬಂಧಿಗಳಾಗಿದ್ದರು, ಅವರಿಗೆ ತಮ್ಮ ಯಾವ ವೈಯಕ್ತಿಕ ಬಯಕೆಯನ್ನು ಹೊಂದುವ ಅಧಿಕಾರವಿರಲಿಲ್ಲ, ಆದರೆ ಮೀರಾ ಈ ಎಲ್ಲಾ ಕಟ್ಟಳೆಗಳನ್ನು ಮುರಿದಳು, ಅವಳ ಸಾಹಸಕ್ಕೆ ಭಗವದ್ಭಕ್ತಿಯ ಬಲವೇ ಮೂಲಸ್ರೋತವಾಯಿತು.  ತನ್ನ ಪತಿಯ ಪರಿವಾರವು ಹತ್ಯೆಗೆ ನಡೆಸಿದ ಎಲ್ಲಾ ಸಂಚುಗಳನ್ನು ಗೆದ್ದುಬಂದ ಮೀರಾ ತನ್ನ ಜೀವಿತವನ್ನು ಕೃಷ್ಣದೇಗುಲಗಳಲ್ಲಿ ಕಳೆದಳು.  ತನ್ನ ಅಂತ್ಯಕಾಲದಲ್ಲಿ ಆಕೆ ದ್ವಾರಕಾನಗರಿಯಲ್ಲಿ ನೆಲೆಸಿದ್ದಳು.

 ಸರ್ದಾರ್ ವಲ್ಲಭಾಯಿ ಪಟೇಲ್

ಉಕ್ಕಿನ ಮನುಷ್ಯ ಎಂದು ಖ್ಯಾತರಾದ ಸ್ವಾತಂತ್ರ್ಯ ಹೋರಾಟಗಾರ ವಲ್ಲಭಾಯಿ ಪಟೇಲರು ಜನಿಸಿದ್ದು ಗುಜರಾತಿನ ನಡಿಯಾರ್ ಎಂಬಲ್ಲಿ , ಆದರೆ ಅವರ ಸಾಮರ್ಥ್ಯ ಕೇವಲ ಆ ಪ್ರಾಂತ್ಯಕ್ಕೆ ಸೀಮಿತವಾಗದೆ ಇಡಿಯ ಭಾರತದ ಏಕೀಕರಣಕ್ಕೆ ವಿನಿಯೋಗವಾಯಿತು. ಸ್ವಾತಂತ್ರಾನಂತರ ಹೈದರಾಬಾದ್ ಅನ್ನು ಭಾರತದೊಂದಿಗೆ ಜೋಡಿಸುವುದರಲ್ಲಿ ಅವರ ಪಾತ್ರ ಮಹತ್ತರವಾದುದು.  ಪಾಟೀಲರ ಗಡಸುತನದ ಆಧಾರವಿಲ್ಲದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲವೆಂದೇ ಹೇಳಬಹುದು.

೧೯೧೮ ರಲ್ಲಿ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದಾಗ ಅವರ ವಕೀಲಿವೃತ್ತಿ ಉಚ್ಛ್ರಾಯದಲ್ಲಿತ್ತು.  ತಮ್ಮ ವೃತ್ತಿ, ಸಂಪತುಗಳೆಲ್ಲವನ್ನೂ ತ್ಯಜಿಸಿಬಂದ ಪಟೇಲರು ಗಾಂಧೀಜಿಯವರ ಅನುಯಾಯಿಯಾದರು. ಗಾಂಧೀಜಿಯವರ’ನಿವಾರಣ್ ಸತ್ಯಾಗ್ರಹ’ ಅವರಿಗೆ ಸತ್ಯಾಗ್ರಹ ಚಳುವಳಿಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿತು. ಮುಂದೆ ಇದು ಅವರ ಬರ್ಸಾಕ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳ ಯಶಸ್ಸಿಗೆ ಕಾರಣವಾಯಿತು.  ಇವುಗಳ ಜೊತೆಗೆ ಪಟೇಲರು ಅಸ್ಪೃಶ್ಯತೆ, ಮದ್ಯಪಾನ ಹಾಗೂ ಅಸಮಾನತೆಯ  ವಿರುದ್ಧವೂ ವ್ಯಾಪಕ ಚಳುವಳಿ ನಡೆಸಿದರು. ಬಾರ್ಡೇಲಿನ ಸತ್ಯಾಗ್ರಹದಿಂದ ಪಟೇಲರಿಗೆ ’ಸರ್ದಾರ್’ ಅಭಿದಾನ ದೊರಕಿತು.
ಆರಂಭದಿಂದಲೂ ಕಾಂಗ್ರೇಸ್ಸಿನ ಸಕ್ರಿಯ ಸದಸ್ಯರಾಗಿದ್ದ ಪಟೇಲರು ಅಲ್ಲಿಯೂ ತಮ್ಮ ವಿಶಿಷ್ಟ ಛಾಪನ್ನೆತ್ತಿ, ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗುವ ಮಟ್ಟದವರೆಗೂ ಏರಿದ್ದರು, ಆದರೆ ಕಾರಣಾಂತರಗಳಿಂದ ಅವರು ಉಪಪ್ರದಾನಿಯಾಗಿ ಅಧಿಕಾರವಹಿಸಿಕೊಂಡು, ಗೃಹಖಾತೆಯ ಉಸ್ತುವಾರಿ ಕೈಗೆತ್ತಿಕೊಂಡರು.

ಪಟೇಲರು ಸ್ವಾತಂತ್ರ್ಯಾನಂತರದ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರೆಂದು ನೆನೆಯಲ್ಪಡುತ್ತಾರೆ.  ಅವರು ಬಿಟ್ಟು ೫೬೫ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಅಲ್ಲಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆತಂದರು.  ಅಧಿಕಾರದ ವಿಕೇಂದ್ರೀಕರಣ ಧಾರ್ಮಿಕ ಸ್ವಾತಂತ್ರ್ಯ – ಸಮಾನತೆ ಇತ್ಯಾದಿ ವಿಷಯಗಳನ್ನು ವಿಶ್ಲೇಷಿಸಿ ಭಾರತದ ಸಂವಿಧಾನ ರಚನೆಯಲ್ಲಿಯೂ ಮಹತ್ವದ ಕೊಡುಗೆ ನೀಡಿದರು.

ಸಂತ ಕಬೀರ

 ಸಂತ ಕಬೀರರು ’ಸಾಮರಸ್ಯದ ನೇಕಾರ’ ಎಂದು ಖ್ಯಾತರು. ಇವರು ವೃತ್ತಿಯಿಂದಲೂ ನೇಕಾರರೇ ಆಗಿದ್ದರು.  ತಮ್ಮ ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ವಿಚಾರಗಾಥೆಗಳಿಂದ ಅಪಾರ ಜನಮನ್ನಣೆಯನ್ನೂ,  ಅನುಯಾಯಿಗಳನ್ನೂ ಪಡೆದರು. 
ಕಬೀರರು ಜನ್ಮತಃ ಯಾವ ಕುಲದವರೆಂದು ತಿಳಿದವರಿಲ್ಲ. ಆದರೆ ಮಕ್ಕಳಿಲ್ಲದ ಮುಸ್ಲಿಮ್ ದಂಪತಿಗಳು ಅವರನ್ನು ಬೆಳೆಸಿದರು. ಯುವಕ ಕಬೀರರು ಸ್ವಾಮಿ ರಾಮಾನಂದರ ಶಿಷ್ಯರಾಗಿ ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದರು.  ಮುಂದೆ ತಮ್ಮ ಅನುಭವ, ಕಳಕಳಿ, ಜ್ಞಾನಗಳೆಲ್ಲವನ್ನು ಹದವಾಗಿ ನೇಯ್ದು ವಿಶಿಷ್ಠ ಪಂಥವೊಂದರ ಉಗಮಕ್ಕೆ ಕಾರಣರಾದರು.

ಕಬೀರರ ಬೋಧನಾವಿಧಾನ ಬಹಳ ಸ್ವಾರಸ್ಯಕರವಾದುದು. ಕನ್ನಡದ ವಚನಗಳಂತೆ, ದಾಸರ ಕೀರ್ತನೆಗಳಂತೆ ಕಬೀರರ ’ದೋಹೆ’ಗಳು ಭಕ್ತಿ ಸಾಹಿತ್ಯಕ್ಕೂ ಹಿಂದೀ ಭಾಷೆಗೂ ನೀಡಿರುವ ಕೊಡುಗೆ ಅಪಾರ.  ಹಾಗೆಂದು ಕಬೀರರು ಶ್ಲೋಕ, ವಚನ – ಕೀರ್ತನಗಳಂತೆ ಯಾವುವನ್ನೂ ಸ್ವತಃ ಲೇಖಿಸಿಡಲಿಲ್ಲ.  ಅವೆಲ್ಲವೂ ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಇಂದಿನವರೆಗೂ ಉಳಿದುಬಂದಿವೆ.  ಆದರೆ ಅವರ ಕೆಲವು ಅನುಯಾಯಿಗಳು ಕಬೀರರ ಬೋಧನೆಗಳನ್ನು ದಾಖಲಿಸಿದ್ದಾರೆ.  ಹೀಗೆ ಅವರ ಹೆಸರಿನಲ್ಲಿ ಒಟ್ಟು ೭೨ ಗ್ರಂಥಗಳು ದೊರೆತಿವೆ.  ಕಬೀರ ಪಂಥ ಇಂದಿಗೂ ಅಸ್ತಿತ್ವದಲ್ಲಿದ್ದು ಸುಮಾರು ಹತ್ತು ಲಕ್ಷ ಕಬೀರ ಪಂಥಿಗಳು ದೇಶದೆಲ್ಲೆಡೆ ಇದ್ದಾರೆ.

ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಕಬೀರರು ಮೊತ್ತಮೊದಲ ಬಾರಿಗೆ ’ರಾಮ-ರಹೀಮ’ರಿಬ್ಬರೂ ಒಂದೇ ಎಂದು ಘೋಷಿಸಿದರು. ಅದರಿಂದ ಎರಡೂ ಪಂಗಡಗಳ ದ್ವೇಷ ಕಟ್ಟಿಕೊಂಡರು. ಆದರೇನು? ಅವರು ನೆಟ್ಟ ಸಾಮರಸ್ಯದ ಸಸಿ ಕಾಲಕ್ರಮದಲ್ಲಿ ಬೆಳೆದು ಫಲ ನೀಡಿತು. ಪಂಜಾಬ್ ಪ್ರಾಂತ್ಯದಲ್ಲಿ ಬೆಳಕು ಕಂಡ ಸಿಖ್ಖ ಪಂಥ ಕಬೀರರ ವಿವರಗಳನ್ನು ಸ್ವೀಕರಿಸಿತು.
ತುಂಬುಜೀವನ ನಡೆಸಿದ ಕಬೀರರು ತಮ್ಮ ೧೧೮ನೇ ವಯಸ್ಸಿನಲ್ಲಿ ದೇಹ ತೊರೆದರು.

Tagged with:

ಜೀವನ ಪ್ರಯಾಣದ ಪರಿಪೂರ್ಣ ಮಾರ್ಗ

Posted in ನಮ್ಮ ಇತಿಹಾಸ by yuvashakti on ನವೆಂಬರ್ 22, 2008

ಹಿಂದೂ- ಧರ್ಮ ಮತ್ತು ಸಂಸ್ಕೃತಿ ಸರಣಿಯ ಮುಂದುವರೆದ ಭಾಗ.

‘ಹಿಂದುತ್ವ’ವನ್ನು ಜಾತಿಯಾಗಿ ತೆಗೆದುಕೊಮ್ಡರೂ, ಧರ್ಮವಾಗಿ ತೆಗೆದುಕೊಂಡರೂ ಭಾರತದ ಬಗ್ಗೆ ಮತನಾಡುವಾಗ ಅದನ್ನು ಬಿಟ್ಟು ಮಾತನಡುವುದು ಸಾಧ್ಯವೇ ಇಲ್ಲ. ದಕ್ಷಿಣ ಏಷ್ಯಾದ ಭೂಭಾಗವೊಂದು ‘ಭರತ’ ಎಂಬ ಹೆಸರನ್ನು ಪಡೆದಿರುವುದೇ ಹಿಂದುತ್ವದ ಕಾರಣದಿಂದ. ಹಿಂದುತ್ವ- ತಮಸೋಮಾ ಜ್ಯೋತಿರ್ಗಮಯ’ ಎನ್ನುತ್ತದೆ. ಅಂದರೆ, ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ ಎಂದು. ಅಂತೆಯೇ, ‘ಭ’ ಧಾತುವು ಬೆಳಕನ್ನೂ, ‘ರತ’ವು ಚಲನೆಯನ್ನೂ ಸೂಚಿಸುತ್ತವೆ. ಒಟ್ಟಾರೆ, ‘ಭಾರತ’ ಪದದ ಅರ್ಥವೂ ‘ಬೆಳಕಿನೆಡೆಗೆ ಚಲಿಸೋಣ’ ಎಂದೇ.

ಹಿಂದೂ ಧರ್ಮದ ಮೂಲಭೂತ ತತ್ತ್ವ- “ಸತ್ಯವು ಏಕಮೇವಾದ್ವಿತೀಯವಾಗಿದೆ’ ಎಂಬುದು. ಮತ್ತು, ಈ ಸತ್ಯವು ಮಾನವನ ಅರಿವಿನಾಚೆ ಇದೆ. ಅದನ್ನು ಅರಿಯುವ ನಿರಂತರ ಪ್ರಯತ್ನವೇ ಬೆಳಕಿನೆಡೆಗಿನ ಚಲನೆ. ಈ ಚಲನೆಯ ಸಂದರ್ಭದಲ್ಲಿ, ಅಂತಿಮ ಗುರಿಯನ್ನು ಹೊಂದುವ ಯತ್ನದಲ್ಲಿ ಹೊರಹೊಮ್ಮಿದ್ದು- ಅತ್ಯದ್ಭುತ ಜ್ಞಾನ ಭಂಡಾರ. ವಿಜ್ಞಾನ, ಕಲೆ, ಸಂಗೀತಗಳೆಲ್ಲವೂ ಪರಮ ಸತ್ಯದ ಆರಾಧನೆಗಾಗಿಯೇ ರೂಪುಗೊಂಡಂಥವು. ಆಧುನಿಕ ವಿಜ್ಞಾನ ಜಗತ್ತಿಗೂ ಸವಾಲೆನಿಸುವ ವಾಸ್ತು ವಿನ್ಯಾಸಗಳು, ಲೋಹ- ಪಷಾಣ- ಕಾಷ್ಠ ಶಿಲ್ಪಗಳು, ಆರೋಗ್ಯ ವಿಜ್ಞಾನ, ಖಗೋಳ ಶಾಸ್ತ್ರ, ಕಾಲಮಾಪನದ ನಿಖರತೆ ಇವೆಲ್ಲದರ ಗುರಿಯೂ ಅದೇ ಆಗಿದೆ. ಹೀಗಾಗಿ ಭಾರತೀಯ ಸಂಸ್ಕೃತಿ, ಭಾರತದ ನಾಗರಿಕತೆ, ಭರತೀಯ ಇತಿಹಾಸಗಳೆಂದರೆ ಅದು; ಹಿಂದೂ ಸಂಸ್ಕೃತಿ, ಹಿಂದೂ ನಾಗರಿಕತೆ, ಹಿಂದೂ ಇತಿಹಾಸವಲ್ಲದೆ ಬೇರೆಯಲ್ಲ.

~ ಹಿಂದೂ ಧರ್ಮ ~

ಛಂದೋಗ್ಯ ಉಪನಿಷತ್ತು (೨:೧) ಹೇಳುವಂತೆ, “ಬ್ರಹ್ಮವು ಅನಂತವೂ ಅಲೌಕಿಕವೂ ಪರಿಪೂರ್ಣವೂ ಆದ ಅಸ್ತಿತ್ವ. ಈ ಪೂರ್ಣದಿಂದಲೇ ಎಲ್ಲವೂ ಉದ್ಭವಿಸುತ್ತವೆ. ಎಲ್ಲವೂ ಈ ಪೂರ್ಣದಲ್ಲೇ ವಿಲೀನವಾಗುತ್ತವೆ”
ಹಿಂದೂ ಧರ್ಮವು ಪರಮ ಸತ್ಯದ ಕುರಿತು ದೃಢ ಧ್ವನಿಯಲ್ಲಿ, “ಸತ್ಯವು ಒಂದೇ ಆಗಿದೆ, ವಿದ್ವಾಂಸರು ಅದನ್ನು ವಿವಿಧ ಹೆಸರುಗಳಿಂದ ಕರೆಯುವರು” (ಏಕೋಹಮ್, ವಿಪ್ರಾ ಬಹುಧಾಃ ವದನ್ತಿ- ಋಗ್ವೇದ) ಎಂದು ಸಾರಿದೆ. ಆದರೆ, ಇವತ್ತಿನ ಹಿಂದೂ ಜಾತಿ, ಮೂಲ ಧರ್ಮದ ಉದಾತ್ತ ಧ್ಯೇಯಗಳನ್ನು ಕೈಬಿಡುತ್ತ, ಸಂಕುಚಿತವಾಗುತ್ತ ಮುನ್ನಡೆದಿದೆ. ಆದ್ದರಿಂದ, ಹಿಂದೂ ಧರ್ಮದ ಕುರಿತು ಮಾತನಾಡುವಾಗ, ಹಿಂದೂ ಜಾತಿಯ ಆಚೆ ನಿಂತು ನೋಡಬೇಕಾದುದು ಅತಿ ಮುಖ್ಯ.

ಸನಾತನ ಧರ್ಮದ ಅರಾಧ್ಯ ದೇವತೆಯೆಂದರೆ, ಅದು ಪ್ರಕೃತಿಯೇ. ಜೀವಧಾರಣೆಗೆ ಅಗತ್ಯಬಿರುವ ಪಂಚಭೂತಗಳ ಆರಾಧನೆಯೇ ಅಂಡಿನ ರೂಢಿಯಾಗಿತ್ತು. ಶಾಖ-ಬೆಳಕು ನೀಡುವ ಪೂಷನ್ (ಸೂರ್ಯ), ದೈನಂದಿನ ಕಾರ್ಯಗಳಿಗೆ ಅಗತ್ಯನಾದ ಜಾತವೇದಸ (ಅಗ್ನಿ), ಕೃಷಿಗೆ ಅನುಕೂಲನಾದ ವರುಣ, ಮಳೆಯ ಅಧಿಪತಿಯಾದ ಇಂದ್ರ, ಜೀವನಾಧಾರನಾದ ವಾಯು- ಇವರೆಲ್ಲ ವೇದಕಾಲದ ದೇವತೆಗಳು.
ಹಿಂದೂ ಧರ್ಮದ ವ್ಯಾಖ್ಯೆಯಂತೆ, ಭಗವಂತ ಎಂದರೆ ಪ್ರಕೃತಿ. ಭಗವಂತ ಎಂಡರೆ ಪುರುಷ. ಭಗವಂತ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರ, ಲಕ್ಷ್ಮಿ, ಪಾರ್ವತಿ, ಸರಸ್ವತಿ… ಯಾರು ಬೇಕಾದರೂ. ಜೀವನದ ಅವಶ್ಯಕತೆಗೆ ತಕ್ಕಂತೆ ಇಲ್ಲಿ ಭಗವಂತ ರೂಪುಗೊಳ್ಳುತ್ತಾನೆ. ಅಂತೆಯೇ ರೈತನಿಗೆ ಮಣ್ಣೂ ದೇವರಾಗುತ್ತದೆ. ಸೈನಿಕನಿಗೆ ಮಾತೃಭೂಮಿ ದೇವತೆಯಾಗುತ್ತಾಳೆ. ಬೆಸ್ತನಿಗೆ ನದಿ ದೇವಿಯಾಗುತ್ತಾಳೆ. ವಿದ್ಯುಚ್ಛಕ್ತಿಯನ್ನು ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ, ಅಗತ್ಯಕ್ಕೆ ತಕ್ಕ ರೂಪದಲ್ಲಿ ಪಡೆಯುವುದಿಲ್ಲವೆ? ಹಾಗೆ…
ಅಗೋಚರ ಶಕ್ತಿಯಾದ ಭಗವಂತನನ್ನು ಗ್ರಹಿಕೆಯ ವ್ಯಾಪ್ತಿಗೆ ಎಷ್ಟು ದಕ್ಕುತ್ತದೆಯೋ ಅಷ್ಟನ್ನು ಗ್ರಹಿಸಿ, ಆರಾಧಿಸುವುದು. ಆ ಮೂಲಕ ಭೂಮಿಯ ಮೆಲಿನ ತನ್ನ ಜೀವನ ನಿರ್ವಹಣೆಗೆ ಅಗತ್ಯ ಸಹಾಯವನ್ನು ಪಡೆಯುವುದು. ಈ ಗ್ರಹಿಕೆಯ ವ್ಯಾಪ್ತಿ ವಿಸ್ತರವಾಗುತ್ತಾ ಸಾಗಿದಂತೆ, ಭಗವತ್ ಶಕ್ತಿಯ ಅಗಾಧತೆಯ ಅರಿವಾಗುತ್ತ ಹೋದಂತೆ, ಲೌಕಿಕ ವಾಂಛೆಗಳು ಕುಗ್ಗುತ್ತ ಸಾಗಿ ಆಧ್ಯಾತ್ಮಿಕ ಉನ್ನತಿಗೆ ಆ ಶಕ್ತಿಯ ಸಹಕಾರವನ್ನು ಬಳಸಿಕೊಳ್ಳುವ ಪ್ರಬುದ್ಧತೆ ಬೆಳೆಯುತ್ತದೆ. ಬ್ರಹ್ಮ ಎಂದು ಕರೆಯಲ್ಪಡುವ ಆ ಅಗಾಧ ಶಕ್ತಿಯ ಅರಿವನ್ನು ಪಡೆಯುವಿಕೆಯು ಜ್ಞಾನೋದಯವೆಂದು ಕರೆಯಲ್ಪಡುತ್ತದೆ.

ಹಿಂದೂ ಧರ್ಮವು ‘ಧಾರ್ಮಿಕ ಮುಖಂದ’ನೆಂದು ಕರೆಯಲ್ಪೌವವನ ನಂಬಿಕೆ ಮತ್ತು ಅನುಭವಗಳಿಗಿಂತ ಹೆಚ್ಚಾಗಿ ಆತನ ನಡವಳಿಕೆಯ ಮೇಲೆ ತನ್ನ ನಂಬಿಕೆಯನ್ನು ಸ್ಥಾಪಿಸಿಕೊಳ್ಳುತ್ತದೆ. ಹಿಂದುತ್ವದ ಮೇಲಿರುವ ‘ಪುರೋಹಿತಷಾಹಿ’ ಅಪವಾದ, ವಾಮಪಂಥೀಯರು ಹೊರಿಸಿದ ಮಿಥ್ಯಾರೋಪವಷ್ಟೆ. ಇಲ್ಲವಾದಲ್ಲಿ ಭಾರತದ ಅನೇಕಾನೇಕ ಅಧ್ಯಾತ್ಮಿಕ ಪಂಥಗಳ ಮುಖಂಡರು, ಸಂತರು, ಅಬ್ರಾಹ್ಮಣರೇ ಹೆಚ್ಚಿನ ಸಂಖ್ಯೆಯಲ್ಲಿರಲು ಸಾಧ್ಯವಿರುತ್ತಿರಲಿಲ್ಲ. “ನಾನು ನಿಮ್ಮ ಮುಂದಾಳು, ನನ್ನನ್ನು ಅನುಸರಿಸಿ” ಎಂದು ಆದೇಶ ಮಾಡುವವನ ಅರ್ಹತೆಯನ್ನು ಜನರೇ ನಿರ್ಧರಿಸುತ್ತಿದ್ದರು. ಇಲ್ಲಿ ಮೌಢ್ಯಕ್ಕೆ, ಅಂಧ ಶ್ರದ್ಧೆಗೆ ಅವಕಾಶವಿರಲಿಲ್ಲ. (ಕಲುಷಿತ ಹಿಂದೂ ಜಾತಿಯ ಪರಿಸ್ಥಿತಿ ಇದಕ್ಕಿಂತ ಭಿನ್ನ. ಇಲ್ಲಿ ಢೋಂಗಿ ಗುರು ಶಿಷ್ಯರಿದ್ದಾರೆ, ಮೂಢ ಭಕ್ತರೂ ಇದ್ದಾರೆ)
ಭಾರತ ಕಂಡ ಅಪ್ರತಿಮ ತತ್ತ್ವಶಾಸ್ತ್ರಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಂದೆಡೆ ಹೀಗೆ ಹೇಳಿದ್ದಾರೆ, “ ಪ್ರವಾದಿಯೊಬ್ಬನನ್ನೇ ಆಧಾರವಾಗಿಟ್ಟುಕೊಂಡ ಧರ್ಮವು ಸಂಕುಚಿತ , ತೀವ್ರಗಾಮಿ, ಅಸಹಿಷ್ಣು ಮತ್ತು ಸ್ನೇಹಭಾವದ ಕೊರತೆಯಿಂದ ಕೂಡಿರುತ್ತದೆ. ಸನಾತನ ಧರ್ಮವು ಪರಿತ್ಯಾಗ ಮತ್ತು ಶಾಂತಿ- ಸೌಹರ್ದತೆಗಳಿಂದ ಕೂಡಿರುತ್ತವೆ”. ಅವರು ಪ್ರಶ್ನಿಸುತ್ತಾರೆ, “ ಯಾವುದೆ ಅಧಿಕೃತ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶವಿಲ್ಲದ ರೋಮನ್ ಕ್ಯಾಥೊಲಿಕ್ ಸಮಾಜಗಳಲ್ಲಿ ಹಿಟ್ಲರ್, ಮುಸೊಲಿನಿಯಂಥವರು ಜನಿಸಿದ್ದು ಒಂದು ಆಕಸ್ಮಿಕವೇ?” ಎಂದು.

ಹಿಂದೂ ಧರ್ಮದ ಅತ್ಯಂತ ಪ್ರಮುಖ ಧನಾತ್ಮಕ ಅಂಶ- ಅದರ ವೈಶಾಲ್ಯತೆ. ಅದು, ತನಗೆ ಸೇರದ ಇತರರನ್ನು ದ್ರೋಹಿಗಳೆಂದು ಬಗೆಯುವುದಿಲ್ಲ. ಕ್ರೌರ್ಯದಿಂಡ, ಬಲವಂತದಿಂದ ಇತರ ಮತಗಳ ಜನರನ್ನು ತನ್ನ ವ್ಯಾಪ್ತಿಗೆ ಕರೆತಂದು, ವೈವಿಧ್ಯತೆಯನ್ನು ನಾಶ ಮಾಡಿ, ಯಾಂತ್ರೀಕೃತ ತನ್ನನ್ನು ಅನುಸರಿಸುವ ಬಣವನ್ನು ಸೃಷ್ಟಿಸುವುದು ಅದಕ್ಕೆ ಬೇಕಿಲ್ಲ. ಇತಿಹಾಸದ ಯಾವ ಹಂತದಲ್ಲಿಯೂ ಹಿಂದೂಗಳು ಬಲಾತ್ಕಾರದ ಮತಾಂತರ ನಡೆಸಿದ್ದನ್ನು ನೀವು ನೋಡಲಾರಿರಿ.

ಇವತ್ತಿನ ಹಿಂದೂಗಳೂ ತಮ್ಮನ್ನು ತಾವು ಹಾಗೆಂದು ಕರೆದುಕೊಳ್ಳುವ ಮುನ್ನ ತಾವು ತಮ್ಮ ಧರ್ಮದ ಮೌಲ್ಯಗಳನ್ನು ಒಳಗೊಂಡಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಹೃದಯ ವೈಶಾಲ್ಯತೆ ಇರದ ಯಾವೊಬ್ಬನಿಗೂ ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ಅರ್ಹತೆ ಇರುವುದಿಲ್ಲ.

( ಮುಂದುವರೆಯುವುದು…….. )

ಭಾರತ ಭಾಗ್ಯ ವಿಧಾತರು-೩

Posted in ನಮ್ಮ ಇತಿಹಾಸ by yuvashakti on ನವೆಂಬರ್ 17, 2008

ವಿನೋಬಾ ಭಾವೆ

’ಭೂ ದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಶ್ರೀ ವಿನೋಬಾ ಭಾವೆ.  ಇವರು ಜನಿಸಿದ್ದು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋದೆ ಗ್ರಾಮದಲ್ಲಿ .  ಬಾಲ್ಯದಲ್ಲಿಯೇ eನೇಶ್ವರಿಯ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.  ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.

ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು.  ೧೯೨೩ ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು.  ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟುನಿಂತರು.  ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು. 
 
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ.  ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಇವರು ಅಗ್ರಗಣ್ಯರು. ವಿನೋಬಾ ಅವರು ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಅವರು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ  ಸೆರೆವಾಸ ಅನುಭವಿಸಿದರು. ಆದರೆ ಅವರ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು , ೧೯೬೦ರಲ್ಲಿ ಚಂಬಲ್  ಕಣಿವೆಯ ಡಕಾಯಿತರು, ೧೯೭೨ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು. ೧೯೫೧ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆಗೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು.  ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿದರು.  ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು.  ಎಂಬತ್ತೇಳು ವರ್ಷಗಳ ಸಾರ್ಥಕ ಜೀವನ ನಡೆಸಿದ ವಿನೋಬಾ ಭಾವೆಯವರು ೧೯೮೭ರಲ್ಲಿ ಕಾಲವಶರಾದರು.

ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧಿ ಎಂದು ವಿಶ್ವಾದ್ಯಂತ ಚಿರಪರಿಚಿತವಾಗಿರುವ ಮೋಹನದಾಸ್ ಕರಮಚಂದ ಗಾಂಧಿಯವರು ೧೮೬೯ ರಲ್ಲಿ ಗುಜರಾತಿನ ಪೋರ್‌ಬಂದರಿನಲ್ಲಿ ಜನಿಸಿದರು.  ಬ್ಯಾರಿಸ್ಟರ್ ಪದವಿ ಗಳಿಸುವ ಸಲುವಾಗಿ ಇಂಗ್ಲೆಂಡಿಗೆ ತೆರಳಿದ ಕರಮಚಂದರು ವಕೀಲಿ ವೃತ್ತಿ ಆರಂಭಿಸಿದ್ದು ದಕ್ಷಿಣ ಆಫ್ರಿಕಾದ ಡರ್ಬನ್ನಿನಲ್ಲಿ.  ಅಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ರಿಟೀಷರಿಂದ ಆದ ಅವಮಾನ ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತು. ದಕ್ಷಿಣ ಆಫ್ರಿಕಾದಲ್ಲಿ ಮೊದಲಬಾರಿಗೆ ’ಸತ್ಯಾಗ್ರಹ’ ಹೋರಾಟ ಆರಂಭಿಸಿದ ಗಾಂಧೀಜಿ ಭಾರತಕ್ಕೆ ಮರಳಿದ ನಂತರ ಇಲ್ಲಿಯೂ ಅದನ್ನು ಮುಂದುವರೆಸಿದರು.

ಗಾಂಧೀಜಿ ಭಾರತಕ್ಕೆ ಮರಳಿದ ಸಮಯದಲ್ಲಿಯೇ ಬಾಲಗಂಗಾಧರ ತಿಲಕರ ನಿಧನವಾಯಿತು.  ಭಾರತದ ಜನತೆ ಹೊಸ ನಾಯಕನ ಅಗತ್ಯದಲ್ಲಿತ್ತು. ಗಾಂಧೀಜಿ ಆ ಸ್ಥಾನವನ್ನು ತುಂಬಿದರು.  ೧೯೨೧ ರಿಂದ ಸತ್ಯಾಗ್ರಹ ಚಳುವಳಿಯನ್ನು ವ್ಯಾಪಕಗೊಳಿಸಿದ ಗಾಂಧೀಜಿ ಅಸಹಕಾರ ಆಂದೋಲನಕ್ಕೆ  ಕರೆನೀಡಿದರು.  ರಾಜದ್ರೋಹದ ಆಪಾದನೆ ಹೊತ್ತು ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು.

ಗಾಂಧೀಜಿ ನಡೆಸಿದ ಹೋರಾಟಗಳಲ್ಲಿ ಉಪ್ಪಿನ ಸತ್ಯಾಗ್ರಹ (ದಂಡಿ -೧೯೩೦) ಚಲೇಜಾವ್ ಚಳುವಳಿ (೧೯೪೨) ಪ್ರಮುಖವಾದವು. ಅಹಿಂಸಾತ್ಮಕ ಹೋರಾಟ ಮಾತ್ರದಿಂದಲೇ ಸ್ವಾತಂತ್ರ ಪ್ರಾಪ್ತಿಯಾಗಬೇಕೆಂಬ ಬಯಕೆ ಹೊಂದಿದ್ದ ಅವರು ತಾವು ಆರಂಭಿಸಿದ ಚಳುವಳಿಗಳು ಹಿಂಸೆಯ ಸ್ವರೂಪಕ್ಕೆ ತಿರುಗಿದಾಗ ಅದನ್ನು ಹಿಂಪಡೆದರು.  ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳೆರಡೂ ಹಾಗಯೇ ಆದವು.

ಮಹಾತ್ಮಾಗಾಂಧಿಯವರು ಸ್ವದೇಶೀಯತೆ ಮತ್ತು ಸ್ವಾವಲಂಬನೆಗಳಿಗೆ  ಹೆಚ್ಚಿನ ಒತ್ತು ಕೊಟ್ಟರು.  ತಾವು ಆರಂಭಿಸಿದ ಆಶ್ರಮದಲ್ಲಿ ಸ್ವತಃ ತಾವೇ ಚರಕದಲ್ಲಿ ನೂಲುವ ಮೂಲಕ ಇತರರಿಗೂ ಮಾದರಿಯಾಗಿ ನಿಂತರು.  ಅವರ ಶಿಕ್ಷಣದ ಬಗೆಗಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಗಾಂಧೀಜಿ ಮದ್ಯಪಾನವೂ ಸೇರಿದಂತೆ ಸಮಾಜಕ್ಕೆ ಮಾರಕವೆನಿಸುವಂತಹ ದುರ್ನಡತೆ, ಮೌಢ್ಯಾಚರಣೆಗಳನ್ನು  ಪ್ರಬಲವಾಗಿ ಖಂಡಿಸಿದರು. 

ಲಕ್ಷೋಪಲಕ್ಷ ಭಾರತೀಯರ ಹೋರಾಟ, ಬಲಿದಾನಗಳ ಪರಿಣಾಮವಾಗಿ ೧೯೪೭ರಲ್ಲಿ ಆಗಷ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು, ಜೊತೆಗೇ ಭಾರತ ವಿಭಜನೆಯ ದುರಂತವೂ ನಡೆಯಿತು. ಈ ಸಂದರ್ಭಗಳಲ್ಲಿ ಅನೇಕ ಹಿಂದೂಗಳ ಮಾರಣಹೋಮವಾಯಿತು.  ಇದಕ್ಕೆ ಪ್ರತೀಕಾರವೆಂಬಂತೆ ನಾಥೂರಾಮ್ ಗೂಡ್ಸೆ ಎನ್ನುವಾತನು ೧೯೪೮ರ ಜನವರಿ ೩೦ರಂದು ಮಹಾತ್ಮನನ್ನು ಗುಂಡಿಕ್ಕಿ ಕೊಂದು ಬಿಟ್ಟನು.    

ಗಾಂಧೀಜಿಯವರ ಹೋರಾಟ ತತ್ತ್ವ ಚಿಂತನೆಗಳು ಎಲ್ಲ ಕಾಲಕ್ಕೂ , ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿವೆ.

ಶ್ರೀ ಮಾತೆ ಮಿರಾ ಅದಿತಿ

ಯೋಗಿ ಅರವಿಂದರ ಆಧ್ಯಾತ್ಮಿಕ ಜೀವನದ ಕುರಿತು ಹೇಳುವಾಗ ಶ್ರೀ ಮಾತೆ ಮಿರಾ ಅದಿತಿಯವರನ್ನು ಉಲ್ಲೇಖಿಸದೇ ಹೋದರೆ ಅದು ಅಪೂರ್ಣವಾದಂತೆಯೇ ಸರಿ.  ೧೮೭೮ ರಲ್ಲಿ ಪ್ಯಾರಿಸ್ಸಿನಲ್ಲಿ ಜನಿಸಿದ ಮಿರಾ ರಿಚರ್ಡ್ ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ ೩೬ ನೇ ವಯಸ್ಸಿನಲ್ಲಿ ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುವ ದಂಪತಿಗಳ ಪುತ್ರಿಯಾಗಿದ್ದರೂ ಬಾಲ್ಯದಿಂದಲೂ ಅವರಲ್ಲಿ ಕೆಲವು ಅಲೌಕಿಕ ಗುಣಗಳು ಸಂಪನ್ನವಾಗಿದ್ದವು.  ಮಿರಾ ಅವರ ಪ್ರಥಮ ಭೇಟಿಯಲ್ಲಿಯೇ ಶ್ರೀ ಅರವಿಂದರು ಈ ವೈಶಿಷ್ಟವನ್ನು ಗುರುತಿಸಿದ್ದರು.  
 
೧೯೨೦ ರಲ್ಲಿ ಮಿರಾ ಅವರು ಶಾಶ್ವತವಾಗಿ ಭಾರತದಲ್ಲಿ  ನೆಲೆಸುವ ಪಾಂಡಿಚೆರಿ ಆಶ್ರಮದ ಏಳ್ಗೆಗಾಗಿ, ಆಮೂಲಕ ಶ್ರೀ ಅರವಿಂದರ ’ಪೂರ್ಣ ಯೋಗ’ದ ಪ್ರಸರಣಕ್ಕಾಗಿ ಟೊಂಕಕಟ್ಟಿ ನಿಂತರು.

ಶ್ರೀ ಅರವಿಂದರು ಮಿರಾ ಅವರನ್ನು ತಮಗೆ ಸಮನಾದ ಸಾಧಕಿ ಎಂದೇ ಪರಿಗಣಿಸುತ್ತಿದ್ದರು.  ಶ್ರೀ ಮಾತೆ ಮಿರಾ ಅವರಲ್ಲಿ ಆ ಸಾಮರ್ಥ್ಯವಿದ್ದೇ ಇತ್ತು ಅವರ ಆದೇಶದಂತೆ ಶ್ರೀ ಮಾತೆಯವರು ೧೯೨೬ ರಲ್ಲಿ  ಅರವಿಂದೋ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.  ಮುಂದಿನ ದಿನಗಳಲ್ಲಿ ’ಶ್ರೀ ಅರವಿಂದೋ ಇಂಟರ್ ನ್ಯಾಶನಲ್ ಸೆಂಟರ್ ಆಫ್ ಎಜುಕೇಷನ್’ ಸಂಸ್ಥೆಯನ್ನು ಆರಂಭಿಸಿ ವಿಶ್ವಾದ್ಯಂತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟರು.  ಅರವಿಂದರು ಇಹಲೋಕ ವ್ಯವಹಾರ ಮುಗಿಸಿ ದೀರ್ಘಸಮಾಧಿಗೆ ತೆರಳಿದ ನಂತರ ಶ್ರೀ ಮಾತೆಯವರು ಆಶ್ರಮದ ಅನುಯಾಯಿಗಳಿಗೆ ಪಥದರ್ಶಕರಾಗಿ ಮುಂದುವರೆದರು.

ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಶ್ರೀ ಮಾತೆಯವರು ಆರಂಭಿಸಿದ ’ಅರೋವಿಲ್ಲ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು ಜಗತ್ತಿನ ಎಲ್ಲಾ ಭಾಗದ, ಎಲ್ಲಾ ವರ್ಗದ, ಎಲ್ಲಾ ವಿಧದ ಜನರು ಶಾಂತಿ-ಸೌಹಾರ್ದದಿಂದ ಬಾಳಬೇಕು ಎನ್ನುವುದು ಈ ನಿರ್ಮಾಣದ ಹಿಂದಿನ ಉದ್ಧೇಶವಾಗಿತ್ತು ೧೯೬೮ ರಲ್ಲಿ ಉದ್ಘಾಟನೆಗೊಂಡ ’ಅರೋವಿಲ್ಲ’ ಉದ್ಘಾಟನಾ ಸಮಾರಂಭದಲ್ಲಿ ೧೨೧ ದೇಶಗಳ ಮತ್ತು ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯದಿಂದ ಒಂದು ಮುಷ್ಟಿ ಮಣ್ಣನ್ನು ತಂದು ಆ ಪ್ರದೇಶದಲ್ಲಿ ಸ್ಥಾಪಿಸಿದ್ದರು.  ಇಂದಿಗೆ ಅರೋವಿಲ್ಲ ಪ್ರದೇಶದಲ್ಲಿ ೩೫ ರಾಷ್ಟ್ರಗಳ ಸುಮಾರು ೧೭೦೦ ಜನರು ನೆಲೆಸಿರುವರು.

ಶ್ರೀ ಮಾತೆ ಮೀರಾ ಅದಿತಿ ಅವರು ತಮ್ಮ ೯೫ ನೆಯ ವಯಸ್ಸಿನಲ್ಲಿ ನಿಧನರಾದರು.

ಹಿಂದೂ… ಧರ್ಮ ಮತ್ತು ಸಂಸ್ಕೃತಿ

Posted in ನಮ್ಮ ಇತಿಹಾಸ by yuvashakti on ನವೆಂಬರ್ 8, 2008

ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. ಆಂತರಿಕ ಬೆಳವಣಿಗೆಯ ಪರಿಣಾಮವಾದ ‘ಭಾರತೀಯ ಸಂಸ್ಕೃತಿ’ ಇಂದಿಗೂ ಉಳಿದುಬಂದಿದ್ದರೆ, ಬಾಹ್ಯ ಬೆಳವಣಿಗೆಯ ಭವ್ಯ ಕುರುಹಾಗಿದ್ದ ‘ಸಿಂಧೂ ನಾಗರಿಕತೆ’ ನಶಿಸಿಹೋಯ್ತು.
ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.

ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರ್ಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ. 

ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ, ಒಬ್ಬ ಪ್ರವಾದಿ ಕಟ್ಟಿಕೊಟ್ಟಿದ್ದಲ್ಲ. ಅಥವಾ ಕೆಲವೇ ಮೇಲ್ವರ್ಗದ ಜನರ ಸೊತ್ತೂ ಅಲ್ಲ. ವೇದಗಳಲ್ಲಿ ಉಲ್ಲಿಖಿತವಾಗಿರುವಂತೆ ಇದು ಪ್ರತಿಯೊಂದು ವರ್ಗದ, ವರ್ಣದ ಮಾನವನ ಕೊಡುಗೆ. ಸಿಂಧೂ ನದಿಯ ತಟದಲ್ಲಿ ಅಭಿವೃದ್ಧಿ ಹೊಂದಿದ ಈ ಸಂಸ್ಕೃತಿಯನ್ನು ಸಹಸ್ರಮಾನಗಳ ಹಿಂದಿನಿಂದಲೂ ಒಡನಾಟದಲ್ಲಿರುವ ಪರ್ಷಿಯನ್ನರು ೧ಹಿಂದೂ’ ಎಂದು ಕರೆದರು. (ಅವರಲ್ಲಿ ‘ಸ’ಕಾರ ‘ಹ’ಕಾರವಾಗಿ ಉಚ್ಚರಿಸಲ್ಪಡುತ್ತದೆ)
ಕ್ರಮೇಣ ಹಿಂದೂ ಸಂಸ್ಕೃತಿಯವರು ಆಚರಿಸುತ್ತಿದ್ದ ಸನಾತನ ಧರ್ಮ- ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದೂಗಳಾಗಿಯೂ ಸ್ಥಾಪಿತರಾದರು. ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.

ಸನಾತನ ಧರ್ಮವನ್ನು ‘ಆಧ್ಯಾತ್ಮದ ತೊಟ್ಟಿಲು’ ಎಂದೂ, ‘ಎಲ್ಲ ಧರ್ಮಗಳ ತಾಯಿ’ ಎಂದೂ ಕರೆಯಲಾಗುತ್ತದೆ. ಈ ತೊಟ್ಟಿಲನ್ನು ತೂಗಿದ ಭಾರತ, ಹತ್ತುಹಲವು ಮತಪಂಥಗಳ ಪ್ರಯೋಗಶಾಲೆಯಾಗಿ ಬಳಕೆಯಾಗಿದೆ. ಯಾವುದನ್ನೂ ತಿರಸ್ಕರಿಸದೆ, ಪ್ರತಿಯೊಂದಕ್ಕೂ ತನ್ನೊಡಲಲ್ಲಿ ಜಾಗ ನೀಡಿ ತಾಯ್ತನ ಮೆರೆದಿದೆ.

(ಮುಂದುವರೆಯುವುದು…)

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸ

Posted in ನಮ್ಮ ಇತಿಹಾಸ by yuvashakti on ಸೆಪ್ಟೆಂಬರ್ 17, 2008
 

ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ‘ಚಿಕಾಗೋ ಉಪನ್ಯಾಸ’ ಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ‘ವಿಶ್ವ ವಿಜೇತ ವಿವೇಕಾನಂದ’ ಪುಸ್ತಕದಿಂದ ಸಂಗ್ರಹಿಸಲಾಗಿದೆ.

 

ವಿವೇಕಾನಂದ

 “ಅಮೆರಿಕದ ಸೋದರಿಯರೇ ಮತ್ತು ಸೋದರರೇ!
ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಖ್ರುತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆ’ ಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

 ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ‘ಎಕ್ಸ್ಕ್ಲೂಶನ್’ ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.

ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.

ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;
ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ”

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;
ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- ‘ಯಾರು ಯಾರು ನನ್ನಲ್ಲಿಗೆ ಯವ ಯವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ’

ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆಮತ್ತೆ ಮಾನವನ ರಕ್ತದಿಂದ ತೋಯಿಸಿವೆ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ”

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.

9/11- ಅವತ್ತು ಅಮೆರಿಕೆಯೇನು? ಇಡೀ ಜಗತ್ತೇ ನಡುಗಿತ್ತು!

Posted in ನಮ್ಮ ಇತಿಹಾಸ by yuvashakti on ಸೆಪ್ಟೆಂಬರ್ 10, 2008

ನಡುಗಿತ್ತು ಅಮೆರಿಕ…

ಯಾರೇ ಆಗಲಿ, ತಾವು ಎಷ್ಟೇ ಬಲಶಾಲಿಗಳೆಂದು ಬೀಗಿದರೂ ಅವರಿಗಿಂತ ಸರ್ವಶಕ್ತನಾದ ಭಗವಂತನೊಬ್ಬ ಇದ್ದೇ ಇದ್ದಾನೆ.
ಕ್ರೈಸ್ತ ಜನಾಂಗ ವಿಶ್ವದ ಇತರ ರಾಷ್ಟ್ರಗಳ ಮೇಲೆ ದಾಳಿ ಮಾಡಿ, ಹಿಂಸೆಯಿಂದ, ಕುಯುಕ್ತಿಯಿಂದ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿತು. ಕೊಳ್ಳೆಹೊಡೆದ ಹಣದ ಮದದಿಂದಲೇ ಜಗತ್ತನ್ನು ಅಡಿಯಾಳಗಿಸಿಕೊಳ್ಳಲು ಹವಣಿಸಿತು.
ಒಸಾಮಾ ಬಿನ್ ಲ್ಯಾಡೆನ್, ಇಂತಹ ಮದದಿಂದ ಬೀಗುತ್ತಿದ್ದ ಅಮೆರಿಕೆಯ ಮೇಲೇರಿಹೋಗಿ ಭಯೋತ್ಪಾದನೆಯ ಮೂಲಕ (ಅದಂತೂ ಧರ್ಮಾಂಧತೆಯ ಮತ್ತೊಂದು ಮುಖ) ವರ್ಲ್ಡ್ ಟ್ರೇಡ್ ಬಿಲ್ಡಿಂಗನ್ನು ಕೆಡವಿ ಅಮೆರಿಕೆಯನ್ನು ಗಲಗಲ ಅಲುಗಿಸಿಬಿಟ್ಟ. ಎರಡು ಕ್ರೂರ ಜನಾಂಗಗಳು ಧರ್ಮಾಂಧತೆಯ ಅಂಧಕಾರದಲ್ಲಿ ವರ್ತಿಸಿದ ಪರಿ ಇದು. ಹಾಗೆ ಲ್ಯಾಡೆನ್ ವಿಮಾನದ ಮೂಲಕ ಕಟ್ಟಡಗಳ ಮೇಲೆ ತನ್ನ ಬಂಟರನ್ನು ಛೂಬಿಟ್ಟಿದ್ದು, ಈಗ್ಗೆ ಎಳು ವರ್ಷಗಳ ಕೆಳಗೆ, 2001ರ ಸೆಪ್ಟೆಂಬರ್ 11ರಂದು.

ಅವತ್ತು ಇಡೀ ಜಗತ್ತೇ ನಡುಗಿತ್ತು!

ಸುಮಾರು ನೂರಾ ಹದಿನೈದು ವರ್ಷಗಳ ಹಿಂದಿನ ಮಾತು. ಆಗ ಕೂಡ ಜಗತ್ತಿನ ಇತರೆಲ್ಲ ಧರ್ಮಗಳು ನಡುಗಿದ್ದವು. ತಲೆ ತಗ್ಗಿಸಿ ಕುಳಿತಿದ್ದವು. ಆಗ ಯಾವುದೇ ಹಿಂಸೆ ನಡೆದಿರಲಿಲ್ಲ. ಹಾಗೆ ನಡುಗಿಸಿದವನ ಮನದಲ್ಲಿ ಮೌಢ್ಯವಿರಲಿಲ್ಲ, ಆತ ಧರ್ಮಾಂಧನೂ ಆಗಿರಲಿಲ್ಲ.
ಕಾವಿಯುಟ್ಟ, ಉದಾತ್ತ ನಿಲುವಿನ ಆ ವೀರ ಸಂನ್ಯಾಸಿ ತನ್ನ ಧರ್ಮಕ್ಕೆ ತಕ್ಕ ಸಂಸ್ಕಾರದಿಂದ ಜಗತ್ತನ್ನುದ್ದೇಶಿಸಿ ಮಾತನಾಡಿದ್ದ. ನಿಜವಾದ ಧರ್ಮ ಇಂಥದ್ದು ಎಂದು ಗುಡುಗಿದ್ದ. ಆವರೆಗೂ ಭಾರತೀಯರೆಂದರೆ ಹುಟ್ಟಿದ ಮಗುವನ್ನು ಮೊಸಳೆಗೆಸೆಯುವವರು ಎಂಬ ಮೌಢ್ಯಕ್ಕೆ ಬಲಿಯಾಗಿದ್ದ ಜನ ಆ ಸಿಂಹ ವಾಣಿಗೆ ನಡುಗಿಹೋದರು. ಭರತೀಯತೆಯ, ಹಿಂದುತ್ವದ ನೈಜ ಪರಿಚಯ ಅಂದು ಜಗತ್ತಿನ ಮೂಲೆ ಮೂಲೆಗಳನ್ನೂ ತಲುಪಿತು. ತನ್ನ ನಾಡಿನಲ್ಲಿ ನಿರಂತರ ದೌರ್ಜನ್ಯ ನಡೆಸುತ್ತಿದ್ದ ಕ್ರೈಸ್ತರಿಗೆ ಆತ ಅಮೆರಿಕೆಯ ನೆಲದಲ್ಲಿ ನಿಂತು ಛಡಿಯೇಟು ಕೊಟ್ಟಿದ್ದ.
ಅದು, ವಿಶ್ವ ಧರ್ಮ ಸಮ್ಮೆಳನದ ಸಂದರ್ಭ. ಸ್ಥಳ- ಅಮೆರಿಕೆಯ ಚಿಕಾಗೋ, ದಿನಾಂಕ- 1893ರ ಸೆಪ್ಟೆಂಬರ್ 11 !
ಹಾಗೆ ಹಿಂದುತ್ತ್ವದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವ್ಯಕ್ತಿ- ಸ್ವಾಮಿ ವಿವೇಕಾನಂದ!!

ಧರ್ಮಾಂಧತೆಗೂ ಧರ್ಮ ಶ್ರದ್ಧೆಗೂ ಎಷ್ಟೊಂದು ವ್ಯತ್ಯಾಸ!?
ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಆಡಿದ ಮಾತುಗಳ ಸಾರಾಂಶ ನೀಡಲಿದ್ದೇವೆ ಕನ್ನಡದಲ್ಲಿ, ಅತಿ ಶೀಘ್ರದಲ್ಲಿ.

ಸ್ವಾತಂತ್ರ್ಯೋತ್ಸವಕ್ಕೆ ಮುನ್ನ…

Posted in ನಮ್ಮ ಇತಿಹಾಸ by yuvashakti on ಆಗಷ್ಟ್ 7, 2008

ಇನ್ನೊಂದು ವಾರ ಅನ್ನುವಷ್ಟರಲ್ಲಿ ನಮ್ಮ ಸ್ವಾತಂತ್ರ್ಯೋತ್ಸವ ಬರಲಿದೆ. ಅದಕ್ಕೆ ಮುನ್ನ ಹೀಗೊಂದು  ಅವಲೋಕನ ಮಾಡಿಕೊಳ್ಳೋಣವೆನಿಸಿ ಬರೆಯುತ್ತಿದ್ದೇನೆ.

ಭಾರತ ಸ್ವಾತಂತ್ರ್ಯ ಹೋರಾಟ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಹುದೊಡ್ಡ ಪ್ರಕ್ರಿಯೆ. ಅದೇನೂ ಧಿಡೀರನೆ ಬಂದು ಕದ ತಟ್ಟಿದ್ದಲ್ಲ.
“ಆಂಗ್ಲರು ನಮ್ಮನ್ನು ಲೂಟಿ ಮಾಡಬಹುದಾಗಿದ್ದಷ್ಟನ್ನೂ ಮಾಡಿ ಮುಗಿಸಿ, ಇನ್ನು ಇಲ್ಲೇನೂ ದಕ್ಕುವುದಿಲ್ಲ ಎಂದು ಅರಿವಾದ ನಂತರವಷ್ಟೆ ಕಾಲು ಕಿತ್ತಿದ್ದು” ಎಂದು ಯುವಕನೊಬ್ಬ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹಾಗಾದರೆ…?
ಹಾಗಾದರೆ ನಮ್ಮವರು ಅಷ್ಟೆಲ್ಲ ಹೋರಾಡುವ ಅಗತ್ಯವೇ ಇರಲಿಲ್ಲವಾ?  ಹೇಗಿದ್ದರೂ ಮೆದ್ದು ಮುಗಿದ ನಂತರ ಅವರೇ ಜಾಗ ಖಾಲಿ ಮಾಡುತ್ತಿದ್ದರಲ್ಲ!?
– ಹೀಗಂತ ಯೋಚಿಸುವುದೇ ಬೇಡವೆನಿಸಿತು. ಏಕೆಂದರೆ “ಭಾರತದಲ್ಲಿ ಇನ್ನು ಏನೂ ಉಳಿದಿಲ್ಲ” ಅನ್ನೋದು ಆ ಯುವಕನ ತಪ್ಪು ತಿಳುವಳಿಕೆ ಮಾತ್ರ.
ನಿಜ… ನಮ್ಮಲ್ಲಿ ಅಮೆರಿಕೆಯಲ್ಲಿರುವಂಥ ರೋಡುಗಳಿಲ್ಲ. ಇಂಗ್ಲೆಂಡಿನಲ್ಲಿರುವಂಥ ಮೂಲಭೂತ ಸೌಕರ್ಯಗಳಿಲ್ಲ. ದೊಡ್ಡ ದೊಡ್ಡ ಕಟ್ಟಡಗಳಿಲ್ಲ.
ಆದರೆ…
ಆದರೆ,
ನಮ್ಮಲ್ಲಿ ಸಂತೃಪ್ತಿ ಇದೆ. ನಮ್ಮಲ್ಲಿ ಆಧ್ಯಾತ್ಮಿಕತೆ ಇದೆ. ಯೋಗವಿದೆ. ಬುದ್ಧಿವಂತಿಕೆಯಿದೆ. ಕೌಶಲ್ಯವಿದೆ. ಕುಟುಂಬಗಳಿವೆ! ಬಾಂಧವ್ಯಗಳು ಗಟ್ಟಿಯಾಗಿವೆ!! ( ಈಗೀಗ ಹೊಂದಾಣಿಕೆ ಕಡಿಮೆಯಾಗಿ ಛಿದ್ರವಾಗ್ತಿದೇವೆಂದರೂ ಅದು ಮೇರೆ ಮೀರಿ ಹೋಗಿಲ್ಲ ಅನ್ನುವುದು ವಾಸ್ತವ ಸತ್ಯ) ಕಳ್ಳ- ಕಾಕರು, ಭ್ರಷ್ಟರು, ಬಡ- ಭಿಕ್ಷುಕರು ಬಿಡಿ, ಎಲ್ಲೆಡೆಯೂ ಇರುವರು. ಅಮೆರಿಕ- ಯುರೋಪುಗಳಲ್ಲೂ! (ಅವೇನೂ ದೇವಲೋಕಗಳಲ್ಲ ಅನ್ನೋದು ನೆನಪಿರಲಿ)
ಅದೆಲ್ಲ ಯಾಕೆ? ನಮಗೆ ಇನ್ಯಾರೂ ಹೇಳಿಕೊಳ್ಳಲಾಗದಷ್ಟು ಭವ್ಯವಾದ ಇತಿಹಾಸವಿದೆ! ಆದರೆ ನಾವದನ್ನು ಹಳೆಯ ಪ್ರತಿಷ್ಠೆಗಳ ಗೋರಿ ಎಂದು ಬಗೆಯದೆ ಸದೃಢ ರಾಷ್ಟ್ರ ನಿರ್ಮಾಣದ ಬುನಾದಿ ಎಂದರಿತು ಸಾಗಿದರೆ ಯಶಸ್ಸು ಸದಾ ನಮ್ಮ ಜತೆಗಿರುತ್ತದೆ.

ಹೌದು. ಕಳೆದ ಸಾರ್ತಿಯೋ, ಅದರ ಹಿಂದಿನ ಸರ್ತಿಯೋ ಮನ ಮೋಹನ ಸಿಂಗರು ಹೇಳಿದ್ದರು. ಬ್ರಿಟಿಷರು ಬಾರದಿದ್ದರೆ ನಾವು ಇಷ್ಟೆಲ್ಲ ಮುಂದುವರೆಯುತ್ತಿರಲಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಇದು, “ಈಗ್ಯಾಕೆ ಮತ್ತೆ ಸಿಂಗ್ ಹೆಳಿದ ವಿಷಯ ಕೆದಕಬೇಕು?” ಅಂದು ಸುಮ್ಮನಾಗುವ ಸಂಗತಿಯಲ್ಲ… ಏಕೆಂದರೆ ರಾಷ್ಟ್ರದ ಜಾವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನ ಇಂತಹ ಅಪ್ರಬುದ್ಧ ಹೇಳಿಕೆ ಅದೆಷ್ಟು ಜನರನ್ನು ಅದೇ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ ಅನ್ನುವ ಅರಿವು ಇದೆಯೆ?
ವಾಸ್ತವವಾಗಿ ನಮಗೂ ಕೂಡ ಬಾಲ್ಯದಲ್ಲಿ (ಕಾನ್ವೆಂಟಿನಲ್ಲಿ) ಹೀಗೇ ಹೇಳಿಕೊಡಲಾಗಿತ್ತು. ನಾನು, ನನ್ನಂಥಲಕ್ಷ ಲಕ್ಷ ವಿದ್ಯಾರ್ಥಿನಿಯರು ಅದನ್ನೆ ನೆಚ್ಚಿಕೊಂಡಿದ್ದೆವು. ಆದರೆ, ಯಾವಾಗ ಸಂಸ್ಕೃತದ ಪರಿಚಯವಾಯ್ತೋ, ಜಾನಪದದ ಅಧ್ಯಯನ ಶುರುವಾಯ್ತೋ, ಆಯುರ್ವೇದ- ಮನೆ ಮದ್ದುಗಳ, ಹಳ್ಳಿ ಜನರ ತಾಂತ್ರಿಕ ಕೌಶಲಗಳ, ಹಳೆ ಹಳೆಯ ಗ್ರಂಥಗಳ ಪರಿಚಯವಾಯ್ತೋ ನನ್ನ ಆವರೆಗಿನ ತಿಳುವಳಿಕೆ ಬಗ್ಗೆ ಅತೀವ ನಾಚಿಕೆ ಶುರುವಾಯ್ತು.

ಮೆಹರೂಲಿ ಕಂಬ, ಕುತುಬ್ ಮಿನಾರ್, ಭವ್ಯ ದೇವಾಲಯಗಳು, ಏಕ ಶಿಲಾ ವಿಗ್ರಹಗಳು, ಕೋಟೆ ಕೊತ್ತಲಗಳು… ಇವೆಲ್ಲ ಆಂಗ್ಲರಿಗಿಂತ ಮೊದಲೇ ನಿರ್ಮಿಸಲ್ಪಟ್ಟಿದ್ದಲ್ಲವೆ?
ನಾಗಾರ್ಜುನ (ರಾಸಾಯನ ಶಾಸ್ತ್ರ), ಆರ್ಯಭಟ (ಖಗೋಳ), ಭಾಸ್ಕರ (ಗಣಿತ), ಕಲ್ಹಣ (ಇತಿಹಸಕಾರ), ಚರಕ, ಸುಶ್ರುತ (ಆಯುರ್ವೇದ) ಇವರೆಲ್ಲ ಈ ಕ್ಷಣಕ್ಕೆ ನೆನಪಾಗುವ ಹೆಸರುಗಳಾದರೆ, ಜ್ಯಮಿತಿ ತತ್ತ್ವಗಳಿಗನುಗುಣವಾಗಿ ಯಜ್ಞವೇದಿಗಳನ್ನು ರಚಿಸುತ್ತಿದ್ದ ಋಷಿ ಮುನಿಗಳು, ವಾಸ್ತು ಕಲೆಯಲ್ಲಿ ನಿಪುಣರಾಗಿದ್ದ ಸಾಮಾನ್ಯ ಶಿಲ್ಪಿಗಳು, ಬಿಡುವಿನ ವೇಳೆಯಲ್ಲಿ ಬ್ರಹ್ಮ ತತ್ತ್ವ ಹರಟುತ್ತಿದ್ದ ಬ್ರಹ್ಮವಾದಿನಿಯರು…ಇವರೆಲ್ಲ ಯವ ಆಂಗ್ಲ ಶಿಕ್ಷಣವನ್ನೂ ಪಡೆದವರಾಗಿರಲಿಲ್ಲ!

ಆದರೂ… ನಮ್ಮ ಪೀಳಿಗೆ ಹೇಳುತ್ತದೆ, ಇಂಗ್ಲೀಷಿಲ್ಲದಿದ್ದರೆ ನಾವು ಮುಂದುವರೆಯೋದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳೋದು ಸಾಧ್ಯವಾಗ್ತಲೇ ಇರಲಿಲ್ಲ!
ಹ್ಹ! ಜಪಾನ್, ಚೀನಾ, ಅರಬ್ ರಾಷ್ಟ್ರಗಳು, ಇಸ್ರೇಲ್… ಮತ್ತೂ ಉದಾಹರಣೆ ಬೇಕೆ, ಇಂಗ್ಲೀಶಿಗೆ ಮಣೆ ಹಾಕದೆ ಪ್ರಗತಿದೆಸೆಯಲ್ಲಿ ದಾಪುಗಾಲಿಕ್ಕುತ್ತಿರುವುದಕ್ಕೆ? ಹಾಗೆಂದು ಇಲ್ಲಿ ಪ್ರ ಭಾಷೆಗಳ ಕಲಿಕೆಗೆ ಯಾರ ವಿರೋಧವೂ ಇಲ್ಲ. ಆದರೆ ಆ ನೆವದಲ್ಲಿ ನಮ್ಮದನ್ನು ಕೀಳಾಗಿ ಕಂಡು ಹಳಿಯೋದಿದೆಯಲ್ಲ… ಅದು ಶುದ್ಧ ಮೂರ್ಖತನದ ಮಾತು.

ನಮ್ಮ ಮೊದಲ ಪ್ರಧಾನಿ ನೆಹರೂಗಂತೂ ಭಾರತದ ರಾಷ್ಟ್ರ ಭಾಷೆ ಇಂಗ್ಲೀಶ್ ಆಗಬೇಕು ಅನ್ನುವ ಕನಸಿತ್ತು. ನಮ್ಮ ಸುಕೃತ! ಅದು ಕನಸಾಗಿಯೆ ಉಳಿದುಬಿಡ್ತು!!
ಇಷ್ಟಕ್ಕೂ, ನಮ್ಮ ದೇಶದಿಂದ ‘ಸೊನ್ನೆ’ಯನ್ನು ಜಗತ್ತು ಎರವಲು ಪಡೆಯಿತಲ್ಲ, ಆಗ ನಾವದನ್ನ ಇಂಗ್ಲೀಶಲ್ಲಿ ಬರೆದಿಟ್ಟಿದ್ದೆವಾ? ಗ್ರೀಕಿನೊಂದಿಗೆ ವ್ಯಾಪಾರ ಸಂಬಂಧವಿರಿಸಿಕೊಂಡಿದ್ದೆವಲ್ಲ, ಆಗ ಇಂಗ್ಲೀಶ್ ಕಲಿತಿದ್ದೆವಾ? ಯಾವ ನಮ್ಮ ಮಸ್ಲಿನ್ ಬಟ್ಟೆಗೋಸ್ಕರ, ಮಸಾಲಾ ಪದಾರ್ಥಗಳಿಗೋಸ್ಕರ, ಚಿನ್ನ-ಮುತ್ತು-ವಜ್ರಗಳಿಗೋಸ್ಕರ ಅನ್ಯರು ಮತ್ತೆ ಮತ್ತೆ ದುರಾಕ್ರಮಣ ಮಾಡಿ ಕೊಳ್ಳೆ ಹೊಡೆದು ಹೋದರಲ್ಲ, ಆಗ ಅವರಿಗೆಲ್ಲ ನಮ್ಮಲ್ಲಿ ಸಂಪತ್ತಿರುವ ಮಾಹಿತಿ ಇಂಗ್ಲೀಶಿನ ಮೂಲಕವೇ ತಿಳಿದುದಾಗಿತ್ತಾ!?
ಇಷ್ಟಕ್ಕೂ ಈಗ ನಾವು ಇಂಗ್ಲಿಶ್ ಕಲಿತು ಕಡಿಯುತ್ತಿರೋದೇನು? ಪಾಶ್ಚಾತ್ಯರ ಗುಲಾಮಗಿರಿ! ಕಾಲ್ ಸೆಂಟರು, ಬಿಪಿಓಗಳಲ್ಲಿ ಪರಿಚಾರಿಕೆ!! ಪರಿಣಾಮ? ಕಷ್ಟ ಪಡದೆ ಉದ್ಯೋಗ, ಕೈ ತುಂಬಿ ಚೆಲ್ಲುವಷ್ಟು ಹಣ, ಮೌಲ್ಯಗಳ ಕುಸಿತ, ಪ್ರಗತಿಯಲ್ಲಿ ಇಳಿಕೆ!
ಇತ್ತೀಚೆಗೆ ಟೆಕಿಗಳು, ಕಾಲ್ಸೆಂಟರಿನ ಯುವಕರು ಒಂದಷ್ಟು ಸಮಾಜ ಮುಖಿ ಕೆಲಸಗಳಲ್ಲಿ ಆಸಕ್ತಿ ತೋರಿಸ್ತಿರೋದು ಒಳ್ಳೆಯ ಬೆಳವಣಿಗೆ. ಆದರೆ ಆ ಉದ್ಯೋಗಗಳಿಂದಾಗ್ತಿರೋ ಸೈಡ್ ಎಫೆಕ್ಟ್ ಗಳಿಗೆ ಅಷ್ಟು ಮಾತ್ರ ಸಾಲದು. ಆ ಬಗೆಯ ಉದ್ಯೋಗಿಗಳಲ್ಲಿ ರಾಷ್ಟ್ರ ಪ್ರಜ್ಞೆ ವ್ಯಾಪಕವಾಗಿ ಬೆಳೆಯಬೇಕು.

ಸದ್ಯಕ್ಕೆ ಈ ಹರಟೆ ನಿಲ್ಲಿಸುವೆ. ಅದಕ್ಕೆ ಮುನ್ನ, ಮೆಕಾಲೆ ಎನ್ನುವ ಆಂಗ್ಲನೊಬ್ಬ ನಮ್ಮ ರಾಷ್ಟ್ರವನ್ನು ನೋಡಿ ದಂಗುಬಡಿದು ಬಡಬಡಿಸಿದ್ದನ್ನು ಇಲ್ಲಿ ನೀಡುತ್ತಿರುವೆ.

                                                     

“ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದೆ. ಆದರೆ ಎಲ್ಲೂ ನನಗೆ ಒಬ್ಬ ಭಿಕ್ಷುಕನಾಗಲೀ ಕಳ್ಳನಾಗಲೀ ಕಾಣಸಿಗಲಿಲ್ಲ. ಈ ದೇಶದಲ್ಲಿ ನಾನು ಎಷ್ಟೊಂದು ಸಂಪತ್ತನ್ನು, ನೈತಿಕ ಮೌಲ್ಯಗಳನ್ನು, ಜನರ ಔದಾರ್ಯವನ್ನು, ಕೌಶಲ್ಯವನ್ನು ಕಂಡೆನೆಂದರೆ, ಈ ದೇಶದ ಬೆನ್ನೆಲುಬಾಗಿರುವ ಆಧ್ಯಾತ್ಮ ಮತ್ತು ಸಂಸ್ಕೃತಿಗಳನ್ನು ಮುರಿಯದೆ ನಾವು ಇದನ್ನು ವಶಪಡಿಸಿಕೊಳ್ಳೋದು ಸಾಧ್ಯವೇ ಇಲ್ಲ ಎಂದೆನಿಸುತ್ತದೆ. ಆದ್ದರಿಂದ ನನ್ನ ಸೂಚನೆಯೇನೆಂದರೆ, ನಾವು ಭಾರತದ ಶಿಕ್ಷಣ ಪದ್ಧತಿ ಮತ್ತು ಸಂಸ್ಕೃತಿಯ ಜಾಗದಲ್ಲಿ ನಮ್ಮದನ್ನು ತಂದು, ಭಾರತೀಯರೆಲ್ಲರೂ ಪರದೇಶದ ಮತ್ತು ಇಂಗ್ಲೀಶಿನ ಎಲ್ಲವೂ ನಮ್ಮದಕ್ಕಿಂತ ಉತ್ಕೃಷ್ಟ ಎಂದು ಯೋಚಿಸುವಂತಾಗಬೇಕು. ಆಗ ಖಚಿತವಾಗಿಯೂ ಅವರು ತಮ್ಮ ಸ್ವಾಭಿಮಾನ ಮತ್ತು ಸಂಸ್ಕೃತಿಗಳನ್ನು ಕಳೆದುಕೊಂಡು, ನಾವು ಬಯಸುವಂತೆ ನಿಜವಾಗಿಯೂ ನಮ್ಮ ಹಿಡಿತಕ್ಕೆ ಸಿಗುತ್ತಾರೆ”

ಹಾಗಾದರೆ… ಮೆಕಾಲೆ ಬಿತ್ತಿದ ವಿಷ ಬೀಜ  ನಿರಂತರವಾಗಿ ವಿಷ ಫಲಗಳನ್ನು ನೀಡುತ್ತಿರುವಂತೆ ನಾವು ಜತನದಿಂದ ಕಾಪಾಡಿಕೊಂದು ಬರುತ್ತಿದ್ದೇವಾ?

(ಚಿತ್ರ ಕೃಪೆ, moralstories.wordpress.com)

ನದೀ… ಜೀವ ನಾಡಿ…

Posted in ನಮ್ಮ ಇತಿಹಾಸ by yuvashakti on ಆಗಷ್ಟ್ 1, 2008

ಭಾರತೀಯರಿಗೆ, ‘ನದಿ’ ಬರೀ ಹರಿಯುವ ನೀರು ಮಾತ್ರವಲ್ಲ. ಆಕೆ ‘ನದೀ’ ದೇವತೆ. ಹೀಗಾಗಿ ವೇದ ವ್ಯಾಸರು ನದಿಗಳನ್ನು ವಿಶ್ವ ಮಾತರಃ ಎಂದಿದ್ದಾರೆ. ಋಗ್ವೇದದಲ್ಲಿ ನದಿಗಳನ್ನು ‘ಆಪೋ ದೇವತಾ’ ಎಂದು ಕರೆದು ಗೌರವಿಸಿದ್ದಾರೆ. ಅದು ಪಾವನ ತೀರ್ಥ. ಮೈಮನ ಶುದ್ಧಗೊಳಿಸುವ ಪವಿತ್ರ ಸಾಧನ. ಹಾಗಾಗಿ ನಮ್ಮ ಪ್ರಯಾಣಗಳೆಲ್ಲವು ತೀರ್ಥಯಾತ್ರೆ. ನಮ್ಮ ಯಾತ್ರೆಗಳಲೆಲ್ಲಾ ತೀರ್ಥಸ್ನಾನಕ್ಕೆ ಬಹು ಪ್ರಾಮುಖ್ಯತೆ.
 ನಮ್ಮ ರಾಷ್ಟ್ರದ ಎಲ್ಲಾ ನದಿಗಳು, ಅಷ್ಟ ಕುಲ ಪರ್ವತಗಳಲ್ಲಿ ಜನ್ಮ ತಾಳುತ್ತವೆ. ಇಲ್ಲಿ ಕೆಲವು ವೇದ-ಪುರಾಣೋಕ್ತ ನದಿಗಳ ಪುರಾತನ ಹಾಗೂ ಇಂದಿನ ಬಳಕೆಯ ಹೆಸರುಗಳನ್ನು ನೀಡಲಾಗಿದೆ.

ಹಿಮಾಲಯ

“ದೇವತಾತ್ಮಾ ಹಿಮಲಯಃ” ಎಂದು ಹಿಮಾಲಯ ಪರ್ವತ ಶ್ರೇಣಿಯನ್ನು ಶಾಸ್ತ್ರಗಳು ಬಣ್ಣಿಸಿವೆ.  ಹಿಮಾಲಯದಲ್ಲಿ ಜನ್ಮ ತಳೆವ ನದಿಗಳು, ಪೂರ್ವ ಹಾಗೂ ಪಶ್ಚಿಮಗಳೆರಡೂ ದಿಕ್ಕಿಗೆ ಹರಿಯುವುದು ವಿಶೇಷವಾಗಿದೆ.

ಪೂರ್ವಾಭಿಮುಖ ನದಿಗಳು: ಗಂಗಾ, ಯಮುನಾ, ಗೋಮತಿ, ಸರಯೂ (ಗೋಗ್ರ),
ರಕ್ಷು (ರಾಮ ಗಂಗಾ) ಗಂಡಕಿ, ಕೌಶಿಕಿ (ಕೇಶಿ) ಲೋಹಿತ್ಯಾ (ಬ್ರಹ್ಮಪುತ್ರಾ)

ಪಶ್ಮಿಮಾಭಿಮುಖ ನದಿಗಳು : ಸರಸ್ವತಿ, ಸಿಂಧೂ, ಚಂದ್ರಭಾಗಾ (ಜೀನಬ್) ಶತ್ರುರಿ, (ಸಟ್ಲೇಜ್) ವಿತಸ್ತಾ (ಝೇಲಂ) ಇರಾವತಿ (ರಾವಿ) ತೂಹು, ಬಹುರಾ (ರಾಸಿ) ವೃಷಧೃತಿ (ಚಿತುಗಾ) ವಿಶಾಸಾ (ಬಿಯಾಸ್) ದೇವಿಕಾ (ಡೇನ್)

ಅರಾವಳಿ ಅಥವಾ ಪಾರಿಯಾತ್ರ

ಇಲ್ಲಿ ಹುಟ್ಟುವ ಎಲ್ಲಾ ಪ್ರವಾಹಗಳು ಪಶ್ಚಿಮ ಸಮುದ್ರ ಸೇರುತ್ತವೆ. ಹಲವು ನದಿಗಳು, ಪ್ರಮುಖ ಪ್ರವಾಹಗಳಲ್ಲಿ ಒಂದಾಗಿ, ಸಮುದ್ರ ಸೇರುತ್ತವೆ. ಹಿಮಾಲಯದ ನದಿಗಳಿಗೆ ಹೋಲಿಸಿದಾಗ ಉದ್ದ ಹೆಚ್ಚೇನೂ ಇಲ್ಲವಾದರೂ, ಇವು ಹರಿಯುವ ಪಾತ್ರದ ಪರಿಸರ ಅತ್ಯಂತ ರಮಣೀಯವಾಗಿ ಕಂಗೊಳಿಸುತ್ತದೆ.
 ವೇದಸ್ಮೃತಿ (ಬನಾಸ್), ವೇದವತಿ (ಬೀರಫ್) ವೃತ್ರಘ್ನ (ಉತ್ತಂಗನ) ವೇಣ್ಯ, ನಂದಿನಿ (ಸಾಬರ ಮತಿ), ಸದಾನೀರ್ (ಪಾರ್ವತಿ), ಚರ್ಮಣ್ಯತಿ (ಚಂಬಲ್) ವಿದುಶ (ಬೇಸ್) ವೇಣುಮತಿ (ಬೇತಾರ್) ಸತ್ತಾ ಅಥವಾ ಆವಂತಿ ಮೊದಲಾದವು ಅರಾವಳಿಯಿಂದ ಹುಟ್ಟುತ್ತವೆ.

ಋಕ್ಷ ಪರ್ವತ

 ಮಂದಾಕಿನಿ, ದಶಾರ್ಣ (ಧಸಾನ್), ಚಿತ್ರಕೂಟ, ತಮಸಾ (ತೋಸ್) ಪಿಪ್ಪಲಿ, ಶ್ರೇಣಿ, (ದೈಸುನೇ) ಪಿಶಾಚಿಕಾ, ಕರಮೋದಾ (ಕರ್ಮನಾಶಾ), ನೀಲೋತ್ಪಲಾ, ವಿಮಲಾ (ಬೇರಾಸ್), ಚಂಚಲಾ (ಜಮ್ನಿ), ಬಾಲುವಾಹಿನಿ, ಶ್ರುತಿ  ಮಿತಿ, ಶಕುಲಿ, ತ್ರಿದಿವಾ ಮೊದಲಾದ ವೇದೋಕ್ತ, ಪುರಾಣೋಕ್ತ ಪುಣ್ಯ ಪ್ರವಾಹಗಳು, ಇಲ್ಲಿಂದ ಹುಟ್ಟಿ ಹರಿಯುತ್ತವೆ.
 ಇವುಗಳು, ನೇರವಾಗಿ, ಸಾಗರ ಸೇರುವುದಿಲ್ಲ. ಬದಲಾಗಿ, ಮುಖ್ಯ ಪ್ರವಾಹಗಳೊಂದಿಗೆ ಸಂಗಮಿಸಿ, ಸಂಭ್ರಮಿಸುತ್ತವೆ. ರಾಮಾಯಣಾದಿ ಇತಿಹಾಸ ಘಟನೆಗಳು, ಪುರಾಣೋಕ್ತ ವಿವಿಧ ಪ್ರಸಂಗಗಳಿಗೆ ಈ ನದಿಗಳು ಸಾಕ್ಷಿಯಾಗಿರುವುದರಿಂದ, ಜನ ಮಾನಸದಲ್ಲಿ ಶ್ರದ್ಧಾ ಕೇಂದ್ರಗಳಾಗಿ ವಿಕಸಿತವಾಗಿವೆ.

ವಿಂಧ್ಯ ಪರ್ವತ

ವಿಂಧ್ಯ ಪರ್ವತದ ಪ್ರವಾಹಗಳು, ದಕ್ಷಿಣಾಭಿಮುಖವಾಗಿ ಪೂರ್ವ ದಿಕ್ಕಿಗೆ ಹರಿಯುವಂತೆ, ಕೆಲವು ಉತ್ತರಾಭಿಮುಖಿಯಾಗಿ ಪಶ್ಚಿಮದ ಕಡೆಗೆ ಹರಿಯುತ್ತವೆ. ಇದಲ್ಲದೆ ಸಮ ದಿಕ್ಕಿನಲ್ಲಿ ಹರಿದು, ಪೂರ್ವ, ಪಶ್ಚಿಮ ಸಮುದ್ರಗಳೆರಡೂ ಸೇರುತ್ತವೆ. ಈ ದೃಷ್ಟಿಯಿಂದ ಇವು ಹಿಮಾಲಯದ ನದಿಗಳಂತೆ ವಿಶೇಷವಾಗಿವೆ. ಪಾತ್ರದಲ್ಲಿ ಹಲವು ನದಿಗಳು, ಹಿಮಾಲಯದ ನದಿಗಳಂತೆ, ಅಗಲವೂ, ಉದ್ದವೂ ಆಗಿವೆ.
 ಪಯೋಷ್ಟೋ, ನಿಬೇಂದ್ಯ (ಸೇವೋಜ್), ತಾಪಿ, ನೀಷಧಾವತಿ ವೇಣೂ (ವೈಣ ಗಂಗಾ) ವೈತರಣೀ (ಚೇತೃಣಿ) ಕುಮದ್ವತಿ (ಪೂರ್ಣರೇಖಾ) ತೇಯಾ (ಬ್ರಹ್ಮಶ್ರೀ) ಮಹಾಗೌರೇ (ದಾಮೋದರ) ಪೂರ್ಣಶೋಣ (ಸೇನಾ), ಮಹಾನದಿ, ನರ್ಮದಾ, ಇವು ವಿಂಧ್ಯಜನ್ಯ ಪ್ರಮುಖ ನದಿಗಳಾಗಿವೆ. ನರ್ಮದೆಯು ಉತ್ತರಾಭಿಮುಖವಾಗಿ ಹರಿದು, ಗುಜರಾತ್‌ನಲ್ಲಿ ಪಶ್ಚಿಮ ಸಮುದ್ರ ಸೇರುತ್ತಾಳೆ. ಜಗತ್ತಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಏಕಮಾತ್ರ ನದಿ ಇದಾಗಿದೆ.

ಸಹ್ಯ ಪರ್ವತ ನದಿಗಳು

ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.
 ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ  ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!

ಮಲಯ ಪರ್ವತ

ಕೃತಮಾಲಾ (ಬೈಗಾಯೀ) ತಾಮ್ರ ಪರ್ಣಿ, ಪುಷ್ಪಜಾ (ಪಂಬೇಲ್) ಸತ್ಫಲಾವತಿ, ಪೂರ್ಣಾ (ಪೇರಿಯಾಲ್) ಮೊದಲಾದ ನದಿಗಳು, ‘ಮಲಯ’ ಪ್ರದೇಶದ ಪುಣ್ಯ ತೀರ್ಥಗಳೆಂದು ಹೆಸರಾಗಿವೆ. ಇವೆಲ್ಲವೂ ದಕ್ಷಿಣಾಭಿಮುಖವಾಗಿ, ಪಶ್ಚಿಮ ಸಮುದ್ರವನ್ನು ಸೇರುತ್ತವೆ. ನೈಸರ್ಗಿಕ ಗಿಡ ಮೂಲಿಕಾ ಪ್ರದೇಶಗಳಲ್ಲಿ ಹರಿದು ಬರುವುದು ಇವುಗಳ ವಿಶೇಷವಾಗಿದೆ. ಬಹು ಅಪರೂಪವಾದ ದೇವತಾರ್ಚನ ವಿಧಿಗಳು, ಇಲ್ಲಿ ರೂಢಿಗತವಾಗಿವೆ. ಆಯುರ್ವೇದಾದಿ ಔಷಧಿ eನಗಳ ದೇವತೆ ‘ಧನ್ವಂತರಿ’ಯ ಆವಾಸಸ್ಥಾನ ಮಲಯ ಪರ್ವತವಾಗಿದ್ದು, ಆತನ ದೇವಾಲಯ ಸಹ ಇಲ್ಲಿರುವುದು ವಿಶೇಷ. (ಕಾಲಟಿಯಿಂದ ೧೦ ಕಿ.ಮಿ ದೂರ)

ಮಹೇಂದ್ರ ಪರ್ವತ

 ತ್ರಿಸಾಮಾ, ಋಷ ಕುಲ್ಯಾ, ಇಕ್ಷುಲಾ, ವೇಗವತಿ, ಲಾರಿ ಗೂಲಿನ, ಮಂಶಾಧಾರಾ, ಮಹೇಂದ್ರ ತನಯಾ, ಮುಂತಾದ ನದಿಗಳು ಹುಟ್ಟುತ್ತವೆ. ಉನ್ನತವಾದ ಜಲಪಾತಗಳನ್ನು ಅವು ಸೃಷ್ಪಿಸುತ್ತವೆ. ಭೋರ್ಗರತ ಇವುಗಳ ಪ್ರಮುಖ ಲಕ್ಷಣ. ಅನೇಕ ಋಷಿಗಳು ಇವುಗಳ ತೀರದಲ್ಲಿ ತಪೋನಿರತರಾಗಿದ್ದು, ಆಶ್ರಮ ನಿರ್ಮಿಸಿಕೊಂಡು ಮಂತ್ರ ದ್ರಷ್ಟಾರರೆನಿಸಿದ್ದರು.

ಶಕ್ತಿ ಪರ್ವತ

ಋಷಕಾ, ಸುಕುಮಾರಿ, ಮದಂಗಾ, ಮಂದವಾಹಿನಿ, ಕೃಪಾಮಾಶಿನಿ ಹಾಗೂ ವಾಮನ ಇಲ್ಲಿನ ಪ್ರಮುಖ ನದಿಗಳು, ಕಾಲಾನುಕ್ರಮದಲ್ಲಿ ಶಕ್ತಿ ಪರ್ವತ ಧಾರೆಗಳು, ವಿವಿಧ ಹೆಸರಿನಿಂದ ಕರೆಯಲ್ಪಟ್ಟಿವೆ. ಅದೆಷ್ಟೋ ನದಿಗಳು, ಇಂಗಿ ಹೋಗಿವೆ. ಶಕ್ತಿ ಪರ್ವತದ ಧಾರೆಗಳು, ಜಲಚರಗಳ, ವಿಶೇಷ ಆವಾಸಸ್ಥಾನವಾಗಿವೆ. ಉತ್ಕಲ ಪ್ರದೇಶದಲ್ಲಿ, ಸಮುದ್ರ ಸೇರುವ ದೊಡ್ಡ ನದಿಗಳಿಗೆ ಇವು ಉಪನದಿಗಳಾಗಿವೆ.

ನೀಲಾಂಜನರ ತಿದ್ದುಪಡಿ…

“ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.”

ಇಲ್ಲಿ ಒಂದೆರಡು ತಪ್ಪು ನುಸುಳಿವೆ.
೧. ನದಿಗಳ ಹೆಸರು ಭೀಮರಥೀ, ಕೃಷ್ಣವೇಣೀ ಎಂದು ಈಕಾರಾಂತವಾಗಿರಬೇಕಿತ್ತಲ್ವೇ?
೨. ಕಾಳಿ, ಪೂರ್ವಸಮುದ್ರವನ್ನು ಸೇರುವುದಿಲ್ಲ್. ಒಂದಷ್ಟು ದೂರ ಪೂರ್ವಕ್ಕೆ ಹರಿದು, ನಂತರ ಪಶ್ಚಿಮಕ್ಕೆ ತಿರುಗಿ ಪಶ್ಚಿಮ ಸಮುದ್ರ ಸೇರುತ್ತದೆ.

ಮತ್ತೆ ಹೀಗಂದಿರಿ:
“ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!”

ಈ ಸಾಲು ಅಷ್ಟು ಸರಿ ಇಲ್ಲ. ಕಾವೇರಿ ಹಲವು ಕಡೆ ಪಶ್ಚಿಮಕ್ಕೆ ತಿರುಗಿ ಹರಿಯುವುದಾದರೂ ಅದ್ಯಾವುದೂ ಬಹಳ ದೂರ ಇಲ್ಲ. ಮತ್ತೆ, ಕಾಳಿಯಂತೆ, ಪೂರ್ತಿ ೧೮೦ ಡಿಗ್ರಿ ತಿರುಗಿ ಮಶ್ಚಿಮದ ಕಡಲು ಸೇರುವುದೂ ಇಲ್ಲ.

ಬಹುಶಃ ಪೂರ್ವಕ್ಕೆ ಹರಿಯುತ್ತಿರುವ ನದಿಗಳಲ್ಲಿ, ಅದು ಎಲ್ಲಾದರೂ ಪಶ್ಚಿಮಕ್ಕೆ ಹರಿಯುತ್ತಿರುವ ಜಾಗವಿದ್ದರೆ, ಅದು ವಿಶೇಷವೆಂದೂ ಪವಿತ್ರವೆಂದೂ ಪೂಜಿಸುವ ಸಂಪ್ರದಾಯವಿತ್ತೇನೋ. ಅತಿ ಪ್ರಸಿದ್ಧ ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯೇ ಅಲ್ಲದೆ, ಇನ್ನೂ ಹಲವು ಕಡೆ ಕಾವೇರಿ ಪಶ್ಚಿಮವಾಹಿನಿಯಾಗಿದ್ದಾಳೆ. ಹಾಗೇ ಹೇಮಾವತಿಯೂ ಕೂಡ. ಇವಲ್ಲದೇ ಬೇರೆ ನದಿಗಳು ಹೀಗೆ ತಿರುಗಿರುವ ಸಂದರ್ಭಗಳೂ ಇದ್ದೇ ಇರುತ್ತವೆ ಎಂದು ನನ್ನೆಣಿಕೆ. ಇಲ್ಲವೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ.

-ನೀಲಾಂಜನ

ಸೂರ್ಯವಂಶದ ಜಾಡಿನಲ್ಲಿ….

Posted in ನಮ್ಮ ಇತಿಹಾಸ by yuvashakti on ಜುಲೈ 21, 2008

ನಮ್ಮ ಹೆಮ್ಮೆಯ ಭಾರತದ ಪ್ರಾಚೀನ ಇತಿಹಾಸ ನಮಗೆಷ್ಟು ತಿಳಿದಿದೆ? ಯಾರೆಂದರೆ ಅವರು ‘ನಮ್ಮವರು ಇತಿಹಾಸವನ್ನು ಬರೆದಿಡಲಿಲ್ಲ’ ಎಂದು ದೂರುವರೇ ಹೊರತು, ಸ್ವಾರಸ್ಯಕರ ಕಾವ್ಯಗಳ ಮೂಲಕ, ವೇದೋಪನಿಶತ್ತು, ಪುರಾಣಗಳ ಮೂಲಕ ನಮ್ಮ ರಾಷ್ಟ್ರದಲ್ಲಿ ಜನಿಸಿ ಚಕ್ರವರ್ತಿಗಳಾಗಿ ಮೆರೆದ ಶ್ರೇಷ್ಠ ಅರಸರ ಬಗ್ಗೆ ಅರಿಯುವ ಆಸಕ್ತಿ ತೋರುವವರೇ ಇಲ್ಲ. ಬೇರು ಗಟ್ಟಿಯಾದರೆ ತಾನೆ ಗಿಡ ಗಟ್ಟಿಯಾಗುವುದು? ನಾವು ನಮ್ಮ ಪೂರ್ವಜರ ಭವ್ಯ ಇತಿಹಾಸವನ್ನು ಅರಿಯಬೇಕು. ಹಿಂದಿನವರ ಶ್ರೇಷ್ಠತೆ- ಸಾಧನೆಗಳು ನಮ್ಮ ಮುಂದಿನ ಹೆಜ್ಜೆಗಳಿಗೆ ಮಾರ್ಗದರ್ಶಿಯಾಗಬಲ್ಲಂಥವು. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಹೆಜ್ಜೆಗಳನ್ನು ಅರಿಯುವ, ಆ ಬಗ್ಗೆ ನಮಗೆ ತಿಳಿದ ಮಾಹಿತಿಗಳನ್ನು ನಿಮಗೊದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಹೊರಟಿದ್ದೇನೆ. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಬೇಕಾಗುವುದರಿಂದ, ಎಲ್ಲಾದರೂ ಪಾಠಾಂತರವಿದ್ದರೆ, ದೋಷ ನುಸುಳಿದ್ದರೆ ಅವಶ್ಯವಾಗಿ ತಿದ್ದಿ, ತಿಳಿಹೇಳಿ. ನಮ್ಮ ಪ್ರಯತ್ನದಲ್ಲಿ ಜೊತೆಯಾಗಿ…

                                                    ~ ~ ~

ನಮ್ಮ ಪ್ರಪ್ರಾಚೀನ ಇತಿಹಾಸದಲ್ಲಿ ಬಹು ಮುಖ್ಯವಾಗಿ ಕೇಳಿಬರುವ ರಾಜ ವಂಶಗಳು- ಸೂರ್ಯ ವಂಶ ಮತ್ತು ಚಂದ್ರ ವಂಶಗಳು.
ಹೆಸರೇ ಸೂಚಿಸುವಂತೆ ಸೂರ್ಯ ವಂಶದ ಆದಿ ಸೂರ್ಯನಿಂದಲೇ. ವಿವಸ್ವಾನ- ಕಿರಣಗಳ ಒಡೆಯ- ಸೂರ್ಯ. ಆದ್ದರಿಂದ ಸೂರ್ಯನಿಗೆ ವಿವಸ್ವಂತ ಎನ್ನುವ ಹೆಸರೂ ಇದೆ. ಸೂರ್ಯ ಪುತ್ರರು ವೈವಸ್ವತ ಎಂದು ಕರೆಸಿಕೊಳ್ಳುವರಷ್ಟೆ? ಈ ಪ್ರತಿಯೊಂದು ಮನ್ವಂತರದ ಮೂಲ ಪುರುಷನನ್ನು ‘ಮನು’ ಎಂದು ಕರೆಯಲಾಗುತ್ತದೆ. ಆತನಿಂದಲೇ ಮಾನವ ಕುಲದ ಆರಂಭವಾಗುವುದು. ಒಟ್ಟು ಹದಿನಾಲ್ಕು ಮನ್ವಂತರಗಳಲ್ಲಿ ಪ್ರಸ್ತುತ ಚಾಲನೆಯಲ್ಲಿರುವ ಮನ್ವಂತರ ‘ವೈವಸ್ವತ ಮನ್ವಂತರ’. ಸೂರ್ಯ ಪುತ್ರ ಶ್ರಾದ್ಧ ದೇವ ಮನುವೇ ಈ ಮನ್ವಂತರದ ಒಡೆಯ. ಶ್ರಾದ್ಧದೇವ ಮನುವಿನ ಮುಂದಿನ ಪೀಳಿಗೆ ‘ಸೂರ್ಯ ವಂಶ’ವೆಂದೇ ಖ್ಯಾತ. ಈ ಸೂರ್ಯ ವಂಶದ ಚಕ್ರಾಧಿಪತ್ಯ ಆರಂಭವಾಗುವುದು ಶ್ರಾದ್ಧದೇವನ ಪುತ್ರ ಇಕ್ಷ್ವಾಕುವಿನ ಮೂಲಕ. ಇಕ್ಷ್ವಾಕು ಚಕ್ರವರ್ತಿ ಶ್ರೀ ರಾಮನ ವಂಶದ ಮೂಲ ಪುರುಷ.
ಮತ್ತೊಂದು ಪ್ರಸಿದ್ಧ ವಂಶ- ಚಂದ್ರ ವಂಶದ ಮೂಲ ಕಾರಣನೂ ಶ್ರಾದ್ಧ ದೇವನೇ. ಈತನ ಪುತ್ರ ಸುದ್ಯುಮ್ನ ‘ಇಳಾ’ ಎನ್ನುವ ಸ್ತ್ರೀಯಾಗಿ ಚಂದ್ರ ಪುತ್ರ ‘ಬುಧ’ನನ್ನು ವರಿಸಿ ಮಕ್ಕಳನ್ನು ಪಡೆದಳು. ಈ ಮಕ್ಕಳಿಂದ ಚಂದ್ರ ವಂಶದ ಉದಯವಾಯಿತು.

ಸೂರ್ಯ ವಂಶದ ಆದಿ ಪುರುಷರು ಮತ್ತು ಭರತ ಖಂಡವನಾಳಿದ (ಪ್ರಾಚೀನ ಭಾರತದ ವ್ಯಾಪ್ತಿ- ವಿಸ್ತೀರ್ಣಗಳ ಬಗ್ಗೆ ಬೇರೊಂದು ಲೇಖನದಲ್ಲಿ ಚರ್ಚಿಸೋಣ) ಸೂರ್ಯ ವಂಶದ ರಾಜರುಗಳ ಕಿರು ಮಾಹಿತಿ ಹೀಗಿದೆ:

ಬ್ರಹ್ಮ: ಹತ್ತು ಪ್ರಜಾಪತಿಗಳಿಗೆ ಜನ್ಮ ನೀಡಿದ. ಅವರಲ್ಲೊಬ್ಬ- ಮರೀಚಿ. ಮರೀಚಿಯ ಮಗ ಕಶ್ಯಪ. ಕಶ್ಯಪ ಮಾನವ ಕುಲದ ತಂದೆ. ಈತನ ಪತ್ನಿಯರಲ್ಲೊಬ್ಬಳು ಅದಿತಿ. ಅವಳ ಮಕ್ಕಳು ‘ಆದಿತ್ಯ’ರು. ದ್ವಾದಶ ಅದಿತ್ಯರು: ಅಂಶುಮಾನ್, ಆರ್ಯಮಾನ್, ಭಗ, ಧೂತಿ, ಮಿತ್ರ, ಪೂಷನ್, ಶಕ್ರ, ಸವಿತೃ, ತ್ವಷ್ಟೃ, ವರುಣ, ವಿಷ್ಣು ಮತ್ತು ವಿವಸ್ವಾನ್ (ಸೂರ್ಯ)

ವಿವಸ್ವಂತನ ಪುತ್ರರಲ್ಲಿ ಶ್ರಾದ್ಧ ದೇವ ಒಬ್ಬ. ಈತ ಅಯೋಧ್ಯಯ ನಿರ್ಮಾರ್ತೃ. ಶ್ರಾದ್ಧ ದೇವನ ಮಕ್ಕಳು- ವೇನ, ಧ್ರಿಶ್ನು, ನರಿಷ್ಯಂತ, ನಭಗ, ಇಕ್ಷ್ವಾಕು, ಕರೂಷ, ಶರ್ಯಾತಿ, ಪ್ರಿಶಧ್ರು, ನಭಗಾರಿಷ್ಟ, ಮತ್ತು ಸುದ್ಯುಮ್ನ (ಇಳಾ).

ಇಕ್ಷ್ವಾಕು, ಸೂರ್ಯವಂಶದ ಮೊತ್ತ ಮೊದಲ ಚಕ್ರವರ್ತಿ. ಈತನ ನೂರು ಮಕ್ಕಳಲ್ಲಿ ಐವತ್ತು ಮಂದಿ ಉತ್ತರಪಥವನ್ನೂ, ಐವತ್ತು ಮಂದಿ ದಕ್ಷಿಣಾಪಥವನ್ನೂ ಆಳಿದರು. ಈತನ ಮುಂದಿನ ಪೀಳಿಗೆಯ ಪಟ್ಟಿ ಇಲ್ಲಿದೆ:

 

ಇಕ್ಷ್ವಾಕು,     ವಿಕುಕ್ಷಿ (ಶಶಾದ),      ಪುರಂಜಯ (ಕಕುತ್ಸ್ಥ),  ಅನರಣ್ಯ ,    ಪೃಥು,     ವಿಶ್ವಗಾಶ್ವ,  ಆರ್ದ್ರ (ಚಂದ್ರ) ,     ಯವನಾಶ್ವ ,       ಶ್ರವಸ್ತ, 
ಬೃಹದಾಶ್ವ,      ಕುವಲಾಶ್ವ(ದುಂಧುಮಾರ) ,    ದೃಢಾಶ್ವ ,  ಪ್ರಮೋದ,      ಹರ್ಯಶ್ವ  ,     ನಿಕುಂಭ, ಶಾಂತಾಶ್ವ ,     ಕೃಷ್ಣಾಶ್ವ,      ಪ್ರಸೇನಜಿತ ಯವನಾಶ್ವ ,     ಮಂಧಾತ ,      ಪುರುಕುತ್ಸ್ಥ , ತ್ರದ್ದಸ್ಯು,      ಸಂಭೂತ,       ಅನರಣ್ಯ , ತ್ರಶದಶ್ವ,     ಹರ್ಯಶ್ವ,      ವಸುಮಾನ್ತ್ರಿಧನ್ವ,     ತ್ರೈಯರುಣ      ಸತ್ಯವ್ರತ (ತ್ರಿಶಂಕು), ಹರಿಶ್ಚಂದ್ರ ,   ರೋಹಿತಾಶ್ವ ,     ಹಾರೀತ,   ಚಂಚು,      ವಿಜಯ ,     ರುರುಕ್ ,   ವೃಕ ,     ಬಾಹು(ಅಸಿತ),     ಸಗರ, ಅಸಮಂಜ,     ಅಂಶುಮಂತ,      ದಿಲೀಪ,   ಭಗೀರಥ ,    ಶ್ರುತ,       ನಭಗ,   ಅಂಬರೀಷ,     ಸಿಂಧು ದ್ವೀಪ,     ಪ್ರತಾಯು;

ಶೃತುಪರ್ಣ,     ಸರ್ವ ಕಾಮ,      ಸುದಾಸ , ಸೌದಾಸ (ಮಿತ್ರಸಹ),   ಸರ್ವಕಾಮ,      ಅನರಣ್ಯ,   ನಿಘ್ನ ,     ರಘು,       ದುಲಿದುಃ,  ಖಟ್ವಾಂಗ (ದಿಲೀಪ),   ರಘು (ದೃಗ್ಬಾಹು- ಈತನಿಂದಲೇ ‘ರಘುವಂಶ’ ಎಂಬ ಹೆಸರು ಬಂದಿದ್ದು),     ಅಜ, ದಶರಥ ,    ಶ್ರೀ ರಾಮ,      ಲವ ,  ಅತಿಥಿ ,    ನಿಷಧ,      ನಳ,  ನಭ,      ಪುಂಡರೀಕ,      ಕ್ಷೇಮಂಧವ,  ದೇವನೀಕ,     ರುರು,       ಪರಿಪತ್ರ , ಬಲ,      ಉಕ್ತ,       ವಜ್ರನಾಭ , ಶಂಖ,      ವಿಶ್ವಶಃ ,     ಹಿರಣ್ಯ ನಾಭ,   ಪುಷ್ಯ,     ಧ್ರುವ ಸಂಧಿ,     ಸುದರ್ಶನ;

ಅಗ್ನಿವರ್ಣ ,    ಶೀಘ್ರಗ ,     ಮರು,  ಪ್ರಸೂತ ,    ಸುಸಂಧಿ,      ಅಮರ್ಷ,   ವಿಶ್ರುತ್ವನ್,     ವಿಶ್ರಬಾಹು,      ಪ್ರಸೇನಜಿತ,  ತಕ್ಷಕ ,    ಬೃಹದ್ಬಲ (ಭಾರತ ಯುದ್ಧದ ಅವಧಿ),    ಅರುಕ್ಷಯ,  ವತ್ಸವ್ಯೂಹ ,    ಪ್ರತಿವ್ಯೋಮ,      ದಿವಾಕರ,   ಸಹದೇವ ,    ಬೃಹದಶ್ವ,      ಭಾನುರಥ , ಪ್ರತಿತಾಶ್ವ,     ಸುಪ್ರತೀಕ,      ಮರುದೇವ; 

ಸುನಕ್ಷತ್ರ,    ಅಂತರಿಕ್ಷ ,     ಸುಷೇಣ,   ಅನಿಭಜಿತ್ ,    ಬೃಹದ್ಭಾನು ,    ಧರ್ಮಿ,   ಕೃತಂಜಯ,     ರಣಂಜಯ,      ಸಂಜಯ,
ಪ್ರಸೇನಜಿತ  (ಬುದ್ಧನ ಸಮಕಾಲೀನ),  ಕ್ಷುದ್ರಕ,      ಕುಲಕ,  ಸುರಥ,     ಸುಮಿತ್ರ ( ಸೂರ್ಯವಂಶದ ಕೊನೆಯ ಅರಸ. ಈತ ನವ ನಂದರಲ್ಲಿ ಒಬ್ಬನಾಗಿದ್ದ .  ಮಹಾಪದ್ಮ ನಂದನಿಂದ ಸೋಲಿಸಲ್ಪಟ್ಟು ಅಯೋಧ್ಯೆಯಿಂದ  ರೋಹತಕ್ಕೆ ತೆರಳಿದ. ಈತನ  ಮಗ ಕೂರ್ಮ ರೋಹತರ ಮೇಲೆ ಅಧಿಪತ್ಯ ಸ್ಥಾಪಿಸಿದ.)

( ಮಾಹಿತಿ ಆಧಾರ: ವಿಷ್ಣು ಪುರಾಣ, ಭಾಗವತ ಪುರಾಣ ಮತ್ತು ಅಂತರ್ಜಾಲ ತಾಣಗಳು)