ರಾಷ್ಟ್ರ ಶಕ್ತಿ ಕೇಂದ್ರ

ಅಣು ಒಪ್ಪಂದದ ಆಜೂ ಬಾಜು…

Posted in ಚಕ್ರವರ್ತಿ ಅಂಕಣ by yuvashakti on ಜುಲೈ 24, 2008

ಅಣು ಒಪ್ಪಂದದ ಕುರಿತಾದ ‘ಅಧಿವೇಶನ’ ಕೊನೆಗೂ ಪ್ರಹಸನವಾಗಿಯೇಬಿಡ್ತು. ಎರಡೂ ದಿನ ಅಣು ಒಪ್ಪಂದದ ಕುರಿತು ಘನವಾದ ಚರ್ಚೆಗಳಾಗುತ್ತದೆಂದು ಭಾವಿಸಿದ್ದವರಿಗೆ ತೀವ್ರ ನಿರಾಶೆ. ಟೀವಿ ಮುಂದೆ ಕುಳಿತು ಕಲಾಪ ವೀಕ್ಷಿಸಿದ್ದವರನ್ನು ಬಿಡಿ, ಸರ್ಕಾರದ ಅನುಮತಿ ಪಡೆದು ಜೈಲಿನಿಂದ ನೇರವಾಗಿ ಬಂದು ಅಧಿವೇಶನದಲ್ಲಿ ಕುಳಿತಿದ್ದ ಎಸ್ ಪಿ ಯ ಸಂಸದ ಕೂಡ ತನಗೆ ‘ಒಪ್ಪಂದ ಏನೆಂದೇ ಅರ್ಥವಾಗಲಿಲ್ಲ’ ಎಂದಿದ್ದು ಹಾಸ್ಯಾಸ್ಪದವೇನಲ್ಲ.

ಜವಾಬ್ದಾರಿಯುತವಾಗಿ ಮಾತಾಡಬೇಕಿದ್ದ ಪ್ರಧಾನ ಮಂತ್ರಿ, ರಕ್ಷಣಾ ಮಂತ್ರಿಗಳು ಯುಪಿಎ ಯ ಸಾಧನೆ ಹೇಳಲು ಸಮಯ ವ್ಯಯ ಮಾಡಿದರೆ, ಪ್ರತಿಪಕ್ಷದ ನಾಯಕರು ಅರೋಪಗಳಿಗೇ ಹೆಚ್ಚಿನ ಸಮಯ ಕೊಟ್ಟು ಒಪ್ಪಂದದ ತಿರುಳೇ ಮರೆಯುವಂತೆ ನೋಡಿಕೊಂಡರು. ಇಷ್ಟಕ್ಕೂ ಒಪ್ಪಂದದ ಲಾಭವೇನು? ರಾಹುಲ್ ಗಾಂಧಿ ಮನಕಲಕುವಂತೆ ಮಾತನಾಡಿ ‘ಬಡವರಿಗೆ ಬೆಳಕಿಲ್ಲ, ಅವರಿಗೆ ಕರೆಂಟು ಕೊಡಲು ಈ ಒಪ್ಪಂದ’ ಎಂದರು. ಇದು ಕಾಂಗ್ರೆಸ್ಸಿನ ಸದಾ ಕಾಲದ ಚಾಳಿ. ಘನವಾದ ವಿಷಯ ಬಂದೊಡನೆ ಬಡವರನ್ನ ತಂದು ಎದುರಿಟ್ಟುಕೊಳ್ಳೋದು. ನಾಲ್ಕು ದಶಕದ ಹಿಂದೆ ಇಂದಿರಾ ‘ಗರೀಬೀ ಹಠಾವೋ’ ಎಂಬ ಘೋಷಣೆ ಮೊಳಗಿಸಿದ್ದು ಯಾರಿಗೆ ನೆನಪಿಲ್ಲ ಹೇಳಿ? ಪ್ರಮುಖ ಚರ್ಚೆಯನ್ನು ಭಾವುಕತೆಯತ್ತ ತಿರುಗಿಸಿ ಮಾಧ್ಯಮಗಳನ್ನು ಸೆಳೆಯುವಲ್ಲಿ ರಾಹುಲ್ ಯಶಸ್ವಿಯಾಗಿಬಿಟ್ಟರು. ಆದರೆ, ಒಪ್ಪಂದ ಜಾರಿಯಾದರೆ ಬಡವರ ಮನೆಗೆ ಕರೆಂಟು ಗ್ಯಾರೆಂಟೀನಾ? ಈ ಪ್ರಶ್ನೆಗೆ ಮಾತ್ರ ಉತ್ತರ ಸಿಗದೇ ಹೋಯ್ತು.

ಒಪ್ಪಂದದ ಹಿಂದಿನ ಸಂಚೇನು?

ಸದ್ಯದ ಮಟ್ಟಿಗೆ ನಮ್ಮಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ವಿದ್ಯುಚ್ಛಕ್ತಿಯಲ್ಲಿ ಅಣು ವಿದ್ಯುತ್ತಿನ ಪ್ರಮಾಣ ಎಷ್ಟು ಗೊತ್ತೆ? ಶೇಕಡಾ ಮೂರರಷ್ಟು ಮಾತ್ರ. ಇದಕ್ಕೆ ಪ್ರತಿಯಾಗಿ ಕಲ್ಲಿದ್ದಲು ಶೇ.೬೬ರಷ್ಟು, ಜಲ ಶಕ್ತಿ ಶೇ.೨೬ರಷ್ಟು, ಸೌರ ಶಕ್ತಿ ಶೇ.೫ರಷ್ಟು ವಿದ್ಯುತ್ ಉತ್ಪಾದಿಸುತ್ತದೆ. ಈ ದೇಶದ ಇಪ್ಪತ್ತೆರಡು ಅಣು ರಿಯಾಕ್ಟರುಗಳು ಸೇರಿ ಶೇಕಡಾ ಮೂರರಷ್ಟು ಮಾತ್ರ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿದೆ ಎಂದಮೇಲೆ, ಅದನ್ನು ದ್ವಿಗುಣಗೊಳಿಸಲು ಮಾಡಬೇಕಾದ ಖರ್ಚು ವೆಚ್ಚವನ್ನು ಲೆಕ್ಕ ಹಾಕಿ!
ಒಂದು ಅಂದಾಜಿನ ಪ್ರಕಾರ ಸುಮಾರು ಐವತ್ತು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿ, ಇಂದಿನ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಅಣು ವಿದ್ಯುತ್ ಪಡೆಯಬಹುದು. ಇಷ್ಟು ಮಾತ್ರದ ವಿದ್ಯುತ್ ಲಕ್ಷಾಂತರ ಹಳ್ಳಿಗಳಿಗೆ ಬೆಳಕು ಕೊಡುತ್ತದೆ ಎಂದು ವಾದಿಸುತ್ತಿರುವವರಿಗೆ ಏನು ಹೇಳಬೇಕು!?

ಈ ನಮ್ಮ ಸರ್ಕಾರಗಳು ಕಳೆದ ಕೆಲವಾರು ದಶಕಗಳಿಂದ ಜಲ ಶಕ್ತಿಯನ್ನು ಅದೆಷ್ಟು ನಿರ್ಲಕ್ಷಿಸುತ್ತಿವೆಯೆಂದರೆ, ಭೂಗರ್ಭದಲ್ಲಿ ಜಲಸ್ರೋತವನ್ನು ಹೆಚ್ಚಿಸುವ, ಸಮುದ್ರದ ಅಲೆಗಳ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಗೋಜಿಗೇ ಹೋಗುತ್ತಿಲ್ಲ. ಸೌರ ಶಕ್ತಿಯ ವ್ಯಾಪಕ ಬಳಕೆಯ ಕುರಿತಾದ ಸಂಶೋಧನೆಗಳು, ಚಟುವಟಿಕೆಗಳು ನಡೆಯುತ್ತಿರುವುದು ತೀರಾ ಕಡಿಮೆ. ಇಂತಹ ವಿಫುಲ ಅವಕಾಶಗಳನ್ನು ಕೈಚೆಲ್ಲಿ ವಿದ್ಯುತ್ ನ ನೆಪ ಹೇಳಿ ಒಪ್ಪಂದಕ್ಕೆ ಮುಂದಾಗುತ್ತಿರುವುದು ಯಾಕೆ? ಈ ಪ್ರಶ್ನೆಗೆ ಉತ್ತರವಿಲ್ಲ. ಈ ನಡುವೆಯೇ ಇನ್ನೊಂದು ಅಂಶ ನೆನಪಿಡಬೇಕು. ಅಮೆರಿಕಾದ ಸಹಕಾರ ಮತ್ತು ಇಂಧನ ಪಡೆದು ವಿದ್ಯುತ್ ಉತ್ಪಾದಿಸುವ ಈ ಯೋಜನೆಯ ಕನಸು ನನಸಾಗೋದು ೨೦೨೦ರಲ್ಲಿ! ಅವತ್ತಿನ ಮಟ್ಟಿಗೆ ಈಗಿನ ಅವಶ್ಯಕತೆಗಿಂತ ನಾಲ್ಕು ಪಟ್ಟಾದರೂ ಹೆಚ್ಚಿನ ವಿದ್ಯುತ್ ಬೇಕಾಗುತ್ತದೆ. ಆಗ ಈ ಯೋಜನೆ ಕೊಡುವ ವಿದ್ಯುತ್ ನ ಪ್ರಮಾಣ- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ, ಅಷ್ಟೇ.

ಇಷ್ಟೆಲ್ಲಾ ಅಣುವಿದ್ಯುತ್ತಿನ ಬಗ್ಗೆ ಮಾತಾಡುವ ಈ ದೇಶದ ನಾಯಕರುಗಳಿಗೆ ಗೊತ್ತೇ ಇಲ್ಲದ (ಅಥವಾ ಹಾಗೆ ನಟಿಸುವ) ಒಂದು ಅಂಶವಿದೆ. ಅದು, “ಕಳೆದ ಮುವ್ವತ್ತು ವರ್ಷಗಳಿಂದ ಅಮೆರಿಕಾ ಒಂದೇ ಒಂದು ಅಣುಶಕ್ತಿ ಘಟಕವನ್ನು ಹೊಸದಾಗಿ ಶುರು ಮಾಡಿಲ್ಲ” ಅನ್ನೋದು! ಅಷ್ಟೇ ಅಲ್ಲ, ಒಂದು ಅಣು ಘಟಕವನ್ನು ಮುಚ್ಚಲು ಹೋಗಿ ಅದು ಲಕ್ಷಾಂತರ ಡಾಲರು ವ್ಯಯಿಸಿ ಕೈಸುಟ್ಟುಕೊಂಡಿದೆ ಕೂಡಾ!!
ತನ್ನ ಬೇಡಿಕೆಯ ಶೇ.೯೦ರಷ್ಟು ವಿದ್ಯುತ್ ಅಣು ರಿಯಾಕ್ಟರಿನಿಂದಲೇ ಬರುತ್ತದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಫ್ರಾನ್ಸ್, ಕಳೆದ ಕೆಲವಾರು ವರ್ಷಗಳಿಂದ ಈ ರಿಯಾಕ್ಟರುಗಳಿಂದ ಕೈತೊಳೆದುಕೊಳ್ಳುವ ಉಪಾಯ ಹುಡುಕುತ್ತಿದೆ.  ವಿದ್ಯುತ್ ಬಳಕೆ ಕಡಿಮೆ ಮಾಡಿ ಎಂದು ಜನರಿಗೆ ಬುದ್ಧಿ ಹೇಳುತ್ತಿದೆ. ಇನ್ನೂ ಮುಂದುವರೆದು, ಈ ದೆಶಗಳೆಲ್ಲ ತಮ್ಮ ಹಳೆಯ ಹಪ್ಪಟ್ಟು ರಿಯಾಕ್ಟರುಗಳನ್ನು ನಮ್ಮ ದೇಶಕ್ಕೆ ಮಾರಲಿದ್ದಾರೆ, ತಾವು ಮಾತ್ರ ವಿದ್ಯುತ್ ಪಡೆಯಲು ಹೊಸ ಮಾರ್ಗದತ್ತ ಹೊರಳಲಿದ್ದಾರೆ.

ಈ ಒಪ್ಪಂದದಂತೆ ಅಮೆರಿಕಾ ಭಾರತದಲ್ಲಿ ವಿದ್ಯುತ್ ಉತ್ಪಾದನೆಯ ಕಾಂಟ್ರ್ಯಾಕ್ಟನ್ನು ಪಡೆಯುತ್ತಿಲ್ಲ, ಬದಲಿಗೆ ಉತ್ಪಾದನೆಗೆ ಬೇಕಾದ ತಂತ್ರಜ್ಞಾನವನ್ನೂ ಇಂಧನವನ್ನೂ ಪೂರೈಸುವ ಭರವಸೆ ನೀದುತ್ತಿದೆ. ಅಷ್ಟಕ್ಕೇ ಅದೆಷ್ಟು ನಿಯಮವಳಿಗಳೆಂದರೆ, ಆ ಮೂಲಕ ಭರತದ ಸಾರ್ವಭೌಮತೆಯನ್ನು ಕಸಿಯುವಷ್ಟು! ಸಾರ್ವಭೌಮತೆ ಕುರಿತಂತೆ ಆಮೇಲೆ ಚರ್ಚಿಸೋಣ. ಮೊದಲಿಗೆ ಅಣು ಇಂಧನದ ಬಗ್ಗೆ ಒಂದಷ್ಟು ಪ್ರಶ್ನೆಗೆ ಉತ್ತರ ಪಡೆಯೋಣ. ವಿಜ್ಞಾನಿಗಳು ನೀಡುವ ಅಂಕಿಅಂಶದ ಪ್ರಕಾರ ಮುಂದಿನ ನಲವತ್ತು ವರ್ಷಗಳಲ್ಲಿ ನಮಗೆ ಒಟ್ಟು ಅಣು ಇಂಧನ- ಯುರೇನಿಯಂ ೨೫ಸಾವಿರ ಮೆಗಾಟನ್ ನಷ್ಟು ಬೇಕಾಗುತ್ತದೆ. ನೀವು ನಂಬಲಾರಿರಿ. ನಮ್ಮ ಬಳಿ ಅದಾಗಲೇ ೭೮ ಸಾವಿರ ಮೆಗಾಟನ್ ನಷ್ಟು ಇಂಧನವಿದೆ. ನಮಗೆ ಸಾಲುವಷ್ಟು ಇಂಧನ ಉಳಿಸಿಕೊಂಡು ಅಮೆರಿಕಕ್ಕೂ ರಫ್ತು ಮಾಡಬಹುದಾದಷ್ಟಿದೆ! ಹೀಗಿರುವಾಗ ನಾವೇಕೆ ಅಮೆರಿಕೆಯೆದುರು ಕೈ ಚಾಚಬೇಕು?
ಹಾಗೊಮ್ಮೆ ನಮ್ಮಲ್ಲಿ ಯುರೇನಿಯಂ ಖಲಿಯಾದರೂ ಥೋರಿಯಮ್ ನಿಕ್ಷೇಪ ಸಾಕಷ್ಟು ಸಮೃದ್ಧವಾಗಿದೆ. ಇಂದು ಜಗತ್ತು ಯುರೇನಿಯಂಗಿಂತಲೂ ಥೋರಿಯಂ ಸಮರ್ಥ ಅಣು ಇಂಧನವೆಂದು ಪರಿಗಣಿಸಿ ಅದರತ್ತ ವಾಲುತ್ತಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಇತರೆಲ್ಲೆಡೆಗಿಂತ ಅತಿ ಹೆಚ್ಚಿನ ಥೋರಿಯಂ ನಿಕ್ಷೇಪವಿರುವುದು ಭಾರತದಲ್ಲಿಯೇ! ಇದರ ಬಳಕೆಯ ಹೊಸ ಹೊಸ ಅವಿಷ್ಕಾರಗಳಾದರೆ ನಮ್ಮ ಬಲ ಅಮೆರಿಕೆಯನ್ನೂ ಹಿಂದಿಕ್ಕುವಷ್ಟು ವೃದ್ಧಿಸುವುದರಲ್ಲಿ ಸಂಶಯವಿಲ್ಲ.

ಎಲ್ಲ ಸರಿ, ಅಮೆರಿಕಾ ನಮ್ಮೊಂದಿಗೆ ಅಣು ಒಪ್ಪಂದ ಮಾಡಿಕೊಳ್ಳಲೇಬೇಕು ಎಂದು ಪಣ ತೊಟ್ಟಿರುವುದು ಯಾಕೆ? ಈವರೆಗಿನ ಅದರ ಇತಿಹಾಸದಲ್ಲಿ ತನಗೆ ಅತಿ ಹೆಚ್ಚಿನ ಲಾಭವಿಲ್ಲದೆ ಅದು ಯಾವ ಕೆಲಸವನ್ನೂ ಮಾಡಿದ್ದೇ ಇಲ್ಲ. ಈ ಬಾರಿಯೂ ಅಷ್ಟೇ. ಅದು ಭಾರತದ ಎಲ್ಲ ರಿಯಾಕ್ಟರುಗಳ ಮೇಲೆ ತನ್ನ ನಿಗಾ ಇಡುವುದಕ್ಕೆ, ಅಣು ಬಾಂಬು ತಯಾರಿಸದಂತೆ ತಎಯುವುದಕ್ಕೆ ಸಾಧ್ಯವಾಗುವಂತೆಯೇ ಒಪ್ಪಂದ ರೂಪಿಸಿಕೊಂಡಿದೆ. ಅದರ ನಿಯಮಗಳಂತೆ ಬಾಂಬು ತಯಾರಿಕೆಗೆ ಅಗತ್ಯವಿರುವ ಪ್ಲುಟೋನಿಯಮ್ ಅನ್ನು ಭಾರತ ಹೊಂದುವಂತೆಯೇ ಇಲ್ಲ. ಅಂದಮೇಲೆ, ಭಾರತ ಇದುವರೆಗೆ ಕಾಪಾಡಿಕೊಂಡು ಬಂದ ಸಾರ್ವಭೌಮತೆ ಮಣ್ಣುಪಾಲಾದಂತೆಯೇ ಅಲ್ಲವೆ?

ಹಾ! ಇನ್ನೊಂದು ವಿಷಯವಿದೆ. ಭಾರತ ಇರಾನಿನೊಂದಿಗೆ ಕೊಳವೆ ಮಾರ್ಗದ ಮೂಲಕ ಇಂಧನ ಪೂರೈಕೆಯ ಒಪ್ಪಂದ ಮಾಡಿಕೊಂಡಿತ್ತಲ್ಲ? ಆಗಲೇ ಅಮೆರಿಕಾ ಈ ಅಣುಒಪ್ಪಂದಕ್ಕೆ ಹೊಂಚು ಹಾಕಿದ್ದು. ಹಾಗೇನಾದರೂ ಇರಾನಿನಿಂದ ಕೊಳವೆ ಬಂದು ಭಾರತಕ್ಕೆ ಅನಿಲ ಪೂರೈಕೆಯಾಗಿಬಿಟ್ಟರೆ ಏಷ್ಯಾದ ಮೇಲೆ ಅಮೆರಿಕೆಯ ಹಿಡಿತ ಕಳೆದುಹೋಗಿಬಿಡುತ್ತದೆ. ಅದಕ್ಕೇ, ಅದನ್ನು ತಪ್ಪಿಸಲು ಈಗಲೂ ಅದು ತಿಪ್ಪರಲಗ ಹಾಕುತ್ತಿದೆ. ತನ್ನ ಪ್ರಬಲ ಹಿಡಿತ ಉಳಿಸಿಕೊಳ್ಳಲಿಕ್ಕಾಗಿ ಭಾರತವನ್ನು ಬಲಿ ಕೊಡುತ್ತಿದೆ.

ನಾವೇನು ಮಾಡಬಹುದು?

ಭಾರತ- ಅಮೆರಿಕಾ ಎರಡೂ ರಾಷ್ಟ್ರಗಳಿಂದ ದೂರವುಳಿದು ಮೂರನೇ ಬುದ್ಧಿವಂತ ರಾಷ್ಟ್ರವಾಗಿ ನೋಡಿದಾಗ ಅಮೆರಿಕಕ್ಕಿಂತ ಭಾರತವೇ ಹೆಚ್ಚು ಸಮರ್ಥವಾಗಿ ತೋರುತ್ತದೆ. ರಾಜಕೀಯ ಇಚ್ಛಾಶಕ್ತಿಯಲ್ಲಿ ಮಾತ್ರ ಅಮೆರಿಕ ನಮಗಿಂತ ಮುಂದಿದೆ. ಆದರೆ, ಈ ಒಪ್ಪಂದ ಆಗಲೇ ಬಾರದು ಎಂದರೂ ಎಡವಟ್ಟಾದೀತು. ಒಪ್ಪಂದ ಆಗಬೇಕು, ಆದರೆ ಅದರ ನಿಯಮಾವಳಿಗಳು ನಮಗೆ ಅನುಕೂಲಕರವಾಗಿರಬೇಕು. ಈ ಒಪ್ಪಂದ ಮಾಡಿಕೊಂಡಿರುವ ಎಲ್ಲ ದೇಶಗಳ ೪೦೦ ರಿಯಾಕ್ಟರುಗಳಲ್ಲಿ ಕೆವಲ ಐದು ಮಾತ್ರ ಅಂತಾರಾಷ್ಟ್ರೀಯ ಸುಪರ್ದಿಗೆ ಒಳಪಟ್ಟಿದೆ. ಭಾರತದಲ್ಲಿ ಮಾತ್ರ ಹದಿನಾಲ್ಕೂ ರಿಯಾಕ್ಟರುಗಳೂ ಅದೇಕೆ ಅಮೆರಿಕದ ಕೈಗೆ ಕೀಲಿಯೊಪ್ಪಿಸಬೇಕು ಎಂಬುದು ಅರ್ಥವೇ ಆಗುತ್ತಿಲ್ಲ. ಈ ನಿಯಮ ಬದಲಾಗಬೇಕು. ಪರಮಾಣು ಶಕ್ತ ರಾಷ್ಟ್ರಗಳು ಒಪ್ಪಂದದಿಂದ ಯಾವಾಗ ಬೇಕಾದರೂ ಹಿಂದೆ ಬರುವ ನಿಯಮವಿದ್ದರೆ, ಭಾರತ ಮಾತ್ರ ಹಾಗೆ ಮಾಡುವಂತಿಲ್ಲ ಎನ್ನಲಾಗಿದೆ. ಅದೇಕೆ ಹಾಗೆ? ನಾವೂ ಫೋಖ್ರಾನ್ ನಲ್ಲಿ ಬಾಂಬ್ ಸ್ಫೋಟಿಸಲಿಲ್ಲವೇ? ನಾವೂ ಪರಮಣು ಶಕ್ತ ರಾಷ್ಟ್ರವೇ ತಾನೆ? ಅಂದಮೆಲೆ, ನಾವೇಕೆ ಒಪ್ಪಂದ ಬೇಡವಾದಾಗ ಹಿಂದೆ ಸರಿಯುವ ಹಾಗಿಲ್ಲ? ಈ ಪ್ರಶ್ನೆ ಗಟ್ಟಿಯಾಗಿ ಕೇಳಬೇಕಿದೆ. ‘ನಮ್ಮ ಆಂತರಿಕ ನೀತಿಗಳಿಗೆ ಧಕ್ಕೆ ತರುವಂತಿಲ್ಲ’ ಎಂದು ಒಪ್ಪಂದದಲ್ಲೊಂದು ಒಳ ಒಪ್ಪಂದ ಹಾಕಿರುವ ಅಮೆರಿಕೆಗೆ ‘ನಮ್ಮ ಆಂತರಿಕ ನೀತಿಗೂ ನೀವು ಧಕ್ಕೆ ತರುವಂತಿಲ್ಲ’ ಎಂದೇಕೆ ತಪರಾಕಿ ಹಾಕಬಾರದು?
ಹೀಗೆ ಅಮೆರಿಕದೊಂದಿಗೆ ಜಾಗರೂಕತೆಯಿಂದ ಒಪ್ಪಂದ ಮಾಡಿಕೊಂಡರೆ ಅದು ನಮ್ಮ ಮೇಲೆ ಸವಾರಿ ಮಾಡಲಗುವುದಿಲ್ಲ. ಚೀನಾ ಕೂಡ ನಮ್ಮೊಂದಿಗೆ ಸಮಾನ ದೂರದಲ್ಲಿರಲು ಪ್ರಯತ್ನ ಪಡುತ್ತದೆ. ಒಪ್ಪಂದದ ಈಗಿನ ರೂಪ ಬದಲಿಸಿ ನಮ್ಮ ಪ್ರಗತಿಗೆ ತಕ್ಕಂತೆ ಅದನ್ನು ಪುನರ್ರಚಿಸಿ ಮುಂದುವರೆಯುವುದು ಜಾಣತನ.
ಆದರೆ, ಅದನ್ನೆಲ್ಲ ಮಾಡಬಲ್ಲ, ದೇಶದ ಪ್ರಗತಿಯತ್ತ ಒಲವುಳ್ಳ ರಾಜಕಾರಣಿಗಳು ನಮ್ಮಲ್ಲಿದ್ದಾರೆಯೇ ಎನ್ನುವುದೇ ಕೋಟಿ ರುಪಾಯಿಯ ಪ್ರಶ್ನೆ!

~ ಚಕ್ರವರ್ತಿ ಸೂಲಿಬೆಲೆ

ಸೇವೆಯೆಂಬ ಯಜ್ಞದಲ್ಲಿ….

Posted in ಚಕ್ರವರ್ತಿ ಅಂಕಣ by yuvashakti on ಜುಲೈ 8, 2008

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರು ಮುಗಿವ ಮುನ್ನವೇ ಎಡಕ್ಕೆ ತಿರುಗಿದರೆ ಟಿಂಬರ್‌ಯಾರ್ಡ್ ಲೇಔಟ್ ಇದೆ. ನಿರ್ದಾಕ್ಷಿಣ್ಯವಾಗಿ ಕಡಿದು ಉರುಳಿಸಿದ ಬೃಹತ್ ಮರಗಳ ಮಾರಾಟಗಾರರು ಆ ದಾರಿಯುದ್ದಕ್ಕೂ ಇದ್ದಾರೆ. ಆ ಹಾದಿಯ ತುದಿಯಲ್ಲಿನ ಮೋರಿ ಹಾರಿದೊಡನೆ ದೊಡ್ಡ ಗೋಡೌನು ಕಾಣುತ್ತದೆ. ಅದರ ತುಂಬಾ ಕೆಮಿಕಲ್‌ಗಳ ಅಸಹ್ಯ ವಾಸನೆ. ಅದನ್ನು ಮೀರಿ ಮೆಟ್ಟಿಲು ಹತ್ತುವ ವೇಳೆಗೆ ಮಕ್ಕಳ ಗೌಜು ಗದ್ದಲ ಕೇಳಲಾರಂಭಿಸುತ್ತದೆ. ಒಟ್ಟು ೬೪ ಮಕ್ಕಳು. ಕೊಳಕಿನ ಮುದ್ದೆಯಂತಿರುವ ಪುಟ್ಟ ಅನಾಥ ಮಕ್ಕಳು ಓದುತ್ತಿರುತ್ತಾರೆ, ಆಡುತ್ತಿರುತ್ತಾರೆ ಇಲ್ಲವೇ ಭಜನೆಗೆ ಕುಳಿತಿರುತ್ತಾರೆ.

  
 ಅದು ನರೇಂದ್ರ ನೆಲೆ. ನಾವೆಲ್ಲ, ’ಸ್ಲಮ್ ಏರಿಯಾದವರು’ ಅಂತ ಹೇಳಿ ತುಚ್ಛೀಕರಿಸಿಬಿಡುವ ಮಕ್ಕಳನ್ನು ಒಂದೆಡೆ ಸೇರಿಸಿ ಊಟ- ವಸತಿಯ ವ್ಯವಸ್ಥೆ ಮಾಡಿ ಓದಿಗೂ ಅವಕಾಶ ಕಲ್ಪಿಸುವ ಅಪರೂಪದ ತಾಣ. ಚಿಂದಿ ಆಯುತ್ತ, ಹೀನ ಶಬ್ದಗಳನ್ನಾಡುತ್ತಾ ಕಾಲ ಕಳೆಯಬೇಕಿದ್ದ ವಿನೋದನಂತಹ ಪೋರರು ಅಲ್ಲಿ ವೇದಮಂತ್ರಗಳನ್ನು ಶುದ್ಧವಾಗಿ ಒಪ್ಪಿಸುತ್ತಾರೆ. ದೂರದ ವಿಜಾಪುರದಿಂದ ಬಂದ ಸಂಗಪ್ಪನಂಥವರು ಎಳೆಯ ಕೈಗಳಿಂದ ಬಿಡಿಸಿದ ಬಣ್ಣದ ಚಿತ್ರಗಳನ್ನು ಎದುರಿಗೆ ಹರವುತ್ತಾರೆ. ಸೇವೆಗಿಂತ ಮೊದಲು ಇತರರನ್ನು ಪ್ರೀತಿಸುವುದನ್ನು ಕಲಿ ಎಂಬ ಅಂಬೇಡ್ಕರರ ಮಾತನ್ನು ಮಣಿಕಂಠ ಮುದ್ದುಮುದ್ದಾಗಿ ಹೇಳುತ್ತಾನೆ. ಇಂತಹ ಮಕ್ಕಳಿಗೋಸ್ಕರವೇ ಕಾಲ್ ಸೆಂಟರಿನ ಕೈತುಂಬ ಸಂಬಳದ ಕೆಲಸಕ್ಕೂ ಸಲಾಮು ಹೊಡೆದು ಧಾವಿಸಿರುವ ಡಿಪ್ಲೊಮಾ ಮಾಡಿಕೊಂಡ ರವಿ, ಮಧು ಇವರನ್ನು ಕಂಡಾಗಲಂತೂ ಹೊಸದೊಂದು ಲೋಕಕ್ಕೆ ಹೋದಂತಾಗುತ್ತದೆ.!
   ’ಬಹುರತ್ನ ಪ್ರಸವೀ ಬಾರತೀ’ ಅಂತ ಹೇಳಿದ್ದೇ ಅದಕ್ಕೆ. ಯುವಶಕ್ತಿ ಹಾಳಾಗಿಯೇ ಹೋಯ್ತು ಎಂದು ಹಲಬುತ್ತಿರುವಾಗಲೇ ಸಾವಿರಾರು ಯುವಕರು ಪಥದರ್ಶಕರಾಗಿ ಬಂದು ಬಿಡುತ್ತಾರೆ. ಅಮೃತತ್ವದ ಬುಡದಲ್ಲಿರೋದು ತ್ಯಾಗ’ ಎಂಬ ಋಷಿವಾಕ್ಯವನ್ನು ಮತ್ತೆಮತ್ತೆ ಸಾಧಿಸಿಬಿಡುತ್ತಾರೆ.
  ಇವತ್ತಿನ ಮಟ್ಟಿಗೆ ಸಾವಿರಾರು ಯುವಕಯುವತಿಯರು ಒಂದೇ ಸೂರಿನಡಿ ಕೆಲಸ ಮಾಡುವಲ್ಲಿ ಅಜಿತ್‌ಜೀಯವರ ಕೈಚಳಕ ಸಾಕಷ್ಟಿದೆ. ಬರೋಬ್ಬರಿ ೨೫ ವರ್ಷಗಳ ಹಿಂದೆ ಅವರೊಂದು ಚೆಂದದ ಕನಸು ಕಟ್ಟಿದ್ದರು. ದೇಶದ ತರುಣರು ಸೇವಾಕಾರ್ಯಕ್ಕೆ ಪಡೆಯಾಗಿ ಬರಬೇಕೆಂಬ ಆಸೆ ಹೊತ್ತಿದ್ದರು. ಅದೇನು ಛಾತಿಯೋ ಏನೋ? ಸೇವೆ ಮಾಡುವ ಇಚ್ಛೆಯುಳ್ಳ ಯುವಕ ಯುವತಿಯರು ಬನ್ನಿ ಎಂಬ ಪ್ರಕಟಣೆ ಕೊಟ್ಟರು. ಉತ್ಸಾಹದಿಂದ ಓಡೋಡಿ ಬಂದವರಿಗೆ ತರಬೇತಿಯೂ ಆಯ್ತು. ಪುರುಷರಿಗೇನೋ ಜವಾಬ್ದಾರಿ ನೀಡಿದ್ದಾಯ್ತು, ಮಹಿಳೆಯರನ್ನು ಕಳಿಸುದೆಲ್ಲಿ? ಅಜಿತ್‌ಜೀಗೆ ಪರದಾಟ. ಆದರೂ ಧೆsರ್ಯ ತಂದುಕೊಂಡರು. ಹಿಂದೂ ಸೇವಾ ಪ್ರತಿಷ್ಠಾನ ಹುಟ್ಟು ಹಾಕಿದರು. ಹಳ್ಳಿಹಳ್ಳಿಗೆ ಹೋಗಿ ಶಾಲೆ ತೆರೆಯುವ ಸೇವಾಕಾರ್ಯ ಮಾಡುವ ಸಾಹಸಕ್ಕೆ ಕೈಯಿಟ್ಟರು.
  ನಾವೆಲ್ಲ ತಿರುಗಾಟಕ್ಕೆಂದು ಹೋಗಲೂ ಹೆದರುವ ಗುಲ್ಬರ್ಗದ ಕುಗ್ರಾಮವೊಂದಕ್ಕೆ ಆಗತಾನೆ ಪ್ರತಿಷ್ಠಾನ ಸೇರಿದ್ದ ಭಗಿನಿಯೊಬ್ಬರು ಹೊರಟು ನಿಂತಿದ್ದರು. ಕುಡುಕರ ತವರೂರಾದ ಆ ಹಳ್ಳಿಯಲ್ಲಿ ಬದುಕು ದುಭರವೆಂಬುದು ಆಕೆಗೂ ಗೊತ್ತಿತ್ತು. ಆದರೆ ತನ್ನ ಸರಳ ನಡೆ, ಮೃದು ಮಾತುಗಳಿಂದ ಜನರ ಮನಸ್ಸನ್ನು ಗೆಲ್ಲುವ ಧೆsರ್ಯ ಆಕೆಗಿತ್ತು. ಬೆಳಗ್ಗೆ ಬೇಗ ಎದ್ದವಳು ಹತ್ತಿರವಿದ್ದವರ ಮನೆಯ ಬಾಗಿಲಿಗೆ ನೀರು ಹಾಕಿ ರಂಗೋಲಿಯಿಡುತ್ತಿದ್ದಳು. ಪೊರಕೆ ಹಿಡಿದು ರಸ್ತೆ ಗುಡಿಸುತ್ತಿದ್ದಳು. ಮಕ್ಕಳನ್ನು ಬರಸೆಳೆದು ಅಪ್ಪಿ ಪಾಠ ಮಾಡುತ್ತಿದ್ದಳು.  ನೋಡನೋಡುತ್ತಲೇ ಆ ಊರವರ ಪಾಲಿಗೆ ತಾನೇ ಮಗುವಿನಂತಾಗಿಬಿಟ್ಟಳು. ಆಕೆಯ ಮುಂದೆ ಕುಡಿಯುವುದು, ಬೀಡಿ ಸೇದುವುದು, ಕೊನೆಗೆ ಕೆಟ್ಟ ಮಾತಾಡುವುದೂ ಘೋರ ಪಾಪ ಎಂದು ಜನ ಭಾವಿಸತೊಡಗಿದರು. ಊರು ಬದಲಾಯಿತು. ನಮ್ ಮಗೀಗ ಎಲ್ಲಿಗೂ ಒಯ್ಯಬ್ಯಾಡ್ರಿ ಎಂದು ಜನರೇ ಪ್ರತಿಷ್ಠಾನದವರಿಗೆ ತಾಕೀತು ಮಾಡುವಷ್ಟು!
  ಶೋಭಾ ಚಿಪಗೇರಿಯವರು ಸೇವಾ ಭಾರತಿಯಡಿ ಶಾಲೆ ನಡೆಸುತ್ತಿದ್ದಾರೆ. ಆ ಶಾಲೆಯಲ್ಲಿ ಒಂದಕ್ಕಿಂತ ಹೆಚ್ಚು ಅಂಗ ಕಳೆದುಕೊಂಡವರಿಗೆ ಮಾತ್ರ ಸ್ಥಾನ! ಅಲ್ಲಿಗೆ ಹೋಗಿಬಿಟ್ಟರೆ ಕರುಳು ಕಿತ್ತುಬಂದಂತಾಗುತ್ತೆ. ಇಪ್ಪತ್ತು ವರ್ಷ ವಯಸ್ಸಿನವರೂ ಕೂಡ ಬುದ್ಧಿಮಾಂದ್ಯತೆಯಿಂದಾಗಿ ಎರಡನೇ ತರಗತಿಯ ಮಟ್ಟದಲ್ಲಿರುತ್ತಾರೆ. ಅಂಥವರನ್ನು ಸಂಭಾಳಿಸಿ, ಪಾಠ ಮಾಡುವ ಕಾಯಕ ಅದೆಷ್ಟು ಕಷ್ಟದ್ದು ಯೋಚಿಸಿ. ಅದೊಮ್ಮೆ ಆ ಶಾಲೆಯ ಶಿಕ್ಷಕಿಯೊಬ್ಬರು, ಬ್ರಿಟಿಷರು ಭಾರತಕ್ಕೆ ಬಂದು ಲೂಟಿಗೈದ ಕಥೆಯನ್ನು ಮಕ್ಕಳಿಗೆ ಹೇಳಿದ್ದರು. ಅದಾದ ಕೆಲವೇ ತಿಂಗಳಲ್ಲಿ ಯೂರೋಪಿನ ಸೇವಾ ಸಂಸ್ಥೆಯೊಂದು ಶಾಲೆಯ ಪರಿಶೀಲನೆ ನಡೆಸಿ ವ್ಯಾನ್ ಕೊಡಲು ಬಂದಿತ್ತು. ಆ ವಿಷಯ ಗೊತ್ತಾದೊಡನೆ ಬುದ್ಧಿಮಾಂದ್ಯ ಮಗುವೊಂದು ಶಿಕ್ಷಕಿಯನ್ನು ಅಡ್ಡಹಾಕಿ ಪ್ರಶ್ನಿಸಿತು, ನಮ್ಮನ್ನು ಲೂಟಿ ಮಾಡಿದವರ ಬಳಿ ವ್ಯಾನು ಕೇಳುವುದು ಸರಿಯಾ? ಶಿಕ್ಷಕಿಯದು ಉಸಿರು ಕಟ್ಟುವ ಸರದಿ! ಆ ಮಗುವಿಗೆ ತಿಳಿಹೇಳುವಲ್ಲಿ ಆಕೆ ಸುಸ್ತು. ಬುದ್ಧಿಯೇ ಇಲ್ಲವೆನ್ನುವ ಆ ಮಕ್ಕಳಲ್ಲಿ ಚಿಂತನೆಯ ಬುಗ್ಗೆ ಚಿಮ್ಮಿಸಿದ ಆ ಶಿಕ್ಷಕಿಯರದೆಲ್ಲ ಅದೆಂಥ ಅಸೀಮ ಸಂಕಲ್ಪ ನೋಡಿ!
  ನಾವು ಎಲ್ಲ ಇದ್ದ ಮಕ್ಕಳಿಗೆ ರ್‍ಯಾಂಕ್ ಕೊಡಿಸುವ ಶಾಲೆಯ ಎದುರು ನಿಂತು ರೋಮಾಂಚಿತರಾಗುತ್ತೇವೆ. ಈ ಶಾಲೆಗೆ ಹಂಡ್ರೆಡ್ ಪರ್ಸೆಂಟಂತೆ! ಎಂದು ಬೀಗುತ್ತೇವೆ.  ಆದರೆ ಯಾರೂ ಇಲ್ಲದ, ಏನೂ ಇಲ್ಲದ ಮಕ್ಕಳಿಗೆ ಬೆಳಕು ತೋರುವ ಈ ಶಾಲೆಗಳ ಬಗ್ಗೆ ಎಂದಾದರೂ ಆಲೋಚಿದ್ದೇವೆಯೇ? ಆ ಶಾಲೆಯ ಕ್ಯಾಂಪಸ್ಸುಗಳಲ್ಲಿ ಅಡ್ಡಾಡಿದ್ದೇವೆಯೇ?
  ಕೆಲವರು ಮಾತ್ರ ಅದನ್ನೇ ಬದುಕಾಗಿಸಿಕೊಂಡಿದ್ದಾರೆ.  ಅಲಸೂರಿನ ಫಿಲಿಪ್ಸ್ ಟವರ್ ಎದುರಿನ ರಸ್ತೆಯಲ್ಲಿ ’ಮಾರ್ಗದರ್ಶಿ’ ಎಂಬ ಸಂಸ್ಥೆಯೊಂದಿದೆ. ಕೃಷ್ಣಮೂರ್ತಿ ಮತ್ತು ಗೆಳೆಯರು ಸೇರಿ ಕಟ್ಟಿದ್ದರು. ಅಂಗವಿಕಲ ಹೆಣ್ಣು ಮಕ್ಕಳ ಸಾಕುವ ಸಂಸ್ಥೆ ಅದು. ಅಲ್ಲಿ ಮುವ್ವತ್ತೈದು ಜರರಿದ್ದಾರೆ. ಮನೆಯವರಿಗೆ ಹೀನವಾಗಿ, ಅಕ್ಕಪಕ್ಕದವರಿಗೆ ಬೇಡವಾಗಿ ಬದುಕುತ್ತಿದ್ದವರು ಅವರೆಲ್ಲ! ಅಂಥವರಿಗೆ ಊಟ, ವಸತಿ ನೀಡಿ, ರಕ್ಷಣೆಯ ಜವಾಬ್ದಾರಿಯನ್ನೂ ಹೊತ್ತಿರುವ ಕೃಷ್ಣಮೂರ್ತಿಯವರ ಸಾಧನೆ ಸಾಮಾನ್ಯವಲ್ಲ. ಸಾಧ್ಯವಾದಲ್ಲೆಲ್ಲ ದಾನಿಗಳನ್ನು ಹುಡುಕಿ, ಸಹಾಯ ಕೇಳಿ, ಬಂದ ಹಣದಿಂದ ಸಂಸ್ಥೆ ಬೆಳೆಸಿ ಇತರರಿಗೂ ಸಹಾಯ ಮಾಡುತ್ತಾರಲ್ಲ ಅದೇ ಅದ್ಭುತ.
  ಶಿವಕುಮಾರ್ ಹೊಸಮನಿಯದು ಇನ್ನೊಂದು ಥರ. ಅವರು ಇತರರಂತೆ ’ಮರ ಕಡಿಯಬೇಡಿ’ ಎಂದು ಭಾಷಣ ಬಿಗಿದವರಲ್ಲ. ಪೇಪರ್ ಬಳಕೆ ಕಡಿಮೆಯಾದರೆ ಸಾವಿರಾರು ಮರಗಳು ಉಳಿದಂತೆ ಎನ್ನುತ್ತ ಆ ಕೆಲಸಕ್ಕೆ ಕೈ ಹಾಕಿದರು. ಶಾಲೆಗಳಿಗೆ ಹೋಗಿ ವರ್ಷದ ಕೊನೆಯಲ್ಲಿ ಮಕ್ಕಳ ಬಳಿ ಉಳಿಯುವ ಖಾಲಿ ಹಾಳೆಗಳನ್ನು ಸಂಗ್ರಹಿಸಿ ಅದರಿಂದ ನೋಟ್ ಬುಕ್ ತಯಾರಿಸುತ್ತಾರೆ. ಅದನ್ನು ಬಡ ಮಕ್ಕಳಿಗೆ ಉಚಿತವಾಗಿ ಹಂಚಿಬಿಡುತ್ತಾರೆ! ಒಂದು ಕೋಟಿಯಷ್ಟು ಹಾಳೆ ಸಂಗ್ರಹಿಸುವ ಗುರಿ ಇಟ್ಟಿದ್ದಾರೆ. ಲಕ್ಷಾಂತರ ಮಕ್ಕಳಿಗೆ ನೋಟ್‌ಬುಕ್ ತಲುಪಿಸುವ ಕನಸಿನಲ್ಲಿ ತೇಲುತ್ತಿದ್ದಾರೆ!
  ಗುರುತಿದರೆ ಇಂಥವರು ಹತ್ತಾರು ಜನ ನಮ್ಮ ನಡುವೆಯೇ ಸಿಕ್ಕಾರು. ಅವರಿಗೆ ಪ್ರಚಾರ ಬೇಕಿಲ್ಲ. ವೈಭವದ ಬದುಕೂ ಬೇಕಿಲ್ಲ. ಎರಡು ಹೊತ್ತಿನ ಊಟ, ನೆಮ್ಮದಿಯ ಬಾಳು ಅಷ್ಟೇ ಸಾಕು. ಭೂಮಿ ತಾಯಿಯ ಹೊರೆ ಇಳಿದಿರೋದು ಇಂತಹ ಪುಣ್ಯಾತ್ಮರಿಂದಲೇ.  ಅವರನ್ನೆಲ್ಲ ಒಮ್ಮೆ ನೋಡಿಬನ್ನಿ. ಅವರು ಮಾಡೋ ಕೆಲಸಗಳತ್ತ ಗಮನಹರಿಸಿ. ಬಯಸಿದ್ದರೆ ನಮ್ಮಂತೆ ಬದುಕಬಹುದಾಗಿದ್ದವರು ಸೇವೆಯ ಯಜ್ಞದಲ್ಲಿ ಸಮಿಧೆsಯಂತೆ ಉರಿಯುವುದೇಕೆ? ಎಂದು ಕೇಳಿಕೊಳ್ಳಿ. ನೀವೂ ಒಂದು ಸಂಕಲ್ಪ ಮಾಡಿ. ಹಣವಿದ್ದರೆ ದಾನ ಮಾಡಿ, ಇಲ್ಲವೇ ರಜಾ ದಿನಗಳಲ್ಲಿ ನಿಮ್ಮ ಸಮಯ ಕೊಡಿ. ಅವಮಾನ ಮಾತ್ರ ಮಾಡಬೇಡಿ. ಸಿರಿವಂತ ಹೆಂಗಸೊಬ್ಬಳು ಅನಾಥ ಹೆಣ್ಣು ಮಕ್ಕಳ ನಿಲಯದ ಮುಖ್ಯಸ್ಥೆಯನ್ನು ಮನೆಗೆ ಕರೆದಿದ್ದರು. ಆಕೆ ಹೋದರೆ ಗೇಟಿನೊಳಕ್ಕೂ ಕರೆಯದೆ ಹರಿದು ಚಿಂದಿಯಾಗಿದ್ದ ಚಪ್ಪಲಿಗಳ ರಾಶಿಯನ್ನು ಗೇಟಿನ ಹೊರಕ್ಕೆ ಎಸೆದಿದ್ದರು. ಸಮಾಜಕ್ಕೆ ಇಂಥ ಸಿರಿವಂತರ ದರ್ದು ಖಂಡಿತ ಇಲ್ಲ. ಬದುಕನ್ನೇ ಸೇವೆಗಾಗಿ ಮುಡಿಪಿಟ್ಟವರ ಜತೆ ಪ್ರೀತಿಯ ನಾಲ್ಕು ಮಾತಾಡಿದರೆ ಸಾಕು, ಅದೇ ಬೆಟ್ಟದಷ್ಟಾಯಿತು. ಹಾಗೆ ಮಾಡಿದ ದಿನ ನಿಮಗೆ ನೆಮ್ಮದಿಯ ನಿದ್ರೆ ಬರದಿದ್ದರೆ ಹೇಳಿ!

 

                                                                                                 ~ ಚಕ್ರವರ್ತಿ ಸೂಲಿಬೆಲೆ