ರಾಷ್ಟ್ರ ಶಕ್ತಿ ಕೇಂದ್ರ

ನೆರೆ ಸಂತ್ರಸ್ತರ ನಿಧಿಗೆ ಜಾಗೋಭಾರತ್ ‘ಅಳಿಲು ಕಾಣಿಕೆ’

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2009

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.

ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.

ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….

~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ

ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.