ರಾಷ್ಟ್ರ ಶಕ್ತಿ ಕೇಂದ್ರ

ಭಾರತ ಭಾಗ್ಯ ವಿಧಾತರು-೩

Posted in ನಮ್ಮ ಇತಿಹಾಸ by yuvashakti on ನವೆಂಬರ್ 17, 2008

ವಿನೋಬಾ ಭಾವೆ

’ಭೂ ದಾನ’ ಚಳವಳಿಯ ಹರಿಕಾರ ಎಂದು ಖ್ಯಾತರಾಗಿರುವವರು ಶ್ರೀ ವಿನೋಬಾ ಭಾವೆ.  ಇವರು ಜನಿಸಿದ್ದು ಮಹಾರಾಷ್ಟ್ರದ ಕೋಲಬಾ ಜಿಲ್ಲೆಯ ಗಾಗೋದೆ ಗ್ರಾಮದಲ್ಲಿ .  ಬಾಲ್ಯದಲ್ಲಿಯೇ eನೇಶ್ವರಿಯ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದರು.  ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಗಾಂಧೀಜಿಯವರ ಅನುಯಾಯಿಯಾಗುವುದರೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಭಾವೆ ಅನಂತರ ತಿರುಗಿ ನೋಡಲಿಲ್ಲ.

ವಿನೋಬಾ ಭಾವೆ ಸಮರ್ಥ ಲೇಖಕರಾಗಿದ್ದರು.  ೧೯೨೩ ರಲ್ಲಿ ’ಮಹಾರಾಷ್ಟ್ರ ಧರ್ಮ’ ಪತ್ರಿಕೆಯ ಸಂಪಾದಕರಾದರು.  ನಾಗಪುರದ ’ಧ್ವಜಸತ್ಯಾಗ್ರಹ’ ದಲ್ಲಿ ಬಂಧಿತರಾದರು ಮತ್ತು ಕೇರಳದ ’ವೈಕೋಮ್ ಸತ್ಯಾಗ್ರಹ’ಕ್ಕೆ ಹೊರಟುನಿಂತರು.  ಇವೆಲ್ಲದರ ನಡುವೆಯೂ ನಿರಂತರ ಅಧ್ಯಯನಶೀಲರಾಗಿದ್ದ ಅವರು ಮರಾಠಿಯಲ್ಲಿ ಗೀತಾಭಾಷ್ಯ ಬರೆದರು. 
 
ವಿನೋಬಾ ಭಾವೆ ಒಬ್ಬ ಹಠವಾದಿ ಸತ್ಯಾಗ್ರಹಿ.  ಅಹಿಂಸಾ ಮಾರ್ಗದಲ್ಲಿ ಅಪ್ರತಿಮ ನಿಷ್ಠೆಯಿರಿಸಿದ್ದರು. ಉಪವಾಸ ಸತ್ಯಾಗ್ರಹದಲ್ಲಿ ಇವರು ಅಗ್ರಗಣ್ಯರು. ವಿನೋಬಾ ಅವರು ಜಾತೀಯತೆಯ ಭೇದ ಅಳಿಸಿ ಎಲ್ಲರೂ ಸೌಹಾರ್ದದಿಂದ ಬಾಳಬೇಕೆಂಬ ಕನಸು ಕಟ್ಟಿ ಅದನ್ನು ನೆರವೇರಿಸಲು ಅವರು ಹರಿಜನರೊಡನೆ ವಿವಿಧ ಮತೀಯರೊಡನೆ ದೇವಾಲಯಗಳಿಗೆ ಪ್ರವೇಶಿಸಿ ಮತ್ತೆ ಮತ್ತೆ  ಸೆರೆವಾಸ ಅನುಭವಿಸಿದರು. ಆದರೆ ಅವರ ಪ್ರಯತ್ನಗಳು ಎಲ್ಲರ ಮನ್ನಣೆಗಳಿಸಿ ಹೊಸ ಕ್ರಾಂತಿಗೆ ನಾಂದಿಯಾಯಿತು.

ಸಂತರಂತೆ ಬಾಳಿದ್ದ ವಿನೋಬಾರವರ ಅಂತಃಸತ್ತ್ವ ಬಹಳ ಪ್ರಭಾವಶಾಲಿಯಾಗಿತ್ತು , ೧೯೬೦ರಲ್ಲಿ ಚಂಬಲ್  ಕಣಿವೆಯ ಡಕಾಯಿತರು, ೧೯೭೨ರಲ್ಲಿ ವಿವಿಧ ಭಾಗದ ನೂರಾರು ಡಕಾಯಿತರು ಅವರಿಗೆ ಶರಣುಬಂದಿದ್ದು ಅದಕ್ಕೊಂದು ಉದಾಹರಣೆ. ಈ ಡಕಾಯಿತರೆಲ್ಲರೂ ಮುಂದೆ ಭಾವೆಯವರ ಸಹವಾಸದಲ್ಲಿ ಜೀವನ ಕಳೆದರು. ೧೯೫೧ರಲ್ಲಿ ’ಭೂದಾನ ಚಳುವಳಿ’ಗೆ ಚಾಲನೆ ನೀಡಿದ ಭಾವೆಗೆ ಅದನ್ನು ವ್ಯಾಪಕಗೊಳಿಸಿ ಅಸಂಖ್ಯ ಭೂದಾನಕ್ಕೆ ಪ್ರೇರಣೆ ನೀಡಿದರು.  ದೇಶದ ಉದ್ದಗಲಕ್ಕೂ ಕಾಲ್ನಡಿಗೆಯಲ್ಲಿ ಓಡಾಡಿದರು.  ಸಹಸ್ರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆಯಾಗಿ ನಿಂತರು.  ಎಂಬತ್ತೇಳು ವರ್ಷಗಳ ಸಾರ್ಥಕ ಜೀವನ ನಡೆಸಿದ ವಿನೋಬಾ ಭಾವೆಯವರು ೧೯೮೭ರಲ್ಲಿ ಕಾಲವಶರಾದರು.

ಮಹಾತ್ಮಾ ಗಾಂಧಿ

ಮಹಾತ್ಮಾ ಗಾಂಧಿ ಎಂದು ವಿಶ್ವಾದ್ಯಂತ ಚಿರಪರಿಚಿತವಾಗಿರುವ ಮೋಹನದಾಸ್ ಕರಮಚಂದ ಗಾಂಧಿಯವರು ೧೮೬೯ ರಲ್ಲಿ ಗುಜರಾತಿನ ಪೋರ್‌ಬಂದರಿನಲ್ಲಿ ಜನಿಸಿದರು.  ಬ್ಯಾರಿಸ್ಟರ್ ಪದವಿ ಗಳಿಸುವ ಸಲುವಾಗಿ ಇಂಗ್ಲೆಂಡಿಗೆ ತೆರಳಿದ ಕರಮಚಂದರು ವಕೀಲಿ ವೃತ್ತಿ ಆರಂಭಿಸಿದ್ದು ದಕ್ಷಿಣ ಆಫ್ರಿಕಾದ ಡರ್ಬನ್ನಿನಲ್ಲಿ.  ಅಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬ್ರಿಟೀಷರಿಂದ ಆದ ಅವಮಾನ ಅವರ ಜೀವನದಲ್ಲಿ ಮಹತ್ತರ ತಿರುವು ನೀಡಿತು. ದಕ್ಷಿಣ ಆಫ್ರಿಕಾದಲ್ಲಿ ಮೊದಲಬಾರಿಗೆ ’ಸತ್ಯಾಗ್ರಹ’ ಹೋರಾಟ ಆರಂಭಿಸಿದ ಗಾಂಧೀಜಿ ಭಾರತಕ್ಕೆ ಮರಳಿದ ನಂತರ ಇಲ್ಲಿಯೂ ಅದನ್ನು ಮುಂದುವರೆಸಿದರು.

ಗಾಂಧೀಜಿ ಭಾರತಕ್ಕೆ ಮರಳಿದ ಸಮಯದಲ್ಲಿಯೇ ಬಾಲಗಂಗಾಧರ ತಿಲಕರ ನಿಧನವಾಯಿತು.  ಭಾರತದ ಜನತೆ ಹೊಸ ನಾಯಕನ ಅಗತ್ಯದಲ್ಲಿತ್ತು. ಗಾಂಧೀಜಿ ಆ ಸ್ಥಾನವನ್ನು ತುಂಬಿದರು.  ೧೯೨೧ ರಿಂದ ಸತ್ಯಾಗ್ರಹ ಚಳುವಳಿಯನ್ನು ವ್ಯಾಪಕಗೊಳಿಸಿದ ಗಾಂಧೀಜಿ ಅಸಹಕಾರ ಆಂದೋಲನಕ್ಕೆ  ಕರೆನೀಡಿದರು.  ರಾಜದ್ರೋಹದ ಆಪಾದನೆ ಹೊತ್ತು ಮತ್ತೆ ಮತ್ತೆ ಸೆರೆವಾಸ ಅನುಭವಿಸಿದರು.

ಗಾಂಧೀಜಿ ನಡೆಸಿದ ಹೋರಾಟಗಳಲ್ಲಿ ಉಪ್ಪಿನ ಸತ್ಯಾಗ್ರಹ (ದಂಡಿ -೧೯೩೦) ಚಲೇಜಾವ್ ಚಳುವಳಿ (೧೯೪೨) ಪ್ರಮುಖವಾದವು. ಅಹಿಂಸಾತ್ಮಕ ಹೋರಾಟ ಮಾತ್ರದಿಂದಲೇ ಸ್ವಾತಂತ್ರ ಪ್ರಾಪ್ತಿಯಾಗಬೇಕೆಂಬ ಬಯಕೆ ಹೊಂದಿದ್ದ ಅವರು ತಾವು ಆರಂಭಿಸಿದ ಚಳುವಳಿಗಳು ಹಿಂಸೆಯ ಸ್ವರೂಪಕ್ಕೆ ತಿರುಗಿದಾಗ ಅದನ್ನು ಹಿಂಪಡೆದರು.  ಅಸಹಕಾರ ಚಳುವಳಿ, ಚಲೇಜಾವ್ ಚಳುವಳಿಗಳೆರಡೂ ಹಾಗಯೇ ಆದವು.

ಮಹಾತ್ಮಾಗಾಂಧಿಯವರು ಸ್ವದೇಶೀಯತೆ ಮತ್ತು ಸ್ವಾವಲಂಬನೆಗಳಿಗೆ  ಹೆಚ್ಚಿನ ಒತ್ತು ಕೊಟ್ಟರು.  ತಾವು ಆರಂಭಿಸಿದ ಆಶ್ರಮದಲ್ಲಿ ಸ್ವತಃ ತಾವೇ ಚರಕದಲ್ಲಿ ನೂಲುವ ಮೂಲಕ ಇತರರಿಗೂ ಮಾದರಿಯಾಗಿ ನಿಂತರು.  ಅವರ ಶಿಕ್ಷಣದ ಬಗೆಗಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಗಾಂಧೀಜಿ ಮದ್ಯಪಾನವೂ ಸೇರಿದಂತೆ ಸಮಾಜಕ್ಕೆ ಮಾರಕವೆನಿಸುವಂತಹ ದುರ್ನಡತೆ, ಮೌಢ್ಯಾಚರಣೆಗಳನ್ನು  ಪ್ರಬಲವಾಗಿ ಖಂಡಿಸಿದರು. 

ಲಕ್ಷೋಪಲಕ್ಷ ಭಾರತೀಯರ ಹೋರಾಟ, ಬಲಿದಾನಗಳ ಪರಿಣಾಮವಾಗಿ ೧೯೪೭ರಲ್ಲಿ ಆಗಷ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು, ಜೊತೆಗೇ ಭಾರತ ವಿಭಜನೆಯ ದುರಂತವೂ ನಡೆಯಿತು. ಈ ಸಂದರ್ಭಗಳಲ್ಲಿ ಅನೇಕ ಹಿಂದೂಗಳ ಮಾರಣಹೋಮವಾಯಿತು.  ಇದಕ್ಕೆ ಪ್ರತೀಕಾರವೆಂಬಂತೆ ನಾಥೂರಾಮ್ ಗೂಡ್ಸೆ ಎನ್ನುವಾತನು ೧೯೪೮ರ ಜನವರಿ ೩೦ರಂದು ಮಹಾತ್ಮನನ್ನು ಗುಂಡಿಕ್ಕಿ ಕೊಂದು ಬಿಟ್ಟನು.    

ಗಾಂಧೀಜಿಯವರ ಹೋರಾಟ ತತ್ತ್ವ ಚಿಂತನೆಗಳು ಎಲ್ಲ ಕಾಲಕ್ಕೂ , ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿವೆ.

ಶ್ರೀ ಮಾತೆ ಮಿರಾ ಅದಿತಿ

ಯೋಗಿ ಅರವಿಂದರ ಆಧ್ಯಾತ್ಮಿಕ ಜೀವನದ ಕುರಿತು ಹೇಳುವಾಗ ಶ್ರೀ ಮಾತೆ ಮಿರಾ ಅದಿತಿಯವರನ್ನು ಉಲ್ಲೇಖಿಸದೇ ಹೋದರೆ ಅದು ಅಪೂರ್ಣವಾದಂತೆಯೇ ಸರಿ.  ೧೮೭೮ ರಲ್ಲಿ ಪ್ಯಾರಿಸ್ಸಿನಲ್ಲಿ ಜನಿಸಿದ ಮಿರಾ ರಿಚರ್ಡ್ ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ ೩೬ ನೇ ವಯಸ್ಸಿನಲ್ಲಿ ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುವ ದಂಪತಿಗಳ ಪುತ್ರಿಯಾಗಿದ್ದರೂ ಬಾಲ್ಯದಿಂದಲೂ ಅವರಲ್ಲಿ ಕೆಲವು ಅಲೌಕಿಕ ಗುಣಗಳು ಸಂಪನ್ನವಾಗಿದ್ದವು.  ಮಿರಾ ಅವರ ಪ್ರಥಮ ಭೇಟಿಯಲ್ಲಿಯೇ ಶ್ರೀ ಅರವಿಂದರು ಈ ವೈಶಿಷ್ಟವನ್ನು ಗುರುತಿಸಿದ್ದರು.  
 
೧೯೨೦ ರಲ್ಲಿ ಮಿರಾ ಅವರು ಶಾಶ್ವತವಾಗಿ ಭಾರತದಲ್ಲಿ  ನೆಲೆಸುವ ಪಾಂಡಿಚೆರಿ ಆಶ್ರಮದ ಏಳ್ಗೆಗಾಗಿ, ಆಮೂಲಕ ಶ್ರೀ ಅರವಿಂದರ ’ಪೂರ್ಣ ಯೋಗ’ದ ಪ್ರಸರಣಕ್ಕಾಗಿ ಟೊಂಕಕಟ್ಟಿ ನಿಂತರು.

ಶ್ರೀ ಅರವಿಂದರು ಮಿರಾ ಅವರನ್ನು ತಮಗೆ ಸಮನಾದ ಸಾಧಕಿ ಎಂದೇ ಪರಿಗಣಿಸುತ್ತಿದ್ದರು.  ಶ್ರೀ ಮಾತೆ ಮಿರಾ ಅವರಲ್ಲಿ ಆ ಸಾಮರ್ಥ್ಯವಿದ್ದೇ ಇತ್ತು ಅವರ ಆದೇಶದಂತೆ ಶ್ರೀ ಮಾತೆಯವರು ೧೯೨೬ ರಲ್ಲಿ  ಅರವಿಂದೋ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.  ಮುಂದಿನ ದಿನಗಳಲ್ಲಿ ’ಶ್ರೀ ಅರವಿಂದೋ ಇಂಟರ್ ನ್ಯಾಶನಲ್ ಸೆಂಟರ್ ಆಫ್ ಎಜುಕೇಷನ್’ ಸಂಸ್ಥೆಯನ್ನು ಆರಂಭಿಸಿ ವಿಶ್ವಾದ್ಯಂತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟರು.  ಅರವಿಂದರು ಇಹಲೋಕ ವ್ಯವಹಾರ ಮುಗಿಸಿ ದೀರ್ಘಸಮಾಧಿಗೆ ತೆರಳಿದ ನಂತರ ಶ್ರೀ ಮಾತೆಯವರು ಆಶ್ರಮದ ಅನುಯಾಯಿಗಳಿಗೆ ಪಥದರ್ಶಕರಾಗಿ ಮುಂದುವರೆದರು.

ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಶ್ರೀ ಮಾತೆಯವರು ಆರಂಭಿಸಿದ ’ಅರೋವಿಲ್ಲ’ ನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು ಜಗತ್ತಿನ ಎಲ್ಲಾ ಭಾಗದ, ಎಲ್ಲಾ ವರ್ಗದ, ಎಲ್ಲಾ ವಿಧದ ಜನರು ಶಾಂತಿ-ಸೌಹಾರ್ದದಿಂದ ಬಾಳಬೇಕು ಎನ್ನುವುದು ಈ ನಿರ್ಮಾಣದ ಹಿಂದಿನ ಉದ್ಧೇಶವಾಗಿತ್ತು ೧೯೬೮ ರಲ್ಲಿ ಉದ್ಘಾಟನೆಗೊಂಡ ’ಅರೋವಿಲ್ಲ’ ಉದ್ಘಾಟನಾ ಸಮಾರಂಭದಲ್ಲಿ ೧೨೧ ದೇಶಗಳ ಮತ್ತು ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯದಿಂದ ಒಂದು ಮುಷ್ಟಿ ಮಣ್ಣನ್ನು ತಂದು ಆ ಪ್ರದೇಶದಲ್ಲಿ ಸ್ಥಾಪಿಸಿದ್ದರು.  ಇಂದಿಗೆ ಅರೋವಿಲ್ಲ ಪ್ರದೇಶದಲ್ಲಿ ೩೫ ರಾಷ್ಟ್ರಗಳ ಸುಮಾರು ೧೭೦೦ ಜನರು ನೆಲೆಸಿರುವರು.

ಶ್ರೀ ಮಾತೆ ಮೀರಾ ಅದಿತಿ ಅವರು ತಮ್ಮ ೯೫ ನೆಯ ವಯಸ್ಸಿನಲ್ಲಿ ನಿಧನರಾದರು.