ರಾಷ್ಟ್ರ ಶಕ್ತಿ ಕೇಂದ್ರ

ಭಾರತ ಭಾಗ್ಯ ವಿಧಾತರು- ೪

Posted in ನಮ್ಮ ಇತಿಹಾಸ by yuvashakti on ನವೆಂಬರ್ 26, 2008

ರಾಜಾ ರಾಮಮೋಹನ ರಾಯ್

ರಾಮಮೋಹನ ರಾಯರು ಜನಿಸಿದ್ದು ಮುರ್ಷಿದಾಬಾದ್ (ಪ. ಬಂಗಾಳ) ಜಿಲ್ಲೆಯ ರಾಧಾ ನಗರ ಎಂಬಲ್ಲಿ. ರಾಜಾ ಎನ್ನುವುದು ಎರಡನೆ ಅಕ್ಬರ್ ಅವರಿಗೆ ನೀಡಿದ ಬಿರುದು.
ರಾಮಮೋಹನ ರಾಯ್ ಅವರನ್ನು ಭಾರತೀಯ ಪುನರುಜ್ಜೀವನದ ಶಕಪುರುಷ ಎಂದು ಕರೆಯುವರು. ಭಕ್ತ ಭಾಗವತರ ಮನೆತನದಲ್ಲಿ ಜನಿಸಿದ ರಾಮಮೋಹನ ರಾಯರು ಬಾಲ್ಯದಲ್ಲಿ ದೈವಭಕ್ತರಾಗಿದ್ದರು. ಮುಂದೆ ತಮ್ಮ ವಿಭಿನ್ನ ಚಿಂತನೆಗಳಿಂದ ವಿಚಾರವಾದಿ ಎನಿಸಿಕೊಂಡರೂ
ಅವರ ಆಧ್ಯಾತ್ಮಿಕತೆಗೆ ಭಂಗ ಬರಲಿಲ್ಲ. ಆದರೆ ಧರ್ಮದಲ್ಲಿ ಬೇರೂರಿದ್ದ ಮೌಢ್ಯ – ಆಚರಣೆಗಳನ್ನು, ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿದ್ದ ಸ್ತ್ರೀಶೋಷಣೆಯನ್ನು ಅವರು ಕಟುವಾಗಿ ವಿರೋಧಿಸಿದರು.

ರಾಮಮೋಹನರದು ಅಸೀಮ ಬುದ್ಧಿಶಕ್ತಿ , ಅವರು ಸಂಸ್ಕೃತ, ಪರ್ಶಿಯನ್ ಭಾಷೆಗಳ ಜೊತೆಗೆ ಗ್ರೀಕ್, ಹೀಬ್ರೂ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿದ್ದರು. ಆಂಗ್ಲಭಾಷೆಯಲ್ಲಿ ಪರಿಣತಿ ಪಡೆದು ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು.
ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ಶಿಕ್ಷಣಗಳು ಮೋಹನರಾಯರ ಪ್ರಮುಖ ಆದ್ಯತೆಗಳಾಗಿದ್ದವು. ಅವರ ಹೋರಾಟದಿಂದಾಗಿ ಸತಿ ಪದ್ಧತಿಗೆ ಕಾನೂನಾತ್ಮಕ ನಿಷೇಧ ಬಿತ್ತು. ಅವರು ಸ್ತ್ರೀಯರಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯಬೇಕೆಂದು ಪ್ರಬಲ ವಾದ ಮಂಡಿಸಿದ್ದರು. ಬಹಳ ವರ್ಷಗಳ ನಂತರ ಅದು ಅಂಗೀಕೃತವಾಯಿತು.

ಮೋಹನರಾಯರು ಅಪಾರ ಸಾಮಾಜಿಕ ಕಳಕಳಿಯಿದ್ದ ವ್ಯಕ್ತಿ ; ಉಳುವವನಿಗೆ ಹೊಲ ಎಂಬ ಘೋಷಣೆಯನ್ನು ಮೊತ್ತ ಮೊದಲು ಹೊರಡಿಸಿದ್ದು ಇವರೇ. ಭಾರತೀಯ ಭಾಷೆಯಲ್ಲಿ ಮೊದಲ ಬಾರಿಗೆ ಪತ್ರಿಕೆ ಹೊರ ತಂದವರೂ ಇವರೇ. ಅವರ ಆತ್ಮೀಯ ಸಭಾ- ಬಾಂಗ್ಲಾ ಗೆಜೆಟ್ ಹೊರಡಿಸಿದರೆ, ಅವರು ಪರ್ಷಿಯನ್ ಭಾಷೆಯಲ್ಲಿ ಮಿರತ್ ಉಲ್ ಅಖಬಾರ್ ಮತ್ತು ಬಂಗಾಳಿಯಲ್ಲಿ ಸಂವಾದ ಕೌಮುದಿಗಳನ್ನು ಹೊರತಂದರು.
ಮೋಹನರಾಯರು ಹಿಂದೂ ಧರ್ಮಿಯರ ಮೌಢ್ಯತೆಯನ್ನು ವಿರೋಧಿಸಿದರೂ ಧರ್ಮದ ಬಗ್ಗೆ ಅಸಡ್ಡೆ ತಾಳಲಿಲ್ಲ. ಬದಲಿಗೆ ಅದರ ಪುನರುತ್ಥಾನಕ್ಕಾಗಿ ಬ್ರಹ್ಮ ಸಮಾಜ ವನ್ನು ಸ್ಥಾಪಿಸಿ ತಮ್ಮ ವಿಚಾರಧಾರೆಗಳನ್ನು ವ್ಯಾಪಕಗೊಳಿಸುವ ಯತ್ನ ಮಾಡಿದರು. ಹಿಂದೂಗಳು ನಿರಂತರ ಆಕ್ರಮಣಗಳಿಂದ ಅಂಜುಕುಳಿಗಳಾಗಿ ಸಾಗರದಾಚೆ ವಿದೇಶಪ್ರಯಾಣ ಮಾಡಬಾರದು ಎಂದು ತಮಗೆ ತಾವೇ ವಿಧಿಸಿಕೊಂಡಿದ್ದ ಕಟ್ಟಳೆ ಮುರಿದು ಹಡಗಿನಲ್ಲಿ ಇಂಗ್ಲೆಂಡಿಗೆ ಹೋದರು.
೧೮೩೧ ರಲ್ಲಿ ಮೊಘಲ್ ರಾಜನ ಪರ ವಾದ ನಡೆಸಲು ಇಂಗ್ಲೆಂಡಿಗೆ ತೆರಳಿದ್ದ ಮೋಹನ ರಾಯರು ಅಲ್ಲಿಯೇ ಮೃತರಾದರು. ಭಾರತದ ಸಮಾಜ ಸುಧಾರಕರ ಯಾದಿಯಲ್ಲಿ ರಾಜಾ ರಾಮಮೋಹನ ರಾಯರ ಹೆಸರು ಇಂದಿಗೂ ಮೊದಲನೆಯದಾಗಿ ಪರಿಗಣಿಸಲ್ಪಡುತ್ತದೆ.

ಮೀರಾಬಾಯಿ

ಮೀರಾಬಾಯಿ ಭಾರತ ಕಂಡ ಸಂತಶ್ರೇಷ್ಠರಲ್ಲಿ ಒಬ್ಬಳು.  ಅವಳು ಶ್ರೀ ಕೃಷ್ಣನ ಅಪ್ರತಿಮ ಭಕ್ತೆ ; ಆಕೆಯು ಕೃಷ್ಣಭಕ್ತಿಯ ಉನ್ಮಾದದಲ್ಲಿ ರಚಿಸಿರುವ ಗೀತೆಗಳು ಇಂದಿಗೂ ಜನರ ನಾಲಗೆಯಲ್ಲಿ ಹರಿದಾಡುತ್ತಿವೆ.
ಮೀರಾಬಾಯಿಯ ಕಾಲ ೧೬ನೇ ಶತಮಾನ, ರಜಪೂತ ವಂಶದಲ್ಲಿ ಜನಿಸಿದ ಈಕೆ ಬಾಲ್ಯದಿಂದಲೂ ಕೃಷ್ಣನ ಗೊಂಬೆಗಳೊಡನೆ ಆಡುತ್ತಾ ಬೆಳೆದಳು.  ಮುಂದೆ ಅದು ಭಕ್ತಿಗೆ ತಿರುಗಿ ಅಲೌಕಿಕ ಪ್ರೇಮ ಸ್ಥಾಪಿತವಾಯಿತು. ಮೀರಾಬಾಯಿ ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಆಕೆಯ ವಿವಾಹ ಮೇವಾಡದ ದೊರೆ ಬೋಜರಾಜನೊಂದಿಗೆ ನಡೆಸಲಾಯಿತು ಆದರೆ ಆ ವೇಳೆಗಾಗಲೇ ಎಲ್ಲಾ ಲೌಕಿಕ ಪ್ರಕ್ರಿಯೆಗಳಿಂದ ಹೊರತಾಗಿ ಬಿಟ್ಟಿದ್ದ ಮೀರಾ ತನ್ನ ಪತಿಯೊಂದಿಗೆ ಸಂಸಾರ ನಡೆಸಲು ಒಪ್ಪಲಿಲ್ಲ. ಅವಳು ತನ್ನನ್ನುತಾನು ಸಂಪೂರ್ಣವಾಗಿ ಶ್ರೀಕೃಷ್ಣನಿಗೆ ಸಮರ್ಪಿಸಿಕೊಂಡುಬಿಟ್ಟಿದ್ದಳು.  ಮುಂದೆ ತನ್ನ ಮನೆಯನ್ನು ತೊರೆದು ಹೊರಟ ಮೀರಾಬಾಯಿ ಶ್ರೀಕೃಷ್ಣಭಕ್ತಿಯಲ್ಲಿ ಪರವಶಳಾಗಿ ಹಾಡುತ್ತಾ, ನರ್ತಿಸುತ್ತ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿದಳು. ಅವಳ ಭಕ್ತಿಪರಾಕಾಷ್ಠೆಗೆ ಸೋತ ಜನರು ಆಕೆಯ ಅನುಯಾಯಿಗಳಾದರು.

ಮೀರಾಬಾಯಿ ಜೀವಿಸಿದ್ದ ಕಾಲಘಟ್ಟದಲ್ಲಿ ಭಾರತದ ಸ್ತ್ರೀಯರ ಜೀವನ ಬಹಳ ದುಸ್ತರವಾಗಿತ್ತು.  ಅನ್ಯದೇಶೀಯರ ಆಕ್ರಮಣಭೀತಿಯಿಂದ ಅವರು ಬಂಧಿಗಳಾಗಿದ್ದರು, ಅವರಿಗೆ ತಮ್ಮ ಯಾವ ವೈಯಕ್ತಿಕ ಬಯಕೆಯನ್ನು ಹೊಂದುವ ಅಧಿಕಾರವಿರಲಿಲ್ಲ, ಆದರೆ ಮೀರಾ ಈ ಎಲ್ಲಾ ಕಟ್ಟಳೆಗಳನ್ನು ಮುರಿದಳು, ಅವಳ ಸಾಹಸಕ್ಕೆ ಭಗವದ್ಭಕ್ತಿಯ ಬಲವೇ ಮೂಲಸ್ರೋತವಾಯಿತು.  ತನ್ನ ಪತಿಯ ಪರಿವಾರವು ಹತ್ಯೆಗೆ ನಡೆಸಿದ ಎಲ್ಲಾ ಸಂಚುಗಳನ್ನು ಗೆದ್ದುಬಂದ ಮೀರಾ ತನ್ನ ಜೀವಿತವನ್ನು ಕೃಷ್ಣದೇಗುಲಗಳಲ್ಲಿ ಕಳೆದಳು.  ತನ್ನ ಅಂತ್ಯಕಾಲದಲ್ಲಿ ಆಕೆ ದ್ವಾರಕಾನಗರಿಯಲ್ಲಿ ನೆಲೆಸಿದ್ದಳು.

 ಸರ್ದಾರ್ ವಲ್ಲಭಾಯಿ ಪಟೇಲ್

ಉಕ್ಕಿನ ಮನುಷ್ಯ ಎಂದು ಖ್ಯಾತರಾದ ಸ್ವಾತಂತ್ರ್ಯ ಹೋರಾಟಗಾರ ವಲ್ಲಭಾಯಿ ಪಟೇಲರು ಜನಿಸಿದ್ದು ಗುಜರಾತಿನ ನಡಿಯಾರ್ ಎಂಬಲ್ಲಿ , ಆದರೆ ಅವರ ಸಾಮರ್ಥ್ಯ ಕೇವಲ ಆ ಪ್ರಾಂತ್ಯಕ್ಕೆ ಸೀಮಿತವಾಗದೆ ಇಡಿಯ ಭಾರತದ ಏಕೀಕರಣಕ್ಕೆ ವಿನಿಯೋಗವಾಯಿತು. ಸ್ವಾತಂತ್ರಾನಂತರ ಹೈದರಾಬಾದ್ ಅನ್ನು ಭಾರತದೊಂದಿಗೆ ಜೋಡಿಸುವುದರಲ್ಲಿ ಅವರ ಪಾತ್ರ ಮಹತ್ತರವಾದುದು.  ಪಾಟೀಲರ ಗಡಸುತನದ ಆಧಾರವಿಲ್ಲದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲವೆಂದೇ ಹೇಳಬಹುದು.

೧೯೧೮ ರಲ್ಲಿ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದಾಗ ಅವರ ವಕೀಲಿವೃತ್ತಿ ಉಚ್ಛ್ರಾಯದಲ್ಲಿತ್ತು.  ತಮ್ಮ ವೃತ್ತಿ, ಸಂಪತುಗಳೆಲ್ಲವನ್ನೂ ತ್ಯಜಿಸಿಬಂದ ಪಟೇಲರು ಗಾಂಧೀಜಿಯವರ ಅನುಯಾಯಿಯಾದರು. ಗಾಂಧೀಜಿಯವರ’ನಿವಾರಣ್ ಸತ್ಯಾಗ್ರಹ’ ಅವರಿಗೆ ಸತ್ಯಾಗ್ರಹ ಚಳುವಳಿಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿತು. ಮುಂದೆ ಇದು ಅವರ ಬರ್ಸಾಕ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳ ಯಶಸ್ಸಿಗೆ ಕಾರಣವಾಯಿತು.  ಇವುಗಳ ಜೊತೆಗೆ ಪಟೇಲರು ಅಸ್ಪೃಶ್ಯತೆ, ಮದ್ಯಪಾನ ಹಾಗೂ ಅಸಮಾನತೆಯ  ವಿರುದ್ಧವೂ ವ್ಯಾಪಕ ಚಳುವಳಿ ನಡೆಸಿದರು. ಬಾರ್ಡೇಲಿನ ಸತ್ಯಾಗ್ರಹದಿಂದ ಪಟೇಲರಿಗೆ ’ಸರ್ದಾರ್’ ಅಭಿದಾನ ದೊರಕಿತು.
ಆರಂಭದಿಂದಲೂ ಕಾಂಗ್ರೇಸ್ಸಿನ ಸಕ್ರಿಯ ಸದಸ್ಯರಾಗಿದ್ದ ಪಟೇಲರು ಅಲ್ಲಿಯೂ ತಮ್ಮ ವಿಶಿಷ್ಟ ಛಾಪನ್ನೆತ್ತಿ, ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗುವ ಮಟ್ಟದವರೆಗೂ ಏರಿದ್ದರು, ಆದರೆ ಕಾರಣಾಂತರಗಳಿಂದ ಅವರು ಉಪಪ್ರದಾನಿಯಾಗಿ ಅಧಿಕಾರವಹಿಸಿಕೊಂಡು, ಗೃಹಖಾತೆಯ ಉಸ್ತುವಾರಿ ಕೈಗೆತ್ತಿಕೊಂಡರು.

ಪಟೇಲರು ಸ್ವಾತಂತ್ರ್ಯಾನಂತರದ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರೆಂದು ನೆನೆಯಲ್ಪಡುತ್ತಾರೆ.  ಅವರು ಬಿಟ್ಟು ೫೬೫ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ ಅಲ್ಲಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೆತಂದರು.  ಅಧಿಕಾರದ ವಿಕೇಂದ್ರೀಕರಣ ಧಾರ್ಮಿಕ ಸ್ವಾತಂತ್ರ್ಯ – ಸಮಾನತೆ ಇತ್ಯಾದಿ ವಿಷಯಗಳನ್ನು ವಿಶ್ಲೇಷಿಸಿ ಭಾರತದ ಸಂವಿಧಾನ ರಚನೆಯಲ್ಲಿಯೂ ಮಹತ್ವದ ಕೊಡುಗೆ ನೀಡಿದರು.

ಸಂತ ಕಬೀರ

 ಸಂತ ಕಬೀರರು ’ಸಾಮರಸ್ಯದ ನೇಕಾರ’ ಎಂದು ಖ್ಯಾತರು. ಇವರು ವೃತ್ತಿಯಿಂದಲೂ ನೇಕಾರರೇ ಆಗಿದ್ದರು.  ತಮ್ಮ ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ವಿಚಾರಗಾಥೆಗಳಿಂದ ಅಪಾರ ಜನಮನ್ನಣೆಯನ್ನೂ,  ಅನುಯಾಯಿಗಳನ್ನೂ ಪಡೆದರು. 
ಕಬೀರರು ಜನ್ಮತಃ ಯಾವ ಕುಲದವರೆಂದು ತಿಳಿದವರಿಲ್ಲ. ಆದರೆ ಮಕ್ಕಳಿಲ್ಲದ ಮುಸ್ಲಿಮ್ ದಂಪತಿಗಳು ಅವರನ್ನು ಬೆಳೆಸಿದರು. ಯುವಕ ಕಬೀರರು ಸ್ವಾಮಿ ರಾಮಾನಂದರ ಶಿಷ್ಯರಾಗಿ ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದರು.  ಮುಂದೆ ತಮ್ಮ ಅನುಭವ, ಕಳಕಳಿ, ಜ್ಞಾನಗಳೆಲ್ಲವನ್ನು ಹದವಾಗಿ ನೇಯ್ದು ವಿಶಿಷ್ಠ ಪಂಥವೊಂದರ ಉಗಮಕ್ಕೆ ಕಾರಣರಾದರು.

ಕಬೀರರ ಬೋಧನಾವಿಧಾನ ಬಹಳ ಸ್ವಾರಸ್ಯಕರವಾದುದು. ಕನ್ನಡದ ವಚನಗಳಂತೆ, ದಾಸರ ಕೀರ್ತನೆಗಳಂತೆ ಕಬೀರರ ’ದೋಹೆ’ಗಳು ಭಕ್ತಿ ಸಾಹಿತ್ಯಕ್ಕೂ ಹಿಂದೀ ಭಾಷೆಗೂ ನೀಡಿರುವ ಕೊಡುಗೆ ಅಪಾರ.  ಹಾಗೆಂದು ಕಬೀರರು ಶ್ಲೋಕ, ವಚನ – ಕೀರ್ತನಗಳಂತೆ ಯಾವುವನ್ನೂ ಸ್ವತಃ ಲೇಖಿಸಿಡಲಿಲ್ಲ.  ಅವೆಲ್ಲವೂ ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಇಂದಿನವರೆಗೂ ಉಳಿದುಬಂದಿವೆ.  ಆದರೆ ಅವರ ಕೆಲವು ಅನುಯಾಯಿಗಳು ಕಬೀರರ ಬೋಧನೆಗಳನ್ನು ದಾಖಲಿಸಿದ್ದಾರೆ.  ಹೀಗೆ ಅವರ ಹೆಸರಿನಲ್ಲಿ ಒಟ್ಟು ೭೨ ಗ್ರಂಥಗಳು ದೊರೆತಿವೆ.  ಕಬೀರ ಪಂಥ ಇಂದಿಗೂ ಅಸ್ತಿತ್ವದಲ್ಲಿದ್ದು ಸುಮಾರು ಹತ್ತು ಲಕ್ಷ ಕಬೀರ ಪಂಥಿಗಳು ದೇಶದೆಲ್ಲೆಡೆ ಇದ್ದಾರೆ.

ಹದಿನೈದನೇ ಶತಮಾನದಲ್ಲಿ ಜೀವಿಸಿದ್ದ ಕಬೀರರು ಮೊತ್ತಮೊದಲ ಬಾರಿಗೆ ’ರಾಮ-ರಹೀಮ’ರಿಬ್ಬರೂ ಒಂದೇ ಎಂದು ಘೋಷಿಸಿದರು. ಅದರಿಂದ ಎರಡೂ ಪಂಗಡಗಳ ದ್ವೇಷ ಕಟ್ಟಿಕೊಂಡರು. ಆದರೇನು? ಅವರು ನೆಟ್ಟ ಸಾಮರಸ್ಯದ ಸಸಿ ಕಾಲಕ್ರಮದಲ್ಲಿ ಬೆಳೆದು ಫಲ ನೀಡಿತು. ಪಂಜಾಬ್ ಪ್ರಾಂತ್ಯದಲ್ಲಿ ಬೆಳಕು ಕಂಡ ಸಿಖ್ಖ ಪಂಥ ಕಬೀರರ ವಿವರಗಳನ್ನು ಸ್ವೀಕರಿಸಿತು.
ತುಂಬುಜೀವನ ನಡೆಸಿದ ಕಬೀರರು ತಮ್ಮ ೧೧೮ನೇ ವಯಸ್ಸಿನಲ್ಲಿ ದೇಹ ತೊರೆದರು.

Tagged with:

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: