ರಾಷ್ಟ್ರ ಶಕ್ತಿ ಕೇಂದ್ರ

‘ಜಾಗೋ ಭಾರತ್’… ಒಂದು ಹೊಸ ಪ್ರಯತ್ನ

Posted in ಕಾರ್ಯಕ್ರಮ- ವರದಿ by yuvashakti on ನವೆಂಬರ್ 18, 2008

ರಾಷ್ಟ್ರ ಪ್ರಜ್ಞೆ ಹೊಂದಿರುವುದು ಅಂದ್ರೆ ಏನು?
ದೈನಂದಿನ ಬದುಕಿನ ಪ್ರತಿಯೊಂದು ಸಂಗತಿಯಲ್ಲೂ ರಾಷ್ಟ್ರದ ಏಳಿಗೆ, ತನ್ಮೂಲಕ ಜಾಗತಿಕ ಪ್ರಗತಿ ಬಯಸುವುದಷ್ಟೆ. ರಾಷ್ಟ್ರ ಪ್ರಜ್ಞಾವಂತರಾಗುವುದೆಂದರೆ ಅದೇನೂ ಘನಘೋರ ವಿಚಾರವಲ್ಲ.
ಸರ್ವೇ ಸಾಧಾರಣ ಜೀವನ ನಡೆಸುತ್ತಲೇ ನಾವು ಇದನ್ನು ಮಾಡಬಹುದು. ದೇಶಹಿತವನ್ನು ಚಿಂತಿಸುವಲ್ಲಿ ನಾವು ಕಳೆದುಕೊಳ್ಳುವಾದದರೂ ಏನು ಹೇಳಿ?

ಹೀಗೆ ಭಾಷಣ, ಸಾಹಿತ್ಯ ಮಾತ್ರವಲ್ಲದೆ ನಾಡು- ನುಡಿಯೆಡೆಗಿನ ಪ್ರೇಮವನ್ನು ಜಾಗೃತಗೊಳಿಸುವ ಇನ್ನಿತರ ಮಾಧ್ಯಮಗಳತ್ತ ಗಮನ ಹೊರಳಿದಾಗ ಉದಿಸಿದ್ದೇ, ‘ಜಾಗೋ ಭಾರತ್’ ಎನ್ನುವ ಕಾನ್ಸೆಪ್ಟು. ಹಾಗಂತ ಈ ಪ್ರಯತ್ನ ಮಾಡ್ತಿರುವವರಲ್ಲಿ ನಾವೇ ಮೊದಲಿಗರೇನಲ್ಲ. ಆದರೆ, ಕನ್ನಡದಲ್ಲಿ ನಮ್ಮದು ವಿಭಿನ್ನ ಪ್ರಯೋಗ ಎಂದು ಹೆಮ್ಮೆಯಿಂದ ಹೇಳಬಲ್ಲೆವು.

ಜಾಗೋ ಭಾರತ್ ತಂಡದ ಸಂಪೂರ್ಣ ಪ್ರಮಾಣದ ಮೊದಲ ಕಾರ್ಯಕ್ರಮ ನಡೆದಿದ್ದು ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ, ನೂರಾರು ಯುವ ವಿದ್ಯಾರ್ಥಿಗಳ ಮುಂದೆ. ಅಂದು ಸಿಕ್ಕ ಸ್ಪಂದನ ನಮ್ಮನ್ನು ಧೈರ್ಯದಿಂದ ಮುನ್ನಡಿಯಿಡುವಂತೆ ಪ್ರೇರೇಪಿಸಿತು. ಈ ಕಾರ್ಯಕ್ರಮದ ವಿವರವನ್ನು ನೀವು ಇಲ್ಲಿ ನೋಡಬಹುದು.

ನಮ್ಮ ತಂಡದ ಎರಡನೆ ಪ್ರಯೋಗ ನಡೆದಿದ್ದು, ಜಯನಗರದ ಮಾನಂದಿ ಸಭಾ ಭವನದಲ್ಲಿ.
ಶ್ರೀ ರಾಘವೇಂದ್ರ ಶೆಣೈ ಅವರು ಸ್ವಾಮಿ ರಾಮ ತೀರ್ಥ ಫೌಂಡೇಶನ್ ವತಿಯಿಂದ ಪ್ರತಿ ಮೂರನೆಯ ಶನಿವಾರದಂದು ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಬಾರಿ ರಾಜ್ಯೋತ್ಸವದ ಅಂಗವಾಗಿ ನಮ್ಮ ತಂಡದಿಂದ ‘ನಿತ್ಯೋತ್ಸವ’ ಎನ್ನುವ ಕಾರ್ಯಕ್ರಮದ ಅಯೋಜನೆಯಾಗಿತ್ತು.
ಆರಂಭದಲ್ಲಿ ‘ಜೈ ಭರತ ಜನನಿಯ ತನುಜಾತೆ’ ಸಮೂಹ ಗಾನ. ಅನಂತರ ‘ಹಚ್ಚೇವು ಕನ್ನಡದ ದೀಪ…’ ಎನ್ನುತ್ತ ಸಭಿಕರಲ್ಲಿ ಭಾವೋದ್ದೀಪನ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.
ಕವಿ ರಾಜ ಮಾರ್ಗದಿಂದ ಆರಂಭವಾದ ಗೀತ ಗಾಯನ, ನಿಸಾರರ ನಿತ್ಯೋತ್ಸವ ಗೀತೆಯೊಂದಿಗೆ ಮುಕ್ತಾಯಗೊಂಡಿತು. ಗಣೇಶ್ ದೇಸಾಯಿ ಅತ್ಯಂತ ಸ್ಫುಟವಾಗಿ ಕವಿರಾಜ ಮಾರ್ಗದ ಚರಣವೊಂದನ್ನು ಹಾಡಿದರು. ಮಾಲಿನಿ ಕೇಶವ ಪ್ರಸಾದರು ಕುಮಾರ ವ್ಯಾಸ ಭಾರತದ ಗಮಕವನ್ನು ಹಾಡಿದರು. ಹೀಗೆ ಹಳೆಗನ್ನಡದಿಂದ ಇಂದಿನವರೆಗಿನ ಒಟ್ಟು ಹನ್ನೆರಡು ಗೀತೆಗಳನ್ನು ಪ್ರಸ್ತುತಪಡಿಸಲಾಯ್ತು. ಇದಕ್ಕೆ ಸರಿಯಗಿ ಚಕ್ರವರ್ತಿ ಸೂಲಿಬೆಲೆ ಅವರ ಕಥನ ಶೈಲಿಯ ನಿರೂಪಣೆ, ಗೀತೆಗಳ ಅರ್ಥೈಸುವಿಕೆಗೊಂದು ಭೂಮಿಕೆ ಒದಗಿಸಿಕೊಡುತ್ತಿತ್ತು. ಅವರು, ಖ್ಯಾತ ಕವಿಗಳ ಜೀವನ ಚಿತ್ರಣವನ್ನು ಬಿಡಿಸಿಡುತ್ತಾ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದ್ದು ಬಹಳ ಸ್ವಾರಸ್ಯಕರವಾಗಿತ್ತು.

ಗಣೇಶ್ ದೇಸಾಯಿ ಅವರ ‘ಬ್ರಮ್ಮ ನಿಂಗೆ ಜೋಡಿಸ್ತೀನಿ..’ ಗಾಯನ ಕೇಳುಗರನ್ನು ಮತ್ತರನ್ನಾಗಿಸಿಬಿಟ್ಟಿತ್ತೆಂದರೆ ಅತಿಶಯವಲ್ಲ. ಅದಕ್ಕೆ ಸರಿಯಾಗಿ ಪಕ್ಕ ವಾದ್ಯಗಳೂ ಭರ್ಜರಿ ಸಾಥು ಕೊಟ್ಟವು. ಮಾಲಿನಿ, ‘ನಾಗರ ಹಾವೇ, ಹಾವೊಳು ಹೂವೇ…’ ಎನ್ನುತ್ತ ಮೈಮರೆಸಿದರೆ, ಭವಾನಿ ಹೆಗಡೆ- ಕರುಣಾಳು ಬಾ ಬೆಳಕೆ ಹಾಡಿ ತಣಿಸಿದರು. ಇದೇ ಮಾಲಿನಿ ಅವರು ಟೀಚರ್ಸ್ ಕಾಲೇಜಿನ ಕಾರ್ಯಕ್ರಮದಲ್ಲಿ ‘ಐ ಲವ್ ಮೈ ಇಂಡಿಯಾ…’ ಹಾಡಿ ಅಪಾರ ಮೆಚ್ಚುಗೆ ಗಳಿಸಿದ್ದರು.

ಸಂಜೆ ಆರೂವರೆಗೆ ಆರಂಭವಾದ ಕಾರ್ಯಕ್ರಮ ಮುಗಿದಿದ್ದು ರಾತ್ರಿ ಒಂಭತ್ತಕ್ಕೆ! ಅಲ್ಲೀವರೆಗೂ ಜಯನಗರಿಗರು ಉಲ್ಲಾಸದಿಂದ ಕುಳಿತಿದ್ದರು. ಅಲ್ಲಿನ ಶಾಸಕ ಶ್ರೀ ವಿಜಯ್ ಕುಮಾರ್ ಅವರೂ ಕೊನೆವರೆಗೆ ಕುಳಿತಿದ್ದು, ವೇದಿಕೆಯೇರಿ ಮೆಚ್ಚುಗೆಯ ಮಾತುಗಳನ್ನಾಡಿದ್ದೊಂದು ವಿಶೇಷ.

ಜಾಗೋ ಭಾರತ್ ತಂಡದ ವೈಶಿಷ್ಟ್ಯವೆಂದರೆ, ಕೇವಲ ನಾಡುನುಡಿಗೆ ಸಂಬಂಧಿಸಿದಂತಹ ವಿಶಿಷ್ಟ ಹಾಡುಗಳ ಗಾಯನ. ಅದು ಸಿನೆಮಾದ್ದಾಗಿದ್ದರೂ ಸರಿಯೇ. ‘ಒಳ್ಳೆಯದು ಎಲ್ಲ ಕಡೆಯಿಂದಲೂ ಬರಲಿ’ ಎನ್ನುವುದು ನಮ್ಮ ಆಶಯ. ಚಕ್ರವರ್ತಿಯ ನಿರೂಪಣೆ ಈ ತಂಡದ ಕಾರ್ಯಕ್ರಮಗಳಿಗೊಂದು ಗರಿ. ಮುಂದಿನ ಎರಡು ತಿಂಗಳ ಅವಧಿಯಲ್ಲಿ ತಂಡದ ಕಾರ್ಯಕ್ರಮಗಳು ಚಿತ್ರದುರ್ಗ, ಚಿಕ್ಕ ಮಗಳೂರು ಮತ್ತು ಮೈಸೂರುಗಳಲ್ಲಿ ನಡೆಯಲಿವೆ.

‘ಜಾಗೋ ಭಾರತ್’, ರಾಷ್ಟ್ರ ಶಕ್ತಿ ಕೇಂದ್ರದ ಮನರಂಜನಾ ವಿಭಾಗ. ಇದೊಂದು ಸಾಂಘಿಕ ಪ್ರಯತ್ನ.
ನಿಮ್ಮೆಲ್ಲರ ಸಹಕಾರವನ್ನು ಅಪೇಕ್ಷಿಸುತ್ತಾ….

ವಂದೇ.
ರಾಷ್ಟ್ರ ಶಕ್ತಿ ಕೇಂದ್ರ ಬಳಗದ ಪರವಾಗಿ,
ಚೇತನಾ ತೀರ್ಥಹಳ್ಳಿ.