ಭಾರತ ಭಾಗ್ಯ ವಿಧಾತರು- ೧
ಕನ್ನಡದಲ್ಲಿಭಾರತದ ಮಹಾನ್ ವ್ಯಕ್ತಿಗಳ ಕಿರುಪರಿಚಯ ಬೇಕೆಂದಾದಲ್ಲಿ ಇದೊಂದು ಸಣ್ಣ ಆಕರವಾಗಲಿ ಎಂಬ ಬಯಕೆಯಿಂದ ‘ಭಾರತ ಭಾಗ್ಯ ವಿಧಾತರು’ ಎಂಬ ಅಂಕಣವನ್ನು ಇಲ್ಲಿ ಆರಂಭಿಸಲಾಗಿದೆ.
ಸಹಕಾರವಿರಲಿ.
ಧನ್ಯವಾದ.
ಸಮರ್ಥ ರಾಮದಾಸರು
ಸ್ವದೇಶ, ಸ್ವಧರ್ಮದ ರಕ್ಷಣೆಗಾಗಿ ಹೋರಾಡಿ ಹಿಂದು ಧರ್ಮದ ಉನ್ನತಿಗೆ ಕಾರಣರಾದ ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಯ ಹಿಂದೆ ಇದ್ದ ಮಹಾಪುರುಷರು ಸಮರ್ಥ ರಾಮದಾಸರು. ತುಕಾರಾಮರ ಭಕ್ತಿ ಭಾವ ಕಂಡು ಉದ್ವಿಗ್ನರಾಗಿ ಶಿವಾಜಿ, ತಾವು ಆಧ್ಯಾತ್ಮ ಸಾಧನೆಯಲ್ಲಿ ತೊಡಗಬೇಕೆಂದು ಬಯಸಿದಾಗ, ಅವರಿಗೆ ತಮ್ಮ ಕರ್ತವ್ಯದ ನೆನಪುಮಾಡಿಕೊಟ್ಟು ಸೂಕ್ತ ನಿರ್ದೇಶನ ಮಾಡಿ, ಮೊದಲು ಸ್ವದೇಶದ ಚಿಂತನೆ, ಆಧ್ಯಾತ್ಮಕ್ಕೆ ಅದರ ನಂತರದ ಸ್ಥಾನ ಎಂದು ಶಿವಾಜಿಗೆ ರಾಮದಾಸರು ಉಪದೇಶ ನೀಡಿದರು, ಅವರಿಗೆ ಪ್ರೇರಣೆಯಾಗಿ ನಿಂತರು.
ಸಮರ್ಥ ರಾಮದಾಸರ ಮೂಲ ಹೆಸರು ನಾರಾಯಣ ಪಂತ, ಬಾಲ್ಯದಿಂದಲೇ ಹನುಮನ ಆರಾಧಕರಾಗಿ, ತಾನು ಆತನಂತೆಯೇ ಅಖಂಡ ಬ್ರಹ್ಮಚಾರಿಯಾಗಬೇಕೆಂದು ಸಂಕಲ್ಪ ತೊಟ್ಟಿದ್ದರು. ಅಂತೆಯೇ ತಾಯಿಯ ಒತ್ತಾಯಕ್ಕೆ ಮಣಿದು ಹಸೆಮಣೆಯಮೇಲೆ ನಿಂತಾಗ ಸುಲಗ್ನೇ ಸಾವಧಾನ.. ಮಂತ್ರ ಕಿವಿಗೆ ಬೀಳುತ್ತಲೇ ಅಲ್ಲಿಂದ ಪರಾರಿ ಆಗಿ, ಪರಿವ್ರಾಜಕರಾಗಿ ಊರೂರು ಅಲೆದರು. ಭಾರತ ದರ್ಶನಮಾಡಿ ಅನ್ಯರ ಆಡಳಿತದಿಂದ
ಮುಕ್ತರಾಗದೇ ಧರ್ಮ ಉಳಿಯದು, ದೇಶ ಉಳಿಯದು ಎಂಬ ಸತ್ಯವನ್ನು ಮನಗಂಡರು. ಕಾಶಿಯಲ್ಲಿ ಹನುಮಾನ್ ಘಟ್ಟದಲ್ಲಿ ಹನುಮಂತನನ್ನು ಪ್ರತಿಷ್ಠಾಪಿಸಿ ತಾವೂ ರಾಮದಾಸ ಆದರು. ಅವರ ಸಾಮರ್ಥ್ಯವೇ ಅವರಿಗೆ ಸಮರ್ಥ ಎನ್ನುವ ಅಭಿದಾನವನ್ನು ತಂದುಕೊಟ್ಟಿತು. ಸಮರ್ಥ ರಾಮದಾಸರು, ತಮ್ಮ ಹೆಸರಿಗೆ ತಕ್ಕಂತೆ ಶ್ರೀರಾಮನ ವಿನಮ್ರ ಸೇವಕನಾಗಿ ಆತನ ಆದರ್ಶಗಳನ್ನು ಬೋಧಿಸುವ, ಕಾರ್ಯರೂಪಕ್ಕೆ ತರುವ ಹೊಣೆಹೊತ್ತರು.
ಸಮರ್ಥ ರಾಮದಾಸರು ಮರಾಠಿಯಲ್ಲಿ ಹಲವು ಗೀತೆಗಳನ್ನು ರಚಿಸಿದರು. ಅವರ ದಾಸಬೋಧೆ ಒಂದು ಪ್ರಬೋಧಕರ ಜನಪ್ರಿಯ ಮಹಾಕೃತಿ. ಅವರು ಶಿವಾಜಿ ಮಹಾರಾಜರ ಕೊನೆಯ ಘಳಿಗೆಯವರೆಗೂ ಅವರ ಗುರುಗಳಾಗಿದ್ದು ಮಾರ್ಗದರ್ಶನ ಮಾಡಿದರು. ೧೬೦೮ರ ರಾಮನವಮಿಯಂದು ಜನಿಸಿದ ಸಮರ್ಥ ರಾಮದಾಸರು ೧೬೮೨ರ ಮಾಘ ಬಹುಳ ನವಮಿಯಂದು ಕಾಲವಾದರು. ಅವರು ತೀರಿಕೊಂಡ ದಿನವನ್ನು
ಇಂದಿಗೂ ದಾಸ ನವಮಿಯೆಂದು ಆಚರಿಸಲಾಗುತ್ತದೆ.
ತಾತ್ಯಾಟೋಪಿ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನೇತಾರನಾಗಿ ಕೊನೆಕ್ಷಣದವರೆಗೂ ಹೋರಾಡಿದ ಪುರುಷಸಿಂಹ ತಾತ್ಯಾಟೋಪಿ. ಇವರ ಮೂಲ ಹೆಸರು ರಘುನಾಥ ಪಂತ. ಇವರು ಜನಿಸಿದ್ದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೇವಲೆ ಎಂಬಲ್ಲಿ, ೧೮೧೪ರಲ್ಲಿ. ರಘುನಾಥ ಅತ್ಯಂತ ತೇಜಸ್ವಿ ಬಾಲಕನಾಗಿದ್ದು, ಪೇಶ್ವೆ ೨ನೇ ಬಾಜೀರಾಯರ ಪ್ರೀತಿಗೆ ಪಾತ್ರನಾಗಿದ್ದನು. ಬಾಜೀರಾಯರು ಅವನ ಮೇಲಿನ ವಿಶ್ವಾಸದಿಂದ ರತ್ನ ಖಚಿತವಾದ ಟೋಪಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಎಲ್ಲರ ತಾತ್ಯಾ (ರಘುನಾಥನ ಮುದ್ದಿನ ಹೆಸರು) ತಾತ್ಯಾಟೋಪಿಯಾದರು.
ತನ್ನ ಬಾಲ್ಯದ ಸಂಗಾತಿಗಳಾದ ನಾನಾಸಾಹೇಬ(ಬಾಜೀರಾಯರ ದತ್ತುಪುತ್ರ), ಲಕ್ಷ್ಮೀಬಾಯಿ(ಬಾಲ್ಯದಲ್ಲಿ ಛಬೇಲಿ) ಇವರೊದಿಗೆ ಸ್ವಾತಂತ್ರ್ಯದ, ಬ್ರಿಟಿಷ್ ಮುಕ್ತ ಭಾರತದ ಕನಸು, ತಾತ್ಯಾಟೋಪಿ ಅದರ ಸಾಕಾರಕ್ಕೆ ಜೀವವನ್ನೇ ಮುಡುಪಿಟ್ಟರು. ಮರಾಠಿಗರಿಗೆ ವಿಶಿಷ್ಠವೆನಿಸಿದ ಗೆರಿಲ್ಲಾ ಯುದ್ಧದಲ್ಲಿ ನಿಪುಣನಾಗಿದ್ದ ತಾತ್ಯಾ ಬ್ರಿಟಿಷರಿಗೆ ಸಾಕಷ್ಟು ಪೆಟ್ಟು ನೀಡಿದನು. ಕಾಲ್ಫಿಯನ್ನು ಕೇಂದ್ರವಾಗಿಟ್ಟುಕೊಂಡು ದೇಶದುದ್ಧಗಲಕ್ಕೂ ಮಿಂಚಿನ ಸುಳಿಯಂತೆ ಓಡಾಡಿ ರಾಜರನ್ನು, ಸೈನ್ಯವನ್ನು ಒಗ್ಗೂಡಿಸಿದನು. ಈತನ ಬಲಿಷ್ಟ ಸವಾಲನ್ನು ನೇರವಾಗಿ ಎದುರಿಸಿ ಸೆರೆಹಿಡಿಯಲಾಗದ ಬ್ರಿಟಿಷ್ ಸೇನೆ ವಂಚನೆಯಿಂದ ಅದನ್ನು ಸಾಧಿಸಿತು. ಮಾನಸಿಂಗ ಎಂಬುವವನಿಂದ ಮಿತ್ರದ್ರೋಹ ಮಾಡಿಸಿ, ಕಾಡಿನಲ್ಲಿ ಸಿಂಹವನ್ನು ಸೆರೆಹಿಡಿದಂತೆ ಪಾರಣವೆಂಬ ನಿಬಿಡಾರಣ್ಯದಲ್ಲಿ ಅರ್ಧರಾತ್ರಿಯಲ್ಲಿ ನಿದ್ರಿಸುತ್ತಿದ್ದ ತಾತ್ಯಾನನ್ನು ಸೆರೆ ಹಿಡಿಯಲಾಯಿತು. ೧೮೫೯ರ ಏಪ್ರಿಲ್ ೧೮ರಂದು ಈ ಮಹಾನ್ ಕ್ರಾಂತಿವೀರನನ್ನು ಬ್ರಿಟಿಷ್ ಸರ್ಕಾರ ದಂಗೆಕೋರನೆಂದು ತೀರ್ಪಿತ್ತು ನೇಣಿಗೇರಿಸಿತು.
ಆದರೇನು? ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾ ಸೇನಾನಿಯೆಂದು
ತಾತ್ಯಾಟೋಪಿಯ ಹೆಸರು ಇಂದಿಗೂ ಅಜರಾಮರವಾಗಿದೆ.
ಲೋಕಮಾನ್ಯ ಬಾಲಗಂಗಾಧರ್ ತಿಲಕ್
ಸ್ವಾತಂತ್ರ್ಯ ನಮ್ಮ ಆಜನ್ಮ ಸಿದ್ಧ ಹಕ್ಕು. ಅದನ್ನು ನಾನು ಪಡೆದೇ ತೀರುತ್ತೇನೆ ಹೀಗೆಂದು ಕೆಚ್ಚಿನಿಂದ ಘರ್ಜಿಸಿ, ಅದರಂತೇ ಹೋರಾಡಿದವರು ಲೋಕಮಾನ್ಯ ಬಾಲಗಂಗಾಧರ್ ತಿಲಕ್. ಭಾರತದ ಸ್ವಾತಂತ್ರ್ಯ ಜೊತೆಜೊತೆಗೆ ಅದರ ಉಳಿಕೆಗೆ ಅಗತ್ಯವಿರುವ ಭಾರತೀಯ ಸಮಾಜದ ಸುಧಾರಣೆ – ಇವೆರಡು ಉದ್ದೇಶಕ್ಕಾಗಿ ಜೀವನ ಮುಡಿಪಿಟ್ಟರು. ಆದ್ದರಿಂದಲೇ ಲೋಕಮಾನ್ಯ ಎನಿಸಿದರು.
ತಿಲಕರು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರದ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದ ಮೊದಲನೇ ಜನಪ್ರಿಯ ನಾಯಕರೆಂದು ಗುರುತಿಸಲ್ಪಡುತ್ತಾರೆ. ಭಾರತೀಯ ಶಿಕ್ಷಣ, ಆಚಾರ-ವಿಚಾರಗಳು, ಆರೋಗ್ಯ ಮೊದಲಾದ ಸಂಗತಿಯಲ್ಲಿ ಸುಧಾರಣೆ ತಂದು ಆಧುನಿಕ ಭಾರತದ ಜನಕ ಎಂದು ಕರೆಯಲ್ಪಡುತ್ತಾರೆ. ಅವರಿಗೆ ಈ ಅಭಿದಾನ ನೀಡಿದವರು ಮತ್ತೋರ್ವ ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿಯವರು.
ತಿಲಕರು ಪದವಿ ಪಡೆದ ನಂತರ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಅವರು ಸ್ವಾತಂತ್ರ್ಯ ಹೋರಾಟದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದು ಪತ್ರಕರ್ತರಾಗಿ ಕಾರ್ಯ ನಿರ್ವಹಿಸತೊಡಗಿದ ನಂತರ. ಅವರು ನಡೆಸುತ್ತಿದ್ದ ಕೇಸರಿ ಮತ್ತು ಮರಾಠಾ ಪತ್ರಿಕೆಗಳು ಜನಮಾನಸದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿತು. ಅವರು ಬರೆಯುತ್ತಿದ್ದ ಲೇಖನ-ಸಂಪಾದಕೀಯಗಳು ಬ್ರಿಟಿಷ್ ಸತ್ತೆಯ ಬೇರನ್ನು ನಡುಗಿಸುತ್ತಿದ್ದವು. ಕಾಂಗ್ರೆಸ್ಸಿನ ಸದಸ್ಯರಾಗಿದ್ದರೂ ಅವರೊಬ್ಬ ಅಪ್ಪಟ ರಾಷ್ಟ್ರೀಯವಾದಿಯಾಗಿ, ಕ್ರಾಂತಿಕಾರರಾಗಿ ಚಿಂತನೆ ನಡೆಸುತ್ತಿದ್ದರು.
ಸ್ವಾತಂತ್ರ್ಯ ಹೋರಾಟದ ಹೊರತಾಗಿ ತಿಲಕರು ಭಾರತೀಯರ ಶಿಕ್ಷಣ ಮಟ್ಟ ಸುಧಾರಣೆ, ಮದ್ಯಪಾನ ನಿಷೇಧ ಮೊದಲಾದ ಸಾಮಾಜಿಕ ಸಂಗತಿಗಳತ್ತ ಕಳಕಳಿಯಿಂದ ಸ್ಪಂದಿಸಿದರು. ಗಣಿತಜ್ಞರು, ಖಗೋಳಶಾಸ್ತ್ರಜ್ಞರೂ ಆಗಿದ್ದ ತಿಲಕರು ಆ ನಿಟ್ಟಿನಲ್ಲಿಯೂ ಸಾಕಷ್ಟು ಸಂಶೋಧನೆಗಳನ್ನು ನಡೆಸಿರುವರು. ಅವರು ರಚಿಸಿರುವ ‘ಗೀತಾ ರಹಸ್ಯ’ ಭಗವದ್ಗೀತಾ ಭಾಷ್ಯ ಒಂದು ಪ್ರಸಿದ್ಧ ಕೃತಿ.
೧೮೫೬ರ ಜುಲೈ ೨೩ರಂದು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದ ತಿಲಕರು ಅಗಸ್ಟ್ ೧, ೧೯೨೦ರಂದು ವಿಧಿವಶರಾದರು.
leave a comment