‘ಯೂತ್ ಫಾರ್ ಸೇವಾ’ ವತಿಯಿಂದ ಯುವದಿನ
ಯೂತ್ ಫಾರ್ ಸೇವಾ, ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಸಂಸ್ಥೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವಲ್ಲಿ, ಅವರಿಗೆ ಸೇವೆಯ ಅವಕಾಶ ಕಲ್ಪಿಸಿಕೊದುವಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಗೆ ಸಾಫ್ಟ್ ವೇರ್ ಉದ್ಯಮದ ಮಂದಿಗೂ ಸಮಾಜ ಸ್ಪಂದನೆಯ ಅವಕಾಶವನ್ನು ಕಲ್ಪಿಸಿಕೊಡುತ್ತಿರುವ ಹೆಗ್ಗಳಿಕೆ ಈ ಸಂಸ್ಥೆಯದು. ಯೂತ್ ಫಾರ್ ಸೇವಾ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು www.youthforseva.org ತಾಣವನ್ನು ನೋಡಬಹುದು, ಅವರ ಕಾರ್ಯದಲ್ಲಿ ನೀವೂ ಸಹಭಾಗಿಗಳಾಗಬಹುದು.
ಪ್ರಸ್ತುತ, ಯೂತ್ ಫಾರ್ ಸೇವಾ, ದಿನಾಂಕ ೩.೦೧.೨೦೦೯ರ ಶನಿವಾರದಂದು ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನ ಸಭಾಂಗಣದಲ್ಲಿ ಯುವದಿನದ ಅಂಗವಾಗಿ (ಸ್ವಾಮಿ ವಿವೇಕಾನಂದರ ಜನ್ಮದಿನ- ಜನವರಿ ೧೨) ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸವನ್ನು ಏರ್ಪಡಿಸಿದೆ. ಸಂಜೆ ೪.೩೦ರಿಂದ ೬.೩೦ರವರೆಗೆ ಯುವದಿನದ ಅಂಗವಾಗಿ ಕಾರ್ಯಕ್ರಮಗಳಿರುತ್ತವೆ. ಚಕ್ರವರ್ತಿ ಸೂಲಿಬೆಲೆಯವರು ಸ್ವಾಮಿ ವಿವೇಕಾನಂದರ ಜೀವನವನ- ಸಂದೇಶವನ್ನು ಬಿಚ್ಚಿಡಲಿದ್ದಾರೆ.
ಯುವದಿನದ ಕಾರ್ಯಕ್ರಮಗಳಿಗಾಗಿ ಎಲ್ಲ ಆಸಕ್ತರನ್ನು ಯೂತ್ ಫಾರ್ ಸೇವಾ ಪ್ರೀತಿಯಿಂದ ಆಹ್ವಾನಿಸಿದೆ.
ಆಕ್ರಮಣಗಳು ಮತ್ತು ಸಾಂಸ್ಕೃತಿಕ ಪಲ್ಲಟ
“ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” – ಸಾನೆ ಗುರೂಜಿ
ರಾಷ್ಟ್ರವೆಂದರೇನು?
ಬರಿಯ ಕಲ್ಲು – ಮಣ್ಣೇ? ನಾವು ಕಟ್ಟಿ ನಿಲ್ಲಿರುವ ಕಟ್ಟಡಗಳೇ? ಹರಿಯುವ ನದಿಯೇ? ಎದೆಯೆತ್ತಿ ನಿಂತಿರುವ ಪರ್ವತ ಸಮೂಹಗಳೇ? ಅಲ್ಲಿ ಜನಿಸಿರುವ ಮಹಾಪುರುಷರೇ? ಅಥವಾ ಅವರು ಬರೆದಿರುವ ಗ್ರಂಥಗಳೇ?
ಊಹೂಂ… ಉತ್ತರ ಅಷ್ಟು ಸುಲಭವೇನಲ್ಲ. ಬಹಳ ಬಾರಿ ರಾಷ್ಟ್ರವೆಂದೊಡನೆ ನಾವು ಇಂಥ ವಿಷಯಗಳ ಸುತ್ತಲೇ ಅಡ್ಡಾಡುತ್ತಿರುತ್ತೇವೆ. ವಾಸ್ತವವಾಗಿ, ರಾಷ್ಟ್ರ ಸಂಸ್ಕೃತಿಯ ಪ್ರವಾಹ. ಸಂಸ್ಕೃತಿ ಇವುಗಳೆಲ್ಲವನ್ನೂ ಒಳಗೊಂಡಂತಹ, ಇವುಗಳನ್ನೂ ಮೀರಿದಂತಹ ಅಂಶ.
ರಾಷ್ಟ್ರಕವಿ ಕುವೆಂಪು ಇದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಮಾನವನನ್ನು ದೃಷ್ಟಿಯಲ್ಲಿರಿಸಿಕೊಂಡು ಅವರು ಪ್ರಗತಿಯ ಬಗೆಗಳನ್ನು ವಿವರಿಸುತ್ತಾರೆ. ಮಾನವನ ಆಂತರಿಕ ಬೆಳವಣಿಗೆಯನ್ನು ಸಂಸ್ಕೃತಿ ಎಂದು ಗುರುತಿಸಿ, ಬಾಹ್ಯ ಬೆಳವಣಿಗೆಯನ್ನು ನಾಗರಿಕತೆ ಎನ್ನುತ್ತಾರೆ. ಇದೇ ಚಿಂತನೆಯನ್ನು ವಿಸ್ತರಿಸಿ ರಾಷ್ಟ್ರಕ್ಕೆ ಹೇಳುವುದಾದರೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಅಂತರ್ಪ್ರವಾಹ ಇರುತ್ತದೆಯಲ್ಲ, ಅದನ್ನೇ ‘ಸಂಸ್ಕೃತಿ’ ಎನ್ನುವುದು. ಈ ಅಂತರ್ಪ್ರವಾಹಕ್ಕೆ ಧಕ್ಕೆ ಬಂದಾಗಲೆಲ್ಲ ದೇಶ ಸಾಂಸ್ಕೃತಿಕವಾಗಿ ನಲುಗಿಹೋಗುತ್ತದೆ.
ಭಾರತದ ಪಾಲಿನ ಅಂತರ್ಪ್ರವಾಹ ಇತರೆಲ್ಲ ರಾಷ್ಟ್ರಗಳಿಗಿಂತಲೂ ವಿಭಿನ್ನವಾದುದು. ಈ ಪ್ರವಾಹದ ಮೂಲ ಋಷಿಗಳ ಪಾದದಲ್ಲಿದೆ. ಆತ್ಮ ಚಿಂತನೆಯತ್ತ ತಮ್ಮನ್ನು ತಾವು ತೊಡಗಿಸಿಕೊಂಡು, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ತೆರೆಗಳನ್ನು ಸರಿಸುತ್ತ ಹೋದ ಋಷಿಗಳು ಶಾಶ್ವತ ಸತ್ಯವನ್ನು ಅಲ್ಲಿಂದ ಅರಸಿ ತಂದರು. ಅವರ ಇಡಿಯ ಜೀವನವೇ ಸತ್ಯಾನ್ವೇಷಣೆಯದಾಯಿತು. ಹೀಗೆ ಅರಸಿದ ಸತ್ಯವನ್ನು ಎಲ್ಲರಿಗೂ ತಿಳಿಸಿ, ಅವರನ್ನೂ ಸತ್ಯ ಮಾರ್ಗಿಗಳಾಗಿಸಬೇಕೆನ್ನುವ ಋಷಿಗಳ ಪ್ರಯತ್ನ ಸ್ತುತ್ಯರ್ಹವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಜಗತ್ತಿಗೆ ಒಳಿತಾಗಲಿ, ಜಗತ್ತೇ ಕುಟುಂಬವಾಗಲಿ ಎಂಬ ಚಿಂತನೆ ಈ ನೆಲದಿಂದ ಹೊರಟಿದ್ದು. ಆರ್ಥಿಕ ದೃಷ್ಟಿಕೋನದಿಂದ ‘ಎಲ್ಲರಿಗೂ ಸಮಬಾಳು,ಎಲ್ಲರಿಗೂ ಸಮಪಾಲು’ ಎನ್ನುವ ಆಧುನಿಕ ಸಮಾಜವಾದ ಚಿಗಿತುಕೊಳ್ಳುವ ಸಾವಿರಾರು ವರ್ಷಗಳ ಮೊದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಎಲ್ಲರೂ ಸಮಾನರು ಎಂಬ ಸತ್ಯವನ್ನು ಭಾರತ ಸಾಕ್ಷಾತ್ಕರಿಸಿಕೊಂಡಿತ್ತು. ಅದನ್ನು ಜಗತ್ತಿನ ಮುಂದಿರಿಸಿತು. ಜಗತ್ತಿನ ವಿವಿಧೆಡೆಗಳಿಂದ ಜ್ಞಾನಾಕಾಂಕ್ಷಿಗಳು ಭಾರತದತ್ತ ನಡೆದುಬಂದರು. ತಾನೇ ತಾನಾಗಿ ಭಾರತ ಜಗತ್ತಿನ ಗುರುಪೀಠವನ್ನು ಅಲಂಕರಿಸಿಬಿಟ್ಟಿತ್ತು. ಭಾರತೀಯ ಸಂಸ್ಕೃತಿ ಎಂದರೆ, ಜ್ಞಾನ ಅರಸುವ, ಜ್ಞಾನ ನೀಡುವ ಸಂಸ್ಕೃತಿ ಎಂದು ಸ್ಥಾಪಿತವಾಯ್ತು.
ಸ್ವಾಮಿ ವಿವೇಕಾನಂದರು ಒಂದೆಡೆ, ‘ಭಾರತದ ಆತ್ಮ ಆಧ್ಯಾತ್ಮ’ ಎಂದು ಹೇಳಿರುವರು. ಈ ಕೇಂದ್ರವನ್ನು ಬದಲಾಯಿಸಲು ಪ್ರಯತ್ನ ನಡೆದಾಗಲೆಲ್ಲ ಇಲ್ಲಿ ಅಲ್ಲೋಲಕಲ್ಲೋಲವಾಗಿದೆ. ಪ್ರತಿ ಬಾರಿ ಮಹಾ ಪುರುಷರು ಜನ್ಮವೆತ್ತಿ ಬಂದು ಅದನ್ನು ಮತ್ತೆ ಕೇಂದ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಪ್ರತಿ ಬಾರಿಯ ಆಕ್ರಮಣದಲ್ಲೂ ಭಾರತದ ಕೇಂದ್ರಕ್ಕೆ ಧಕ್ಕೆ ಉಂಟಾಗಿದೆ.
ಇರಲಿ. ಈ ರಾಷ್ಟ್ರದ ಮೇಲೆ ಆಕ್ರಮಣವಾಗಿದೆ ಎಂದಾಗ ಅದು ಬರಿಯ ಭೂಕಬಳಿಕೆಯ ಆಕ್ರಮಣವಲ್ಲ. ಅದು ಸಂಸ್ಕೃತಿಯ ಮೇಲಿನ ಆಕ್ರಮಣ. ಹಾಗೆ ನೋಡಿದರೆ ಭೂಕಬಳಿಕೆ ಶಾಶ್ವತವಾಗುವುದೂ ಸಂಸ್ಕೃತಿಯ ನಾಶದಿಂದಲೇ. ಈಗಿನ ಆಫ್ಘಾನಿಸ್ಥಾನ, ಗಾಂಧಾರಿಯ ತವರು. ಇತಿಹಾಸಕ್ಕೆ ಹೋದರೆ, ಬುದ್ಧ ತತ್ತ್ವದಿಂದ ಸಂಪನ್ನವಾಗಿದ್ದ ನಾಡು. ಈ ಭೂಮಿಯ ಮೇಲೆ ಇಸ್ಲಾಮೀಯ ದಾಳಿಗಳು ನಡೆದವು. ಅವರಂತೂ ಸಂಸ್ಕೃತಿಗೇ ಕೊಡಲಿಯಿಟ್ಟರು. ಜನರ ಸತ್ತ್ವ ನಾಶವಾಯ್ತು. ಪರಿಣಾಮವಾಗಿ ಆ ನಾಡು ನಮ್ಮಿಂದ ದೂರವಾಗುತ್ತ ಹೋಯ್ತು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನಮ್ಮ ವಿರೋಧಿಯೂ ಆಗಿಹೋಯ್ತು!
ಸಂಸ್ಕೃತಿಯ ಮೇಲಿನ ಆಕ್ರಮಣ ಉದ್ದೇಶಪೂರ್ವಕವಾದುದು. ಬೇರೊಂದು ಸಂಸ್ಕೃತಿಯನ್ನು ನಾಶಮಾಡಿ ತಮ್ಮ ಸಂಸ್ಕೃತಿಯನ್ನು ಹೇರುವ ಪ್ರಯತ್ನ ಅದು.
ಭಾರತೀಯ ಸಂಸ್ಕೃತಿ ಕೂಡ ಜಗತ್ತಿನ ಇತರೆಡೆಯಲ್ಲಿ ವ್ಯಾಪಿಸಿದೆ. ಮಲಯ, ಜಾವಾ, ಸುಮಾತ್ರ, ಬಾಲಿ ಮೊದಲಾದೆಡೆಗಳಲ್ಲಿ ಸೂಕ್ಷ್ಮವಾಗಿ ನಮ್ಮ ಸಂಸ್ಕೃತಿ ಹಾಸುಹೊಕ್ಕಾಗಿರುವುದನ್ನು ನಾವು ಗಮನಿಸಬಹುದು. ಆದರೆ ಅದು ಒತ್ತಾಯದ ಹೇರಿಕೆಯಲ್ಲ. ಜ್ಞಾನ ದಾನಕ್ಕೆ, ವ್ಯಾಪಾರಕ್ಕೆ, ಸಾಂಸ್ಕೃತಿಕ ರಾಯಭಾರಕ್ಕೆಂದೇ ಭಾರತದಿಂದ ತೆರಳಿದ ಜನರು ಅಲ್ಲಿ ಪಸರಿಸಿದ, ಅಲ್ಲಿನ ಜನ ಆದರದಿಂದ ಸ್ವೀಕರಿಸಿದಂಥದ್ದು ಅದು. ಭಾರತೀಯರು ತಮ್ಮಲ್ಲಿರುವ ಸತ್ತ್ವಯುತ ಚಿಂತನೆಗಳನ್ನು ಹಂಚಿ ಜನಮನ್ನಣೆ ಗಳಿಸಿದರು. ಅವರೆಂದೂ ಖಡ್ಗ ಹಿಡಿದು ತಮ್ಮ ವಿಚಾರಗಳನ್ನು ಹೇರಲಿಲ್ಲ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಸ್ವೀಕರಿಸಿದ ಯಾವ ದೇಶಕ್ಕೂ ನಷ್ಟವಾಗಲಿಲ್ಲ. ಬದಲಿಗೆ ಲಾಭವೇ ಆಯಿತು. ಭಾರತದ ಮೇಲೆ ಆಕ್ರಮಣ ಮಾಡಿದ ಶಕರು, ಹೂಣರು ಕೇವಲ ಸಂಪತ್ತಿಗಾಗಿ ಆಕ್ರಮಣ ಮಾಡಿದ್ದರಿಂದ, ಕ್ರಮೇಣ ಅವರು ಭಾರತೀಯರಲ್ಲಿ ಒಂದಾಗಿ ಬೆರೆತು ಹೋದರು.
ಆದರೆ…. ಒಂದು ಸಾಮ್ರಾಜ್ಯ ಕಟ್ಟುವ ಬಯಕೆಯಿಂದ, ತಾವು ಅನುಸರಿಸುವ ಮತವನ್ನು ಹೇರುವ ಉದ್ದೇಶದಿಂದ ಆಕ್ರಮಣ ಮಾಡಿದ ಇಸ್ಲಾಮೀಯರು ನಮ್ಮ ದೇಶದ ಕೇಂದ್ರಕ್ಕೆ ಕೈಹಾಕಿದರು. ಹೆಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕೃತಿಯ ಮೇಲೆ ಹೆಣ್ನನ್ನು ಭೋಗದ ವಸ್ತುವೆಂದು ಕಾಣುವ ಸಂಸ್ಕೃತಿಯ ಅಕ್ರಮಣವಾಯ್ತು. ಅವರ ಕ್ರೌರ್ಯದೆದುರು ಭಾರತೀಯರ ಒಗ್ಗಟ್ಟು ಕದಡಿ ಹೋಯ್ತು. ಉತ್ತರ ಭಾರತದ ಅನೇಕ ಭೂಭಾಗಗಳಂತೂ ತತ್ತರಿಸಿಹೋದವು. ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳುವ ಸಲುವಾಗಿ ಹಿಂದೆಲ್ಲೂ ಇಲ್ಲದ ಬಾಲ್ಯ ವಿವಾಹ ಜಾರಿಗೆ ಬಂತು. ಬುರ್ಖಾ ಪದ್ಧತಿ ಆರಂಭವಾಯ್ತು. ಮಾನ ರಕ್ಷಣೆಗೆ ಜೌಹರ್ ಪದ್ಧತಿ ವಾಪಕವಾಯ್ತು.
ಈ ದೇಶಕ್ಕೆ ಒಗ್ಗದ ಸಂಸ್ಕೃತಿಯನ್ನು ಹೇರಲು ಹೊರಟವರ ವಿರುದ್ಧ ಎದೆ ಸೆಟೆದು ನಿಂತ ಸಿಖ್ ಪಂಥ, ಕತ್ತಿಯನ್ನೇ ಕುತ್ತಿಗೆಗೆ ಇಳಿಬಿಟ್ಟುಕೊಂಡಿತು. ಜನರ ಆಚಾರ ವಿಚಾರಗಳು ಆತ್ಮ ರಕ್ಷಣೆಯ ಅನಿವಾರ್ಯಕ್ಕೆ ಸಿಲುಕಿ ಬದಲಾಗುತ್ತ ಸಾಗಿದವು. ಒತ್ತಾಯವಾಗಿ ಹೇರಲ್ಪಟ್ಟ ಹೊರಗಿನ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ, ತಮ್ಮದನ್ನು ಬಿಟ್ಟುಕೊಡಲಾಗದೆ, ಮಿಶ್ರ ಸಂಸ್ಕೃತಿಯೊಂದು ಹುಟ್ಟಿಕೊಂಡು, ಜನರನ್ನು ಎಲ್ಲಿಯೂ ಸಲ್ಲದ ಸ್ಥಿತಿಗೆ ತಂದುನಿಲ್ಲಿಸಿತು. ಇದು ಮತಾಂತರಕ್ಕೆ ಪ್ರಚೋದನೆ ನೀಡಿತು. ಹೀಗೆ ಮತಾಂತರಗೊಂದ ಜನ ತಮ್ಮ ಮೂಲ ಧರ್ಮದ ವಿರುದ್ಧ ಮಾತನಾಡಲಾರಂಭಿಸಿದರು. ಸ್ವಯಂ ರಕ್ಷಣೆಗೆ ಅದು ಅವರು ಆರಿಸಿಕೊಂಡ ಅಸ್ತ್ರವಾಗಿತ್ತು. ಕ್ರಮೇಣ ಅದು ಅಭ್ಯಾಸವೂ ಆಗಿ ಹೋಯ್ತು.
“ಒಬ್ಬ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟವಲ್ಲ, ಒಬ್ಬ ವಿರೋಧಿಯ ಹೆಚ್ಚಳ!” ಸ್ವಾಮಿ ವಿವೇಕಾನಂದರು ಹೇಳಿದ ಮಾತು ಅದೆಷ್ಟು ಸತ್ಯ!
~
ಭೂಮಾರ್ಗದ ಮೂಲಕ ಅರಬರು ನಡೆಸಿದ ಆಕ್ರಮಣಗಳು ಈ ಬಗೆಯ ಸಾಂಸ್ಕೃತಿಕ ಪಲ್ಲಟ ಉಂಟು ಮಾಡುತ್ತಿದ್ದ ಕಾಲದಲ್ಲಿ ಶಿವಾಜಿ ಮಹಾರಾಜರಂಥವರು ಅದಕ್ಕೆ ತಕ್ಕ ಪ್ರತಿರ್‍ಓಧವೊಡ್ಡಿ ಮತ್ತೆ ಭಾರತೀಯತೆಯನ್ನು ಸ್ಥಾಪಿಸುವ ಸಾರ್ಥಕ ಯತ್ನ ನಡೆಸಿದರು. ಭರತದ ಅಂತರ್ಪ್ರವಾಹವನ್ನು ಮತ್ತೆ ಸರಿಯಾದ ದಿಕ್ಕಿನತ್ತ ಹೊರಳಿಸಿದರು.
ಇದೇ ವೇಳೆಗೆ ಪಶ್ಚಿಮದ ಕಡಲ್ಗಳ್ಳರ ಸುವ್ಯವಸ್ಥಿತ ಆಕ್ರಮನ ಅದಾಗಲೇ ಆರಂಭವಾಗಿಬಿಟ್ಟಿತ್ತು!
ಹಡಗುಗಳ ಮೂಲಕ ಸಂಪದ್ಭರಿತ ದೇಶಗಳನ್ನು ಹುಡುಕುತ್ತಾ ಸಾಗಿ, ಅದನ್ನು ಕೊಳ್ಳೆಹೊಡೆದು, ಅಲ್ಲಿ ತಮ್ಮ ರಾಜ್ಯವನ್ನೂ, ಮತವನ್ನೂ ಸ್ಥಾಪಿಸಿ ಮೆರೆಯುತ್ತಿದ್ದ ಪಾಶ್ಚಾತ್ಯರು ಭಾರತಕ್ಕೂ ಕಾಲಿಟ್ಟರು. ವ್ಯಾಪಾರದ ಸೋಗಿನಲ್ಲಿ ಬಂದವರು, ಬರಬರುತ್ತ ನಮ್ಮ ಮೇಲೆ ಆಳ್ವಿಕೆ ನಡೆಸುವ ಉಮೇದಿಗೆ ಬಿದ್ದರು. ಭಾರತದ ಆತ್ಮವನ್ನೇ ನಾಶಗೊಳಿಸದೆ ಅದು ಸಾಧ್ಯವಿಲ್ಲ ಎಂಬ ಸತ್ಯ ಅವರಿಗೆ ಗೊತ್ತಿತ್ತು. ಅದನ್ನು ಮೆಕಾಲೆ, ವಿಲ್ಟರ್ ಫೋರ್ಸ್ ನಂಥವರು ಬೇರೆ ಬೇರೆ ಸಂದರ್ಬಗಳಲ್ಲಿ ಹೇಳಿಯೂಬಿಟ್ಟರು. ಎಲ್ಲಿಯವರೆಗೆ ಇವರ ಆತ್ಮೋನ್ನತಿಯ ಶಿಕ್ಷಣವನ್ನು ಹಾಳುಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ತಮ್ಮ ಸಾಮ್ರಾಜ್ಯ ಸ್ಥಾಪನೆಯೂ ಸಾಧ್ಯವಿಲ್ಲ ಎಂಬ ಅಳಲು ಅವರಿಗಿತ್ತು!
ಅಸಾಮಾನ್ಯ ತಂತ್ರ ನಿಪುಣರಾಗಿದ್ದ ಆಂಗ್ಲರು ಭಾರತದ ಬೌದ್ಧಿಕ ಸಂಪತ್ತಿಗೂ ಲಗ್ಗೆ ಹಾಕಿದರು. ತಮ್ಮ ಶಿಕ್ಷಣದ ಮೂಲಕ ಒಂದು ಬುದ್ಧಿವಂತರ ವರ್ಗ ಸೃಷ್ಟಿಸಿ, ಅವರ ಮೂಲಕವೇ ಇಲ್ಲಿನ ಸಂಸ್ಕೃತಿಯನ್ನು ಹಾಳುಗೆಡವುವ, ಇಲ್ಲಿನ ಜನರು ‘ಪಶ್ಚಿಮದ ನಾಗರಿಕತೆಯೇ ಶ್ರೇಷ್ಠ’ ಎಂದು ಭ್ರಮಿಸುವಂತೆ ಮಾಡುವ ಯೋಜನೆಗಳನ್ನು ರೂಪಿಸಿದರು. ಪರಿಣಾಮವಾಗಿ, ಭಾರತೀಯ ಚಿಂತನೆಗಳು ಅನಗರಿಕ, ಕೀಳು ಅಭಿರುಚಿಯವು ಎಂದು ತಿಳಿಯುತ್ತ, ಅದನ್ನೇ ಹೇಳಿಕೊಂಡು ತಿರುಗುವ ತಥಾಕಥಿತ ಬುದ್ಧಿಜೀವಿಗಳ ವರ್ಗವೊಂದು ನಿರ್ಮಾಣವಾಗಿಯೇಬಿಟ್ಟಿತು. ನೋಡನೋಡುತ್ತ, ಮೆಕಾಲೆ ಹೇಳಿದಂತೆ, ‘ಕರಿ ಚರ್ಮದ ಆಂಗ್ಲರ’ ಸಂತತಿ ನಾವಾಗಿಬಿಟ್ಟೆವು.
ಇಂಗ್ಲೀಶ್ ಭಾರತದ ಪಾಲಿಗೆ ಮರ್ಮಾಘಾತವನ್ನೇ ನೀಡಿತು. ಇಲ್ಲಿನ ಸ್ಥಳೀಯ ಭಾಷೆಗಳ ನಾಶಕ್ಕೆ, ಸಂಸ್ಕೃತಿಯ ನಾಶಕ್ಕೆ ಅದರ ಕೊಡುಗೆ ಅಪಾರ! ಭಾಷೆಯೊಂದಿಗೆ ಯಾರ ದ್ವೇಷವೂ ಇಲ್ಲ. ಆದರೆ, ಅದು ಹೊತ್ತು ತರುವ ಸಂಸ್ಕೃತಿ ವಿನಾಶಕಾರಿ. ( ಇವತ್ತಿಗೂ ಹಳ್ಳಿಯವನಂತೆ ಕಾಣುವ ವ್ಯಕ್ತಿಯೊಬ್ಬ ಅತ್ಯುನ್ನತ ಮಟದ ಇಂಗ್ಲಿಶ್ ಮಾತಾಡಿದರೆ ಅದನ್ನು ಅಚ್ಚರಿಯಿಂದ ನೋಡಲಾಗುತ್ತದೆ. ಇಂಗ್ಲಿಶ್ ಮಾತಾಡುವವನು ಅಪ್ಪಟ ಭಾರತೀಯನಂತಿರಲಾರನೆಂಬುದೇ ಸುಪ್ತ ಮನಸ್ಸಿನ ಚಿಂತನೆ!). ಇಂಗ್ಲಿಶ್ ಕಲಿತ ಶ್ರೀಮಂತ ಜನಗಳು ಆಚಾರ ವಿಚಾರಗಳೆಲ್ಲದರಲ್ಲಿ ಆಂಗ್ಲರನ್ನೇ ಅನುಕರಿಸುವುದು ಯಾರೂ ಅರಿಯದ ಸಂಗತಿಯೇನಲ್ಲ. ಸ್ವತಃ ವಿಲಿಯಂ ಬೆಂಟಿಕನೇ ಪತ್ರದಲ್ಲಿ ಹೇಳಿಕೊಂಡಿದ್ದ, “ಈ ಜನರು ದಾನ, ಭಿಕ್ಷೆಗಳನ್ನು ನೀಡುವುದು ಬಿಟ್ಟು ನಮ್ಮ ಪಾರ್ಟಿಗಳಿಗೆ ಖರ್ಚು ಮಾಡುತ್ತಿರುವುದು ನೋಡಿ ನನಗೆ ವಿಪರೀತ ಖುಷಿಯಾಗುತ್ತಿದೆ” ಎಂದು!
ಹೌದು. ಈ ಸಾಂಸ್ಕೃತಿಕ ಆಕ್ರಮಣ ಬರಿಯ ವೇಷ ಭೂಷಣಗಳನ್ನಷ್ಟೆ ಬದಲಾಯಿಸಿಲ್ಲ. ಮನಸ್ಸುಗಳನ್ನೂ ಕಲ್ಲಾಗಿಸಿಬಿಟ್ಟಿವೆ. ಅತ್ಯಂತ ಭವುಕವಾಗಿದ್ದ, ಜಗತ್ತಿನ ನೋವಿಗೆ ಸ್ಪಂದಿಸುತ್ತಿದ್ದ ಭಾರತ ಇಂದು ತನ್ನ ನೋವಿಗೆ ಅಳುವಷ್ಟು ಕಣ್ಣೀರನ್ನೂ ಉಳಿಸಿಕೊಂಡಿಲ್ಲ. ಟೀವಿಯಲ್ಲಿ ಬಾಂಬ್ ಸ್ಫೋಟದ- ಸತ್ತವರ ದೃಶ್ಯಗಳನ್ನು ನೋಡುತ್ತಲೇ ಕೇಕು ತಿನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಇದು ಸಾಂಸ್ಕೃತಿಕ ಪಲ್ಲಟದ ಪರಿಣಾಮವಲ್ಲದೆ ಮತ್ತೇನು?
ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ಹಾಳುಮಾಡಿದ್ದೇ ಇವೆಲ್ಲಕ್ಕೂ ಮೂಲ ಕಾರಣ. ಬರಿಯ ಕಾರಕೂನರ ನಿರ್ಮಾಣದ ಶಿಕ್ಷಣ ಅದೆಷ್ಟು ನಿಸ್ತೇಜವಾಯ್ತೆಂದರೆ, ಅದು ಭಾರತೀಯ ಸಭ್ಯತೆ- ಸಂಸ್ಕೃತಿಗಳ ಅಶ್ವತ್ಥ ವೃಕ್ಷವನ್ನು ಮಕ್ಕಳಿಗೆ ಪರಿಚಯ ಮಾಡಿಸಿಕೊಡುವಲ್ಲಿ ಸೋತುಹೋಯಿತು. ಹೀಗಾಗಿಯೇ ಇಂದಿನ ಶಾಲಾ ಕಾಲೇಜುಗಳಲ್ಲಿ ಭಾರತದ ಬಗ್ಗೆ ಹೆಮ್ಮೆಯಿಂದ ಮಾತಾಡಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಅತಿ ವಿರಳ. ತಮ್ಮನ್ನು ತಾವು ಗೆದ್ದುಕೊಳ್ಳುವ ವಿದ್ಯೆಯಲ್ಲಿ ಸಿದ್ಧ ಹಸ್ತವಾಗಿದ್ದ ಭಾರತ ಇಂದು ಆತ್ಮ ವಿಶ್ವಾಸವೇ ಇಲ್ಲದ ಸ್ಥಿತಿಗೆ ಇಳಿದುಬಿಟ್ಟಿದೆ. ಅಂತರ್ಮುಖತೆಯನ್ನು ಗಳಿಸಿಕೊಂಡು, ಕಣ್ಣೂ ಮುಚ್ಚಿಯೂ ನೋಡಬಲ್ಲ ಸಮರ್ಥ್ಯ ಹೊಂದಿದ್ದ ಭಾರತೀಯರು ತೆರೆದ ಕಣ್ಣಿಂದಲೂ ನೋಡಲು ಸಾಧ್ಯವಾಗದ ಹಂತ ತಲುಪಿದ್ದಾರೆ.
ಸಾನೆ ಗುರೂಜಿ ಒಂದು ಮಾತು ಹೇಳುತ್ತಾರೆ. “ಹಾಗೇನಾದರೂ ಬೇರೆ ಸಂಸ್ಕೃತಿಗಳ ಆಘಾತಕ್ಕೆ ಸಿಕ್ಕಿ ನಾಶವಾಗುವ ಸಂಸ್ಕೃತಿ ನಮ್ಮದಾದರೆ, ಅದು ನಾಶವಾಗುವುದೇ ಒಳ್ಳೆಯದು. ಆದರೆ, ಹಾಗೆಲ್ಲ ಸಣ್ಣ ಗಾಳಿಗೆ ಪತರಗುಟ್ಟುವ ಸಂಸ್ಕೃತಿ ನಮ್ಮದಲ್ಲ” ಎಂದು.
ಇಲ್ಲೊಂದು ಭರವಸೆ ಮೂಡುತ್ತದೆ. ‘ನಿತ್ಯ ನೂತನೇ ಸನಾತನೀ’ ಎನ್ನುವ ಮಾತಿದೆ. ಯಾವುದು ಸದಾ ಹೊಸ ಹೊಸ ಝರಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹರಿಯುತ್ತದೆಯೋ, ಅದರ ಸತ್ತ್ವವನ್ನು ಅರಗಿಸಿಕೊಂಡು ಪ್ರವಾಹವಾಗಿ ಮುನ್ನುಗ್ಗುತ್ತದೆಯೋ ಅದೇ ‘ಸನಾತನ’. ಅದು, ಎಲ್ಲವನ್ನೂ ಜೀರ್ಣಿಸಿಕೊಂಡು ಬೆಳೆಯುವ ಮಹಾವೃಕ್ಷ. ನಾವಿದರ ರೆಂಬೆಗಳಾಗೋಣ. ಈ ಮಹಾಪ್ರವಾಹವನ್ನು ಸೇರುವ ಉಪನದಿಗಳಾಗೋಣ. ದಾರಿ ತಪ್ಪುವ ಕವಲುಗಳನ್ನೂ ಸೇರಿಸಿಕೊಂಡು ಮುನ್ನಡೆಯೋಣ.
ಭವಿಷ್ಯದ ಅಧಿಪತಿಗಳು ನಾವು; ವರ್ತಮಾನವನ್ನೂ ನಮ್ಮದಾಗಿಸಿಕೊಳ್ಳೋಣ.
~ ಚಕ್ರವರ್ತಿ ಸೂಲಿಬೆಲೆ
ಶಿಕ್ಷಕನಾಗಲು ಅದೇಕೆ ಅಸಡ್ಡೆ?
ನಾನು ಶಿಕ್ಷಕರ ಸಮಾವೇಶಗಳಿಗೆ ಹೋಗುತ್ತಿರುತ್ತೇನೆ. ಶಾಲೆಗಳಿಗೂ. ಯಾವ ಶಾಲೆಯಲ್ಲೇ ಆದರೂ ‘ದೊಡ್ಡವನಾದ ಮೇಲೆ ಏನಾಗುತ್ತೀರಿ? ಎಂದು ಖೇಳಿದರೆ ಯಾವ ಮಗುವೂ ಎದ್ದು ನಿಂತ್ ‘ಶಿಕ್ಷಕನಾಗ್ತೇನೆ’ ಎಂದು ಹೇಳಿದ್ದು ನೋಡಿಲ್ಲ. ಶಿಕ್ಷಕರಲ್ಲೂ ಬಹುಪಾಲು ಜನ ‘ಅನಿವಾರ್ಯ ಕರ್ಮ’ದಂತೆ ಈ ವೃತ್ತಿ ಹಿಡಿದಿರುವುದಾಗಿಯೇ ತಿಳಿದಿರುತ್ತಾರೆ. ಕೆಲವರು ಅಂತೆಯೇ ವರ್ತಿಸುತ್ತಾರೆ ಕೂಡ. ಯಾಕೆ ಹೀಗೆ?
ದೊಡ್ಡವನಾಗಿ ಏನಾಗ್ತೀ ಮಗು? ಹಾಗಂತ ಯಾರನ್ನಾದರೂ ಕೇಳಿ ನೋಡಿ ಹಂಡ್ರೆಡ್ ಪರ್ಸೆಂಟ್ ಅದು ಕೋಡೋ ಉತ್ತರ ಇಂಜಿನಿಯರ್ ಆಗ್ತೀನಿ ಅಂತಾನೋ, ಡಾಕ್ಟರ್ ಆಗ್ತೀನಿ ಅಂತಾನೋ ಇರುತ್ತೆ. ಅಲ್ಲೊಂದು -ಇಲ್ಲೊಂದು ಮಗು ನಾನು ಪೊಲೀಸ್ ಆಗ್ತೀನಿ ಅಂದು ಬಿಟ್ರೆ ಅದೇ ಭಿನ್ನರಾಗ!
ಸಮಾಜದ ನಿರ್ಮಾಣ ಆಗೋದು ಇಂಜಿನಿಯರುಗಳಿಂದಲೋ, ಡಾಕ್ಟರುಗಳಿಂದಲೋ ಅಲ್ಲ. ಅದು ಸಮರ್ಥ ಶಿಕ್ಷಕರಿಂದ ಮಾತ್ರ. ಇಷ್ಟಕ್ಕೂ ದಾಟಿ ತಪ್ಪಿದ ಇಂಜಿನಿಯರ್ ಕಟ್ಟಡ ಕೆಡವ ಬಲ್ಲ. ದಾರಿ ತಪ್ಪಿದ ವೈದ್ಯ ಒಂದು ಜೀವದ ನಾಶಕ್ಕೆ ಕಾರಣವಾಗಬಲ್ಲ. ಆದರೆ ಶಿಕ್ಷಕನೊಬ್ಬ ಹಾಳಾದರೆ ಮುಂದಿನ ಪೀಳಿಗೆಗೇ ಅದು ಮಾರಕ. ರಾಷ್ಟ್ರದ ಹಿತಕ್ಕೇ ಧಕ್ಕೆ. ಹೀಗಾಗಿಯೇ ಸದ್ಗುರುವಿನಿಂದ ಮಾತ್ರವೇ ಜಗದ್ಗುರು ಭಾರತ ಎನ್ನುವ ಮಾತು ಸುಳ್ಳಲ್ಲ.
ಅದೇಕೋ ಸದ್ಗುರುಗಳಾಗುವ ಹಂಬಲ ಇಂದಿನ ಪೀಳಿಗೆಯಲ್ಲಿ ಕಾಣುತ್ತಲೇ ಇಲ್ಲ. ಯಾರೊಬ್ಬನೂ ಕಾಲೇಜಿನ ದಿನಗಳಲ್ಲಿಯೇ ಶಿಕ್ಷಕನಾಗುವ ಇಚ್ಛಾಶಕ್ತಿ ತೋರುವುದೇ ಇಲ್ಲ. ಇದಕ್ಕೆ ಕಾರಣ ಮೂವರು ಮೊದಲನೆಯದು ಅಪ್ಪ-ಅಮ್ಮ ಆಮೇಲೆ ಸಮಾಜ ಮೂರನೆಯದು ಸ್ವತಃ ಶಿಕ್ಷಕರೇ!
ಹಣದ ಹಿಂದೆ ಓಡುವ ಭೋಗವಾದಿ ಪ್ರಪಂಚದ ನಿರ್ಮಾತೃಗಳಾಗಿರುವ ಅಪ್ಪ-ಅಮ್ಮ ಹಣಗಳಿಸುವ ಕೆಲಸವನ್ನೇ ಮಾಡು ಎಂಬ ಆದರ್ಶವನ್ನು ಬಾಲ್ಯದಲ್ಲಿಯೇ ತುರುಕಿಬಿಡುತ್ತಾರೆ. ಮಗು ಬಾವಿ ಕಟ್ಟಿಸು, ಕೆರೆಗಳನ್ನು ತೋಡಿಸು ಎಂಬ ಮಾತುಗಳನ್ನು ಹೇಳಿಕೊಡುವ ತಾಯಂದಿರು ಹೆಚ್ಚು ಕಡಿಮೆ ಇಲ್ಲವೇ ಇಲ್ಲ. ಪ್ರತಿಯೊಬ್ಬ ತಾಯಂದಿರಿಗೂ ತನ್ನ ಮಗ ಕೈತುಂಬಾ ಹಣ ಸಂಪಾದಿಸುವ ಕೂಲಿ ಕಾರ್ಮಿಕನಾಗಹೇಕೆಂಬುದೇ ಚಿಂತೆ. ಹೊಸ -ಹೊಸ ಚಿಂತನೆಗಳನ್ನು ಹೊತ್ತು ಸ್ವಂತ ಉದ್ಯಮಕ್ಕೆ ಕೈಹಾಕಬೇಕೆಂದು ಹಾತೊರೆಯುವವರನ್ನು ಅಡ್ಡಗಟ್ಟಿ ನಿರಂತರ ಸಂಬಳ ಬರುವ ಕೂಲಿಯನ್ನಾದರೂ ಮಾಡು ಎನ್ನುವವರು ಅಪ್ಪ -ಅಮ್ಮರಲ್ಲದೇ ಮತ್ತಾರು? ಬಿಸಿ ರಕ್ತದ ಯುವಕ-ಯುವತಿಯರಲ್ಲದೇ ಮತ್ತಾರು ಸವಾಲನ್ನು ಎದುರಿಸಬೇಕು ಹೇಳಿ. ಇಂತಹ ಸವಾಲುಗಳನ್ನೆದುರಿಸುವ ಸಾಮರ್ಥ್ಯ ತುಂಬಬೇಕಾದವರೇ ಹಣ ಗಳಿಸಲು ಎಂತಹ ಚಾಕರಿ ಬೇಕಾದರೂ ಮಾಡು ಎಂದು ಬಿಟ್ಟರೆ ಅದಾರು ಶಿಕ್ಷಕರಾಗುವ ಸಂಕಲ್ಪ ಮಾಡಿಯಾರು? ಈ ಪ್ರಶ್ನೆ ಶಾಶ್ವತ ಪ್ರಶ್ನೆ !
ಸಮಾಜದ ಜತೆ ಇದಕ್ಕಿಂತ ಭಿನ್ನವಲ್ಲ. ಸೀತಮ್ಮನ ಮಗ ಸಾಫ್ಟ್‌ವೇರ್ ಇಂಜಿನಿಯರಂತೆ. ತಿಂಗಳಿಗೆ ಒಂದು ಲಕ್ಷ ಸಂಬಳವಂತೆ ಎಂದು ಗೋಗರೆಯುತ್ತ ಅಂತಹವರಿಗೇ ಮಣಿಹಾಕಿ ಊರಿನಲ್ಲಿ ಉದ್ಯಮಿಯಾಗಿರುವವನನ್ನು, ಶಿಕ್ಷಕನಾಗಿರುವವರನ್ನು ಕಡೆಗಣಿಸುವ ಸಮಾಜ ಘೋರ ಪಾಪ ಮಾಡುತ್ತದೆ. ಒಂದು ಲಕ್ಷ ಸಂಬಳ ಪಡೆಯುವವ ಊರಿಗೇನು ಮಾಡಿದ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಅವನಿಗೆ ಸಿಗುವ ಗೌರವ ಮಾತ್ರ ಅಪಾರ. ಹೆಣ್ಣು ಹೆತ್ತವರು ಅಂಥವನನ್ನೇ ಹುಡು-ಹುಡುಕಿ ಮಗಳನ್ನು ಕೊಡುವುದು ಸಮಾಜದ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅದಾಗಲೇ ಹಳ್ಳಿಯಲ್ಲಿರುವ ಬಿಡಿ. ಪಟ್ಟಣದಲ್ಲಿರುವ ಅನೇಕ ಶಿಕ್ಷಕರಿಗೂ ಹೆಣ್ಣುಗಳಿಗೆ ಬರ! ಇದರೊಟ್ಟಿಗೆ ಒಂದಷ್ಟು ವ್ಯಾಪಾರಿಗಳು ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿ, ಶಿಕ್ಷಕರನ್ನು ಕೆಲಸಗಾರರನ್ನಾಗಿ ಮಾಡಿಬಿಟ್ಟಿದ್ದಾರೆ. ಶಿಕ್ಷಕರನ್ನೂ ಗೌರವಿಸಬೇಕು ಎಂದೇ ಗೊತ್ತಿಲ್ಲದ ಅನೇಕರು ಮ್ಯಾಜೇನ್‌ಮೆಂಟಿನ ಅಧ್ಯಕ್ಷರು! ತನ್ನೆದುರಿಗೆ ತನ್ನ ಶಿಕ್ಷಕನ ಮಾನ ಹರಾಜಾಗುವುದನ್ನು ಕಂಡ ಯಾವ ವಿದ್ಯಾರ್ಥಿ ತಾನೇ ಶಿಕ್ಷಕನಾಗುವ ಮನಸು ಮಾಡಬಲ್ಲ ಹೇಳಿ.
ಹಾಗೆ ನೋಡಿದರೆ ಇವರಿಬ್ಬರೂ ಸಮಸ್ಯೆಯೇ ಅಲ್ಲ. ಮಕ್ಕಳಲ್ಲಿ ಶಿಕ್ಷಕನಾಗಬೇಕೆಂಬ ಹಂಬಲದ ಕೊರತೆ ಕಾಣುತ್ತಿರುವುದೇ ಶಿಕ್ಷಕರ ಕಾರಣದಿಂದ! ನೀವು ನಂಬುವುದಿಲ್ಲ . ಶಾಸ್ತ್ರೀಯ ಸಂಗೀತದ ಗಾಯನ ಮಾಡುವ ಅನೇಕರು ತಮಗಿಂತ ಹಿರಿಯ ಸಂಗೀತಗಾರರ ವೇಷಭೂಷಣ, ಗತ್ತು ಗೈರತ್ತುಗಳನ್ನು ನೋಡಿಯೇ ಸಂಗೀತಗಾರರಾಗಬೇಕೆಂದು ನಿರ್ಧರಿಸಿದ್ದಂತೆ! ಸ್ವಾಮಿ ವಿವೇಕಾನಂದರ ಮಾತಿನ ಪ್ರಭಾವಕ್ಕೆ ಒಳಗಾಗಿ ತಾನೂ ಅವರಂತಾಗಬೇಕೆಂದು ಲಾಹೋರಿನ ಕಾಲೇಜು ಉಪನ್ಯಾಸಕ ನಿರ್ಧರಿಸಿ ಪ್ರಖರ ಸನ್ಯಾಸಿ, ಸಂತ ರಾಮತೀರ್ಥರಾಗಲಿಲ್ಲವೇ? ದಾರ ಮಾಡುವ ಶಿಕ್ಷಕರು ಸಮರ್ಥರಾಗಿದ್ದು ಆದರ್ಶ ಹೊಮ್ಮಿಸುವಂತಹವರಾಗಿದ್ದರೆ ಪಾಠ ಕೇಳಿದ ಮಕ್ಕಳೂ ತಮ್ಮ ಶಿಕ್ಷಕರಂತಾಗುವ ಸಂಕಲ್ಪ ಮಾಡುತ್ತಾರೆ.
ಅದಕ್ಕೆ ಅಲ್ಲವೇ ನಾಲ್ಕಾರು ದಶಕಗಳ ಹಿಂದೆ ಸಾಲುಗಟ್ಟಿ ಶ್ರೇಷ್ಠ ಶಿಕ್ಷಕರ ನಿರ್ಮಾಣವಾದದ್ದು. ಟಿ.ಎಸ್. ವೆಂಕಟಯ್ಯ, ತ.ಸು. ರಾಮರಾಯ, ಕುವೆಂಪು, ರಾಜರತ್ನಂ, ಪ್ರೊ.ಎಂ. ಹಿರಿಯಣ್ಣ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ಶಿಕ್ಷಕರೇ. ಅವರ ಕೈಕೆಳಗೆ ಅಧ್ಯಯನ ಮಾಡಿದವರೂ ಶಿಕ್ಷಕರಾಗಬೇಕೆಂದೇ ಹಂಬಲಿಸಿದ್ದೂ ಅದಕ್ಕೇ.
ಹೌದು. ಶಿಕ್ಷಕರ ಪಾತ್ರ ಬಲು ಮಹತ್ವದ್ದು. ತಾವು ತಮ್ಮೆಲ್ಲ ಪ್ರಯತ್ನವನ್ನು ಏಕೀಕೃತಗೊಳಿಸಿ ಆದರ್ಶದ ಸಿಂಧುವಾಗಿ ನಿಂತರೆ ಅದನ್ನು ಬಿಂದು ಬಿಂದುವಾಗಿ ಸವಿದ ಶಿಷ್ಯ ಅದರಂತಾಗುವ ಪ್ರಯತ್ನ ಮಾಡುತ್ತಾನೆ. ಆದರೇನು? ಶಿಕ್ಷಕರಾಗಿರುವುದೇ ಅನಿವಾರ್ಯದಿಂದ ಎಂದು ನಮ್ಮ ಶಿಕ್ಷಕರೇ ಭಾರಿಸಿ ಬಿಡುತ್ತಾರಲ್ಲ. ಸಿಲೆಬಸ ಮುಗಿಸಿ ಹತ್ತಿರ ಹತ್ತಿರ ಶೇ. ೧೦೦ರಷ್ಟು ಫಲಿತಾಂಶ ಕೊಟ್ಟುಬಿಟ್ಟರೆ ಮುಗಿಯಿತೆಂದು ನಿರ್ಧರಿಸಿ ಬಿಡುತ್ತಾರಲ್ಲ. ಇಲ್ಲಿ ಸಮಸ್ಯೆಯಿದೆ.
ಭಾರತಕ್ಕೀಗ ಬೇಕಾಗಿರುವುದು ಭಾರತೀಯತೆಯಿಂದ ಪುಷ್ಟರಾದ ಶಿಕ್ಷಕರು ತಮ್ಮನ್ನು ತಾವು ರಾಷ್ಟ್ರಕ್ಕಾಗಿ ಸವೆಸಿಕೊಂಡು ಸುಗಂಧ ಪಸರಿಸಬಲ್ಲ ಶಿಕ್ಷಕರು. ಭಾರತ ತೊಂದರೆಯಲ್ಲಿ ಸಿಲುಕಿಕೊಂಡಾಗಲೆಲ್ಲ ಆಚಾರ್ಯರು – ಗುರುಗಳೇ ಅದನ್ನು ಸಂಕಷ್ಟದಿಂದ ಮೇಲೆತ್ತಿರುವುದು ಸಿರಿವಂತ ಸಿದ್ಧಾರ್ಥ, ಮನೆಬಿಟ್ಟು ಭಿಕ್ಷೆ ಬೇಡುತ್ತ ಅಲೆದಿದ್ದು ಸದ್ಗುರುವಾಗುವ ಹಂಬಲದಿಂದ. ಶಂಕರ ಎಂಟು ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದು ಭಾರತವನ್ನು ಅಖಂಡಗೊಳಿಸಿ ಮತ್ತೆ ಕಟ್ಟುವ ನಿಟ್ಟಿನಿಂದ. ಬಸವಣ್ಣ ಸಮಾಜದ ದೃಷ್ಟಿಯಿಂದ ಬ್ರಾಹ್ಮಣ್ಯ ತೊರೆದು ಬಂದ, ಗುರುವಾದ. ಅಪರೂಪದ ಬದಲಾವಣೆ ತಂದ. ಹೇಳುತ್ತ ಹೋದರೆ ಎಲ್ಲರೂ ಮಾರ್ಗ ತೋರಿದ ಗುರುಗಳೇ. ಈಗ ಈ ಗುರುಪಟ್ಟ ಅರ್ಹರಾದವರನ್ನು ಆಲಿಸಿ ಆ ದಿಕ್ಕಿನಲ್ಲಿ ಪ್ರೇರೇಪಣೆ ಕೊಡುವ ಹೊಣೆ ನಮ್ಮೆಲ್ಲರದು.
ಈ ಶತಮಾನ ಭಾರತದ ಶತಮಾನ ಎನ್ನುವುದು ಶತಃಸಿದ್ಧ. ಭಾರತ ಎಂದಿಗೂ ಯಾರ ಮೇಲೂ ಏರಿ ಹೋಗಿ ಗೌರವ ಸಂಪಾದಿಸಬಲ್ಲ. ಸತ್ಯದರ್ಶನ ಮಾಡಿಸಿ ಗುರುವಾಗಿ ನಿಂತೇ ಹಿರಿಮೆ ಸಂಪಾದಿಸಿತು. ಜಗತ್ತಿನ ಜನ ಭಾರತದ ಮುಂದೆ ತಲೆಬಾಗಿಸಿ ನಿಂತದ್ದೂ ಅದಕ್ಕೇ. ಈಗ ಮತ್ತೆ ಭಾರತದೆಡೆಗೆ ಜಗತ್ತು ವಾಲುತ್ತಿದೆಯೆಂದರೆ ಅದು ಇಂಜಿನಿಯರುಗಳ ಕಡೆಗೆ, ವೈದ್ಯರ ಕಡೆಗೆ, ಪೊಲೀಸರ ಕಡೆಗೆ ವಾಲುತ್ತಿದೆಯೆಂದಲ್ಲ. ಅದು ಭಾರತದ ಗುರುಗಳ ಬಳಿ ಧಾವಿಸುತ್ತಿದೆ. ಒಳ್ಳೆಯ ಗುರುವಿದ್ದರೆ ಅವನ ಸೇವೆ ಮಾಡಬೇಕೆಂದು ಕಾತರಿಸುತ್ತಿದೆ.
ಇದು ಹೊಸ ಯುಗ. ಇಲ್ಲಿ ಮತ್ತೆ ಶಿಕ್ಷಕರಿಗೆ – ಗುರುಗಳಿಗೇ ವ್ಯಾಪಕ ಮನ್ನಣೆ. ಈ ಕಾರಣಕ್ಕಾಗಿಯಾದರೂ ಶಿಕ್ಷಕ ವೃತ್ತಿಯನ್ನು ಅರಸಿ ಆರಿಸಿಕೊಳ್ಳಬೇಕಾದವರ ಸಂಖ್ಯೆ ಹೆಚ್ಚಬೇಕಿದೆ. ಅದಕ್ಕಾಗಿ ಎಲ್ಲರ ಪ್ರೋತ್ಸಾಹ ಮಾರ್ಗದರ್ಶನ ಖಂಡಿತ ಅಗತ್ಯ. ನಮ್ಮ ಮಕ್ಕಳು ಶಿಕ್ಷಕರಾಗುವುದಕ್ಕೆ ಅಪ್ಪ-ಅಮ್ಮ ; ಶಿಕ್ಷಕರಾದವರಿಗೆ ಗೌರವಿಸುತ್ತ ಸಮಾಜ; ಹಾಗೇ ತಾನೂ ಒಳ್ಳೆಯ ಶಿಕ್ಷಕನಾಗಿ ತಮ್ಮ ವಿದ್ಯಾರ್ಥಿಗಳು ಆ ದಿಸೆಯಲ್ಲಿ ನಡೆಯಲು ಪ್ರೇರೇಪಿಸುತ್ತ ಗುರುಗಳು ಇವರೆಲ್ಲರೂ ಕೆಲಸ ಮಾಡಿದರೆ ಮುಂದಿನ ಬಾರಿ ಶಾಲೆಗೆ ಹೋದಾಗ ನಾನು ಶಿಕ್ಷಕನಾಗುವೆ ಎನ್ನುವವರ ಸಂಖ್ಯೆ ಹೆಚ್ಚಿತೇನೇ?
– ಚಕ್ರವರ್ತಿ ಸೂಲಿಬೆಲೆ
1 comment