ರಾಣಿ ಪದ್ಮಿನಿ ಬೆಂಕಿಗೆ ಹಾರಿ, ಅಲ್ಲಾ ಉದ್ದಿನ್ ಕಾಲದಲ್ಲಿ… ಅಲ್ಲಾ ಉದ್ದಿನ್ ಕಾಲದಲ್ಲಿ…
ಅಲ್ಲಾವುದ್ದಿನ್ ಖಿಲ್ಜಿ ಮೇವಾಡದ ಗಡಿಗೆ ಸೈನ್ಯ ಸಮೇತ ಬಂದುಬಿಟ್ಟ. ತಾನು ಬರುವ ಸುದ್ದಿ ರಜಪೂತ ದೊರೆ ಭೀಮ ದೇವ ಸಿಂಹನಿಗೆ ತಿಳಿಯದಿರಲೆಂದು ಸಾಕಷ್ಟು ಪಾಡುಪಟ್ಟ. ಸಾಧ್ಯವಾಗಲಿಲ್ಲ. ರಾಜನಿಗೆ ಗೂಡಚಾರರು ಸುದ್ದಿ ಮುಟ್ಟಿಸಿದರು. ಭೀಮದೇವ ಸರ್ವ ಸನ್ನದ್ಧನಾದ. ಅಲ್ಲಾವುದ್ದಿನ್ ಹೆಜ್ಜೆ ಇಡುವ ಮುನ್ನವೇ ಮುಗಿಬೀಳಲು ಯೋಜನೆ ಹಾಕಿದ.
ಯುದ್ಧವೆಂದರೇನೇ ಕಳೆಗಟ್ಟುವ ಕುಲ ರಜಪೂತರದು. ಕದನವೇ ಇಲ್ಲದೆ ಒರೆಯೊಳಗಿಟ್ಟಿದ್ದ ಕತ್ತಿಯನ್ನು ಹೊರಗೆಳದರು ಸೈನಿಕರು. ರಣೋತ್ಸಾಹ ಮೈಮೇಲೇರಿತು.
ಇತ್ತ ಖಿಲ್ಜಿ ಹಗಲಿರುಳು ಪದ್ಮಿನಿ… ಪದ್ಮಿನಿ ಎನ್ನುತ್ತ ಮೈಮರೆತಿದ್ದ. ಭುವನದೊಳಗಿನ ಅಪ್ರತಿಮ ಸುಂದರಿ ಪದ್ಮಿನಿಯನ್ನು ಭೋಗಿಸಬೇಕೆನ್ನುವ ಬಯಕೆ ಅವನನ್ನು ಮೇವಾಡದ ಗಡಿಗೆ ಕರೆತಂದಿತ್ತು. ಗುರ್ಜರದ ರಾಣಿ ಕಮಲಾ ದೇವಿಯನ್ನು ಅಪಹರಿಸಿ ಅವಳ ಸೌಂದರ್ಯ ಸೂರೆಗೊಂಡಿದ್ದ ಅವನಿಗೆ ಪದ್ಮಿನಿ ಇಲ್ಲದ ತನ್ನ ಜನಾನಾ ಮೌಲ್ವಿಯಿಲ್ಲದ ಮಸೀದಿ ಎನಿಸುತ್ತಿತ್ತಂತೆ! ಈಗ ಅವನು ಅಲ್ಲಿಗೆ ಬಂದಿದ್ದು ಅದೇ ಕಾರನಕ್ಕೆ. ಮೋಸದಿಂದ ಪದ್ಮಿನಿಯನ್ನು ತನ್ನ ಜನಾನಾಗೆ ಒಯ್ಯುವುದಕ್ಕೆ!
ರಜಪೂತರೇನೂ ಬಾಯಿಗೆ ಬೆಟ್ಟು ಹಾಕಿ ಕುಳಿತಿರಲಿಲ್ಲ. ಈ ಬಾರಿ ಅಲ್ಲಾದ್ದೀನನ ಎದೆ ಝಲ್ಲೆನ್ನುವಂತೆ ಹೋರಾಡಿದರು. ಕತ್ತಿಗೆ ಕತ್ತಿಯ ಉತ್ತರ ಕೊಟ್ಟರು. ಬೆಂಕಿಯ ಚೆಂಡಿಗೆ ಬೆಂಕಿಯೇ ಪ್ರತಿಕ್ರಿಯೆಯಾಯ್ತು. ರಜಪೂತರ ಕದನದ ಕಾವಿಗೆ ಖಿಲ್ಜಿಯ ಸೇನೆ ಭಸ್ಮವಾಯ್ತು. ಕಂಡು ಕೇಳರಿಯದ ಸೋಲು ಖಿಲ್ಜಿಗೆ! ಅವನನ್ನು ಬಂಧಿಸಿ ರಾಜನೆದುರು ನಿಲ್ಲಿಸಿದರೆ, ನಾಚಿಕೆ ಬಿಟ್ಟು ಗೋಗರೆದ; “ಪ್ರಭೂ, ದೇವರ ದೇವ… ನನ್ನ ಬಿಟ್ಟುಬಿಡು ತಂದೆ. ತಪ್ಪಿ ನಿನ್ನೆದುರು ಕಾಳಾಗಕ್ಕೆ ನಿಂದೆ” ಎಂದ!
ಶರಣಾಗತರನ್ನು ಕ್ಷಮಿಸುವುದು ನಮ್ಮ ಧರ್ಮವಲ್ಲವೆ? ಭೀಮದೇವನ ಮನ ಕರಗಿತು. ಧರ್ಮದ ಮಾತಿಗೆ ಬೆಲೆ ಕೊಟ್ಟು ಅಧರ್ಮಿಯನ್ನು ಬಿಟ್ಟುಬಿಟ್ಟ!
ಜೀವವೇನೋ ಉಳಿಯಿತು. ಆದರೆ ಪದ್ಮಿನಿ!? ಖಿಲ್ಜಿ ಚಡಪಡಿಸಿದ. ಅವನ ಅಂಗಾಂಗಗಳೆಲ್ಲ ಸೋತವು. ಪದ್ಮಿನಿಯನ್ನು ಕಾಣದೇ ಬದುಕುವುದು ದುಸ್ತರವೆಂದು ಕೂಗಾಡಿದ. ಕಾಮೋದ್ರೇಕದಿಂದ ಮತ್ತನಾದ ಒಡೆಯನನ್ನು ರಕ್ಷಿಸಲು ಅವನ ಭಂಟ ಮಲ್ಲಿಕಾಫರ್ ಸಂಚು ಹೂಡಿದ. ‘ರಾಣಿಯನ್ನು ದೂರದಿಂದಲಾದರೂ ನೋಡಲು ಅವಕಾಶ ಕೊಡಿ’ ಎಂದು ಬಿನ್ನಯಿಸಿ ಖಿಲ್ಜಿಯಿಂದ ಭೀಮದೇವನಿಗೆ ಪತ್ರ ಬರೆಸಿದ. ಭೀಮದೇವನಿಗೆ ಅದೇನು ಮಂಕು ಕವಿದಿತ್ತೋ? ಇದೊಂದು ನಿರುಪದ್ರವ ಕೋರಿಕೆ ಎಂದು ಪರಿಗಣಿಸಿದ. ಪದ್ಮಿನಿಯ ವಿರೋಧದ ನಡುವೆಯೂ ಆಗಲೆಂದು ತನ್ನ ಸಮ್ಮತಿಪತ್ರ ಕಳಿಸಿಕೊಟ್ಟ.
ರಾಣಿ ಪದ್ಮಿನಿಯ ಚೆಲುವಿಗಿಂತ ಆಕೆಯ ಬುದ್ಧಿ ಒಂದು ಗುಲಗಂಜಿ ತೂಕದಷ್ಟು ಹೆಚ್ಚು. ತಾನು ಕಳುಹಿಸುವ ರಾಖಿ ಕಟ್ಟಿಸಿಕೊಂಡು ‘ಅಣ್ಣ’ನಾದರೆ ಮಾತ್ರ ಮುಖ ತೋರುವೆನೆಂದಳು. ಆಸ್ಥಾನಕ್ಕೆ ಬಂದ ಕಾಮುಕ ಖಿಲ್ಜಿಗೆ ತನ್ನ ಮುಖವನ್ನು ಕನ್ನಡಿಯ ಬಿಂಬದಲ್ಲಿ ತೋರಿಸಿ ಮಾತು- ಮಾನಗಳನ್ನು ಉಳಿಸಿಕೊಂಡಳು!
ಅಷ್ಟಕ್ಕೇ ಖಿಲ್ಜಿಯ ಎದೆಬಡಿತ ಏರುಪೇರಾಗಿಹೋಯ್ತು. ತನ್ನ ಜನಾನಾದ ಎಲ್ಲ ಹೆಂಗಸರನ್ನು ಇವಳ ಪಾದಸೇವೆಗಿಟ್ಟರೂ ಕಡಿಮೆಯೇ ಎಂದುಕೊಂಡ. ಅವನ ಚಡಪಡಿಕೆಯ ಹೊತ್ತಿಗೆ ಅವನ ಸೇವಕರು ಕೋಟೆಯ ಉದ್ದಗಲಗಳನ್ನು ಅಳೆದುಸುರಿದಿದ್ದರು. ಮನೆಗೆ ಬಂದ ಅತಿಥಿಯನ್ನು ಬೀಳ್ಕೊಡುವ ಸಂಪ್ರದಾಯ ಪಾಲಿಸಲು ಭೀಮದೇವ ಖಿಲ್ಜಿಯ ಡೇರೆವರೆಗೂ ನಡೆದ. ಖಿಲ್ಜಿಯ ಹುಟ್ಟುಬುದ್ಧಿ ಎಲ್ಲಿಹೋಗಬೇಕು? ತನ್ನ ಭಂಟರಿಗೆ ಸನ್ನೆ ಮಾಡಿ ರಾಜನನ್ನು ಬಂಧಿಸಿಬಿಟ್ಟ! ‘ನಿನ್ನ ಬಿಡುಗಡೆಯಾಗಬೇಕು ಅಂದರೆ, ನಿನ್ನ ರಾಣಿ ನನ್ನ ತೊಡೆಯ ಮೇಲೆ ಕೂರಬೇಕು’ ಎಂದು ಷರತ್ತು ಹಾಕಿದ. ರಜಪೂತರ ರಕ್ತ ಕುದಿಯಿತು. ಪರಸ್ತ್ರೀ ತಾಯಿ ಸಮಾನ ಎನ್ನುವ ಧರ್ಮ ನಮ್ಮದು. ರಾಣಿಯಂತೂ ಸಾಕ್ಷಾತ್ ದೇವಿಯೇ ಸರಿ. ಚಿತ್ತೋಡ ಮತ್ತೊಂದು ಕದನಕ್ಕೆ ಸಜ್ಜಾಯಿತು. ಈ ಬಾರಿ ಬಲು ಎಚ್ಚರಿಕೆಯ ಕದನ ನಡೆಯಬೇಕು. ರಾಜನ ಪ್ರಾಣ ಎದುರಾಳಿಯ ಕೈಲಿದೆ. ರಾಣಿಯ ಮಾನವೂ ಉಳಿಯಬೇಕಿದೆ!
ಮುನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಖಿಲ್ಜಿಯ ಕಡೆ ಹೊರಟವು. “ಬರಿ ರಾಣಿಯೊಬ್ಬಳೇಕೆ? ಜನಾನಾ ಅಲಂಕರಿಸಲು ರಾಣೀವಾಸದ ಹೆಂಗಸರೆಲ್ಲ ಬರುತ್ತಿದ್ದಾರೆ” ಎಂಬ ಮಾತು ಕೇಳಿಕೇಳಿಯೇ ಖಿಲ್ಜಿ ನಿದ್ದೆ ಕಳೆದುಕೊಂಡ. ಕಾಮುಕತೆಯಿಂದ ಹಸಿದ ನಾಯಿಗಿಂತಲೂ ಕಡೆ ಅವನು!
ಇತ್ತ ಡೇರೆ ಸಮೀಪಿಸಿದ ಪಲ್ಲಕ್ಕಿಗಳಲ್ಲೊಂದು ರಾಜ ಭೀಮದೇವನನ್ನು ಮಾತನಾಡಿಸಿತು. ಹಾಗೇ ಅವನನ್ನು ಹತ್ತಿಸಿಕೊಂಡು ಪಾರುಗಾಣಿಸಿಬಿಟ್ಟಿತು!
ಅಷ್ಟೇ,
ಪಲ್ಲಕ್ಕಿಯೊಳಗಿಂದ ಸುಂದರ ಹೆಣ್ಣುಗಳು ಹರಿದಾಡುವುದನ್ನು, ರಾಣಿ ಪದ್ಮಿನಿಯ ಕಾಣ್ಕೆಯ ತುಣುಕನ್ನು ಕಾಯುತ್ತ ಕುಳಿತಿದ್ದ ಖಿಲ್ಜಿ ಬಸವಳಿದು ಬಿದ್ದ!
ಪಲ್ಲಕ್ಕಿಯಿಂದ ಶಸ್ತ್ರ ಸಜ್ಜಿತರಾದ ರಜಪೂತ ಯೋಧರು! ಕದನಿಕಲಿಗಳಂತೆ ಮೈಮೇಲರಗಿದವರ ದಾಳಿಗೆ ತತ್ತರಿಸಿಹೋಯ್ತು ಖಿಲ್ಜಿಯ ತಂಡ.
ಸುಂದರ ಮೈಕಟ್ಟಿನ ಬಾದಲ್ ಪದ್ಮಿನಿಯ ವೇಷ ಧರಿಸಿದ್ದರೆ, ಉಳಿದ ಯೋಧರು ಸಖಿಯರ ವೇಷ ತೊಟ್ಟಿದ್ದರು. ಅಂತೂ ತಮ್ಮ ರಾಜನ ಪ್ರಾಣ, ರಾಣಿಯ ಮಾನ ಕಾಪಾಡುವಲ್ಲಿ ಯಶಸ್ವಿಯಾದರು. ಖಿಲ್ಜಿ, ಕಾಫರರನ್ನು ಬಂಧಿಸಿದರು.
ಆದರೇನು? ಧರ್ಮ ಬುದ್ಧಿ ಬಿಡಬೇಕಲ್ಲ? ರಣರಂಗದಲ್ಲಲ್ಲದೆ ಇಲ್ಲಿ ಕೊಲ್ಲುವುದು ಬೇಡವೆಂದು ಖಿಲ್ಜಿಗೆ ಜೀವದಾನ ಮಾಡಿಬಂದರು.
ಇತ್ತ ಚಿತ್ತ ಸ್ವಾಸ್ಥ್ಯ ಕಳಕೊಂಡ ಖಿಲ್ಜಿ ತನ್ನೂರಿಗೆ ಪಲಾಯನ ಮಾಡಿದ. ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಪದ್ಮಿನಿಯನ್ನು ಪಡೆಯದೆ ರಾಜನ ಹುಚ್ಚು ಬಿಡದೆಂದು ತೀರ್ಮಾನಿಸಿದ ಮಲ್ಲಿಕಾಫರ್ ದೊಡ್ಡದೊಂದು ಸೇನೆ ಸಜ್ಜುಗೊಳಿಸಿದ. ಕೋಟೆಯ ಆಯಕಟ್ಟಿನ ಜಾಗಗಳನ್ನಂತೂ ಮೊದಲೇ ಗೊತ್ತುಮಾಡಿಕೊಂಡಿದ್ದರು. ಈಗ ಏಕಾಏಕಿ ಚಿತ್ತೋಡಿನ ಮೇಲೆ ದಾಳಿಮಾಡಿಯೇಬಿಟ್ಟ.
ಈ ಬಾರಿ ಭೀಮದೇವ ನಿಜಕ್ಕೂ ಗಲಿಬಿಲಿಗೊಳಗಾಗಿದ್ದ. ಅವನ ಸೇನೆ ಸಿದ್ಧಗೊಳ್ಳುವ ಮುನ್ನವೇ ಕಾಫರನ ಸೇನೆ ಮುಗಿಬಿತ್ತು. ಮೂರ್ನಾಲ್ಕು ದಿನಗಳೊಳಗೆ ರಜಪೂತರ ಸಂಖ್ಯೆ ಕರಗಿತು. ‘ಪ್ರಾಣ ಕೊಟ್ಟೇವು, ಶರಣಾಗೆವು’ ಎನ್ನುತ್ತಲೇ ಅವರು ರಣಾಂಗಣದಲ್ಲಿ ವೀರಮರಣ ಕಂಡರು.
ಇನ್ನು…. ಭೀಮದೇವನ ಸಾವು. ಆನಂತರ ರಾಣಿ ಪದ್ಮಿನಿ, ಖಿಲ್ಜಿಯ ತೊಡೆ ಮೇಲೆ!?
ಇದನ್ನು ನೆನೆದಾಗಲೆಲ್ಲ ರಾಣಿಯ ದೇಹ ಕಂಪಿಸುತ್ತಿತ್ತು. ಪರಪುರುಷನನ್ನು ಕಣ್ಣೆತ್ತಿಯೂ ನೋಡದ ಮಹಾತಾಯಿ, ಅವನ ಜನಾನಾದಲ್ಲಿ ಲಲ್ಲೆಗರೆಯುತ್ತಾಳೆನ್ನುವುದು ಊಹೆಗೂ ಸಾಧ್ಯವಿಲ್ಲದ ಸಂಗತಿಯಾಗಿತ್ತು.
ಅಂದು ರಾತ್ರಿ ಪದ್ಮಿನಿ ಭಿಮದೇವನ ಬಳಿಸಾರಿದಳು. ಆತ ಎಂದಿನಂತಿಲ್ಲ. ‘ನಿನ್ನ ರಕ್ಷಿಸಲಾಗಲಿಲ್ಲವಲ್ಲ’ ಎಂಬ ಭಾವದಿಂದ ಸೋತ ಕಣ್ಣುಗಳವು. ಅದನ್ನು ಗುರುತಿಸಿದ ಪದ್ಮಿನಿ, ಪತಿಯನ್ನು ಹಿಂಬದಿಯಿಂದ ಬಳಸಿದಳು. ಇದು ನನ್ನ- ನಿಮ್ಮ ಕೊನೆಯ ರಾತ್ರಿ ಎಂದಳು. ಮಾನಕ್ಕಾಗಿ ಪ್ರಾಣ ತ್ಯಾಗ ಮಾಡುವ ಬಯಕೆ ಹೇಳಿಕೊಂಡಳು. ಭೀಮದೇವನ ಎದೆ ನಡುಗಿತು.
ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ‘ಜೀವಹರ’ (ಜೌಹರ್) ವಿಧಾನವೇ ಅಷ್ಟು ಭಯಂಕರ.
ಆದರೇನು? ಸೈತಾನನ ತೆವಲಿಗೆ ಮಡದಿಯನ್ನು ಒಪ್ಪಿಸುವುದಕ್ಕಿಂತ ಅಗ್ನಿದೇವನ ಮಡಿಲಿಗೆ ಹಾಕುವುದು ಒಳಿತೆನ್ನಿಸಿತವನಿಗೆ. ಅವಳ ತಲೆ ನೇವರಿಸಿ ಬಿಸಿಮುತ್ತನಿಟ್ಟು ಹೊರಟುಬಿಟ್ಟ. ಅದು, ಮುಂದಿನದಕ್ಕೆ ಅನುಮತಿ.
ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ಅತ್ತ ರಣಾಂಗಣದಲ್ಲಿ ಭೀಮದೇವನ ಪಡೆ ನೆಲಕಚ್ಚುತ್ತಿದ್ದ ಸುದ್ದಿ ಬಂದೊಡನೆ ರಾಣಿ ಪದ್ಮಿನಿ ಭಗವಂತನನ್ನು ನೆನೆಯುತ್ತ, ಪಾತಿವ್ರತ್ಯದ ಬಲ ರಕ್ಷಿಸಲಿ ಎನ್ನುತ್ತ ಅಗ್ನಿ ಕುಂಡಕ್ಕೆ ಹಾರಿದಳು.
ಬೆಂಕಿಯ ಕೆನ್ನಾಲಗೆ ಅವಳನ್ನು ಆವರಿಸಿತು. ಅಂತಃಪುರದ ಇತರ ಸ್ತ್ರೀಯರೂ ರಾಣಿಯನ್ನನುಸರಿಸಿದರು.
ಕರ್ಪೂರದ ಗೊಂಬೆ, ಕರಗಿಯೇ ಹೋಯ್ತು….
ಖಿಲ್ಜಿ ಧಾವಿಸಿ ಬಂದ. ಪದ್ಮಿನಿಯನ್ನು ಅಪ್ಪುವ ತವಕ ಅವನಲ್ಲಿ ತೀವ್ರವಾಗಿತ್ತು. ಆದರೆ ಅಲ್ಲಿ ನೋಡಿದ್ದೇನು? ರಾಣಿ ವಾಸ ಬಿಕೋ ಎನ್ನುತ್ತಿತ್ತು. ಎದೆ ಬಡಿತ ಹೆಚ್ಚಾಯಿತು. ಪದ್ಮಿನಿ ಸಿಗದಿದ್ದರೆ ತಾನು ಸತ್ತಂತೆಯೇ ಅಂದುಕೊಂಡ. ನಿಜ ಹೇಳಬೇಕೆಂದರೆ ಅವನು ಪ್ರತಿದಿನವೂ ಸತ್ತಿದ್ದ. ಪರ ಸ್ತ್ರೀಯನ್ನು ಬಯಸುವ ದೇಹ ಇದ್ದರೂ ಸತ್ತಂತೆಯೇ ಅಲ್ಲವೆ?
ರಜಪೂತ ಯೋಧನೊಬ್ಬ ಓಡೋಡಿ ಬಂದ. ಅಗ್ನಿ ಕುಂಡದ ಬೂದಿಯನ್ನು ಮುಷ್ಟಿಯಲ್ಲಿ ಹಿಡಿದು, ‘ಇದೋ, ರಾಣಿ ಪದ್ಮಿನಿ!’ ಎಂದ. ಆಕೆಯ ಭಸ್ಮ ಮುಟ್ಟುವ ಯೋಗ್ಯತೆಯೂ ನಿನಗಿಲ್ಲ, ಹೋಗು ಹೋಗೆಂದ.
ಖಿಲ್ಜಿ ಕಾಫಿರರನ್ನು ಹತ್ಯೆ ಮಾಡಲು ಬಂದಿದ್ದ. ಪವಿತ್ರವಲ್ಲದ ಭೂಮಿಯನ್ನು(!) ಅತಿಕ್ರಮಿಸಲು ಬಂದಿದ್ದ. ಆಕ್ರಮಿಸಿಯೂ ಇದ್ದ. ಕಾಫಿರರ ಹೆಂಡತಿಯರನ್ನು ಮಾತ್ರ ತನ್ನ ಜನಾನಾದೊಳಗೆ ಸೇರಿಸಿಕೊಳ್ಳಲಾಗದೆ ಸೋತು ಹೋಗಿದ್ದ.
ಅವನ ಈ ತಪ್ಪಿಗೆ ಖಂಡಿತ ಅವನಿಗೆ ಜನ್ನತ್ ನಲ್ಲಿ ಜಾಗ ಸಿಕ್ಕಿರಲಾರದು. ಎಪ್ಪತ್ತು ಹೆಂಗಸರ ಭೋಗವೂ ದಕ್ಕಿರಲಾರದು!
ಧನ್ಯೆ ಪದ್ಮಿನಿ! ನೀನು ಸತ್ತಾದರೂ ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸುವಲ್ಲಿ ಗೆದ್ದುಬಿಟ್ಟೆ!!
~ ಚಕ್ರವರ್ತಿ ಸೂಲಿಬೆಲೆ
( ಶಿರೋನಾಮೆಯ ಸಾಲು- ಒಂದು ಲಾವಣಿಯದ್ದು. ಅದರ ಪೂರ್ಣ ಪಾಠ ನನ್ನಲ್ಲಿಲ್ಲ. ಯಾರ ಬಳಿಯಾದರೂ ಇದ್ದರೆ ದಯವಿಟ್ಟು ಕಳಿಸಿಕೊಡಿ)
ಗಿಳಿ ಹೇಳಿದ ಪಾಠಗಳು
ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು.
ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ ಕೆಳ ಟೊಂಗೆಯ ತುದಿಯಲ್ಲೊಂದು ಸೊರಗಿದ ಗಿಳಿ. ಅದಂತೂ ನಿಶ್ಶಕ್ತಿಯಿಂದ ಪೂರಾ ಬಳಲಿಹೋಗಿತ್ತು. ಆದರೂ ಏನೋ ಧ್ಯಾನಿಸುತ್ತ ಕುಳಿತಿದ್ದ ಅದರ ಮುಖದಲ್ಲಿ ತೇಜಸ್ಸು ಹೊಮ್ಮುತ್ತಿತ್ತು.
ದೇವೇಂದ್ರ ಒಣಗಿದ ಮರದಲ್ಲಿ ಕುಳಿತು ಈ ಗಿಳಿ ಏನು ಮಾಡುತ್ತಿದೆ? ಎಂದು ಅಚ್ಚರಿಪಟ್ಟ. ಅದನ್ನು ಕುರಿತು ಮಾತನಾಡಿಸಿದ.
“ಶುಕ ರಾಜ, ಸತ್ತುಹೋಗಿರುವ ಈ ಮರದಲ್ಲಿ ಇನ್ನೂ ಯಾಕೆ ನೆಲೆಸಿದ್ದೀ? ಹಣ್ಣು ಹಂಪಲುಗಳಿಲ್ಲದ ನೀನು ಅದೆಷ್ಟು ಕೃಶವಾಗಿ ಹೋಗಿದ್ದೀ ನೋಡಿಕೊಳ್ಳಬಾರದೆ? ಮತ್ತೆರಡು ದಿನ ನೀನು ಇಲ್ಲೇ ನಿಂತೀಯಾದರೆ ಖಂಡಿತ ಜೀವ ಕಳೆದುಕೊಳ್ಳುವೆ. ಹೋಗು. ಯಾವುದಾದರೂ ಸಂಪದ್ಭರಿತ ಮರಕ್ಕೆ ಹೋಗು. ಬೇಕಾದಲ್ಲಿ ನನ್ನ ಭಟರು ನಿನಗೆ ಸಹಾಯ ಮಾಡುವರು” ಎಂದು ತಿಳಿ ಹೇಳಿದ.
ದೇವ ರಾಜನ ಮಾತಿಗೆ ಗಿಳಿ ಕಣ್ತೆರೆಯಿತು. ಆ ಮಾತುಗಳಿಂದ ಅದು ವಿಸ್ಮಯಗೊಂಡಿತ್ತು. ವಿನಮ್ರವಾಗಿ ನಮಸ್ಕರಿಸುತ್ತ ಅದು ತನ್ನ ವೃತ್ತಾಂತವನ್ನು ತಿಳಿಸಿತು.
“ ದೇವತೋತ್ತಮ, ನಾನು ಕುಳಿತಿರುವ ಈ ವೃಕ್ಷ ಸಾಮಾನ್ಯವಾದುದಲ್ಲ. ಇದು ಕಲ್ಪ ವೃಕ್ಷ. ನನ್ನ ಪೂರ್ವಜರು ಇಲ್ಲಿಯೇ ಜನಿಸಿ, ಇಲ್ಲಿಯೇ ನೆಲೆ ನಿಂತರು. ಲೆಕ್ಕಕ್ಕೆ ಸಿಗದಷ್ಟು ತಲೆಮಾರುಗಳಿಂದ ನನ್ನ ವಂಶಸ್ಥರು ಇಲ್ಲಿ ಆಗಿ ಹೋಗಿದ್ದಾರೆ. ನಾನೂ ಇಲ್ಲಿಯೇ ಹುಟ್ಟಿದೆ, ಇಲ್ಲಿಯೇ ಈ ಮರದ ಸ್ವಾದಿಷ್ಟ ಫಲಗಳನ್ನು ಉಣ್ಣುತ್ತ, ದಟ್ಟ ಎಲೆಗಳ ತಣ್ಣನೆಯ ಆಸರೆಯಲ್ಲಿ ಬೆಳೆದೆ. ಆದರೆ, ವಿಧಿ ನಿಯಮದಂತೆ ಒಂದು ಕಲ್ಪದ ವರೆಗೆ ಬದುಕಿದ್ದ ಈ ವೃಕ್ಷವು ನಿಯಮಿತ ಅವಧಿ ಮುಗಿಸಿ ಜೀವ ತೊರೆಯಿತು.
ಆದರೇನು? ಈ ವೃಕ್ಷವು ಹೂ ಹಣ್ಣೂಗಳನ್ನು ಕೊಡುವಾಗ ನಾನು ಇಲ್ಲಿಯೇ ಇದ್ದೆನಲ್ಲವೇ? ಈಗ ಅದು ಒಣಗಿಹೋಗಿದೆ ಎಂದಾದಾಗ ಬಿಟ್ಟುಹೋಗುವುದು ಕೃತಘ್ನತೆಯಾಗುವುದಿಲ್ಲವೇ?”
ಗಿಳಿಯ ಮಾತಿನಿಂದ ದೇವೇಂದ್ರನಿಗೆ ಮತ್ತಷ್ಟು ಅಚ್ಚರಿಯಾಯಿತು. ಅವನು ಮತ್ತೆ ತಿಳಿಹೇಳಿದ,
“ ಖಗೋತ್ತಮ, ನೀನು ಜ್ಞಾನಿಯೂ ಮೇಧಾವಿಯೂ ಆಗಿರುವೆ. ಆದರೂ ಹೇಳುತ್ತಿದ್ದೇನೆ ಕೇಳು: ಈ ವನಸ್ಪತಿಯು ತನ್ನ ಸ್ವಧರ್ಮವನ್ನು ( ಹೂ- ಹಣ್ಣುಗಳನ್ನು ನೀಡದೆ ಇರುವ ಮೂಲಕ) ಬಿಟ್ಟುಕೊಟ್ಟಿದೆ. ಆದರೂ ನೀನು ನಿನ್ನ ಸ್ವಭಾವವನ್ನು ಅನುಸರಿಸುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ನೀನು ಈ ನಿರ್ಜೀವ ಕಲ್ಪ ವೃಕ್ಷದ ಬದಲು ಯಾವುದಾದರೂ ಫಲ ವೃಕ್ಷವನ್ನು ಆಶ್ರಯಿಸುವುದೇ ಸೂಕ್ತವೆನಿಸುತ್ತದೆ”
ದೇವೇಂದ್ರ ಹೆಳಿದಂತೆ, ಗಿಳಿ ನಿಜಕ್ಕೂ ಮೇಧಾವಿ.
“ದೇವ ರಾಜ, ಖಗ- ಮೃಗಗಳು ಚಲನಶೀಲ ಚೈತನ್ಯವನ್ನು ಹೊಂದಿರುತ್ತವೆ. ನಾವು ಕಾಲ ಧರ್ಮಕ್ಕೆ ಒಳಗಾದರೂ ನಮ್ಮ ಸ್ವಭಾವವನ್ನು ಉಳಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೇವೆ. ಆದರೆ ವೃಕ್ಶಗಳು ಜಡ ಚೈತನ್ಯಶಾಲಿಗಳು. ಅವುಗಳಿಗೆ ಕಾಲಧರ್ಮಕ್ಕೆ ತಲೆಬಾಗುವ ವಿನಃ ಅನ್ಯ ಮಾರ್ಗವಿಲ್ಲ. ಹೀಗಗಿ ಅವು ತಮ್ಮ ಸ್ವಧರ್ಮವನ್ನೂ ಸ್ವಭಾವವನ್ನೂ ತ್ಯಜಿಸಬೇಕಾಗುತ್ತದೆ. ಇಷ್ಟಕ್ಕೂ ಚೈತನ್ಯ ಕಳೆದುಕೊಂಡಿರುವ ವೃಕ್ಷದ ಧರ್ಮ ಕಳೆದಿದೆ ಎಂದ ಮಾತ್ರಕ್ಕೆ ಇನ್ನೂ ಸಚೇತನನಾಗಿರುವ ನಾನು ಸ್ವಭಾವ ಕಳೆದುಕೊಳ್ಳುವುದು ಹೇಗೆ ಸೂಕ್ತವಾದೀತು? ಇಷ್ಟಕ್ಕೂ, ನಿನಗೆ ತಿಳಿಯದ ಸಂಗತಿ ಯಾವುದಿದೆ ಹೇಳು?” ಎಂದು ಮಾರ್ನುಡಿದು ಇಂದ್ರನ ಮೆಚ್ಚುಗೆಗೆ ಪಾತ್ರವಾಯಿತು.
ಶುಕರಾಜನ ಮಾತಿಗೆ ತಲೆದೂಗಿದ ದೇವ ರಜ ಕೇಳ್ದಿಅ, “ನಿನಗೆ ಈ ಎಲ್ಲ ಸಂಗತಿ ಹೇಗೆ ತಿಳಿಯಿತು? ನೀನು ಹೇಗೆ ಈ ಜ್ಞಾನವನ್ನು ಪಡೆದುಕೊಂಡೆ?”
ಗಿಳಿ ಹೇಳಿತು, ” ನಾನು ಎಂದೂ ಸುಳ್ಳನ್ನಾಡಲಿಲ್ಲ. ಇತರರ ಆಹಾರ ಕಸಿದುಕೊಳ್ಳಲಿಲ್ಲ. ಮಿತ್ರ ದ್ರೋಹ ಮಾಡಲಿಲ್ಲ. ಎಂದೂ ಯಾರನ್ನೂ ಅವಮಾನಿಸಲಿಲ್ಲ. ಈ ಕಾರಣದಿಂದಲೇ ನನಗೆ ಸಹಜವಾದ ನಿರ್ಮಲ ಜ್ಞಾನ ದೊರಕಿದೆಯೆಂದುಕೊಳ್ಳುವೆ”
ಗಿಳಿಯ ವಿನಯವಂತಿಕೆ ಮತ್ತು ಸಚ್ಚರಿತ್ರೆಯಿಂದ ಪ್ರಭಾವಿತನಾದ ದೇವೇಂದ್ರ, ಏನಾದರೊಂದು ವರ ಕೇಳುವಂತೆ ಹೇಳಿದ. ಸ್ವರ್ಗ ಲೋಕದಲ್ಲಿ ಸ್ಥನ ಕೊಡುವೆನೆಂದ. ಅದನ್ನು ನಿರಾಕರಿಸಿದ ಗಿಳಿ, ತನಗೆ ಅತ್ಯಂತ ಪ್ರೀತಿ ಪಾತ್ರವಾಗಿದ್ದ ಕಲ್ಪವೃಕ್ಷದ ಪುನರುಜ್ಜೀವನವನ್ನೇ ಬಯಸಿತು. ಇಂದ್ರ ‘ತಥಾಸ್ತು’ ಎನ್ನುತ್ತಾ, ಕಲ್ಪ ವೃಕ್ಷಕ್ಕೆ ಜೀವದಾನ ಮಾಡಿದ.
* * *
ಬಹುಶಃ ನೀವು ಕೆಳಬಹುದು. ಈ ಕಥೆ ಏನು ಹೇಳುತ್ತದೆ? ಎಂದು. ಅದಕ್ಕಿಂತಲೂ, ಇಂಥ ಕಥೆಗಳಿಂದ ಏನು ಪ್ರಯೋಜನ? ಎಂದು.
ಮೊದಲಿಗೆ ಇಲ್ಲಿ “ಜನನೀ ಜನ್ಮ ಭೂಮಿಶ್ಚ….” ಅನ್ನುವ ಭಾವ ಎದ್ದು ಕಾಣುವುದನ್ನ ಧಾರಾಳವಾಗಿ ಗುರುತಿಸಬಹುದು.
ಎರಡನೆಯದಾಗಿ ಗಿಳಿ ನಿರ್ಮಲ ಜ್ಞಾನವನ್ನು ಹೊಂದಿದ ಬಗೆ. ಅದರ ನಡವಳಿಕೆ ನಮಗೆ ಮಾದರಿ. ಬರಿಯ ಓದು- ವಿದ್ಯೆ, ಜ್ಞಾನವಾಗುವುದಿಲ್ಲವಲ್ಲ!?
ಮೂರನೆಯದಾಗಿ ಅಥವಾ ಮೊತ್ತ ಮೊದಲನೆಯದಾಗಿ ನಾವು ಈ ಕಥೆಯನ್ನು ಹೆಣೆದ ನಮ್ಮ ಪೂರ್ವಜರ ಜ್ಞಾನ ಭಂಡಾರದ ವ್ಯಾಪ್ತಿಯನ್ನು ತಿಳಿಯಬಹುದು. ಜಡತೆ, ಚಲನಶೀಲತೆ, ಚೈತನ್ಯಗಳ ವಿಶ್ಲೇಷಣೆ ಅವರ ಜೀವ ಭೌತಿಕ ಶಾಸ್ತ್ರದ ಅರಿವನ್ನು ಹೇಳುತ್ತದೆ. ‘ಕಲ್ಪ’ದ ಉಲ್ಲೇಖ, ಅವರ ಕಾಲ ಜ್ಞಾನದ ಬಗ್ಗೆ ಮಾಹಿತಿ ನೀಡುತ್ತದೆ.
ಪಠ್ಯಗಳಲ್ಲಿ ಅರವತ್ತು ಸೆಕೆಂಡಿಗೆ ಒಂದು ನಿಮಿಷ, ಗಂಟೆಗೆ ಅರವತ್ತು ನಿಮಿಷ, ಇಪ್ಪತ್ನಾಲ್ಕು ಗಂಟೆಗೆ ದಿನ, ಮುನ್ನೂರರವತ್ತೈದು ದಿನಕ್ಕೆ ವರ್ಷ… ಎಲ್ಲ ಓದಿಕೊಂಡಿದ್ದೇವೆ. ಆಮೇಲೆ?
ಮನೆಯಲ್ಲಿ ಅಪ್ಪ ಅಮ್ಮನಿಂದ ಒಂದಷ್ಟು ಕಲಿತವರಿಗೆ ಅರವತ್ತು ವರ್ಷ ಸೇರಿ ಒಂದು ಸಂವತ್ಸರ ಅನ್ನುವ ವರೆಗೆ ಗೊತ್ತಿರುತ್ತದೆ ಸದ್ಯ! ಆಮೇಲೆ?
ಅದನ್ನ ಪದವಿ ನಂತರ ವಿಶೇಷವಾಗಿ ಅಧ್ಯಯನ ಮಾಡಬಹುದು ಎಂದೇನೋ ನೀವು ಹೇಳಬಹುದು. ಅಲ್ಲಿ ಕೊಡಮಾಡುವ ಕಬ್ಬಿಣದ ಕಡಲೆಗಳನ್ನು ಜಗಿಯುತ್ತ ಅರಗದೆ ಹೋಗಬಹುದು. ಎಲ್ಲೋ ಕೆಲವರಿಗೆ ಸಿದ್ಧಿ ದಕ್ಕಿದರೂ ದಕ್ಕಬಹುದು!
ಇರಲಿ. ಸಧ್ಯಕ್ಕೆ, ನಮ್ಮ ಪೂರ್ವಜರು ಲೆಕ್ಕ ಹಾಕಿಟ್ಟ ಕಾಲ ಗಣನೆಯ ವಿಧಾನವನ್ನು ಇಲ್ಲಿ ಕೊಡುತ್ತಿದ್ದೇನೆ. ಇದನ್ನೂ ಈಗ ಮೂರು- ನಾಲ್ಕು ದಶಕಗಳಿಂದ ವಿಜ್ಞಾನಿಗಳು ಗಂಭೀರವಾಘಿ ಅಧ್ಯಯನ ನಡೆಸಿ ಅತ್ಯಂತ ವೈಜ್ಞಾನಿಕವೆಂದು ಘೋಶಿಸಿದ್ದಾರೆ. ನಮ್ಮ ಋಷಿಪರಂಪರೆಯ ಜ್ಞಾನಕ್ಕೆ ಬಾಗಿ ಶರಣೆಂದಿದ್ದಾರೆ, ತಾವೂ ಈ ನಿಧಿಯಿಂದ ಅಗತ್ಯ ಮಾಹಿತಿಗಳನ್ನು ಬಳಸಿ ಸಂಶೋಧನೆ ನಡೆಸುತ್ತಿದ್ದಾರೆ.
ಈ ಮುವ್ವತ್ತು- ನಲ್ವತ್ತು ವರ್ಷಗಳಿಂದಲೇ ಯಾಕೆ?
ಯಾಕೆಂದರೆ ಅರವತ್ತು ವರ್ಷಗಳ ಮುನ್ನ ನಾವು ಗುಲಾಮರಾಗಿದ್ದೆವು. ನಮ್ಮ ಯಾವ ಮಾತಿಗೂ ಗೌರವ- ಮನ್ನಣೆ ಸಿಗುತ್ತಿರಲಿಲ್ಲ. ನಾವು ಸ್ವತಂತ್ರರಾಗಿ, ಅದನ್ನು ಉಳಿಸಿಕೊಳ್ಳುವ ತಾಕತ್ತು ತೋರಿದ ನಂತರವಷ್ಟೇ ನಮಗೆ ಜಗತ್ತಿನಲ್ಲಿ ಮತ್ತೆ ಜಾಗ ಸಿಕ್ಕಿದ್ದು. ಇಂಥ ಗೌರವ ಗಳಿಸಿಕೊಟ್ಟವರು, ಮತ್ತದೇ, “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದುಕೊಂಡು ಅದಕ್ಕಾಗಿ ಪ್ರಾಣ ತೆತ್ತ, ಹೋರಾಡಿದ ಮಹಾತ್ಮರು.
ಅದನ್ನು ಬೇರೊಂದು ಶಿರೋನಾಮೆಯಡಿಯಲ್ಲಿ ಚರ್ಚಿಸೋಣ. ಸಧ್ಯಕ್ಕೆ, ವೇದಗಳಲ್ಲಿ ಉಲ್ಲೇಖವಾಗಿರುವಂತೆ ಕಾಲ ಗಣನೆ ಮಾಪನಗಳನ್ನು ಇಲ್ಲಿ ನೀಡಿದ್ದೇವೆ, ಗಮನಿಸಿ.
* * *
ಒಂದು ಕಮಲದ ಹೂವಿನ ದಳವನ್ನು ಹರಿತವಾದ ಮೊನೆಯ ಸೂಜಿಯಿಂದ ಚುಚ್ಚಿ ರಂಧ್ರ ಮಾಡಲು ಬೇಕಾಗುವ ಕಾಲವನ್ನು ‘ತ್ರುಟಿ’ ಎಂದು ಕರೆದು ಅದರಿಂದ ದೀರ್ಘಕಾಲಗಳ ಮಾಪನೆ ಮಾಡುತ್ತಿದ್ದ ಬೆಳವಣಿಗೆ ಬೆರಗುಮೂಡಿಸುತ್ತದೆ.
ಕಮಲದ ಎಸಳನ್ನು ರಂಧ್ರ ಮಾಡಲು
ಅಗತ್ಯವಾಗುವ ಸಮಯ = ೧ ತ್ರುಟಿ
೧೦೦ ತ್ರುಟಿಗಳು = ೧ಲವ
೧೦೦ ಲವಗಳು = ೧ನಿಮೆಷ (ಕಣ್ಣು ಮಿಟಿಕಿಸುವಷ್ಟು ಸಮಯ)
೪ ೧/೨ ನಿಮೆಷ = ೧ ದೀರ್ಘ ಅಕ್ಷರ ಉಚ್ಚರಣಾ ಸಮಯ
೪ ದೀರ್ಘ ಅಕ್ಷರ = ೧ ಕಾಷ್ಠ
೨ ೧/೨ ಕಾಷ್ಠಗಳು = ೧ ವಿಘಟಿಕ
೬೦ ವಿಘಟಿಕಗಳು = ೧ ಘಟಿಕಾ (ಈಗಿನ ೨೪ ನಿಮಿಷಗಳು)
೬೦ ಘಟಿಕಾಗಳು = ೧ ದಿನ
೩೦ ದಿನಗಳು = ೧ ಮಾಸ
೧೨ ಮಾಸಗಳು = ೧ ವರ್ಷ
೪೩,೨೦,೦೦೦ ವರ್ಷಗಳು = ೧ ಯುಗ
೭೨ ಯುಗಗಳು = ೧ ಮನ್ವಂತರ
೧೪ ಮನ್ವಂತರಗಳು = ೧ ಕಲ್ಪ
೨ ಕಲ್ಪಗಳು = ಬ್ರಹ್ಮನ ಒಂದು ದಿನ (ಹಗಲು – ರಾತ್ರಿಗಳು)
ಬ್ರಹ್ಮನ ೩೦ ದಿನಗಳು = ಬ್ರಹ್ಮನ ಒಂದು ತಿಂಗಳು
ಬ್ರಹ್ಮನ ೧೨ ತಿಂಗಳುಗಳು = ಬ್ರಹ್ಮನ ಒಂದು ವರ್ಷ
ಬ್ರಹ್ಮನ ೧ ವರ್ಷ = ೭೨೧೪೨೩೦೧೨ ಯುಗ
೭,೨೫,೭೬೦ ಯುಗಗಳು
ಬ್ರಹ್ಮನ ೧೦೦ ವರ್ಷ = ಒಂದು ಮಹಾಕಲ್ಪ ಅಥವಾ ಬ್ರಹ್ಮನ ಆಯುಷ್ಯ
leave a comment