ಉಳಿದೇ ಹೋಯಿತು ಒಂದಷ್ಟು ಪ್ರಶ್ನೆಗಳು . . !
ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?
– ಚಕ್ರವರ್ತಿ ಸೂಲಿಬೆಲೆ
ಅಂತೂ ಅಂದುಕೊಳ್ಳದಿದ್ದುದು ಆಗಿಯೇ ಹೋಯಿತು. ಕನ್ನಡ ಪ್ರಭದಲ್ಲಿ ಬಂದ ತಸ್ಲೀಮಾ ನಸ್ರೀನಳ ಲೇಖನದ ಅನುವಾದ ಶಿವಮೊಗ್ಗ-ಹಾಸನಗಳಲ್ಲಿ ಬೆಂಕಿಯ ಕಿಡಿಯನ್ನು ಹೊತ್ತಿಸಿತು. ಈದ್ ಮಿಲಾದ್ ಮಾರನೆಯ ದಿನ ಹದಿನೈದು ಸಾವಿರಕ್ಕೂ ಹೆಚ್ಚು ಕ್ರುದ್ಧ ಮುಸಲ್ಮಾನರು ಒಂದೆಡೆ ಸೇರಿ, ಈ ವಿಚಾರವನ್ನು ಚರ್ಚಿಸಿ ಗಲಾಟೆ ಮಾಡುವಷ್ಟು ಸಮಯ ದಕ್ಕಿತಾದರೂ ಹೇಗೆ? ಯರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ..
ಲೇಖನ ಬಂದಿದ್ದು ಒಂದು ರಾಜ್ಯಮಟ್ಟದ ಪತ್ರಿಕೆಯಲ್ಲಿ. ಅದನ್ನು ಬರೆದವಳು ಒಬ್ಬ ಜಗತ್ಪ್ರಸಿದ್ಧ ಲೇಖಕಿ. ಒಟ್ಟಾರೆ ಬರಹ ಇಷ್ಟವಾಗದಿದ್ದರೆ ಆ ಪತ್ರಿಕೆಯ ಸಂಪಾದಕರೊಂದಿಗೋ, ಅಥವಾ ಮುಕ್ತವಾಗಿಯೋ ಚರ್ಚಿಸಬೇಕಾದದ್ದು ರೀತಿ. ಅದನ್ನು ಬಿಟ್ಟು ಸಾಮೂಹಿಕ ಪ್ರತಿಭಟನೆಗಿಳಿದದ್ದಲ್ಲದೇ, ದಾರಿಯುದ್ದಕ್ಕೂ ಹಿಂದೂ ಅಂಗಡಿಗಳಿಗೆ ಬೆಂಕಿ ಇಟ್ಟು ಕಂಡ-ಕಂಡವರನ್ನು ಚೂರಿಯಿಂದ ಇರಿಯುತ್ತ ಸಾಗಿದ್ದನ್ನು ಯಾವ ಸಭ್ಯ ಸಮಾಜ ಸ್ವೀಕಾರಮಾಡಬಲ್ಲದು ಹೇಳಿ? (ಶಾಲೆಯ ಮಕ್ಕಳ ಮೇಲೆ ಕಲ್ಲು ಹೊಡೆದಿದ್ದನ್ನು ಮಾತ್ರ ಅಲ್ಲಾಹನೂ ಕ್ಷಮಿಸಲಾರ)
ಹಾಗಂತ ಇದು ಇದೇ ಮೊದಲಲ್ಲ. ಹಿಂದೊಮ್ಮೆ ಹುಬ್ಬಳಿಯಲ್ಲಿ ಮೆರವಣಿಗೆ ಹೊರಟಿದ್ದ ಮುಸಲ್ಮಾನರು ಮೈಮೇಲೆ ಭೂತ ಹೊಕ್ಕಂತೆ ಬದಿಯಲ್ಲಿದ್ದ ಅಂಗಡಿಗಳನ್ನೆಲ್ಲ ಹಿಂದೂಗಳ ಅಂಗಡಿ ಎನ್ನುವ ಕಾರಣಕ್ಕೇ ನಾಶ ಮಾಡುತ್ತ ಸಾಗಿದ್ದನ್ನು ಮರೆಯಬಹುದೇನು? ಪಾಪ್ಯುಲರ್ ಫ್ರಂಟ್ ಬೆಂಗಳೂರಿನಲ್ಲಿ ಯಾತ್ರೆ ಹೊರಟು ಶಿವಾಜಿನಗರದಲ್ಲಿ ಅಲ್ಲೋಲ-ಕಲ್ಲೋಲವೆಬ್ಬಿಸಿದ್ದನ್ನು ಪತ್ರಿಕೆಗಳೆಲ್ಲ ವರದಿ ಮಾಡಿದ್ದವಲ್ಲ? ಇದು ಚೆನ್ನಾಯ್ತು. ನಮ್ಮ ಗಣೇಶನ ಮೆರವಣಿಗೆಯನ್ನು ನಾವು ಮಸೀದಿಯ ಮುಂದೆ ಒಯ್ಯಬಾರದು, ಹಾಗೆಯೇ ಅವರೇನಾದರೂ ಗುಂಪು ಕಟ್ಟಿಕೊಂಡು ನಮ್ಮೆದುರು ಬಂದರೆ ಆಗಲೂ ನಾವು ಅಂಗಡಿ-ಮನೆ ಬಾಗಿಲುಗಳನ್ನು ಮುಚ್ಚಿಕೊಂಡು ಕೂರಬೇಕು. ಅಂದರೆ… ಅಂದರೆ… ಅವರು ಬಡಿದರೂ, ಕೊಳಕು ಪದಗಳಲ್ಲಿ ನಿಂದಿಸಿದರೂ ಸುಮ್ಮನಿರಬೇಕಾದ್ದು ನಾವೇ! ವಾವ್.
ಔರಂಗಜೇಬನ ಆಳ್ವಿಕೆಯ ಕಾಲದಲ್ಲಿ ಹೀಗೆಯೇ ಇತ್ತು. ಬಾಬರ್-ಅಕ್ಬರರೂ ಭಿನ್ನವಾಗಿರಲಿಲ್ಲ. ಹಿಂದುವಾಗಿ ಹುಟ್ಟಿದ ತಪ್ಪಿಗೆ ನಾವು ತೆರಿಗೆ (ಜೇಸಿಯಾ) ಕಟ್ಟಬೇಕಿತ್ತು. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾನರದೇ ಆಗಿತ್ತು. ಹಿಂದು ಹಬ್ಬಗಳು ಮುಕ್ತವಾಗಿ ನಡೆಯುವಂತಿರಲಿಲ್ಲ, ಹಿಂದೂ ಹೆಣ್ಣುಮಕ್ಕಳು ಮುಸಲ್ಮಾನರಂತೇ ಬದುಕಬೇಕಿತ್ತು. ಅವರು ಬುರ್ಖಾ ಧರಿಸಿ ನಡೆಯದೇ ಹೋದರೆ ಸ್ವಭಾವತಃ ಪೋಕರಿಯಾಗಿರುವ ಮುಸಲ್ಮಾನ ಪುಂಡ ಅವಳನ್ನು ಹಾರಿಸಿಕೊಂಡು ಹೋಗುತ್ತಿದ್ದ. ಹಿಂದೂ ಬಾಯ್ಮುಚ್ಚಿಕೊಂಡು ಇರಬೇಕಿತ್ತು ಅಷ್ಟೇ!
ಈಗ ತಾಳೆ ನೋಡಿ. ಈ ದೇಶದ ಎಲ್ಲ ವಸ್ತುಗಳ ಮೇಲೂ ಮೊದಲ ಅಧಿಕಾರ ಮುಸಲ್ಮಾರದೇ ಎಂದು ಸಾಚಾರ್ ಸಮಿತಿ ವರದಿ ಮಂಡಿಸಿಯಾಗಿದೆ. ಮುಸಲ್ಮಾನರನ್ನು ಓಲೈಸಲೆಂದೇ ಅದಾಗಲೇ ನಮ್ಮ ತೆರಿಗೆಯ ಹಣವನ್ನು ಅವರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಎನ್ನುವ ಏಜೆಂಟ್ ನಿಯತತಾಗಿ ಮಾಡುತ್ತಿದೆ. ಇಂದು ಹಿಂದು ಹೆಣ್ಮಕ್ಕಳ ಅಪಹರಣ ಲವ್ ಜಿಹಾದ್ ಎನ್ನುವ ಹೆಸರಲ್ಲಿ ಅವ್ಯಾಹತವಾಗಿಯೇ ನಡೆದಿದೆ. ಕಂಡಕಂಡಲ್ಲಿ ಮುಸಲ್ಮಾನ ಪೋಕರಿಗಳು ಮಾಡುತತಿರುವ ಅಟಾಟೋಪವನ್ನು ಕಂಡು ಹಿಂದು ಯುವಕ ಬಾಯ್ಮುಚ್ಚಿಕೊಂಡು ಇರಲೇಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆ ಈಗಲೂ ಔರಂಗಜೇಬನ ಆತ್ಮ ಮನಮೋಹನಸಿಂಗರ ರೂಪದಲ್ಲಿ ದೇಶವನ್ನು ಆಳುತ್ತಿದೆ ಎಂದರೆ ತಪ್ಪಾಗುವುದೇನು?
ಬಿಡಿ. ಈಗ ವಿಚಾರಕ್ಕೆ ಬನ್ನಿ. ಮಾಧ್ಯಮಗಳ ಕೆಲಸ ಇರೋದೇ ತಪ್ಪುತ್ತಿರುವ ಸಮಾಜವನ್ನು ಸರಿಯಾದ ಹಾದಿಗೆ ತರೋದು. ತಪ್ಪು ಎನಿಸಿದ್ದನ್ನು ಹೇಳುವ ಹಕ್ಕು ಪತ್ರಿಕೆಗಳಿಗೇ ಇಲ್ಲವೆಂದರೆ ಇನ್ನು ಆ ಕೆಲಸವನ್ನು ಯಾರು ಮಾಡಬೇಕು ಹೇಳಿ? ಓಟಿಗಾಗಿ ದೇಶವನ್ನೂ ಮಾರುವ ರಾಜಕಾರಣಿಗಳೇನು? ಮಹಿಳೆಯರ ಸಬಲೀಕರಣದ ಕುರಿತಂತೆ, ದಲಿತರ ಮೇಲಾಗುತ್ತಿರುವ ಅತ್ಯಾಚಾರದ ಕುರಿತಂತೆ ಪತ್ರಿಕೆಗಳು ವಸ್ತುನಿಷ್ಠ, ಕೆಲವೊಮ್ಮೆ ಅತಿರಂಜಿತ ವರದಿಗಳನ್ನು ಮಾಡಿದಾಗಲೂ ಆಯಾ ಸಮಾಜಗಳು ಅದನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಿಲ್ಲವೇನು? ತಿದ್ದಿಕೊಳ್ಳುವ ಯತ್ನ ಮಾಡಿಲ್ಲವೇನು? ಈಗ ಮಾತ್ರ ಅದು ಸತ್ಯ ಹೇಳಲು ಹಿಂಜರಿಯುತ್ತಿರುವುದೇಕೆ?
ನಮ್ಮ ಮಾಧ್ಯಮಗಳದ್ದೂ ಒಂದು ದೋಷವಿದೆ. ಯಾರು ಸ್ವೀಕರಿಸುತ್ತಾರೋ ಅವರ ಮೇಲೆ ಗೂಬೆ ಕೂರಿಸುತ್ತಾ ಸಾಗುವುದು. ಯಾರು ಮುರಿದು ಬೀಳುತ್ತಾರೋ ಅವರನ್ನು ಕಂಡು ಬಾಯ್ಮುಚ್ಚಿಕೊಂಡಿರುವುದು! ಬಜರಂಗಿಗಳ-ಸಂಘದ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡುವ ಪತ್ರಿಕಾ ಪ್ರಪಂಚದ ದಿಗ್ಗಜರು ಈ ಬಾರಿ ಅದೇಕೋ ಮೌನಕ್ಕೆ ಶರಣಾಗಿದ್ದರು. ಮಾತನಾಡಿದರೆ ತಮ್ಮ ಕಛೇರಿಗೂ ಕಲ್ಲು ಬಿದ್ದೀತೆಂಬ ಭಯ ಅವರಿಗೆ! ಈ ಭಯದ ಕಾರಣದಿಂದಾಗಿ ಸತ್ಯ ಹೇಳದೇ ಬಾಯ್ಮುಚ್ಚಿಕೊಂಡಿರುವವರಿಗೆ ಪತ್ರಿಕಾಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕ ಅಧಿಕಾರ ಇದೆ ಹೇಳಿ? ಮುಸ್ಲೀಂ ಹೆಣ್ಣುಮಕ್ಕಳನ್ನು ಬೆಳಕಿಗೆ ತರಬಲ್ಲಂತಹ ಒಂದೇ-ಒಂದು ಕೆಲಸ ಆಗಿತ್ತು ಆದರೆ ಅದಕ್ಕೆ ಸರಿಯಾದ ಬೆಂಬಲ ಸಿಗಲೇ ಇಲ್ಲ. ಬುರ್ಖಾದ ಒಳಗೆ, ಅಸಹ್ಯಕರ ಬದುಕು ನಡೆಸುತ್ತಿರುವ ಆ ತುಳಿತಕ್ಕೊಳಗಾದ ಹೆಣ್ಣುಮಕ್ಕಳ ಬೆಂಬಲಕ್ಕೆ ಇನ್ನು ಯಾರು ನಿಲ್ಲುವಂತೆಯೇ ಇಲ್ಲ. ಸಮಾಜದ ಒಳಿತಿನ ದೃಷ್ಟಿಯಿಂದ ಇದು ಸರಿಯೇ? ಪೈಗಂಬರರು ಅರಬ್‌ನಲ್ಲಿ ವಾಸಿಸುವ ಜನರಿಗೆಂದು ಹೇಳಿದ ಮಾತುಗಳನ್ನು, ಆಚರಣೆಗಳನ್ನು ಭೌಗೋಳಿಕ ದೃಷ್ಟಿಯಿಂದಲಾದರೂ ಬದಲಾಯಿಕೊಳ್ಳಬೇಕೆಂಬ ವಿವೇಕವನ್ನು ಯಾರೂ ತಿಳಿಹೇಳುವುದು ಬೇಡವೇ?
ಅದೆಲ್ಲಾ ಸರಿ. ಎಮ್.ಎಫ್.ಹುಸೇನ್ ಸಾಹೇಬರು ನನಗೆ ವ್ಯಕ್ತಿಸ್ವಾತಂತ್ರ್ಯವನ್ನು ಭಾರತ ನಿರಾಕರಿಸಿದೆ ಎಂದು ತಾವು ಬರೆದ ಭಾರತಮಾತೆಯ ನಗ್ನಚಿತ್ರಗಳನ್ನು ಸಮರ್ಥಿಸಿಕೊಂಡಿಸಿದ್ದನ್ನು ಮಾಧ್ಯಮಗಳು ಅಷ್ಟೆಲ್ಲಾ ವೈಭವೀಕರಿಸುತ್ತಿವೆಯಲ್ಲಾ? ಹಾಗಾದರೆ ಕನ್ನಡಪ್ರಭದಲ್ಲಿ ಲೇಖನ ಬರೆದವರಿಗೆ ವ್ಯಕ್ತಿ ಸ್ವಾತಂತ್ರ್ಯವಿಲ್ಲವೇನು? ಇದರ ಬಗ್ಗೆ ಚರ್ಚೆಯೇ ಬೇಡವೇನು? ತಸ್ಲೀಮಾ ನಸ್ರೀನ್‌ಳಿಗೆ ರಕ್ಷಣೆ ಕೊಡಲು ಹಿಂದೆ-ಮುಂದೆ ನೋಡಿದ ಸರ್ಕಾರಗಳು ಹುಸೇನ್‌ಸಾಹೇಬರನ್ನು ಕರೆಸಿಕೊಳ್ಳಲಿಕ್ಕೆ ಮಾತ್ರ ದುಂಬಾಲುಬೀಳುತ್ತಿವೆಯಲ್ಲ! ಏನಿದೆ ಇದರ ಹಿಂದಿನ ಮರ್ಮ? ಇದನ್ನು ಪ್ರಶ್ನಿಸಬೇಕೆಂದು ಯಾವ ಸೆಕ್ಯುಲರ್ ಭೂತಕ್ಕೂ ಅನಿಸೋದೇ ಇಲ್ಲವಲ್ಲ, ಏಕೆ ಹೀಗೆ?
ಶಿವಮೊಗ್ಗದಲ್ಲಿ ಅವತ್ತು ಬಜರಂಗದಳದ ಸೈನಿಕರು ಇಲ್ಲದೇ ಹೋಗಿದ್ದರೆ ಗತಿಯೇನು? ಅವರ ಹದಿನೈದು ಸಾವಿರಕ್ಕೆ ಪ್ರತಿಯಾಗಿ ಇವರು ನಾಲ್ಕೈದು ಸಾವಿರವಾದರೂ ಸೇರಿದಕ್ಕೆ ಎದುರುಮಂದಿ ಸ್ವಲ್ಪ ಅಳುಕಿದ್ದಾರೆ. ಇಲ್ಲವಾದಲ್ಲಿ ಇಡಿಯ ಶಿವಮೊಗ್ಗವನ್ನೇ ಅವರು ಆಪೋಶನ ತೆಗೆದುಕೊಂಡುಬಿಡುತ್ತಿದ್ದರು. ಆಮೇಲೆ ಪತ್ರಿಕೆಯೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ. ಹಾಸನದಲ್ಲಿ ಹೀಗೇ ಆಗಲಿ… ಆಮೇಲೆ ನೋಡಿ, ದೇವೇಗೌಡರ ಮುಂದಿನ ಜನ್ಮದಲ್ಲಿ ಮುಸಲ್ಮಾನರಾಗುವ ಕನಸು ಈ ಜನ್ಮದಲ್ಲಿಯೇ ನನಸಾಗಿಬಿಡುತ್ತದೆ.
ಇವತ್ತು ಗಾಂಧಿಜಿಯ ಶವ ಮಗ್ಗಲು ಬದಲಿಸಿರಲಿಕ್ಕೆ ಸಾಕು. ಅವರೇ ಹೂತಿಟ್ಟ ತುಷ್ಟೀಕರಣದ ಬೀಜ ಇಂದು ಆಲದಮರವಾಗಿ ಬೆಳೆದು ನಿಂತಿದೆ. ಅದರಡಿಯಲ್ಲಿ ಇನ್ನು ಯಾರೂ ಬೆಳೆಯುವಂತಿಲ್ಲ. ಗಾಂಧೀಜಿ ಇದನ್ನು ಅವತ್ತೇ ಅರಿತಿದ್ದರೆ ಇಂದು ನಾವು ನೆಮ್ಮದಿಯ ನಿದ್ದೆಯನ್ನಾದರೂ ಮಾಡಿರುತ್ತಿದ್ದೆವು. ಕೊನೆಯ ಪಕ್ಷ ದೇಶ ವಿಭಜನೆಯಾದಾಗಲಾದರೂ ಅವರಿಗೆ ಪರಿಸ್ಥಿತಿಯ ಅರಿವಾಗಬೇಕಿತ್ತು. ಅಂಬೇಡ್ಕರರು ಅವತ್ತೇ ಹೇಳಿದ್ದರು ’ಶತ್ರುವನ್ನು ದೇಶದ ಒಳಗಿಟ್ಟು ಸಾಕುವುದು ಒಳಿತೋ, ಹೊರಗಟ್ಟಿ ಮೆಟ್ಟುವುದು ಒಳಿತೋ?’ ಊಹೂಂ. ಯಾರೂ ಅವರ ಮಾತನ್ನು ಕೇಳುವ ಗೋಜಿಗೇ ಹೋಗಿರಲಿಲ್ಲ. ಮೊದ ಮೊದಲು ದ್ವಿ ರಾಷ್ಟ್ರ ಸಿದ್ಧಾಂತವನ್ನು ವಿರೋಧಿಸುತ್ತಿದ್ದ ಸಾವರ್ಕರರೂ ಈ ಮಾತಿಗೆ ತಲೆದೂಗಿ ಅದನ್ನು ಒಪ್ಪಿಕೊಂಡರು. ಆದರೆ ಕಾಂಗ್ರೆಸ್ಸಿಗರು ಮಾತ್ರ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅಂಬೇಡ್ಕರರನ್ನೇ ಅಭಿವೃದ್ಧಿವಿರೋಧಿ ಎಂಬಂತೆ ಬಿಂಬಿಸಲಾಯಿತು. ಮೇಲ್ವರ್ಗದವರಲ್ಲಿ ಇಂದಿಗೂ ಈ ಭಾವನೆ ಉಳಿದುಬಿಟ್ಟಿದೆ. ಆದರೆ ಆ ಮನುಷ್ಯನ ದೂರದೃಷ್ಟಿಯ ಒಂದಂಶವೂ ಆಗಿನ ನಾಯಕರಲ್ಲಿಲ್ಲದಿದ್ದುದು ದೌರ್ಭಾಗ್ಯ!
ಮುಂದೆ ದೇಶವಿಭಜನೆಯೂ ಆಗಿಹೋದಾಗ, ಪಾಕಿಸ್ಥಾನಕ್ಕೆ ಬಯಸಿ ಹೋದ ಇಲ್ಲಿನ ಮುಸಲ್ಮಾನರ ಗೋಳು ಹೇಳತೀರದಾಯಿತು. ಅವರಿಗೆ ಅಲ್ಲಿ ದಕ್ಕಿದ್ದು ಎರಡನೇ ದರ್ಜೆಯ ನಾಗರಿಕರ ಸ್ಥಾನ-ಮಾನಗಳು ಮಾತ್ರ. ಹೀಗಾಗಿಯೇ ನೊಂದ ಪಂಜಾಬ್ ಪ್ರಾಂತ್ಯದ ಲಕ್ಷಾಂತರ ಮುಸಲ್ಮಾನರು ಹಿಂದುತ್ವದೆಡೆಗೆ ಬರಲು ಸಿದ್ಧರಾದಾಗ ಸಾವರ್ಕರರು ಅನಂದಿತರಾದರು, ಶತಮಾನದ ದಾಸ್ಯದ ನೊಗ ಕಳಚಿತೆಂಬ ಸಂಭ್ರಮ ಒಂದೆಡೆ ಅವರಿಗೆ. ಆದರೆನು? ಆಚಾರ್ಯ ಪಟ್ಟಕ್ಕೇರಿಬಿಟ್ಟಿದ್ದ ವಿನೋಬಾರ ಸೆಕ್ಯುಲರ್ ಅಂತರಾತ್ಮ ಜಾಗೃತವಾಗಿಬಿಟ್ಟಿತು. ಅವರು ಪರಾವರ್ತನಕ್ಕೆ ಸಿದ್ಧರಾಗಿದ್ದವರಿಗೆ ಬುದ್ಧಿವಾದದ ಮಾತುಗಳನ್ನು ಹೇಳಿ ಸಮಾಧಾನ ಮಾಡಿ ಹಿಂದುತ್ವಕ್ಕೆ ಬರುವುದನ್ನು ತಡೆಗಟ್ಟಿಯೆ ಬಿಟ್ಟರು! ಅಲ್ಲಿಗೆ ಭಾರತ ನಾಶದ ಸಮಗ್ರ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಗಾಂಧಿ ಅನುಯಾಯಿಗಳ ಪ್ರಯತ್ನಕ್ಕೆ ಮೊದಲ ಠಸ್ಸೆ ಬಿದ್ದಿತ್ತು. ಆ ಯೋಜನೆಯ ಮುಂದಿನ ಹಂತಗಳು ಈಗ ಕಾರ್ಯರೂಪಕ್ಕೆ ಬರುತ್ತಿವೆ ಅಷ್ಟೇ.
ಇಂದು ಗಾಂಧೀಜಿ ಕಟಕಟೆಯಲ್ಲಿದ್ದಾರೆ. ನಾಳೆ ಕನ್ನಡಪ್ರಭ! ಇತಿಹಾಸ ಯಾರನ್ನೂ ಪ್ರಶ್ನಿಸದೇ ಬಿಡುವುದಿಲ್ಲ. ಒಬ್ಬರು ವಿಷಬೀಜ ಬಿತ್ತಿದರು ಮತ್ತೊಬ್ಬರು ಹೆದರಿಕೆಯಿಂದಾಗಿಯೇ ಸತ್ಯದಿಂದ ದೂರ ಸರಿದರು. ಪ್ರಶ್ನೆ ಪ್ರಶ್ನೆಯೇ. ಉತ್ತರಿಸಲು ಸಿದ್ಧರಿರಬೇಕು, ಇಂದಲ್ಲ-ನಾಳೆ.
ಯುವ ದಿನದ ಹಿನ್ನೆಲೆಯಲ್ಲಿ…
ಆತ್ಮನೋ ಮೋಕ್ಷಾರ್ಥಮ್….
ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
‘ನಾವೆಲ್ಲ ಸಮಾಜ ಸುಧಾರಕರು’ ಹಾಗಂತ ಹೇಳಿಕೊಂಡು ತಿರುಗಾಡುವ, ನಾಲ್ಕು ರುಪಾಯಿಯಷ್ಟು ಖರ್ಚು ಮಾಡಿ ನಾನೂರು ರುಪಾಯಿಯಷ್ಟು ಪ್ರಚಾರ ಪಡೆಯುವ ಜನರನ್ನು ನೀವು ಕಂಡಿರುತ್ತೀರಿ. ನಿಮಗೆ ಆ ಚಾಳಿ ಇಲ್ಲವಾದರೆ ಖಂಡಿತ ಅವರನ್ನು ಕಂಡು ಮೂಗೂ ಮುರಿದಿರುತ್ತೀರಿ. ಅಕಸ್ಮಾತ್ ನೀವೂ ಪ್ರಚಾರಪ್ರಿಯರಾಗಿದ್ದರೆ, ಅವರೊಡನೆ ನೀವೂ ಅಲ್ಲಲ್ಲಿ ನಿಂತೋ ಕುಳಿತೋ ಸಮಾಜ ಸುಧಾರಣೆಯ ಬಗ್ಗೆ ಒಂದಷ್ಟು ಭಾಷಣ ಬಿಗಿದಿರುತ್ತೀರಿ. ಇದೊಂಥರಾ ಸಹಜ ದೃಶ್ಯಾವಳಿ. ಪ್ರಚಾರಕ್ಕೆ ಫ್ಲೆಕ್ಸುಗಳು ಬಂದಮೇಲಂತೂ ಸಮಾಜ ಸುಧಾರಕರು ನಾಯಿಕೊಡೆಗಳಂತೆ ಬೆಳೆದುಬಿಟ್ಟಿದಾರೆ! ದೌರ್ಭಾಗ್ಯವೆಂದರೆ ಸಮಾಜ ಮಾತ್ರ ಇದರಿಂದ ಒಂದಿನಿತೂ ವಿಚಲಿತವಾಗದೆ ಹಾಗೇ ಉಳಿದುಬಿಟ್ಟಿದೆ.
ನಮ್ಮ ನಡೆ ಎಲ್ಲಿ ತಪ್ಪಿದೆ ಎಂದು ವಿಶ್ಲೇಷಿಸಲು ವಿವೇಕಾನಂದರ ಚಿಂತನೆಗಳಿಗೇ ಮೊರೆಹೋಗಬೇಕು. ಅವರ ದೃಷ್ತಿಯ ಸಮಾಜ ಸುಧಾರಣೆ ಎಂದರೆ ಆಮೂಲಾಗ್ರ ಬದಲಾವಣೆಯೇ ಸರಿ. ವಿಧವೆಯರು ಮರುವಿವಾಹವಾಗುವುದನ್ನೆ ಸಮಾಜ ಸುಧಾರಣೆ ಎಂದು ಒಪ್ಪಲು ಅವರೆಂದೂ ಸಿದ್ಧರಿರಲಿಲ್ಲ. ಜನಾಂಗವೊಂದು ತನ್ನಲ್ಲಿನ ಸತ್ವವನ್ನು ಗುರುತಿಸಿಕೊಂಡು ಹೊಸಯುಗಕ್ಕೆ ಸೂಕ್ತವಾಗುವ ರೀತಿಯಲ್ಲಿ ಹೆಜ್ಜೆ ಹಾಕುವುದನ್ನು ಅವರು ಬಯಸುತ್ತಿದ್ದರು.
ಸಮಜದ ನಿರ್ಮಾಣ ಕಾರ್ಯದಲ್ಲಿ ವಿವೇಕಾನಂದರ ಮೇಲೆ ರಾಮಕೃಷ್ಣರ ಪ್ರಭಾವ ಢಾಳಾಢಾಳಾಗಿ ಕಾಣುತ್ತದೆ. ಜೀವದಯೆ ಎನ್ನುವುದು ಸರಿಯಲ್ಲ, ‘ಜೀವಸೇವೆ’ ಎಂಬುದೇ ಸರಿಯಾದುದು ಎಂಬ ಗುರುವಿನ ವಾಕ್ಯವನ್ನು ಅವರು ಅಕ್ಷರಶಃ ಸ್ವೀಕರಿಸಿದರು. ಬದುಕಿನುದ್ದಕ್ಕೂ ಈ ವಾಕ್ಯಕ್ಕೆ ಚ್ಯುತಿ ಬರದಂತೆ ನಡೆದುಕೊಂಡರು. ಹೀಗಾಗಿ ಅವರ ಪಾಲಿಗೆ ಸಮಾಜ ಸುಧಾರಣೆ ‘ಸಮಾಜದ ಕನಿಷ್ಠ ವ್ಯಕ್ತಿಗಳ ಸೇವೆ’ ಎಂದಾಗಿಬಿಡ್ತು. ತಮ್ಮ ಅನೇಕ ಭಾಷಣಗಳಲ್ಲಿ, ಅನೇಕ ಪತ್ರಗಳಲ್ಲಿ ಈ ಮಾತನ್ನು ಅವರು ದೃಢೀಕರಿಸಿದ್ದಾರೆ. ‘ಎಲ್ಲಿಯವರೆಗೆ ಒಂದು ನಾಯಿಯೂ ಹಸಿವಿನಿಂದ ಬಳಲುವುದೋ ಅಲ್ಲಿಯವರೆಗೆ ನಾನು ಕ್ರಿಯಾಶೀಲನಾಗಿರುತ್ತೇನೆ’ ಎಂಬಲ್ಲಿ ಅವರ ಈ ಭಾವವೇ ವ್ಯಕ್ತವಾಗಿರುವುದು.
ಸ್ವಾಮಿ ವಿವೇಕಾನಂದರ ಪಾಲಿಗೆ ಧ್ಯಾನ, ಸುಧಾರಣೆ ಎಲ್ಲವೂ ಅಂತ್ಯಜರ ಉದ್ಧಾರವೇ. ಬಹುಶಃ ಇಂತಹದೊಂದು ಕ್ರಾಂತಿಕಾರಿ ಚಿಂತನೆಯನ್ನ ಭಾರತ ಈ ಹಿಂದೆ ಕೇಳಿರಲೇ ಇಲ್ಲವೇನೋ? ಧ್ಯಾನ ಮಾಡಲು ಕೋಣೆಯ ಬಾಗಿಲು-ಕಿಟಕಿ ಮುಚ್ಚಬೇಕೇನು? ಎಂಬ ಪ್ರಶ್ನೆ ಕೇಳಿದರೆ ಸ್ವಾಮೀಜಿಯ ಉತ್ತರ ಬಲು ಸ್ಪಷ್ಟ. ‘ಕಿಟಕಿ ತೆರೆದು ಮನೆಯ ಹೊರಗೆ ಕಣ್ಣೀರಿಡುತ್ತಿರುವವರನ್ನು ಕಂಡು, ಅವನ ಬಳಿಸಾರಿ ಕಣ್ಣೊರೆಸುವುದಿದೆಯಲ್ಲ, ಅದು ನಿಜವಾದ ಧ್ಯಾನ’!
ಸಮಾಜ ಎಂಬುದು ವ್ಯಕ್ತಿಗಳಿಂದ ನಿರ್ಮಾಣವಾದಂಥದು. ವ್ಯಕ್ತಿನಿರ್ಮಾಣವಾಗದ ಹೊರತು ಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂಬುದನ್ನು ಸ್ವಾಮೀಜಿ ಚೆನ್ನಾಗಿ ಅರಿತಿದ್ದರು. ಹೀಗಾಗಿ ವ್ಯಕ್ತಿತ್ವ ನಿರ್ಮಾಣಕ್ಕೆ ಅವರು ಕೊಟ್ಟ ಬೆಲೆ ಅಪಾರ. ಆದರೆ ಅದರ ದಿಕ್ಕು ಬೇರೆ ಅಷ್ಟೆ. ‘ಪ್ರತಿಯೊಬ್ಬನೂ ತನ್ನನ್ನು ತಾನು ರೂಪಿಸಿಕೊಂಡು ಇತರರ ಏಳ್ಗೆಗೆ ಮುಂದಾಗಬೇಕು’ ಎಂದು ಇತರರು ಹೇಳಿದರೆ, ಸ್ವಾಮೀಜಿ ಇತರರ ಅಭ್ಯುದಯಕ್ಕಾಗಿ ಶ್ರಮಿಸುತ್ತಲೇ ನಿನ್ನುದ್ಧಾರ ಎಂದುಬಿಟ್ಟರು. ‘ಆತ್ಮನೋ ಮೋಕ್ಷಾರ್ಥಮ್ ಜಗದ್ಧಿತಾಯ ಚ’ ಎಂಬುದು ಅವರು ಕೊಟ್ಟ ಋಷಿವಾಕ್ಯವಾಯ್ತು. ಇತರರಿಗೋಸ್ಕರ ಕಣ್ಣೀರಿಡುವುದರಲ್ಲಿಯೆ ನಿಜವಾದ ಶಕ್ತಿಸ್ರೋತವಿದೆಯೆಂಬುದನ್ನು ಅವರು ಘಂಟಾಘೋಷವಾಗಿ ಸಾರಿದರು. ‘ಬಡವರಿಗಾಗಿ, ಅಜ್ಞಾನಿಗಳಿಗಾಗಿ, ತುಳಿತಕ್ಕೊಳಗಾದವರಿಗಾಗಿ ಮರುಗಿ. ಅನಂತರ ನಿಮ್ಮಾತ್ಮವನ್ನು ಭಗವಂತನ ಪಾದಕ್ಕೆ ಅರ್ಪಿಸಿ. ಆಮೇಲೆ ನೋಡಿ. ಅದಮ್ಯವಾದ ಶಕ್ತಿ ನಿಮ್ಮದಾಗುವುದು’ ಎಂಬ ಅವರ ಮಾತಿನಲ್ಲಿರುವ ಆತ್ಮವಿಶ್ವಾಸ ನೋಡಿ.
ಬಹುಶಃ ಈ ಆತ್ಮವಿಶ್ವಾಸವೇ ಅವರಿಂದ ಇಷ್ಟೊಂದು ಕೆಲಸ ಮಾಡಿಸಿದ್ದು. ಪ್ರತಿಕ್ಷಣವೂ ಬಿಟ್ಟೂಬಿಡದೆ ಕೃತಿಶೀಲರಾಗುವಲ್ಲಿ ಅವರಿಗೆ ಶಕ್ತಿ ದೊರೆಯುತ್ತಿದ್ದುದೇ ಈ ಮಾರ್ಗದಿಂದ. ಇದನ್ನವರು ಸುಧಾರಣೆ ಎಂದು ಕರೆದು ಪ್ರಚಾರದ ಹಿಂದೋಡಲಿಲ್ಲ. ತಾನೊಬ್ಬ ಸುಧಾರಕ ಎಂದೂ ಹೇಳಿಕೊಳ್ಳಲಿಲ್ಲ. ತನ್ನ ತೃಪ್ತಿಗೋಸ್ಕರ ಇತರರ ಸೇವೆ ಮಾಡುತ್ತ ನಡೆದರು.
ಬೇಲೂರು ಮಠದಲ್ಲಿ ಕೆಲಸಗಾರರಿಗೆ ಮೃಷ್ಟಾನ್ನ ಭೋಜನ ತಯಾರಿಸಿ ಬಡಿಸಿದ್ದನ್ನು ನೆನೆಸಿಕೊಳ್ಳಿ. ಅವತ್ತು ಅವರೆಲ್ಲರಿಗೂ ಗಾಳಿ ಬೀಸುತ್ತ ಅವರು ಉಣ್ಣುವುದನ್ನೇ ಆನಂದದಿಂದ ನೋಡುತ್ತ ಕಣ್ಣೀರ್ಗರೆದ ವಿವೇಕಾನಂದರು ಕಣ್ಮುಂದೆ ಬಂದರೆ ಒಮ್ಮೆ ರೋಮಾಂಚನವಾದೀತು! ಈ ಪರಿಯ ಹೃದಯವೈಶಾಲ್ಯವೇ ದೂರದಲ್ಲೆಲ್ಲೋ ಭೂಕಂಪವಾದಾಗ ವಿವೇಕಾನಂದರ ಹೃದಯವನ್ನು ತಲ್ಲಣಗೊಳಿಸುತ್ತಿದ್ದುದು. ಅವರ ಪಾಲಿಗೆ ಸಮಾಜವೆಂದರೆ, ಹಿಂದೂ ಸಮಾಜವೆಂತಲೋ ಭಾರತೀಯ ಸಮಾಜವೆಂತಲೋ ಆಗಿರದೆ, ಅವರು ವಿಶ್ವಮಾನವರಾಗಿ ಬೆಳೆದುನಿಂತಿದ್ದರು.
ಜಗತ್ತಿನ ಪ್ರತಿಯೊಬ್ಬ ಜೀವಿಯ ಬಗೆಗೂ ಕಾಳಜಿವಹಿಸುವಷ್ಟು ಸ್ವಾಮಿ ವಿವೇಕಾನಂದರು ಉದಾರಿಗಳಾಗಿದ್ದರು. ಪ್ರತಿಯೊಬ್ಬರ ಬದುಕೂ ಸುಧಾರಿಸಬೇಕೆಂಬ ವಾಂಚೆ ಅವರಲ್ಲಿ ಅದೆಷ್ಟು ಬಲವಾಗಿತ್ತೆಂದರೆ, ‘ನಾನು ಈ ದೇಹವನ್ನು ಹರಿದ ಬಟ್ಟೆಯಂತೆ ಬಿಸುಟು ಹೊರಡುತ್ತೇನೆ. ಆದರೆ ಎಲ್ಲಿಯವರೆಗೂ ಪ್ರತಿಯೊಬ್ಬ ವ್ಯಕ್ತಿಯೂ ನಾನು ಭಗವಂತನೊಂದಿಗೆ ಒಂದಾಗಿರುವೆನೆಂದು ಭಾವಿಸುವುದಿಲ್ಲವೋ ಅಲ್ಲಿಯವರೆಗೆ ಕೆಲಸ ಮಾಡುತ್ತಲೇ ಇರುತ್ತೇನೆ’ ಎಂದುಬಿಟ್ಟರು!
ಹೌದು. ಇದುವೇ ನಿಜವಾದ ಸುಧಾರಕನ ಲಕ್ಷಣ. ಅಂದುಕೊಂಡ ಕಾರ್ಯಕ್ಕಾಗಿ ಮತ್ತೆ ಜನ್ಮವೆತ್ತಲೂ ಅವನು ಹಿಂದುಮುಂದು ನೋಡಲಾರ. ಪ್ರತಿಯೊಬ್ಬನನ್ನು ಮೇಲೆತ್ತಿ ಅವನನ್ನು ಶ್ರೇಷ್ಠನನ್ನಾಗಿಸುವವರೆಗೂ ವಿಶ್ರಮಿಸಲಾರ. ಸುಧಾರಣೆ ಏನಾದರೂ ಸಾಧ್ಯವಿದ್ದರೆ ಅಂತಹ ಸುಧಾರಕರಿಂದ ಮಾತ್ರ. ಉಳಿದಂತೆ ಪೋಸ್ಟರು-ಬ್ಯಾನರುಗಳ ಮೂಲಕ ಸುಧಾರಣೆಯ ಡಿಂಡಿಮ ಬಾರಿಸುವವರು ಅದೆಷ್ಟು ಬೊಬ್ಬೆ ಹೊಡೆದರೂ ಸುಧಾರಣೆ ಕಾಣದಿರುವುದು ಏಕೆಂದು ಈಗಲಾದರೂ ಅರ್ಥವಾಗಿರಬೇಕಲ್ಲ?
ನಾವಾದರೂ ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಹೆಜ್ಜೆಯಿಡೋಣ. ಸೇವೆಯ ಮೂಲಕ ಸುಧಾರಣೆಯ ಪಣತೊಡೋಣ.
– ಚಕ್ರವರ್ತಿ ಸೂಲಿಬೆಲೆ
IF YOU CAN’T MAKE IT, FAKE IT!!- ಗಂಭೀರ ಚರ್ಚೆಗೆ ಸಿಲುಕದ ಮೋಸದ ಸಂಗತಿ
ಅದು ಆಗೋದು ಹಾಗೇ. ಎತ್ತರದ ಜಾಗದಲ್ಲಿ ಕುಳಿತವನೊಬ್ಬ ಅದೇನೇ ತಪ್ಪು ಮಾಡಿದರೂ, ಅವನ ಸ್ಥಾನದ ಮಹಿಮೆಯಿಂದ ಅವೆಲ್ಲವೂ ಮುಚ್ಚಿ ಹೋಗ್ತದೆ. ಆತ ಅದೆಷ್ಟು ವಂಚನೆಗಳನ್ನು ಮೆಟ್ಟಿಲಾಗಿಸಿಕೊಂಡು ಆ ಎತ್ತರವನ್ನು ಏರಿರುತ್ತಾನೆಂದರೆ, ಸ್ವತಃ ಅವನಿಗೇ ಅದನ್ನು ನೋಡಲು ಭಯ. ಅದಕ್ಕೇ ಆತ ಆದಷ್ಟೂ ಆ ಹಳೆ ವಂಚನೆಗಳನ್ನು ತನ್ನ ಕೋಟಿನ ತುದಿಗೂ ತಗುಲದ ಹಾಗೆ ಚಾಲಾಕಿ ತನದಿಂದ ವರ್ತಿಸ್ತಾನೆ. ಈ ಮಾತು ಅಮೆರಿಕಕ್ಕೂ ಸಲ್ಲುತ್ತದೆ. ಅದು ತನ್ನ ಚಂದ್ರಯಾನದ ಬಗ್ಗೆ ಈಗ / ಈಗ ಯಾಕೆ, ಹೋಗಿ ಬಂದು ಒಂದು ಸುತ್ತು ಪ್ರಚಾರ ಕೊಟ್ಟುಕೊಂಡ ನಂತರದಿಂದಲೂ ಮಾತೇ ಆಡುವುದಿಲ್ಲ.
ಸುಮಾರು ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಈ ಮಹಾನ್ ಚಂದ್ರಯಾನ ಸಾಧನೆಯ ಕುರಿತು ಅಂತರ್ಜಾಲದ ಅಧಿಕೃತ ಮಾಹಿತಿಯನ್ನಾಧರಿಸಿ ಬರೆದಿದ್ದ ಲೇಖನವನ್ನು ಈಗ ಮತ್ತೆ ಗಮನಕ್ಕೆ ತರುವುದು ಸೂಕ್ತವೆನಿಸುತ್ತಿದೆ. ಇದಕ್ಕೆ ಕಾರಣವೂ ಇದೆ.
ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಡಚ್ ರಾಷ್ಟ್ರೀಯ ವಸ್ತು ಸಂಗ್ರಹಾಲಯ ರಿಜ್ಕ್ಸ್ ಮ್ಯೂಸಿಯಮ್ ಒಂದು ಸಂಗತಿಯನ್ನು ಬಹಿರಂಗಪಡಿಸಿತು. ತನ್ನ ಸಂಗ್ರಹದಲ್ಲಿರುವ, ಚಂದ್ರನಿಂದ ತಂದಿದ್ದೆಂದು ಹೇಳಲಾದ ಕಲ್ಲು ವಾಸ್ತವದಲ್ಲಿ ಚಂದ್ರನಿಂದ ತಂದುದಾಗಿರದೆ, ಕಲ್ಲಾಗಿರುವ (ಜಡಗಟ್ಟಿದ) ಮರದ ತುಂಡು ಎಂದು ಸಾಬೀತಾಗಿರುವ ವಿಷಯವನ್ನು ಅದು ಹೇಳಿತು. ಬಾಹ್ಯಾಕಾಶ ಸಂಶೋಧಕರೊಬ್ಬರು ವಿವಿಧ ಪರೀಕ್ಷೆಗಳ ನಂತರ ಅದನ್ನು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ ಮ್ಯೂಸಿಯಮ್ಮ್ಮಿನ ವಕ್ತಾರ ಕ್ಸಾಂಡ್ರಾ ವಾನ್ ಜೆಲ್ಡರ್, ತಾವು ಕುತೂಹಲಕ್ಕಾಗಿಯಾದರೂ ಈ ಕಲ್ಲನ್ನು ತಮ್ಮ ಸಂಗ್ರಹಾಲಯದಲ್ಲಿ ಇನ್ನು ಮುಂದೆಯೂ ಇರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದರು.
ಈ ಕಲ್ಲನ್ನು ೧೯೬೯ರಲ್ಲಿ ನೆದರ್ ಲ್ಯಾಂಡಿಗೆ ಭೇಟಿ ನೀಡಿದ್ದ ಅಮೆರಿಕನ್ ರಾಯಭಾರಿ ಜೆ.ವಿಲಿಯಮ್ ವಿಡೆನ್ ಡಾರ್ಫ್, ಅಂದಿನ ಪ್ರಧಾನಿ ವಿಲ್ಲೆಮ್ ಡ್ರೀಸ್ ಮೆನ್ನರಿಗೆ ಉಡುಗೊರೆಯಾಗಿ ನೀಡಿದ್ದರು. ೧೯೯೮ರಲ್ಲಿ ಡ್ರೀಸ್ ಮೆನ್ನರ ಮರಣದ ನಂತರ ಸಂಗ್ರಹಾಲಯವು ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
ಇದು ಉತ್ತರ ಪಡೆಯಲಾಗದಂತಹ ಪ್ರಶ್ನೆಗಳುಳ್ಳ ಒಂದು ಕಥೆಯಂತಿದೆ. ಈ ಬಗ್ಗೆ ನಾವು ನಗಬಹುದಷ್ಟೆ! ಎನ್ನುತ್ತಾರೆ ಮಿಸ್ ಕ್ಸಾಂಡ್ರಾ. ನಾವೂ ಅಷ್ಟೇ… ಏನಂತೀರಿ!?
~ ಚಕ್ರವರ್ತಿ ಸೂಲಿಬೆಲೆ
ಮೋಸ, ಕೊಲೆ ಏನಾದರೂ ಸರಿ. ಮೇಲೆ ಬರಬೇಕು ಅಷ್ಟೆ!
ಮಾನವನಿಟ್ಟ ಪುಟ್ಟ ಹೆಜ್ಜೆ, ಮನುಕುಲದ್ದೊಂದು ದಿಟ್ಟ ನೆಗೆತ ಚಂದ್ರನ ಮೇಲೆ ಕಾಲಿಟ್ಟೊಡನೆ ನೀಲ್ ಆರ್ಮ್‌ಸ್ಟ್ರಾಂಗ್ ಹೇಳಿದ ಮಾತಿದು. ಇಡಿಯ ಜಗತ್ತು ಅವತ್ತು ಚಂದ್ರನೊಂದಿಗೆ ಏಕಾತ್ಮವಾಗಿಬಿಟ್ಟಿತ್ತು. ಅಮೆರಿಕದ ಸಾಧನೆಗೆ ತಲೆದೂಗಿ ನಿಂತಿತ್ತು. ಈ ಘಟನೆ ನಡೆದ ೩೬ ವರ್ಷಗಳ ನಂತರ ಅದೇ ಅಮೆರಿಕ ಧೂಮಕೇತುವಿಗೆ ಗುದ್ದಿ ಸಾಧನೆಯ ಪುಟದಲ್ಲಿ ಮತ್ತೊಮ್ಮೆ ಹೆಸರು ಬರೆದಿದೆ.
ಆದರೆ ಒಂದ್ನಿಮಿಷ ಆಲೋಚಿಸಿ ನೋಡಿ. ತಮ್ಮ ಪಾಡಿಗೆ ತಾವಿದ್ದ ಆಕಾಶಕಾಯಗಳನ್ನು ಮುಟ್ಟುವ, ತಟ್ಟುವ, ಅದೇ ಹೆಸರಿನಲ್ಲಿ ಆನಂದದಿಂದ ಕುಣಿದಾಡುವ ಹಕ್ಕು ನಮಗೆಲ್ಲಿಯದು? ಇತರ ರಾಷ್ಟ್ರಗಳಿಗಿಂತ ಮುಂದಿದ್ದೇವೆ, ಎತ್ತರದಲ್ಲಿದ್ದೇವೆ ಎನ್ನುವ ತವಕದಿಂದ ಅಮೆರಿಕ ನಾಸಾದ ಮೂಲಕ ಮಾಡಿಸುವ ಕೆಲಸಗಳೆಲ್ಲ ಮನುಕುಲಕ್ಕೊಂದು ದೊಡ್ಡ ಹೊಡೆತವೇ ಅಲ್ಲವೇ? ಇಷ್ಟಕ್ಕೂ ಅಮೆರಿಕ ಮಾಡಿರುವ ಸಾಧನೆಗಳು ಎಷ್ಟರ ಮಟ್ಟಿಗೆ ಸಾರ್ಥಕವಾದುದು, ಸತ್ಯವಾದುದು ಎಂಬುದೇ ಗಂಭೀರವಾದ ಪ್ರಶ್ನೆ.
ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಕೆಲವು ವರ್ಷಗಳ ನಂತರ, ಈ ಪ್ರಶ್ನೆ ವಿಜ್ಞಾನಿಗಳನ್ನು ವ್ಯಾಪಕವಾಗಿ ಕಾಡಲಾರಂಭಿಸಿತ್ತು. ಬಿಲ್ ಕೇಸಿಂಗ್ ಎಂಬ ಖಗೋಳ ವಿಜ್ಞಾನಿಯಂತೂ ಅಮೆರಿಕ ಚಂದ್ರನ ಮೇಲೆ ಕಾಲಿಟ್ಟಿದ್ದೇ ಸುಳ್ಳು ಎಂದು ಪುರಾವೆಗಳೊಂದಿಗೆ ವಾದಿಸಿದರು. ಆರ್ಮ್‌ಸ್ಟ್ರಾಂಗ್ ನಿಂತ ಜಾಗದ ಹಿಂಭಾಗದಲ್ಲೆಲ್ಲೂ ನಕ್ಷತ್ರಗಳೇ ಇಲ್ಲ. ಆತ ಚಂದ್ರನ ಮೇಲೆ ನೆಟ್ಟ ಬಾವುಟ ಗಾಳಿಗೆ ಪಟಪಟಿಸುತ್ತಿದೆ. ಆದರೆ ಚಂದ್ರನ ಮೇಲೆ ವಾತಾವರಣವೇ ಇಲ್ಲ; ಗಾಳಿಯೆಲ್ಲಿಯದು? ರಾಕೆಟ್ಟುಗಳ, ಇಂಜಿನ್ನುಗಳ ಸದ್ದು ಅದೆಷ್ಟು ಜೋರೆಂದರೆ, ಅಕ್ಕ ಪಕ್ಕದವರು ಅರಚಿದರೂ ಕೇಳುವುದಿಲ್ಲ. ಅಂತಹುದರಲ್ಲಿ ಆರ್ಮ್‌ಸ್ಟ್ರಾಂಗ್ ಮಾತನಾಡಿದ್ದನ್ನು ಭೂಮಿಯ ಜನರಿಗೆ ಕೇಳಿಸಲಾಗಿದೆ. ಆ ಮಾತುಗಳ ಹಿಂದೆ ಎಲ್ಲೂ ಎಂಜಿನ್ನಿನ ಸದ್ದೇ ಇಲ್ಲವಲ್ಲ! ಸೂರ್ಯನ ಬೆಳಕು ಬಿಟ್ಟರೆ ಬೇರೆ ಬೆಳಕೇ ಇಲ್ಲದ ಜಾಗದಲ್ಲಿ ಚಂದ್ರದ ಮೇಲೆ ಕಾಲಿಟ್ಟವರ ಚಿತ್ರಗಳು ಸ್ಫುಟವಾಗಿ ಬಂದದ್ದು ಹೇಗೆ? ಕೇಸಿಂಗ್ ಈ ಪ್ರಶ್ನೆಗಳನ್ನು ಮುಂದಿಟ್ಟಾಗ ನಾಸಾದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದರು. ಕೇಸಿಂಗ್‌ನ ತಲೆ ಕೆಟ್ಟಿದೆ ಎಂದು ವಾದಿಸಿದರು!
ನಿಜ ಹೇಳಬೇಕೆಂದರೆ, ಅಮೆರಿಕ ಖಗೋಳ ವಿಜ್ಞಾನದಲ್ಲಿ ಸಾರ್ವಭೌಮತೆ ಸಾಧಿಸುವ ನೆಪದಲ್ಲಿ ಹೀಗೊಂದು ನಾಟಕ ಹೂಡಿತ್ತು. ೧೯೫೭ ರಲ್ಲಿ ಸ್ಫುಟ್ನಿಕ್ ಉಪಗ್ರಹವನ್ನು ಕಕ್ಷೆಗೆ ಬಿಟ್ಟ ರಷ್ಯಾ ಬಲುದೊಡ್ಡ ಸಾಧನೆ ಮಾಡಿತ್ತು. ಶೀತಲ ಸಮರದ ವೇಳೆಗೆ ರಷ್ಯಾವನ್ನು ಶತಾಯಗತಾಯ ಮೆಟ್ಟಬೇಕೆಂದುಕೊಂಡಿದ್ದ ಅಮೆರಿಕಕ್ಕೆ ಇದು ಬಲುದೊಡ್ಡ ಆಘಾತ. ತಾವು ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಅವರ ಯತ್ನ ವಿಫಲವಾಗಿತ್ತು. ಆಗ ಅಮೆರಿಕಾ ಅಧ್ಯಕ್ಷರು ‘ಹೇಗಾದರೂ ಸರಿಯೇ’ ತಾವು ರಷ್ಯಾಕ್ಕೆ ಪ್ರತ್ಯುತ್ತರ ಕೊಡಲೇಬೇಕೆಂದು ತಾಕೀತು ಮಾಡಿದರು.
ಆ ಮಾತನ್ನು ಪ್ರಸಾದವಾಗಿ ಸ್ವೀಕರಿಸಿದ ನಾಸಾದ ವಿಜ್ಞಾನಿಗಳು, ಚಂದ್ರನ ಮೇಲೆ ಕಾಲಿಟ್ಟು ಬರುವ ಎನ್ನುವುದು ಅವರಿಗೆ ಗೊತ್ತಿತ್ತು. ಆದರೂ ಜನರ ಕಣ್ಣಿಗೆ ಮಣ್ಣೆರಚತೊಡಗಿದರು. ಗ್ರಿಸಮ್ ನೇತೃತ್ವದ ತಂಡವನ್ನು ರಚಿಸಿದರು. ವಿಜ್ಞಾನಿಗಳು ಮೋಸ ಮಾಡುವ ವಿಚಾರ ಗೊತ್ತಾದೊಡನೆ, ಗ್ರಿಸಮ್ ಪ್ರತಿಭಟಿಸಿದ. ಅವನ ಹತ್ಯೆಯೇ ಆಗಿ ಹೋಯಿತು! ಚಂದ್ರನತ್ತ ಹೋಗಬೇಕಿದ್ದ ಅವನ ನೌಕೆ ಭೂಮಿ ಬಿಡುವ ಮುನ್ನವೇ ಭಸ್ಮವಾಯಿತು. ಅವನ ಇತರ ಜತೆಗಾರರು ನಿಗೂಢವಾಗಿ ಕೊಲೆಯಾಗಿಬಿಟ್ಟರು. ಆನಂತರವೇ ನೀಲ್ ಆರ್ಮ್‌ಸ್ಟ್ರಾಂಗ್‌ನ ತಂಡ ರೆಡಿಯಾಗಿದ್ದು. ಆ ತಂಡ ನೌಕೆಯಲ್ಲಿ ಕುಳಿತು ಎಂಟು ದಿನಗಳ ಕಾಲ ಜಗತ್ತಿನ ಪ್ರದಕ್ಷಣೆ ಮಾಡಿ ಏರಿಯಾ ಎನ್ನುವ ಅಮೆರಿಕದ ರಕ್ಷಿತ ಪ್ರದೇಶಕ್ಕೆ ಹೋಗಿ, ಬಗೆಬಗೆಯ ಫೋಟೊ ತಂದಿತು. ಅಲ್ಲಿಂದಲೇ ಆರ್ಮ್‌ಸ್ಟ್ರಾಂಗ್ ಮಾತನಾಡಿ ಭುವಿಯ ಜನರನ್ನು ರೋಮಾಂಚನಗೊಳಿಸಿದ. ಚಂದ್ರ ನೋಡಲಿಕ್ಕೆ ಥೇಟ್ ಅಮೆರಿಕದ ಮರುಭಮಿಯಂತೆ ಇದೆ ಎಂದೂ ನೀಲ್ ಉದ್ಗರಿಸಿದ್ದ. ವಾಸ್ತವವಾಗಿ ಅವನು ಅಮೆರಿಕದ ಮರುಭೂಮಿಯ ಮೇಲೆಯೇ ಇದ್ದ !
ಅಮೆರಿಕ ಜಗತ್ತಿನ ಕಂಗಳಲ್ಲಿ ರಷ್ಯಾಕ್ಕಿಂತಲೂ ಎತ್ತರಕ್ಕೇರಿಬಿಟ್ಟಿತು. ಅವರನ್ನು ಮೀರಿಸುವರೇ ಇಲ್ಲವಾಗಿಬಿಟ್ಟರು. ಇದೇ ಸಂದಭದಲ್ಲಿಯೇ ಅಮೆರಿಕದ ಪೌಲ್ ಲಾಜೆರಸ್, ಮಂಗಳನ ಮೇಲೆ ಕಾಲಿಡುವ ಕ್ಯಾಪ್ರಿಕಾರ್ನ್ ಒನ್ ಎಂಬ ಚಿತ್ರ ನಿರ್ಮಿಸಿದ್ದು. ಈ ಚಿತ್ರ ಇದೇ ರೀತಿ ರಾಷ್ಟ್ರವೊಂದು ಜನರಿಗೆ ಮೋಸ ಮಾಡುವುದನ್ನೇ ಬಂಡವಾಳವಾಗಿಸಿಕೊಂಡಿತ್ತು. ನನ್ನ ಕಡಿಮೆ ಬಜೆಟ್ಟಿನಲ್ಲಿಯೇ ನಾನು ಮಂಗಳನ ಮೇಲೆ ಕಾಲಿಟ್ಟ ಅನುಭವ ನೀಡಲಬಲ್ಲೆನಾದರೆ, ನಲವತ್ತು ಬಿಲಿಯನ್ ಡಾಲರ್‌ಗಳನ್ನು ಸುರಿದ ಅಮೆರಿಕ ಸರಕಾರ ಚಂದ್ರನ ಮೇಲೆ ಕಾಲಿರಿಸಿದ್ದನ್ನು ನಂಬಿಸುವುದು ಕಷ್ಟವಲ್ಲ ಎಂದು ಲಾಜೆರಸ್ ಯಾವಾಗಲೂ ಹೇಳುತ್ತಿದ್ದ! ಹೌದು. ಅದು ಭೂಮಿಯ ಮೇಲಿನ ಇದುವರೆಗಿನ ಕಾಸ್ಟ್ಲಿ ಮೋಸ, ಕಾಸ್ಟ್ಲಿಯೆಸ್ಟ್ ಸಿನಿಮಾ!
ಈ ಹಿನ್ನೆಲೆಯಲ್ಲಿಯೇ ಅಮೆರಿಕ ಯಾವುದಕ್ಕೆ ಕೈಯಿಟ್ಟರೂ ಹೆದರಿಕೆಯಾಗೋದು. ಅಲ್ಲಿ ಕೊಲೆಗಳಾಗಿಬಿಡುತ್ತವೆ. ಸತ್ಯ ಹುದುಗಿಸುವ ಪ್ರಯತ್ನಗಳ ಹಿಂದೆ ಘೋರ ಪಾತಕಗಳೂ ನಡೆದುಬಿಡುತ್ತವೆ! ಕಲ್ಪನಾ ಚಾವ್ಲಾಳ ಸಾವು ಕೂಡ ಅನುಮಾನವಾಗಿ ಕಾಡುವುದು ಇದಕ್ಕೇ. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳೆಂದು ಕರೆದುಕೊಳ್ಳುವ ನಾಸಾದವರು ಸಂಪೂರ್ಣ ವಿಫಲರಾಗಿಬಿಟ್ಟ ಯೋಜನೆ ಅದು. ತಮ್ಮ ವಿಫಲತೆಯನ್ನು ಮರೆಮಾಚಲು ಸತ್ತವರ ಬಗೆಗಿನ ಭಾವನೆಗಳನ್ನು ಬಡಿದೆಬ್ಬಿಸಿದರು. ತಾವು ಮತ್ತೆ ಗ್ರೇಟ್ ಆಗಿಬಿಟ್ಟರು! ಧೂಮಕೇತುವಿಗೆ ಡೀಪ್ ಇಂಪ್ಯಾಕ್ಟ್ ಮಾಡಿದ್ದೂ ಅದೇ ಹಿನ್ನೆಲೆಯ ಕಥೆ. ತನ್ನ ಪಾಡಿಗೆ ತಾನು ಸೂರ್ಯನ ಸುತ್ತುವ ಕಾಯವೊಂದಕ್ಕೆ ಹೋಗಿಡಿಕ್ಕಿ ಹೊಡೆದು ಇವರು ಮಾಡುವುದಾದರೂ ಏನು ಹೇಳಿ? ಅಕಸ್ಮಾತ್ ಇವರಿಟ್ಟ ಒಂದು ತಪ್ಪು ಹೆಜ್ಜೆ, ಇಡಿಯ ವಿಶ್ವ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲಗೊಳಿಸಿಬಿಟ್ಟರೆ ಗತಿ ಯಾರು? ನಾಲ್ಕಾರು ನದಿಗಳನ್ನು ಜೋಡಿಸೋಣ ಎನ್ನುವ ಮಾತಿಗೇ ನಾವು ಚರ್ಚೆಗಿಳಿಯುತ್ತೇವೆ, ಬಡಿದಾಡುತ್ತೇವೆ. ದೇಶ ಮರುಭೂಮಿಯಾಗಿಬಿಡುತ್ತದೆಂದು ಗೋಳಿಡುತ್ತೇವೆ. ಅಂತಹುದಲ್ಲಿ ಯಾರೊಂದಿಗೂ ಚರ್ಚಿಸದೇ, ತನ್ನ ಮೂಗಿನ ನೇರಕ್ಕೇ ಆಲೋಚಿಸಿ ಅಕಾಶಕಾಯಗಳ ಸುದ್ದಿಗಿಳಿಯುವ ಹಕ್ಕು ಅಮೆರಿಕಕ್ಕೆ ಕೊಟ್ಟವರು ಯಾರು?
ಆದರೆ ಅಮೆರಿಕವನ್ನು ಹೀಗೆ ಪ್ರಶ್ನಿಸಲಿಕ್ಕೆ ಯಾರೂ ಮುಂದಾಗೋದೇ ಇಲ್ಲ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ದಿನ, ಅದು ಮೋಸ ಎಂದು ಯಾರಾದರೂ ಹೇಳಿದ್ದರೆ ಅವರು ಪೆಟ್ಟು ತಿನ್ನುತ್ತಿದ್ದರು. ಡಬ್ಲು ಟಿ ಸಿ ಕಟ್ಟಡಗಳು ಉರುಳಿದಾಗ ಅದರ ಹಿಂದೆಯೂ ಅಮೆರಿಕದ್ದೇ ಕೈವಾಡವಿದೆ ಎಂದಾಗ ಬೊಗಳೆ ಎಂದಿದ್ದರು. ಅಪ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಲು ಅಮೆರಿಕ ಹೂಡಿದ ನಾಟಕವಿದು ಎಂದರೂ ಯಾರೂ ಕೇಳಿರಲಿಲ್ಲ. ಈಗ ನೋಡಿ, ಪರದೆ ಸರಿದು ಸತ್ಯ ಹೊರಬರಲಾರಂಭಿಸಿದೆ. ಅಮೆರಿಕದ ರಾದ್ಧಾಂತಗಳು ಅಥವಾಗುತ್ತಿವೆ!
‘ಜಾಗೋ ಭಾರತ್’ನ ಕೈಜೋಡಿಸಬೇಕೆಂದರೆ….
ನಿರಂತರ ಓಡಾಟ, ಪುಸ್ತಕ ಬರಹದ ಒತ್ತಡಗಳಿಂದಾಗಿ ನಿಮ್ಮ ಜೊತೆ ಬೆರೆಯಲಾಗ್ತಿಲ್ಲ. ದಯವಿಟ್ಟು ಕ್ಷಮಿಸಿ.
ಈ ನಡುವೆ, ‘ರಾಷ್ಟ್ರ ಶಕ್ತಿ ಕೇಂದ್ರ’ ಹಾಗೂ ‘ಜಾಗೋ ಭಾರತ್’ ಕುರಿತು ಮಾಹಿತಿ ಕೇಳಿ, ನಾವೂ ಬಾಗವಹಿಸಬಹುದೆ ಎಂದು ವಿಚಾರಿಸಿ ಸಾಕಷ್ಟು ಸಂದೇಶ, ಮೇಲ್ ಹಾಗೂ ಕರೆಗಳು ಬಂದಿವೆ. ಆದ್ದರಿಂದ, ಹೀಗೆ ಬ್ಲಾಗಿಗೆ ಹಾಕಿಬಿಟ್ಟರೆ, ಕಮ್ಯುನಿಕೇಟ್ ಮಾಡೋದು ಸುಲಭ, ಹಾಗೂ ಮಾಹಿತಿ ನೀಡಲು ಅನುಕೂಲ ಎನ್ನಿಸಿ ಇಲ್ಲಿ ಬರೆಯುತ್ತಿರುವೆ.
ಬದಲಾದ ಅವಶ್ಯಕತೆ ಹಾಗೂ ಸನ್ನಿವೇಶಗಳಿಗೆ ತಕ್ಕಂತೆ ರಾಷ್ಟ್ರ ಶಕ್ತಿ ಕೇಂದ್ರವನ್ನು ಪುನರ್ ರೂಪಿಸುವ ಯೋಜನೆ ಕಣ್ಣ ಮುಂದಿದೆ. ಒಂದು ವಿನ್ಯಾಸ ರೆಡಿ ಮಾಡಿಕೊಂಡು ನಿಮ್ಮೆದುರು ಹಾಜರಾಗುವೆ. ನಾವೆಲ್ಲ ಸದಸ್ಯರೂ ಈ ಬಗ್ಗೆ ಯೋಚಿಸುತ್ತಿದ್ದೇವೆ.
ಇನ್ನು, ಜಾಗೋ ಭಾರತ್ ಕುರಿತು…
ದೇಶ ಪ್ರೇಮದ, ದೇಶ ಭಕ್ತಿಯ ಗೀತೆಗಳನ್ನು ಭಾವ ತುಂಬಿ ಹಾಡಬಲ್ಲ ಸ್ಕಿಲ್ ನಿಮ್ಮಲ್ಲಿದ್ದರೆ ಆಯಿತು. ಅಥವಾ ಯಾವುದೇ ವಾದ್ಯ ಸಂಗೀತದಲ್ಲಿ ನಿಮಗೆ ಪರಿಶ್ರಮವಿದೆಯೆಂದಾದರೂ ಸರಿಯೇ.
ನಿಮ್ಮಲ್ಲಿ ಉತ್ಸಾಹ ಹಾಗೂ ದೇಶ ಪ್ರೇಮಗಳು ಭೋರ್ಗರೆಯುತ್ತಿರಬೇಕೆನ್ನುವುದೇ ನಿಮಗಿರಬೇಕಾದ ಮೊದಲ ಅರ್ಹತೆ.
ಹಾಗೆ ನೀವು ನಿಮ್ಮ ಬಿಡುವಿನ ಸಮಯ, ಅಥವಾ, ಸಮಯ ಮಾಡಿಕೊಳ್ಳುವ ಅವಕಾಶ ಹೊಂದಿರುವಿರೆಂದಾದರೆ ನಮಗೆ ಕರೆ ಮಾಡಿ. ನಿಮ್ಮಲ್ಲಿ ದೇಶದ ಬಗ್ಗೆ, ನಾಡು ನುಡಿಯ ಬಗ್ಗೆ ಅಪಾರ ಗೌರವಾಭಿಮಾನಗಳಿದ್ದು, ಅಧಿಕಾರಯುತವಾಗಿ, ಭಾವೋದ್ದೀಪನಗೊಳಿಸುವಂತೆ ಮಾತನಾಡುವ ಕೌಶಲವಿದ್ದರೂ ಸರಿಯೇ…
ನಮ್ಮದು ಈಗಾಗಲೇ ಒಂದು ತಂಡವಿದೆ. ಆದರೆ ಜಾಗೋ ಭಾರತ್ ಎಲ್ಲ ರಾಷ್ಟ್ರಾಸಕ್ತರ ತಂಡವಾಗಬೇಕು ಎನ್ನುವುದು ನಮ್ಮ ಬಯಕೆ. ನಿಮ್ಮಲ್ಲಿ ಆಸಕ್ತಿ ಇದ್ದರೆ, ನಮ್ಮನ್ನು ಸಂಪರ್ಕಿಸಿ.
ಹತ್ತಾರು ತಂಡಗಳ ರಚನೆಯಾಗಲಿ… ಹೊತ್ತಿಕೊಂಡ ಒಂದು ಹಣತೆ ನೂರು- ಸಾವಿರ ದೀಪಗಳನ್ನು ಬೆಳಗಲಿ…
ಸಂಪರ್ಕ ಸಂಖ್ಯೆಗಳು: ಚಕ್ರವರ್ತಿ ಸೂಲಿಬೆಲೆ- 9448423963
ಅಥವಾ 9480544508
ವಂದೇ,
ಚಕ್ರವರ್ತಿ ಸೂಲಿಬೆಲೆ
ಆಕ್ರಮಣಗಳು ಮತ್ತು ಸಾಂಸ್ಕೃತಿಕ ಪಲ್ಲಟ
“ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” – ಸಾನೆ ಗುರೂಜಿ
ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?
ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.
ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ. ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.
ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.
ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.
ಇರಲಿ. ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!
ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.
ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.
ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.
ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.
“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!
~
ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.
ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!
ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!
ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.
ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ, “ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!
ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?
ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.
ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.
ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’. ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.
ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.
~ ಚಕ್ರವರ್ತಿ ಸೂಲಿಬೆಲೆ
ಶಿಕ್ಷಕನಾಗಲು ಅದೇಕೆ ಅಸಡ್ಡೆ?
ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಖೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?
ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!
ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.
ಅದೇಕೋ ಸದ್ಗುರುಗಳಾಗುವ ಹಂಬಲ ಇಂದಿನ ಪೀಳಿಗೆಯಲ್ಲಿ ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು ಅಪ್ಪ-ಅಮ್ಮ ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!
ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !
ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್‌ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ! ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್‌ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.
ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.
ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ ಅದಕ್ಕೇ.
ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.
ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರು. ಭಾರತ ತೊಂದರೆಯಲ್ಲಿ ಸಿಲುಕಿಕೊಂಡಾಗಲೆಲ್ಲ ಆಚಾರ್ಯರು – ಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
– ಚಕ್ರವರ್ತಿ ಸೂಲಿಬೆಲೆ
ಒನ್ ಮ್ಯಾನ್ ಆರ್ಮಿ- ಗಾಂಧಿ!
ಸೋಮನಾಥ ದೇವಾಲಯ ಹಿಂದೂಗಳ ಮೇಲಿನ ಅತ್ಯಾಚಾರದ ಪ್ರತೀಕವಾಗಿ ನಿಂತಿತ್ತು. ಅದನ್ನು ಮತ್ತೆ ನಿರ್ಮಣ ಮಾಡಿ, ದಾಳಿಕೋರರ ಅತ್ಯಾಚಾರದ ನೆನಪುಗಳನ್ನು ಮೆಟ್ಟಿನಿಲ್ಲುವ ಕೆಲಸ ಆಗಬೇಕಿತ್ತು. ವಿಷಯ ಪ್ರಧಾನಿ ನೆಹರೂ ಬಳಿ ಬಂದಾಗ, ಸರ್ಕಾರ ಒಂದು ಪೈಸೆ ಕೊಡಲಾರದು ಎಂದುಬಿಟ್ಟರು. ಸೋಮನಾಥ ಮಂದಿರ ಕಟ್ಟುವುದರಿಂದ ಮುಸಲ್ಮಾನರಿಗೆ ನೋವಾದೀತೆಂಬ ಭಯ ಅವರಿಗಿತ್ತು. ಗೃಹ ಮಂತ್ರಿ ಪಟೇಲರು ಕಂಗಾಲಾದರು, ಗಾಂಧೀಜಿ ಬಳಿ ಓಡಿದರು. ನೆಹರೂಗೆ ಬುದ್ಧಿ ಹೇಳುವಂತೆ ಗೋಗರೆದರು. ಆಗ ‘ಸೋಮನಾಥ ದೇವಾಲಯ ಹಿಂದೂಗಳ ಶ್ರದ್ಧೆಯ ತಾಣ. ಅದರ ನಿರ್ಮಾಣಕ್ಕೆ ಸರ್ಕಾರ ಹಣ ಕೊಡಲಾರದೆಂದರೆ ತಿರಸ್ಕರಿಸೋಣ. ಒಬ್ಬೊಬ್ಬ ಹಿಂದೂವಿನಿಂದಲೂ ಹಣ ಸಂಗ್ರಹಿಸೋಣ. ಅಲ್ಲಿನ ಒಂದೊಂದು ಇಟ್ಟಿಗೆಯೂ ಹಿಂದೂವಿನದೇ ಆಗಿರಲಿ’ ಎಂದವರು ಗಾಂಧೀಜಿ! ಪಟೇಲರ ಶಕ್ತಿ ನೂರ್ಮಡಿಯಾಯಿತು. ಸೋಮನಾಥ ದೇವಾಲಯದ ನಿರ್ಮಾಣಕ್ಕೆ ಮುಂದಡಿಯಿಟ್ಟರು.
ಸ್ವಾತಂತ್ರ್ಯ ಹೋರಾಟದ ಅಂತಿಮ ಹಂತದ ಸಮಯ. ನೌಖಾಲಿಯಲ್ಲಿ ಇದ್ದಕ್ಕಿದ್ದ ಹಾಗೆ ದೊಂಬಿಗಳು ಶುರುವಿಟ್ಟವು. ಮುಸಲ್ಮಾನರು ಹಿಂದೂಗಳ ಮೇಲೆ ಆಘಾತಕಾರಿ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಹಿಂದೂಗಳು ತಿರುಗಿಬೀಳುವ ಹೊತ್ತಿಗೆ ಸರಿಯಾಗಿ ಈಗಿನ ಬಾಂಗ್ಲಾ ಪ್ರಾಂತ್ಯದಲ್ಲಿ ಬಹು ಸಂಖ್ಯಾತ ಮುಸಲ್ಮಾನರು ಹಿಂದೂಗಳನ್ನು ಕೊಲ್ಲತೊಡಗಿದರು. ಮೌಂಟ್ ಬ್ಯಾಟನ್ ೧೫ ಸಾವಿರ ಸೈನಿಕರನ್ನು ಅತ್ತ ಕಳಿಸಿಕೊಟ್ಟ. ನೌಖಾಲಿಗೆ ಗಾಂಧೀಜಿ ಒಬ್ಬಂಟಿ ಹೊರಟರು. “ಅಲ್ಲಿನ ಹಿಂದೂಗಳನ್ನು ನೀವು ರಕ್ಷಿಸಿ, ಇಲ್ಲಿನ ಮುಸಲ್ಮಾನರನ್ನು ರಕ್ಷಿಸುವ ಹೊಣೆ ನನಗಿರಲಿ” ಎಂದರು. ರಕ್ತಪಾತ ನಿಲ್ಲುವವರೆಗೆ ಉಪವಾಸ ಕುಳೀತುಕೊಳ್ಳುತ್ತೇನೆ ಎಂದರು. ಸೇಡಿನ ಕಿಚ್ಚಿನಿಂದ ಹಪಹಪಿಸುತ್ತಿದ್ದವರೂ ಗಾಂಧೀಜಿಯ ಮುಂದೆ ಮಂಡಿಯೂರಿ ಕುಳಿತರು. ಮೌಂಟ್ ಬ್ಯಾಟನ್ ಉದ್ಗರಿಸಿದ. “ದಂಗೆ ನಿಯಂತ್ರಿಸಿದ್ದು ಎರಡು ಸೇನೆಗಳು. ಒಂದೆಡೆ ೧೫ಸಾವಿರ ಸೈನಿಕರ ಸಮೂಹ, ಇನ್ನೊಂದೆಡೆ ಸಿಂಗಲ್ ಮ್ಯಾನ್ ಆರ್ಮಿ- ಗಾಂಧೀ!!”
ಇವು ಅಷ್ಟಾಗಿ ಚರ್ಚೆಗೆ ಬರದ ಗಾಂಧೀಜಿಯವರ ಚಿತ್ರಣಗಳು. ಗಾಂಧೀಜಿಗೆ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಅಪಾರ ಗೌರವ. ಗೀತೆಯ ಬಗ್ಗೆ ಅವರು ಸೊಗಸಾಗಿ ಬರೆದಿದ್ದಾರೆ. ರಾಷ್ಟ್ರದ ಸಮಸ್ಯೆಗಳಿಗೆ ಅದರಿಂದಲೇ ಪರಿಹಾರ ಹೇಳುತ್ತಾರೆ. ಇಷ್ಟಾಗಿಯೂ ಹಿಂದೂಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅತ್ತ ಮುಸಲ್ಮಾನರು ಗಾಂಧೀಜಿಯನ್ನು ಹಿಂದೂಗಳ ನಾಯಕರೆಂದು ದೂರೀಕರಿಸುತ್ತಾರೆ. ಯಾವ ಹರಿಜನರ ಉದ್ಧಾರಕ್ಕಾಗಿ ತಮ್ಮ ಬದುಕಿನ ಪ್ರತಿಯೊಂದು ಹನಿ ಬೆವರನ್ನೂ ಸುರಿಸಿದರೋ, ಅದೇ ಹರಿಜನರ ಪಾಲಿಗೆ ಗಾಂಧೀಜಿ ಮೆಚ್ಚಿನ ನಾಯಕರಲ್ಲ. ಇತ್ತ ಮೇಲ್ವರ್ಗದ ಜನ ಕೂಡ ಅವರನ್ನು ಆರಾಧಿಸುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಗಾಂಧೀಜಿಯೇ ಅಸ್ಪೃಶ್ಯರಾಗಿಬಿಟ್ಟರು!
ದೇಶ- ಧರ್ಮಗಳ ಚಿಂತನೆ ಮಾಡದೇ, ಅನ್ಯಾಯವನ್ನು ಪ್ರತಿಭಟಿಸದೇ ಎಲ್ಲರಂತೆ ಇದ್ದುಬಿಟ್ಟಿದ್ದರೆ ಅವರೊಬ್ಬ ಶ್ರೀಮಂತ ಬ್ಯಾರಿಸ್ಟರ್ ಆಗಿರುತ್ತಿದ್ದರು. ಹಾಗಾಗಲಿಲ್ಲ. ಶ್ರೀಮಂತಿಕೆಯ ಬದುಕಿಗೊಂದು ಸಲಾಮು ಹೊಡೆದು, ತುಂಡು ಧೋತಿ ಧರಿಸಿ ರಾಷ್ಟ್ರ ಸೇವೆಗೆ ಧುಮುಕಿದರು. ಯಾವ ವರ್ಗವನ್ನು ವಿವೇಕಾನಂದರ ನಂತರ ಯಾರೂ ಪ್ರತಿನಿಧಿಸಿರಲಿಲ್ಲವೋ ಅಂಥಹ ಬಡ- ದರಿದ್ರರ ದನಿಯಾದರು. ವಿದೇಶದಲ್ಲಿರುವಾಗಲೇ ಬಿಳಿಯರು ಕರಿಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ವಿರೋಧಿಸಿದರು. “ಹೊಡೆದರೆ ಹೊಡೆಸಿಕೊಳ್ಳಿ. ಬಡಿದರೆ ಬಡಿಸಿಕೊಳ್ಳಿ. ಬಡಿಯುವವರು ಎಷ್ಟೂಂತ ಬಡಿದಾರು? ” ಎಂಬ ಸಿದ್ಧಾಂತವನ್ನು ಹೋರಾಟಗಾರರ ಕೈಗಿತ್ತರು. ದಬ್ಬಾಳಿಕೆಗೆ ಒಳಗಾದವರೂ ಮೊದಲು ಇವರನ್ನು ವಿರೋಧಿಸಿದರು. ಆಮೇಲೆ ಅಪಹಾಸ್ಯಗೈದರು. ಇಷ್ಟಾದರೂ ಆಸಾಮಿ ಜಗ್ಗದಿದ್ದಾಗ ಅವರನ್ನೇ ಅನುಸರಿಸಿದರು! ತಮ್ಮ ನಾಯಕನಾಗಿ ಸ್ವೀಕರಿಸಿದರು. ದೂರ ದೇಶದಿಂಡ ಬಂದವನೊಬ್ಬ ನೊಂದವರ ಕಣ್ಣೀರೊರೆಸುವುದು ತಮಾಷೆಯ ಕೆಲಸವಲ್ಲ. ಇಡೀ ಬ್ರಿಟಿಷ್ ಸಮುದಾಯ ಹೋರಾಟಾದ ಈ ಹೊಸ ಅಸ್ತ್ರಕ್ಕೆ ಬೆದರಿತು. ಇಂಗ್ಲೆಂಡಿನ ಪತ್ರಿಕೆಗಳೂ ಅವರನ್ನು ಹಾಡಿ ಹೊಗಳಿದವು. ನೋಡನೋಡುತ್ತಿದ್ದಂತೆಯೇ ಗಾಂಧೀಜಿ ಕಣ್ಣೂಕೋರೈಸುವಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದ್ದರು.
ಇದೇ ಜಾಗತಿಕ ಖ್ಯಾತಿಯೊಂದಿಗೆ ಅವರು ಭಾರತಕ್ಕೆ ಬಂದಾಗ ಇಲ್ಲಿನ ಎಲ್ಲ ವರ್ಗಗಳೂ ಆಸಕ್ತಿಯಿಂದ ಕಾದಿದ್ದವು. ಗಾಂಧೀಜಿ ಅದ್ಭುತ ವಾಗ್ಮಿಯೇನಲ್ಲ. ಆದರೂ ಅವರು ಮಾತಾಡಲಿಕ್ಕೆ ನಿಂತರೆ ಜನಸ್ತೋಮವಿಡೀ ನಿಶ್ಶಬ್ದವಾಗುತ್ತಿತ್ತು. ಗಾಂಧೀಜಿಯವರ ಒಂದೊಂದು ಮಾತನ್ನೂ ವ್ಯರ್ಥವಾಗಲು ಬಿಡದೆ ಕೇಳಿಸಿಕೊಳ್ಳುವ ಶ್ರದ್ಧೆಯಿರುತ್ತಿತ್ತು. ಅದು, ಗಾಂಧೀಜಿ ವ್ಯಕ್ತಿತ್ವದ ತಾಖತ್ತು.
ಕ್ರಾಂತಿಕಾರಿಗಳ ಹೋರಾಟ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಾಗ, ಗಾಂಧೀಜಿ ರಾಷ್ಟ್ರೀಯ ಚಳುವಳಿಯನ್ನು ಅತಿ ಕೆಳ ವ್ಯಕ್ತಿಯವರೆಗೂ ಕೊಂಡೊಯ್ದಿದ್ದರು. ಅಸಹಕಾರ ಚಳುವಳಿಗೆಂದು ಗಾಂಧೀಜಿ ನೀದಿದ ಒಂದೇ ಕರೆಗೆ ದೇಶದ ಎಲ್ಲ ವರ್ಗದ ಜನ ಸೆಟೆದು ನಿಂತಿದ್ದರು. ತಿಲಕರು ಸ್ವರಾಜ್- ಸ್ವದೇಶ್ ಪದಗಳನ್ನು ಹುಟ್ಟುಹಾಕಿದರು. ನಿಜ. ಗಾಂಧೀಜಿ ಅವುಗಳ ಕಲ್ಪನೆಯನ್ನು ಸಾಕಾರಗೊಳಿಸುವ ಮಾರ್ಗವನ್ನು ಜನರ ಮುಂದಿಟ್ಟರು.
ಗಾಂಧೀಜಿ ಮತ್ತು ಸುಭಾಷರ ಬಾಂಧವ್ಯದ ಬಗ್ಗೆಯೂ ಒಂದಷ್ಟು ವಿಷಯಗಳನ್ನು ಬೇಕೆಂದೇ ಮುಚ್ಚಿಡಲಾಗುತ್ತದೆ. ಅವರಿಬ್ಬರ ಸಂಬಂಧ ತಂದೆ- ಮಗನಂತಿತ್ತು ಅನ್ನೋದು ಬಹಳ ಜನರಿಗೆ ಗೊತ್ತೇ ಇಲ್ಲ. ಪತ್ರ ಬರೆವಾಗಲೆಲ್ಲ ಗಾಂಧೀಜಿ “ನಮ್ಮಲ್ಲಿನ ವೈಚಾರಿಕ ಭೇದ ನಮ್ಮ ಸಂಬಂಧಕ್ಕೆ ಧಕ್ಕೆ ತರಬಾರದು” ಎನ್ನುತ್ತಿದ್ದರು. ಒಮ್ಮೆಯಂತೂ ಪತ್ರದಲ್ಲಿ “ನನ್ನ ನಿನ್ನ ವಿಚಾರಗಳು ವಿಮುಖವಾದವು. ನಾನು ಮುದುಕ, ನೀನು ತರುಣ. ನಿನ್ನ ಚಿಂತನೆ- ವಾದಗಳೇ ಸರಿಯಾಗಿರಲಿ ಎಂದು ಆಶಿಸುತ್ತೆನೆ. ನಿನ್ನ ವಾದದಿಂದಲೇ ದೇಶಕ್ಕೆ ಲಾಭ ಎನ್ನುವುದಾದರೆ ನಾನು ಮಾಜಿ ಸತ್ಯಾಗ್ರಹಿಯಾಗಿ ನಿಷ್ಠೆಯಿಂದ ನಿನ್ನನ್ನು ಅನುಸರಿಸುತ್ತೇನೆ” ಎಂದಿದ್ದರು. ನಮ್ಮ ಸುಭಾಷ್ ದೇಶಭಕ್ತರ ಗುಂಪಿನಲ್ಲಿ ಮಿಂಚುವ ವೀರ ಎಂದು ಹೆಮ್ಮೆಪಡುತ್ತಿದ್ದರು. ಇನ್ನೊಂದೆಡೆ ಸುಭಾಷರು ಗಾಂಧೀಜಿ ರಾಷ್ಟ್ರಕ್ಕೇ ತಂದೆಯಿದ್ದಂತೆ, ಅವರೇ ‘ರಾಷ್ಟ್ರ ಪಿತ’ ಎಂದು ಹೇಳಿದ್ದರು!
ನಮ್ಮ ಕ್ರಾಂತಿಕಾರಿಗಳೆಲ್ಲ ಫ್ರಾನ್ಸು, ಅಮೆರಿಕ, ಜರ್ಮನಿ, ಇಟಲಿಗಳಿಂದ ಸ್ಫೂರ್ತಿಪಡೆದವರು, ಅಲ್ಲಿನ ಹೋರಾಟ ಕ್ರಮವನ್ನು ಅನುಸರಿಸಿದವರು. ಆದರೆ ಗಾಂಧೀಜಿ ಮಾತ್ರ ಈ ದೇಶದ ಸಂಸ್ಕೃತಿಯ ಆಳದಿಂದೆದ್ದು ಬಂದ ಸತ್ಯ- ಅಹಿಂಸೆಗಳೊಂದಿಗೆ ಹೋರಾಟ ಸಂಘಟಿಸಿದವರು. ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು! ಭಾರತದ ನೈಜ ತತ್ತ್ವವನ್ನು ಬಿಂಬಿಸಿದವರು ಗಾಂಧಿ. ನೂರೊಂದು ಅಸಹನೆಗಳಲ್ಲಿ ಕುದಿಯುತ್ತಿರುವ ಭಾರತಕ್ಕೆ ಇಂದು ಗಾಂಧಿಯವರಲ್ಲದೆ ಮತ್ಯಾರು ಸೂಕ್ತ ಮದ್ದಾಗಬಲ್ಲರು ಹೇಳಿ?
ಇವೆಲ್ಲ ನಡೆದು ನೂರಾಹದಿನೈದು ವರ್ಷ!
ಸೆಪ್ಟೆಂಬರ್ ಹನ್ನೊಂದು ಅಂತಾದರೂ ಕರೆಯಿರಿ, ೯/೧೧ ಅಂತಾದರೂ ಹೇಳಿ. ಮನಸ್ಸು ಅಮೆರಿಕಾದತ್ತ ಧಾವಿಸಿಬಿಡುತ್ತದೆ. ವಿಶ್ವ ವ್ಯಾಪರ ಕೇಂದ್ರದ ಎರಡು ಕಟ್ಟಡಗಳನ್ನು ಭಯೋತ್ಪಾದಕರು ಉರುಳಿಸಿದ್ದು ಕಣ್ಮುಂದೆ ಅಲೆಅಲೆಯಾಗಿ ತೇಲಿ ಹೋಗುತ್ತದೆ. ಅಲ್ಲದೆ ಮತ್ತೇನು? ಉರುಳುವ ಕಟ್ಟಡಗಳನ್ನು ಟಿವಿಯ ಮುಂದೆ ಕುಳಿತು ನೇರ ಪ್ರಸಾರದಲ್ಲಿ ನೋಡಿದವರಲ್ಲವೆ ನಾವು!?
ಆದರೆ ಈ ಅಮೆರಿಕಾ ಸೆಪ್ಟೆಂಬರ್ ಹನ್ನೊಂದರಂದೇ ಇನ್ನೊಂದು ಸಾತ್ತ್ವಿಕ ಸುನಾಮಿಗೆ ಸಿಲುಕಿ ಅಲುಗಾಡಿದ್ದು ಬಹುತೆಕರಿಗೆ ಮರೆತೇಹೋಗಿದೆ. ಅವತ್ತು ಸ್ವಾಮಿ ವಿವೇಕಾನಂದರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ವೇದಿಕೆ ಮೆಲೆ ನಿಂತು, ಕೇವಲ ಮೂರೂವರೆ ನಿಮಿಷಗಳಲ್ಲಿ ಸಾಕ್ಷಾತ್ ಅಮೆರಿಕೆಯನ್ನೇ ಧರೆಗೆ ಕೆಡವಿದ್ದರು.
ಸ್ವಲ್ಪ ವಿಚಾರ ಮಾಡಿ. ಎರಡರಲ್ಲೂ ಅದೆಷ್ಟು ಅಂತರ! ರಾಕ್ಷಸೀ ವೃತ್ತಿಯಿಂದ, ಧರ್ಮಾಂಧತೆಯ ಮೂರ್ತ ರೂಪವಾಗಿದ್ದ ಲ್ಯಾಡೆನ್ ಕೆಡವಿದ್ದು ಅಮೆರಿಕೆಯ ಹೊರರೂಪದ ಎರಡು ಕಟ್ಟಡಗಳನ್ನು ಮಾತ್ರ. ಬಂದೂಕು, ಮದ್ದು ಗುಂಡುಗಳನೆಲ್ಲ ಬಳಸಿ ಲ್ಯಾಡೆನ್ ಮತ್ತವನ ಸಹಚರರು ಕಟ್ಟಡಗಳಿಗೆ ಧಕ್ಕೆ ನೀಡಿದರು, ಒಂದಷ್ಟು ಜೀವ ತೆಗೆದರು.
ಆದರೆ ಸ್ವಾಮಿ ವಿವೇಕಾನಂದರು ವೇದಿಕೆಯ ಮೇಲೆ ನಿಂತು ಬರೀ ಮಾತಿನ ತುಪಾಕಿಯಿಂದ ಅಮೆರಿಕನ್ನರ ಅಂತಃಸತ್ತ್ವವನ್ನೇ ಅಲುಗಾಡಿಸಿಬಿಟ್ಟರು. ಅಲ್ಲಿನ ಜ್ಞಾನಿಗಳು, ಪಂಡಿತರು, ಅಲ್ಲಿ ನೆರೆದಿದ್ದ ಅನ್ಯ ಧರ್ಮೀಯರೆಲ್ಲರೂ ತಲೆದೂಗುವಂತೆ ಮಾಡಿಬಿಟ್ಟರು. ಆಧ್ಯಾತ್ಮಿಕತೆಯ ಗಂಧ ಗಾಳಿಯಿಲ್ಲದ ಭೋಗ ಭೂಮಿಯ ಜನತೆಗೆ ಮಾತಿನ ಅಮೃತ ಸಿಂಚನ ಹರಿಸಿ ಜೀವದಾನ ಮಾಡಿದರು.
ಈ ಎರಡೂ ಘಟನೆಗಳ ಪರಿಣಾಮವೂ ಸ್ವಾರಸ್ಯಕರ. ಒಂದು ಘಟನೆಯ ನಂತರ ಅಮೆರಿಕಾ ಆಫ್ಘಾನಿಸ್ತಾನಕ್ಕೆ ನುಗ್ಗಿ, ಲ್ಯಾಡೆನ್ನನ ದೇಶವನ್ನು ಸಂಪೂರ್ಣ ನಾಶಗೈದರೆ, ವಿವೇಕಾನಂದರ ಮಾತಿಗೆ ಮರುಳಾದ ಪಾಶ್ಚಾತ್ಯರನೇಕರು ಭಾರತದ ಸೇವೆಗೆ ಸಿದ್ಧರಾಗಿ ನಿಂತರು!
ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?
“ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತ ಹೋಗುವುದಿಲ್ಲ, ಅದು ಹುಡುಕಲ್ಪಡುತ್ತದೆ) ಎನ್ನುವಂತೆ ವಿವೇಕಾನಂದರ ಪ್ರಭೆ ತಾನೇತಾನಾಗಿ ಹರಡಿತು. ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದರು- “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು. ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು. “ನೀವು ಯಾರೆಂದು ಕೇಳುವುದೂ, ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.
ಚಿಕಾಗೋ ವೇದಿಕೆಯ ಮೇಲಿಂದ ಭುವಿ ಬಿರಿಯುವಂತೆ ಮೊಳಗಿದ ವಿವೇಕಾನಂದನ ಪಾದ ಚುಂಬಿಸಲು ಅಮೆರಿಕವೇ ಸಿದ್ಧವಾಗಿ ನಿಂತಿತ್ತು. (ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು. ಏಕೆಂದರೆ, ಅವರ ಉದ್ಯೋಗಕ್ಕೇ ಈತ ಸಂಚಕಾರ ತಂದುಬಿಟ್ಟಿದ್ದ!). ವಿವೇಕಾನಂದ ಎಗ್ಗಿಲ್ಲದೆ ನುಡಿದ. ಕ್ರಿಶ್ಚಿಯನ್ನರ ನಾಡಿನಲ್ಲಿ ನಿಂತು, ನಮ್ಮ ನಾಡಿಗೆ ಬೇಕಾಗಿದ್ದುದು ಅನ್ನವೇ ಹೊರತು ಧರ್ಮವಲ್ಲವೆಂದ. ಸಾಧ್ಯವಿದ್ದರೆ ಅನ್ನ ಕೊಡಿ, ಇಲ್ಲವಾದರೆ ತೆಪ್ಪಗಿರಿ ಎಂದುಬಿಟ್ಟ. ತನ್ನ ರಾಷ್ಟ್ರದ ಬಗ್ಗೆ, ಧರ್ಮದ ಶ್ರೇಷ್ಠತೆಯ ಬಗ್ಗೆ ಆತನಿಗೆ ಹೆಮ್ಮೆಯಿತ್ತು. ಅವನು ಮಾತಾಡಿದ್ದು ಸಂಗೀತವಾಯ್ತು. ನುಡಿದಿದ್ದೆಲ್ಲ ತುಪಾಕಿಯ ಗುಂಡಾಯ್ತು. ಶ್ರೀಮತಿ ಅನಿಬೆಸೆಂತರು ಹೇಳಿದರು; “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”. ಅಮೆರಿಕದ ಪತ್ರಿಕೆ ಬರೆಯಿತು;“ಇವನಂತಹ ಬುದ್ಧಿವಂತರಿರುವ ನಾಡಿಗೆ ಮಿಷನರಿಗಳನ್ನು ಕಳಿಸುವುದೇ ಮೂರ್ಖತನ. ಭರತದಿಂದ ಇವನಂತಹ ಮಿಷನರಿಗಳನ್ನು ನಾವು ಕರೆಸಿಕೊಳ್ಳಬೇಕಷ್ಟೆ!”
ಗುಲಾಮರ ನಾಡಿನಿಂದ ಹೊರಟಿದ್ದವ ಚಕ್ರವರ್ತಿಯಾಗಿಬಿಟ್ಟಿದ್ದ. ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ. ಜರ್ಮನಿಯ ಥಾಮಸ್ ಕುಕ್ ಹೇಳಿದ್ದರು; “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ. ಆವರ ಪ್ರೇಮದ ಸ್ಪರ್ಷ ಆರದಿರಲೆಂದು!”
ರಕ್ ಫೆಲ್ಲರನಂತಹ ಸಿರಿವಂತರು ಅವನಡಿಗೆ ಬಿದ್ದರು. ಪಾದಗಳಿಗೆ ಅರ್ಪಿತವಾದ ಕುಸುಮವಾದರು. ವಿವೇಕಾನಂದರು ಗರ್ವದಿಂದ ಬೀಗಲಿಲ್ಲ. ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ. ನಿಮ್ಮ ಸೇವೆ ಮಾಡಬೇಕೆಂಬ ಮನಸಿದೆ. ಏನು ಮಾಡಲಿ?” ಎಂದು ಕೇಳಿದವರಿಗೆ, “ನನ್ನ ಸೇವೆ ಮಾಡಬೇಕೆಂದರೆ ಭಾರತವನ್ನು ಪ್ರೀತಿಸಿ” ಎಂದ. ಸಿದ್ಧರಾದವರನ್ನು ಕರೆತಂದ. ಹಗಲಿರುಳು ಭಾರತದ ಏಳ್ಗೆಯ ಕುರಿತು ಚಿಂತಿಸಿದ. ಅಮೆರಿಕದ ಬೀದಿಬೀದಿಗಳಲ್ಲಿ ತನ್ನ ಆಳೆತ್ತರದ ಕಟೌಟು ರಾರಾಜಿಸುತ್ತಿದ್ದರೂ ತಾನು ಸರಳವಾಗೇ ಉಳಿದ. ಭಾರತಕ್ಕೆ ಮರಳಿದ. ಭಾರತದ ಜಪ ಮಾಡುತ್ತಲೇ ದೇಹ ತ್ಯಾಗ ಮಾಡಿದ.
ಹಾಗೆ ದೇಹ ಬಿಟ್ಟ ವಿವೇಕಾನಂದರಿಗೆ ಕೇವಲ ಮೂವತ್ತೊಂಭತ್ತು ವರ್ಷ.
ಸ್ವಾಮೀ ವಿವೇಕಾನಂದರು ಚಿಕಾಗೋ ಭಾಷಣ ಮಾಡಿ ಸೆಪ್ಟೆಂಬರ್ ಹನ್ನೊಂದಕ್ಕೆ ನೂರಾ ಹದಿನೈದು ವರ್ಷಗಳಾದವು. ಅದಕ್ಕೇ ಇವೆಲ್ಲ ನೆನಪಾಯ್ತು. ಅಷ್ಟೇ.
– ಚಕ್ರವರ್ತಿ ಸೂಲಿಬೆಲೆ
ಅಸ್ಪೃಶ್ಯತೆ ಎಂಬ ಮಾನಸಿಕ ರೋಗ
ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.
-ತುಮಕೂರಿನಲ್ಲಿ ‘ಹಿಂದುತ್ವ ಮತ್ತು ಸಾಮಾಜಿಕ ಸಾಮರಸ್ಯ’ ಕುರಿತ ಪ್ರಬುದ್ಧರ ವಿಚಾರಗೋಷ್ಟಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಮಂಡಿಸಿದ ಪ್ರಬಂಧದ ಆಯ್ದ ಭಾಗ.
‘ಸಾಮರಸ್ಯ’ ಹಿಂದೂ ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಪಿಡುಗು. ಹಿಂದೂ ಸಮಾಜ, ಅತ್ಯಂತ ಶ್ರೇಷ್ಠ ಸಮಾಜ. ಇದು ಅತ್ಯಂತ ವಿಶಾಲವಾದುದೂ ಹೌದು. ತನ್ನೊಳಗೇ ಎದ್ದ ಶಿಥಿಲತೆಯ ಅಲೆಗಳನ್ನು ತಳ್ಳುತ್ತ ನಿಷ್ಕಳಂಕವಾಗಿ ಸಾಗಿಬಂದಿರುವ ಧರ್ಮ ಇದು. ಆದರೆ, ಎಲ್ಲೋ ಒಂದೆಡೆ ಅಸ್ಪೃಶ್ಯತೆಯೆಂಬ ಮಹಾಪಾಪ ಹಿಂದೂ ಧರ್ಮಕ್ಕೆರಗಿದ ಅಭಿಶಾಪದಂತೆ ಕಂಡು ಬರುತ್ತಿದೆ.
ಚತುರ್ವರ್ಣಗಳು ಸೃಷ್ಟಿಯಾದದ್ದೇ ಅಸ್ಪೃಸ್ಯತೆಯ ಕಾರಣವಾಯಿತೆ? ಬಹುಶಃ ಇರಲಾರದು. ಗುಣ- ಕರ್ಮಗಳಿಂದ ವಿಭಜಿತವಾದ ಈ ವರ್ಣಗಳು ಅನೇಕತೆಯಲ್ಲಿ ಏಕತೆಯನ್ನು ತಂದವೇ ಹೊರತು ಏಕಸೂತ್ರವಾಗಿದ್ದ ಸಮಾಜವನ್ನು ಅನೇಕವಾಗಿಸಲಿಲ್ಲ. ಆದರೆ, ವರ್ಣಪದ್ಧತಿಯ ಅನುಯಾಯಿಗಳು ಅದನ್ನು ಶಿಥಿಲಗೊಳಿಸುತ್ತ ಸಾಗಿದಂತೆ ಈ ಎಲ್ಲ ಅತಿರೇಕಗಳೂ ಹುಟ್ಟಿಕೊಂಡವು. ಹಾಗಾದಾಗಲೆಲ್ಲ ಬುದ್ಧ -ಬಸವರು, ರಮಣ- ನಾರಾಯಣರು, ಗಾಂಧಿಯಂಥ ಮಹಾತ್ಮರು ಹುಟ್ಟಿಬಂದು ಅದನ್ನು ತಿದ್ದುವ ಯತ್ನ ಮಾಡಿದರು. ಸ್ವಾಮಿ ವಿವೇಕಾನಂದರಂತೂ, ‘ಅಸ್ಪೃಶ್ಯತೆ ಪಾಪವಲ್ಲದಿದ್ದಲ್ಲಿ, ಇನ್ಯಾವುದೂ ಪಾಪವೇ ಅಲ್ಲ’ ಅಂದುಬಿಟ್ಟರು.
ಭಾರತದಲ್ಲಿ ಅಸ್ಪೃಶ್ಯತೆ ಇರಲೇ ಇಲ್ಲವೆಂದರೆ ತಪ್ಪಾದೀತು. ಆದರೆ ಅದು ಬ್ರಿಟಿಷರ ಕಾಲದ ಮತ್ತು ನಂತರದ ಭಾರತದಲ್ಲಿನಷ್ಟು ವ್ಯಾಪಕವಾಗಿರಲಿಲ್ಲ, ಕ್ರೂರವಾಗಿರಲಿಲ್ಲ. ಮಡಿ ಮೈಲಿಗೆಗಳ ಆಚರಣೆ ಇತ್ತಾದರೂ ದೇಶದ ಎಲ್ಲ ಭಾಗಗಳಲ್ಲಿ ನಾವು ಅದನ್ನು ಕಾಣುವುದು ಸಾಧ್ಯವಿರಲಿಲ್ಲ. ಆದರೆ, ಹದಿನೆಂಟನೆಯ ಶತಮಾನದಿಂದೀಚೆಗೆ ಅದು ಹಬ್ಬಿದ ಪರಿ ಮಾತ್ರ ಅತ್ಯಂತ ಆಘಾತಕಾರಿಯಾಗಿತ್ತು. ಅಸ್ಪೃಶ್ಯತೆ ಯಾವ ವೇಗದಲ್ಲಿ ಸಮಾಜವನ್ನೇ ನುಂಗುವಷ್ಟು ವ್ಯಾಪಕವಾಗಿ ಹಬ್ಬಲರಂಭಿಸಿತೋ, ಅದಕ್ಕೆ ಪ್ರತಿಯಾಗಿ ಅದೇ ವೇಗದಲ್ಲಿ ಸಮಾಜ ಸುಧಾರಕರ ಕಾಳಜಿಯಿಂದ ಅದನ್ನು ದಮನ ಮಾಡುವ ಪ್ರಯತ್ನಗಳೂ ನಡೆದವು. ಆದರೆ, ಯಾವೆಲ್ಲ ಪ್ರಯತ್ನದ ನಂತರ ಇನ್ನೇನು ಅಸ್ಪೃಶ್ಯತೆ ಅಳಿದೇ ಹೋಯ್ತು ಎಂದು ಭಾವಿಸಲಾಗಿತ್ತೋ, ಆಗ ಇದ್ದಕ್ಕಿದ್ದ ಹಾಗೆ ಅದು ಮತ್ತೆ ಭುಗಿಲೆದ್ದು ನಿಂತಿದ್ದನ್ನು ನಾವು ನಂತರದ ಇತಿಹಾಸದುದ್ದಕ್ಕೂ ಕಾಣಬಹುದು.
ಇದಕ್ಕೇನು ಕಾರಣ?
ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿ ಧರಮ್ ಪಾಲ್ ಜೀ ತಮ್ಮ ಬ್ಯೂಟಿಫುಲ್ ಟ್ರೀ ಪುಸ್ತಕದಲ್ಲಿ ಸ್ಪಷ್ಟ ದಾಖಲೆಗಳ ಸಹಿತ ವಿವರಿಸಿರುವಂತೆ, ಹದಿನೆಂಟನೇ ಶತಮಾನದ ಆದಿಯಲ್ಲಿ ಭಾರತದಲ್ಲಿ ಸಮಾಜದ ಎಲ್ಲ ವರ್ಗದ ಜನ ಒಟ್ಟಾಗಿ ಶಾಲೆಗೆ ಹೋಗುತ್ತಿದ್ದರು, ಅಧ್ಯಯನ ಮಾಡುತ್ತಿದ್ದರು. ಶಿಕ್ಷಕರಲ್ಲಿಯೂ ಬಹುಪಾಲು ಜನ ಬ್ರಾಹ್ಮಣೇತರರೇ ಆಗಿರುತ್ತಿದ್ದರು.
ಆಂಗ್ಲರು ಬರುವ ಮುನ್ನವಂತೂ ನಮ್ಮಲ್ಲಿ ಅಸ್ಪೃಶ್ಯರ ಸಂಖ್ಯೆಯನ್ನು ನಮೂದಿಸುವ ಪರಿಪಾಠವೇ ಇರಲಿಲ್ಲ. ಅವರನ್ನು ಬೇರೆ ಮಾಡಿ ನೀವು ಇಂಥವರು, ನಿಮ್ಮ ಸಂಖ್ಯೆ ಇಷ್ಟು ಎಂದು ಪ್ರತ್ಯೇಕವಾಗಿಸುವ ಮನೋಭಾವವೇ ಇರಲಿಲ್ಲ! ಇಷ್ಟಕ್ಕೂ ಭಾರತದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದ ಕರಕುಶಲ ಕಲೆಯಿದ್ದದ್ದು, ಭಾರತದ ಚೇತನ ಅಡಗಿದ್ದದ್ದು ಈ ವರ್ಗದ ಜನರಲ್ಲಿಯೇ. ಆದ್ದರಿಂದಲೇ ಬಿಳಿಯರಿಗೆ ಈ ವರ್ಗದ ಜನರನ್ನು ಬೇರ್ಪಡಿಸುವ ಅನಿವಾರ್ಯತೆ ಕಂಡುಬಂದಿದ್ದು. ಈ ಒಡೆದಾಳುವ ನೀತಿಯಿಂದಲೇ ಅವರು ಸುಂದರ ಸಮಾಜವೊಂದನ್ನು ತುಂಡುತುಂಡಾಗಿಸಿದ್ದು.
ಹಾಗೆಂದು, ಬ್ರಿಟಿಷರು ಇಲ್ಲಿದ್ದಷ್ಟೂ ದಿನ ನಮ್ಮಲ್ಲಿ ಉನ್ನತ ವರ್ಗ(ಎಂದು ಕರೆಸಿಕೊಳ್ಳುವ)ದವರೇನೂ ಸ್ಪೃಶ್ಯರಾಗಿರಲಿಲ್ಲ. ಬಿಳಿಯರ ಪಾಲಿಗೆ ಭಾರತದ ಬ್ರಾಹ್ಮಣರೂ ಅಸ್ಪೃಶ್ಯರೇ!
ಮಸ್ಸೂರಿಯ ಬಜಾರಿನಲ್ಲಿ ಎರಡು ರಸ್ತೆಗಳಿವೆ. ಒಂದು ಕೆಳಭಾಗದಲ್ಲಿದ್ದರೆ, ಮತ್ತೊಂದು ಬಜಾರಿಗೆ ಹೊಂದಿಕೊಂಡಂತೆ ಇರುವ ಎತ್ತರದ ರಸ್ತೆ. ಆ ಎತ್ತರದ ರಸ್ತೆಯಲ್ಲಿ ಬ್ರಾಹ್ಮಣನೇ ಆಗಿರಲಿ, ಶೂದ್ರನೇ ಆಗಿರಲಿ, ಯಾವ ಭಾರತೀಯನೂ ನಡೆಯುವಂತಿರಲಿಲ್ಲ. ಪ್ರತಿಯೊಬ್ಬ ಭಾರತೀಯನೂ ಕೆಳರಸ್ತೆಯಿಂದಲೇ ಹಾದುಹೋಗಬೇಕಾಗಿತ್ತು. ಇದು ಮಸ್ಸೂರಿ ಮಾತ್ರವಲ್ಲ, ಬಹುತೇಕ ಇಡಿಯ ರಾಷ್ಟ್ರದ ಕಥೆಯಾಗಿತ್ತು.
ಬಹುಶಃ ಇಂಥ ಶೋಷಣೆಯೇ ಉನ್ನತವರ್ಗದವರು ಕೆಳವರ್ಗದ ಮೇಲೆ ಶೋಷಣೆ ನಡೆಸಿ ಸೇಡು ತೀರಿಸಿಕೊಳ್ಳುವ ಪರಿಪಾಠ ತೀವ್ರವಾಗಿರಬೇಕು.
ಆದರೆ, ಇಂತಹ ಅಧಾರ್ಮಿಕ ಸಂಗತಿಗಳು ನಡೆದಾಗಲೆಲ್ಲ ಅದನ್ನು ಸರಿಪಡಿಸಲು ಮಹಾತ್ಮನೊಬ್ಬ ಮುಂದೆ ಬರುವುದು ಭಾರತದ ವೈಶಿಷ್ಟ್ಯ. ಶ್ರೀ ರಾಮಕೃಷ್ಣ ಪರಮಹಂಸರನ್ನು ಅವರ ಸಾಲಿನಲ್ಲಿ ಮೊದಲನೆಯವರಾಗಿ ಹೆಸರಿಸಬಹುದು. ಅವರಂತೂ ತಮ್ಮ ಉಪನಯನದ ದಿನ ಭಿಕ್ಷೆ ಸ್ವೀಕರಿಸಿದ್ದು ‘ಧನಿ’ ಎಂಬ ಕೆಲಸದಾಕೆಯಿಂದ- ಶೂದ್ರ ಹೆಂಗಸಿನಿಂದ. ಅವರ ಶ್ರೇಷ್ಟ ಶಿಷ್ಯ ವಿವೇಕಾನಂದರು ತಮ್ಮ ಜೀವನದ ಅತ್ಯುನ್ನತ ಬೋಧನೆಯಾಗಿ ನೀಡಿದ್ದು, ಸಾಮರಸ್ಯದ ಚಿಂತನೆಯನ್ನು.
ಎಲ್ಲಕ್ಕಿಂತ ಒಂದು ವಿಷಯವನ್ನು ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ‘ಸಾಮರಸ್ಯ’ ಮತ್ತು ‘ಹೊಂದಾಣಿಕೆ’ ಇವೆರಡೂ ಬೇರೆ ಬೇರೆ ಸಂಗತಿಗಳು. ನಮ್ಮ ಕೆಲಸವಾಗಬೇಕಾದಾಗ ‘ವಿಧಿಯಿಲ್ಲದೆ’ ಮಾಡಿಕೊಂದ ಒಪ್ಪಂದ ಸಾಮರಸ್ಯವಾಗಲಾರದು. ತೋರುಗಾಣಿಕೆಗೆಂದೋ, ಕಾನೂನಿನ ಕಾರಣದಿಂದಲೋ ತೋರಿಸುವ ಗೌರವ ಎಂತಿದ್ದರೂ ಕೃತಕವೇ. ಅದು ಖಂಡಿತ ಮನಸ್ಸುಗಳನ್ನು ಬೆಸೆದು ಸಾಮರಸ್ಯ ಮೂಡಿಸಲಾರದು.
ಹೊಲದಲ್ಲಿ ದುಡಿದು ಬರುವ ಆಳುಗಳಿಗೆ ಹಿತ್ತಿಲಲ್ಲಿ ಕುಳ್ಳಿರಿಸಿ ಊಟ ಹಾಕಿ ಎಲೆ ಎತ್ತುವಂತೆ ಹೇಳುವ, ಮನೆ ಒಳಗಿನವರೆಗೂ ಸಿಲಿಂಡರ್ ತರಿಸಿಕೊಂಡು ಅಡುಗೆ ಮನೆಗೆ ಸೇರಿಸದೆ ಹಾಗೇ ಕಳುಹಿಸಿಬಿಡುವ, ಅಸ್ಪೃಶ್ಯ ಹುಡುಗ ತಂದುಕೊಡುವ ಹಾಲನ್ನು ಕುಡಿಯುತ್ತಲೇ ಆತನನ್ನು ಮುಟ್ಟಲು ಹಿಂದೇಟು ಹಾಕುವ, ಹಜಾಮತಿನ ನಂತರ ‘ಮೈಲಿಗೆ’ ಯ ಕಾರಣವೊಡ್ಡಿ ಸ್ನಾನ ಮಾಡುವ ಜನರನ್ನು ಕಂಡರೆ ನನಗಂತೂ ಅಸಹ್ಯವಾಗುತ್ತದೆ.
ಹಿಂದೂ ಧರ್ಮದಲ್ಲಿ ಯಾವ ವರ್ಗವನ್ನೂ ‘ಅಸ್ಪೃಶ್ಯ’ ಎಂದು ನಿರ್ದೇಶಿಸಿಲ್ಲ. ಹಾಗೊಂದು ವೇಳೆ ನಾವು ಯಾರನ್ನಾದರೂ ಹಾಗೆ ಕರೆದರೆ, ಸ್ವತಃ ನಾವೇ ಧರ್ಮಭ್ರಷ್ಟರೆಂದರ್ಥ!
ಅಸ್ಪೃಶ್ಯತೆ ಒಂದು ‘ಮಾನಸಿಕ ರೋಗ’ವಷ್ಟೆ. ನಮ್ಮ ದಮನಕಾರಿ ವ್ಯಕ್ತಿತ್ವದ ಅಭಿವ್ಯಕ್ತಿ ಅದು. ನಮ್ಮ ಹತಾಶೆಯ ಅಭಿವ್ಯಕ್ತಿಯೂ ಹೌದು. ಇದರಿಂದ ಹೊರಬರದ ಹೊರತು ನಾವು ಮಾನಸಿಕ ಅಸ್ವಸ್ಥರಾಗಿಯೇ ಉಳಿದಿರುತ್ತೇವೆ.
ನಾವೆಲ್ಲ ನೆನಪಿಡಬೇಕಾದ ಸಂಗತಿಯೊಂದಿದೆ. ಹಿಂದೂ ಧರ್ಮ ಉಳಿದಿರೋದು ಮೇಲ್ವರ್ಗದ ಜನರ ಕಾರಣದಿಂದಲ್ಲ. ಪ್ರತಿ ಬಾರಿ ಅನ್ಯ ದೇಶೀಯರ- ಅನ್ಯ ಧರ್ಮೀಯರ ಆಕ್ರಮಣವಾದಾಗಲೂ ಅವರು ಕೈಹಾಕಿದ್ದು ಹಿಂದೂ ಧರ್ಮದ ಬೇರು ಎನಿಸಿಕೊಂಡಿದ್ದ ಕೆಳವರ್ಗದತ್ತಲೇ ಹೊರತು ಮೇಲ್ವರ್ಗದ ಮೇಲಲ್ಲ. ಮೊಘಲರ ಕಾಲದಲ್ಲಿ, ‘ಮತಾಂತರಗೊಳ್ಳಿ, ಇಲ್ಲವೇ ನಮ್ಮ ಅಂತಃಪುರದ ಪಾಯಿಖಾನೆಯ ಮಲ ಹೊರಿ’ ಎಂಬ ಆಯ್ಕೆ ಎದುರಾದಾಗ ಮಲ ಹೊರುವುದನ್ನೇ ಆಯ್ದುಕೊಂಡು ಹಿಂದೂಗಳಾಗಿ ಉಳಿದ ಜನ ಅವರು! ಇವತ್ತು ಹಿಂದೂ ಧರ್ಮ ಉಳಿದಿದ್ದರೆ, ಅದು ಇಂಥ ಕೋಟಿ ಕೋಟಿ ಜನರ ಕಾರಣದಿಂದ. ಅಂಥವರನ್ನೆ ಕೀಳೆಂದು ಜರಿದು ಹೊರಗಿಡುವ ಮನಸ್ಸು ಅದಿನ್ನೆಷ್ಟು ವಿಕೃತ ಎಂದು ಒಮ್ಮೆ ಯೋಚಿಸಿ.
~ ಚಕ್ರವರ್ತಿ ಸೂಲಿಬೆಲೆ
3 comments