ರಾಷ್ಟ್ರ ಶಕ್ತಿ ಕೇಂದ್ರ

ರಾಷ್ಟ್ರೀಯತೆ ಏನಾಯಿತು!?

Posted in ಚರ್ಚೆ ಚಾವಡಿ by yuvashakti on ಆಗಷ್ಟ್ 30, 2008

ರಾಷ್ಟ್ರೀಯತೆ ಒಬ್ಬ ವ್ಯಕ್ತಿ ಹೊಂದಿಕೊಂಡಿರುವ ಭೌಗೋಳಿಕತೆ, ಸಂಸ್ಕೃತಿ, ಅಲ್ಲಿನ ಜನ ಜೀವನ, ನಾಗರಿಕತೆಗಳಿಗೆ ಸಂಬಂಧಪಟಿರುವಂಥದ್ದು. ಆ ವ್ಯಕ್ತಿ ಈ ನೆಲ, ಈ ಜಲ ‘ನನ್ನದು’ ಎಂದು ಹೇಳುವಾಗ ಹೆಮ್ಮೆಯಿಂದ ಬೀಗುವುದಿದೆಯಲ್ಲ, ಅದೇ ರಾಷ್ಟ್ರೀಯತೆಯ ಉತ್ಕೃಷ್ಟ ಉದಾಹರಣೆ ಎಂದರೆ ತಪ್ಪಲ್ಲ. ಪ್ರತಿಯೊಂದು ದೇಶದ ಪ್ರಜೆಗೂ ಆಯಾ ದೇಶದ ಬಗೆಗೆ ಉನ್ನತ ಗೌರವ ಭಾವನೆ, ನಿಷ್ಠೆ ಇದ್ದೇಇರುತ್ತದೆ, ಇರಲೇಬೇಕು.
ನಮ್ಮ ಪಾಲಿಗೆ ‘ನಾನು ಭಾರತೀಯ’ ಎನ್ನುವುದೇ ರಾಷ್ಟ್ರೀಯತೆ. ಇಲ್ಲಿನ ಪ್ರತಿಯೊಂದೂ ನಮಗೆ ಸ್ವರ್ಗ ಸಮಾನ. ಇಲ್ಲಿನ ಇತಿಹಾಸ, ಕಲೆ, ಸಾಹಿತ್ಯ, ವಿಜ್ಞಾನ ಕ್ಷೇತ್ರಗಳಲ್ಲಿನ ಸಾಧನೆಗಳು ಎಲ್ಲವೂ ನಮಗೆ ಶ್ರೇಷ್ಟವೇ. ಆದರೆ ಇದು ಅಂಧಾಭಿಮಾನವಲ್ಲ. ಇಡಿಯ ಜಗತ್ತಿನ ಈವರೆಗಿನ ಇತಿಹಾಸದಲ್ಲಿ ಅನ್ಯ ಧರ್ಮಗಳ ಮೇಲೆ ಅತ್ಯಾಚಾರ ಮಾಡದ, ಅನ್ಯ ರಾಷ್ಟ್ರಗಳನ್ನು ಅತಿಕ್ರಮಣ ಮಾಡದ ಪರಿಶುದ್ಧ ಇತಿಹಾಸ ನಮ್ಮದು. ತಾವು ಕಾಡಿನೊಳಗೆ ಉಪವಾಸವಿದ್ದು ಹೊರಗಿನ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಋಷಿಗಳು, ದ್ರಷ್ಟಾರರು ನಮ್ಮವರೆನ್ನುವ ಹೆಮ್ಮೆ ನಮ್ಮದು.

ಆದರೆ… ಈ ಹೆಮ್ಮೆ ನಮ್ಮಲ್ಲಿ ಎಷ್ಟು ಜನರಿಗೆ ಇದೆ? ನಮ್ಮ ಯುವ ಜನರ ರಾಷ್ಟ್ರೀಯ ಪ್ರಜ್ಞೆ ಕೇವಲ ಕ್ರಿಕೆಟಿಗೆ ಸೀಮಿತವಾಗಿಬಿಟ್ಟಿದೆಯೇ? ರಾಷ್ಟ್ರೀಯತೆ ಅನ್ನುವುದು ಯಾವುದೋ ಒಂದು ಧರ್ಮದ, ಸಂಘಟನೆಯ ತಲೆನೋವು ಎನ್ನುವ ಭಾವನೆ ಮೂಡತೊಡಗಿದ್ದು ಯಾವಾಗ? ಯಾವ ಕಾರಣದಿಂದ ಇಂದು ಸಿಮಿ ಯಂಥ ವಿದ್ಯಾರ್ಥಿ ಸಂಘಟನೆ ದೇಶದ ಹಿತವನ್ನು ಮರೆತು ವಿದೇಶೀಯ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಾ ಅವರ ಕುಕೃತ್ಯಗಳಲ್ಲಿ ಪಾಲುದಾರನಾಗುತ್ತಿರುವುದೇಕೆ? ಧರ್ಮ ರಾಷ್ಟ್ರನಿಷ್ಟೆಯನ್ನು ಬದಲಾಯಿಸುತ್ತದೆಯೆನ್ನುವ ಮಾತು ನಿಜವೇ? ನಾಗಾಲ್ಯಾಂಡಿನಲ್ಲಿ ‘ನಾಯಿಗಳಿಗೆ ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ ಎನ್ನುವ ಬೋರ್ಡು ಯಾಕಿದೆ? ಪ್ರತ್ಯೇಕತಾವಾದಿಗಳೊಡನೆ ಕದನ ವಿರಾಮ ಘೋಷಣೆಗೂ ರಕ್ಷಣಾ ಸಚಿವರು ಪಾದ್ರಿಯ ಜೊತೆ ಒಪ್ಪಂದದ ಮಾತನಾಡಬೇಕಾಗಿ ಬರುತ್ತದಲ್ಲಾ, ಯಾಕೆ? ಇವತ್ತಿಗೂ ಸ್ವಾತಂತ್ರ್ಯೋತ್ಸವದ ದಿನ ಕೆಲವು ಏರಿಯಾಗಳಲ್ಲಿ ಹಸಿರು ಧ್ವಜ ಹಾರುವುದೇಕೆ? ಯಾಕೆ ಕೋಟಿಗಟ್ಟಲೆ ಹಣದ ಅಡಮಾನದ ನಂತರವಷ್ಟೇ ಅಮರನಾಥ ದೇಗುಲಕ್ಕೆ ಭೂಮಿಯನ್ನು ತಾತ್ಕಾಲಿಕವಾಗಿ ಕೊಟ್ಟರೂ ಸಮಾಜ ಬಾಂಧವರು ಪ್ರತಿಭಟನೆ ನಡೆಸುತ್ತಿದ್ದಾರೆ? ವಂಚಕ ನೆರೆದೇಶ ಪಾಕಿಸ್ತಾನ ಅತಿಕ್ರಮಣದಿಂದ ಕಾಶ್ಮೀರದ ಭಾಗವೊಂದನ್ನು ಕಿತ್ತುಕೊಂಡು ಚೀನಾ ಸೇನೆಗೆ ಉಡುಗೊರೆಯಾಗಿ ನೀಡಿತಲ್ಲ, ಆಗ ಯಾಕೆ ಈ ಜನರ ಕಣ್ಣುರಿಯಲಿಲ್ಲ? ಎಲ್ಲಿದೆ ರಾಷ್ಟ್ರೀಯತೆ?

ಪ್ರಶ್ನೆಗಳು ಸಾಕಷ್ಟಿದೆ.
ಇದನ್ನು ನಾವೆಲ್ಲ ಸೇರಿ ಚರ್ಚಿಸಬಹುದೇ?

ಕೇಂದ್ರದ ಶಿಬಿರದಲ್ಲಿ ಲೆಫ್ಟಿನೆಂಟ್ ಕರ್ನಲ್ ಹರದೇವ ಕಾಟ್ಕರ್

Posted in ಕಾರ್ಯಕ್ರಮ- ವರದಿ by yuvashakti on ಆಗಷ್ಟ್ 20, 2008

ಅವರು ಹುಟ್ಟಿದ ಸಂದರ್ಭದಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದರು. ಅವರಪ್ಪ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದವರು. ಮನೆ ಇದ್ದುದು ರಾಮನಗರದಲ್ಲಿ. ಮಳೆ- ನೆರೆಯ ಕಾರಣದಿಂದ ಗಾಂಧೀಜಿ ಅಲ್ಲೇ ಒಂದು ರಾತ್ರಿಯ ಮಟ್ಟಿಗೆ ತಂಗಬೇಕಾಗಿ ಬಂತು. ಆಗ ಆ ಶಿಶುವಿನ ತಂದೆಗೆ ಗಾಂಧೀಜಿಯವರೊಡನಾಡುವ ಸೌಭಾಗ್ಯ!
ಮಾರನೇ ಬೆಳಗ್ಗೆ ಹೀಗಾಯ್ತು. ರಾಷ್ಟ್ರಪಿತ ಸ್ನಾನಕ್ಕೆಂದು ಹೊಳೆಯತ್ತ ನಡೆದರು. ತಮ್ಮ ಬಟ್ಟೆ (ಬಟ್ಟೆ ಏನು? ತುಂಡು ಪಂಚೆ!) ತಾವೆ ಒಗೆದುಕೊಂದರು. ಈ ತಂದೆ ಆ ಬಟ್ಟೆಯನ್ನು ತಾವೇ ಹಿಡಿದುಕೊಂಡರು. ಮುಂದೆ ಮುಂದೆ ಗಾಂಧೀ, ಹಿಂದೆಹಿಂದೆ ಈತ. ನಡುವೆಯೆಲ್ಲೋ ಕೆಲ ನಿಮಿಷ ಅವರ ಪತ್ತೆಯಿಲ್ಲ. ಎಲ್ಲಿ ಹೋಗಿದ್ದರು!?

ಅವತ್ತಿನ ಸಂಜೆ ಲೋಕಾಭಿರಾಮದಲ್ಲಿ ಮಹಾತ್ಮಾ ಆತನನ್ನು ಕೇಳಿದರು, “ಬೆಳಗ್ಗೆ ನದಿಯಿಂದ ಬರುವಾಗ ನೀವು ಎಲ್ಲಿ ಮಾಯವಾಗಿಬಿಟ್ಟಿದ್ದಿರಿ!?
ಆತ ಸಂಕೋಚದಿಂದ ನುಡಿದರು. “ನನಗೆ ಕಳೆದ ವಾರವಷ್ಟೇ ಗಂಡು ಮಗು ಹುಟ್ಟಿದೆ. ನಿಮ್ಮ ಬಟ್ಟೆಯಿಂದ ಜಿನುಗುತ್ತಿದ್ದ  ಪವಿತ್ರ ಜಲವನ್ನ ಅವನಿಗೆ ಚಿಮುಕಿಸಿ ಪವಿತ್ರಗೊಳಿಸೋಣವೆಂದು ಮನೆಗೆ ಹೋಗಿದ್ದೆ. ಹೆಂದತಿ ಮಗುವಿಗೆ ನೀರು ಸೋಕಿ ಶೀತವಾಗುತ್ತದೆಂದು ಗೊಣಗಿದಳು. ಆದರೆ ನಿಮ್ಮ ಮೈ ಸೋಕಿದ ಬಟ್ಟೆಯ ನೀರು ನನಗೆ ಪರಮ ಪವಿತ್ರ!”

ಗಾಂಧೀಜಿ ಅವರ ಅಭಿಮಾನಕ್ಕೆ ಸೋತರು. ಆದರೂ, ತಮ್ಮಿಂದಾಗಿ ಆ ಮಗುವಿಗೇನಾದರೂ ಶೀತಬಾಧೆಯಾದರೆ ತಮಗೆ ಪಾಪ ತಟ್ಟುತ್ತದಲ್ಲವೇ? ಎಂದು ಅವರನ್ನು ಪ್ರಶ್ನಿಸಿದರು. ಕೊನೆಗೆ ತಾವೇ ನೂತ ನೂಲಿನಿಂದ ಮಾಡಿದ ಕೆಲವು ಬಟ್ಟೆಚೂರುಗಳನ್ನು ಅವರ ಕೈಲಿಟ್ಟು ಹರಸಿದರು.

ಆ ಶಿಶು ಮುಂದೊಮ್ಮೆ ತನ್ನ ರಾಷ್ಟ್ರಕ್ಕಾಗಿ ಜೀವ ಪಣಕ್ಕಿಟ್ಟು ಹೋರಾಡುವುದಿತ್ತು. ಅದರ ಮುನ್ಸೂಚನೆಯೋ ಎನ್ನುವಂತೆ ರಾಷ್ಟ್ರಪಿತನ ಆಶೀರ್ವಾದ ಅದಕ್ಕೆ ದಕ್ಕಿತ್ತು. ಸ್ವಾಭೀಮಾನ, ದೇಶಾಭಿಮಾನಗಳನ್ನು ಮೈಮನಗಳ ತುಂಬ ಹೊತ್ತಿದ್ದ ಅದು ಮುಂದೆ ದೇಶ ಕಾಯುವ ಸೈನಿಕನಾಗಿ ರೂಪುಗೊಂಡಿತು…

~
ಹೌದು. ಇದು ಸತ್ಯ ಸಂಗತಿ. ಇಂಥ ಘಟನೆಗಳು ಅದೆಷ್ಟೋ ಇವೆ ನಿಜ. ಪ್ರಸ್ತುತ ಇಲ್ಲಿ ಹೇಳಿದ ಸಂಗತಿಯನ್ನ ನೇರಾನೇರ ಪ್ರಮುಖ ಪಾತ್ರಧಾರಿಯ ಬಾಯಿಂದಲೇ ಕೇಳುವಾಗ ಆಗಿದ್ದ ರೋಮಾಂಚನವಿದೆಯಲ್ಲ, ಅದು ನಮಗೆ ವಿಶಿಷ್ಟ ಅನುಭವ ನೀಡಿತು.
ಅವರು, ಲೆಫ್ಟಿನೆಂಟ್ ಕರ್ನಲ್  ಹರದೇವ್ ಕಾಟ್ಕರ್. ಅವರೇ ಗಾಂಧೀಜಿಯವರಿಂದ ಸ್ವಾಭಿಮಾನದ ಪ್ರತೀಕವಾದ ಖಾದಿ ಬಟ್ಟೆಯ ಉಡುಗೊರೆ ಪಡೆದ ಧನ್ಯ ಶಿಶು. ಸೈನಿಕ ವೃತ್ತಿಯ ಹಿನ್ನೆಲೆಯ ವಂಶಸ್ಥರಾಗಿದ್ದ ಅವರಿಗೆ ಅದೇನೂ ಯಾಂತ್ರಿಕ ದುಡಿಮೆಯಾಗಿರಲಿಲ್ಲ. ಅವರು ಸಂಪೂರ್ಣವಾಗಿ ತಮ್ಮನ್ನು ಮಾತೃಭೂಮಿಗೆ ಸಮರ್ಪಿಸಿಕೊಂಡಿದ್ದರು. ಭಾರತದ ಮೇಲಿನ ಅವರ ಅಭಿಮಾನ ಅವರ ಪ್ರತಿ ಮಾತಿನಲ್ಲೂ ಎದ್ದು ತೋರುತ್ತದೆ. ಎಂಭತ್ತೊಂದರ ಈ ಇಳಿ ವಯಸ್ಸಿನಲ್ಲೂ ಅವರು ಭಾರತದ ಬಗ್ಗೆ, ಯುದ್ಧಗಳ ಬಗ್ಗೆ ಗಂಟೆಗಟ್ಟಲೆ ಹರಟಬಲ್ಲರು. ಆದರೆ ಕೇಳುವ ನಾವು ಸೂಕ್ತ ಪ್ರಶ್ನೆಗಳನ್ನು ತಯಾರಿಟ್ಟುಕೊಂಡಿರಬೇಕಷ್ಟೆ.

ಹರದೇವ್ ಕಾಟ್ಕರ್ ಅವರು ಚೀನಾ ಯುದ್ಧದಲ್ಲಿ ಒಂದಿಡೀ ಪ್ಲಟೂನ್ ಅನ್ನು ಸಮರ್ಥವಾಗಿ ಮುನ್ನಡೆಸಿದ ನಮ್ಮ ಹೆಮ್ಮೆಯ ಕನ್ನಡಿಗ. ಯುದ್ಧದ ಅವರ ಒಂದೊಂದು ಅನುಭವವೂ ರೋಮಾಂಚಕಾರಿ. ತಮ್ಮ ಅಂದಿನ ದಿನಗಳ ಸಾಥಿಗಳನ್ನು ಅವರು ಇಂದಿಗೂ ಮರೆತಿಲ್ಲ. ಯುದ್ಧದಲ್ಲಿ ಹೊಟ್ಟೆಗೆ ಗುಂಡುಹೊಕ್ಕು ಕರುಳು ಸುಟ್ಟು ಹೋಗಿ ಡಾಕ್ಟರು ಅವರು ಬದುಕುವುದಿಲ್ಲವೆಂದುಬಿಟ್ಟಿದ್ದರಂತೆ! ಅವರು ಹಾಗೆ ಹೇಳಿ ಮೂವತ್ತೈದು ವರ್ಷಗಳು ಸಂದಿವೆ!! ನಮ್ಮ ವೀರಯೋಧ ವಯಸ್ಸಿನ ಕೆಲವು ಸೈಡ್ ಎಫೆಕ್ಟ್ ಗಳನ್ನು ಬಿಟ್ಟರೆ ಗಟ್ಟಿಮುಟ್ಟಾಗಿಯೇ ಇದ್ದಾರೆ. ಅವರ ಹೊಟ್ಟೆಯ ಅರ್ಧ ಭಾಗ ಬರೀ ಕೃತಕ ಅಂಗಾಂಗಗಳಿಂದಲೇ ಕೂಡಿದೆ. ಆದರೂ ಅವರು ಯಾಅ ಕಾಯಿಲೆಯ ನೆಪ ಹೇಳದೆ ಇಂದಿಗೂ ತಮ್ಮ ಶಿಸ್ತಿನ ಜೀವನಕ್ಕೆ ಬದ್ಧರಾಗಿದ್ದಾರೆ.

ಕಾಟ್ಕರ್ ಅವರನ್ನು ನಾವು ಭೇಟಿಯಾಗಿದ್ದು- ಮೊನ್ನೆ ನಡೆಯಿತಲ್ಲ, ರ್‍ಆ.ಶ.ಕೇಂದ್ರದ ಯುವ ಜಾಗೃತಿ ಶಿಬಿರ… ಆ ಸಂದರ್ಭದಲ್ಲಿ. ಶಿಬಿರದ ಮುಖ್ಯ ಅಂಗವಾಗಿ ‘ಸೈನಿಕನೊಡನೆ ಒಂದು ಗಂಟೆ’ ಸಂವಾದ ಏರ್ಪಡಿಸಲಾಗಿತ್ತು. ಯುವಕರನ್ನು ಕಂಡು ಸಂತೋಷದಿಂದ ಉಬ್ಬಿಹೋದ ಕಾಟ್ಕರ್, ತಮ್ಮ ಉಸಿರಾಟದ ತೊಂದರೆಯನ್ನೂ ಮರೆತು ಎಡೆಬಿಡದೆ ಸುರಿಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುತ್ತ ಕುಳಿತಿದ್ದರು. ಯುವಕರೂ ಕೂಡ ಕಾಲದ ಅರಿವಿಲ್ಲದೆ, ಹೊಟೆ ಹಸಿವನ್ನೂ ಮರೆತು ಅವರೊಂದಿಗೆ ಮಾತುಕಥೆಯಲ್ಲಿ ಲೀನವಾಗಿ ಹೋಗಿದ್ದರು.  ಮುಂದಿನ ಅವಧಿಯಲ್ಲಿ ಗಣೇಶ್ ದೇಸಾಯಿಯವರ ರಾಷ್ಟ್ರಭಕ್ತಿ ಗೀತ ಕಾರ್ಯಕ್ರಮವಿಲ್ಲದಿದ್ದರೆ ಬಹುಶಃ ಈ ಸಂವಾದವನ್ನು ಮಧ್ಯೆ ತುಂಡರಿಸುತ್ತಿರಲಿಲ್ಲವೇನೋ!?
ಯುವಕರಿಗಿರಲಿ, ಸ್ವತಃ ಕಾಟ್ಕರರಿಗೂ ಸಂವಾದ ಮುಗಿದದ್ದು ಬೇಸರವಾದಂತೆ ತೋರುತ್ತಿತ್ತು. ಅವರು ಇನ್ನಷ್ಟು, ಮತ್ತಷ್ಟು ಹೇಳುವ ಹುರುಪಿನಲ್ಲಿದ್ದರು. “ಛೆ! ನನ್ನ ಯೂನಿಫಾರಮ್ಮು, ಮೆಡಲುಗಳನ್ನು ನಿಮಗೆ ತೋರಿಸಲು ತರಬೇಕಿತ್ತು, ಇಷ್ಟು ಆಸಕ್ತ ಹುಡುಗರಿದ್ದೀರೆಂಬ ಕಲ್ಪನೆಯೂ ನನಗಿರಲಿಲ್ಲ!” ಎಂದು ಮತ್ತೆಮತ್ತೆ ಪೇಚಾಡಿಕೊಂಡರು.

ಶ್ರೀಯುತ ಕಾಟ್ಕರರು ಬರಹಗಾರರೂ ಹೌದು. ಇವರು ಬರೆದಿರುವ ‘ವಿಶ್ವ ಭರತಿ’ ಕೃತಿ ಇನ್ನೂ ಮುದ್ರಣ ಕಾಣಬೇಕಿದೆ. ಆರಂಭದಲ್ಲಿ ಇವರು ಶಿಕ್ಷಕ ವೃತ್ತಿಯನ್ನಾಯ್ದುಕೊಂಡಿದ್ದರು. ಆಗ ಶ್ರೀ ಪು ತಿ ನರಸಿಂಹಾಚಾರ್ ಇವರ ಸಹೋದ್ಯೋಗಿಯಾಗಿದ್ದರಂತೆ. ಆತ್ಮೀಯರೂ ಆಗಿದ್ದರಂತೆ. ಆಗಿಂದಲೂ ಇವರಿಗೆ ಸಾಹಿತ್ಯದತ್ತ ಒಲವು.
ಕವಿಯೂ ಆಗಿರುವ ಕಾಟ್ಕರರಿಗೆ ಗೀತೆ ರಚಿಸುವ, ಸಂಗೀತ ಸಂಯೋಜನೆ ಮಾಡುವ ಹವ್ಯಾಸಗಳೂ ಇದ್ದವಂತೆ. ಆದರೆ ತಾನೇನಾದರೂ ಸೇನೆಗೆ ಸೇರದೆ ಶಿಕ್ಷಕನಾಗಿಯೇ ಇದ್ದಿದ್ದರೆ ಮನಸ್ಸಿಗೆ ಖಂಡಿತ ನೆಮ್ಮದಿ- ಸಮಾಧಾನ ಸಿಗುತ್ತಿರಲಿಲ್ಲವೆನ್ನುತ್ತಾರೆ ಅವರು. ಸೇನೆಯ ಬಗ್ಗೆ ಅವರಿಗೆ ಅಂತಹ ಒಲವು!

ಕಾಟ್ಕರ್, ಸ್ವತಂತ್ರ್ಯಪೂರ್ವದಿಂದಲೂ ಸೇನೆಯಲ್ಲಿದ್ದವರು. ಹಾಗೆ ಆಂಗ್ಲರ ಅಧೀನರಾಗಿದ್ದ ಕಾಲದ ಒಂದು ಕಹಿ ಘಟನೆಯನ್ನು ಅವರು ನೆನೆಸಿಕೊಂಡರು.
ಅದೊಂದು ದಿನ ಕಾಟ್ಕರ್ ಕಂಟೋನ್ಮೆಂಟಿಗೆ ಹೋಗುತ್ತಾರೆ. ಅಲ್ಲಿ ವರಿಗೊಂದು ಮಿಲಿಟರಿ ಟೊಪ್ಪಿ ಕೊಳ್ಳುವುದಿರುತ್ತದೆ. ಅಲ್ಲೊಂದು ಟೊಪ್ಪಿ ಆಯ್ದು, ಅದಕ್ಕಾಗಿ ಅವರು ಎಂಟಾಣೆಯನ್ನೂ (ಅದರ ಬೆಲೆ)  ಕೊಟ್ಟು ಕಾಯುತ್ತ ನಿಲ್ಲುತ್ತಾರೆ…. ಆದರೆ, ಅಲ್ಲೊಂದು ನಿಯಮವಿರುತ್ತದೆ. ಸಂಜೆ ಆರರ ನಂತರ ಭಾರತೀಯರು ಯಾರೂ ಕಂಟೋನ್ಮೆಂಟಿಗೆ ಕಾಲಿಡುವಂತಿಲ್ಲ!
ಇತ್ತ ಸಮಯ ಜಾರುತ್ತಿದೆ… ಆರು ಗಂಟೆಗೆ ಇನ್ನೊಂದೇ ಒಂದು ನಿಮಿಷ ಬಾಕಿ… ಬಿಲ್ ಬರೆಯುತ್ತಿದ್ದ ಬಿಳಿಯ ಬೇಕಂತಲೇ ತಡ ಮಾಡುತ್ತಿದ್ದಾನೆ… ಕಾಟ್ಕರರಿಗೆ ತಳಮಳ. ತಾವಿರುವ ಸ್ಥಳದಿಂದ ಕಂಟೋನ್ಮೆಂಟಿಗೆ ಬರಲು ಮತ್ತೆ ಖರ್ಚು ಮಾಡಬೇಕು, ಸಮಯವೂ ಹಾಳು.
ಅಗೋ! ಆರು ಗಂಟೆ ಬಡಿದೇಬಿಡುತ್ತದೆ. ಕಾಟ್ಕರ್ ಅದೆಷ್ಟು ಕೇಳಿಕೊಂಡರೂ ಬಿಳಿಯರು ಅವರನ್ನು ಅಲ್ಲಿರಗೊಡುವುದಿಲ್ಲ. ಯುವಕ ಕಾಟ್ಕರ್, ಅವಮಾನದಿಂದ ತಲೆ ತಗ್ಗಿಸಿಕೊಂಡು ಹೊರಬರುತ್ತಾರೆ…

~
ಕಾಟ್ಕರ್ ಪರಾಧೀನತೆಯ ತಮ್ಮ ಅನುಭವ ಸಂಕಟಗಳನ್ನು ವಿವರಿಸುತ್ತಿದ್ದರೆ, ಇತ್ತ ಕೇಳುತ್ತ ಕುಳಿತಿದ್ದ ಹುಡುಗರು, ತಾವು ಮತ್ತೆಂದೂ ಅಂತಹ ಸ್ಥಿತಿಗೆ ಜಾರದಿರುವಂತಾಗಬೇಕು, ಅದಕ್ಕೆ ನಾವು ಎಚ್ಚರದಿಂದಿರಬೇಕು ಎಂದು ಪಣ ತೊಡುತ್ತಿದ್ದರು.

ಶಿಬಿರದ ದಿನ ಆರತಿ ಅಕ್ಕ, ಮಹಮದ್ ಅನ್ವರ್, ಚಕ್ರವರ್ತಿ ಅವರ ಅವಧಿಗಳೂ ಇದ್ದವು. ಆ ಬಗ್ಗೆ ಮತ್ತೆ ಬರೆಯುವೆ. ಕೊನೆಯಲ್ಲಿ ಗಣೇಶ್ ದೇಸಾಯಿ ಅವರ ಗೀತಗಾಯನವಂತೂ ನಮ್ಮನ್ನು ಸಂಪೂರ್ಣ ಆವರಿಸಿಕೊಂಡುಬಿಟ್ಟಿತ್ತು. ಖುದ್ದು ಅವರಿಗೂ ತಾವು ಹಾಡಿದ್ದು ಸಾಲಲಿಲ್ಲ ಅನ್ನುವಷ್ಟರ ಮಟ್ಟಿಗೆ ಎಲ್ಲರೂ ಅದರಲ್ಲಿ ಲೀನವಾಗಿದ್ದರು!

ರಾಷ್ಟ್ರ ಶಕ್ತಿ ಕೇಂದ್ರದ ಮೂಲ ಉದ್ದೇಶ ಇಂದಿನ ಪೀಳಿಗೆಯನ್ನು ಒಳಗಿನಿಂದಲೂ ಗಟ್ಟಿಗೊಳಿಸುವುದು. ಸದೃಢ- ಸ್ವಾಭಿಮಾನೀ ಯುವ ಪಡೆಯನ್ನು ಸಜ್ಜುಗೊಳಿಸುವುದು. 

ನಮ್ಮೊಂದಿಗೆ ಕೈಜೋಡಿಸಬಯಸುವವರು ಸಂಪರ್ಕಿಸಬೇಕಾದ ಸಂಖ್ಯೆ: ೯೯೪೫೨೦೮೬೩೨; ೯೪೪೮೪೨೩೯೬೩

ನೀವೂ ಬನ್ನಿ…

Posted in ಕಾರ್ಯಕ್ರಮ- ವರದಿ by yuvashakti on ಆಗಷ್ಟ್ 16, 2008

ಬನ್ನಿ, ರಾಷ್ಟ್ರವ ಕಟ್ಟೋಣ….

Posted in Uncategorized by yuvashakti on ಆಗಷ್ಟ್ 14, 2008

೬೨ನೇ ಸ್ವಾತಂತ್ರ್ಯೋತ್ಸವದ ಶುಭ ಕಾಮನೆಗಳು

      

 

~ ರಾಷ್ಟ್ರ ಶಕ್ತಿ ಕೇಂದ್ರ ಬಳಗ, ಬೆಂಗಳೂರು

 

ವಿನಂತಿ…

ಯಾರ ಬಳಿಯಾದರೂ ಶ್ರೀಯುತ ಎ.ಆರ್.ರೆಹಮಾನರ ‘ವಂದೇ ಮಾತರಂ’ರಿಮಿಕ್ಸ್ ಹಾಡಿನ ಸಾಹಿತ್ಯವಿದ್ದರೆ ದಯವಿಟ್ಟು ನಮಗೆ ಕಳುಹಿಸಿಕೊಡಿ.

ಸಂಸ್ಕೃತಿ ಮತ್ತು ವಿಕೃತಿ…

Posted in ಸಂವಾದ by yuvashakti on ಆಗಷ್ಟ್ 14, 2008
 

ಬೆಳಗಾದರೆ ರಾಷ್ಟ್ರ ಹಬ್ಬ. ತಾಯಿ ಭಾರತಿ ಆಂಗ್ಲರ ದಾಸ್ಯದಿಂದ ಮುಕ್ತಳಾದ ಸಂಸ್ಮರಣೆಯ ಹಬ್ಬ. ಈ ಸಂದರ್ಭದಲ್ಲಿ ಏನದರೂ ಬರೆಯಬೇಕು ಅಂದುಕೊಂಡು, ತುರ್ತಾಗಿ ಎಲ್ಲೋ ಹೋಗಬೇಕಾಗಿ ಬಮ್ದು, ಕೊನೆಗೆ ಭಾರತ ಮಾತೆಯ ಚಿತ್ರವನ್ನಾದರೂ ಹಕಿ ಎರಡು ನುಡಿ- ನಮನ ಬರೆಯೋಣವೆಂದು ನೆಟ್ಟು ಜಾಲಾಡಿದರೆ… ಒಂದಷ್ಟು ಚಿತ್ರಗಳು ಸಿಕ್ಕಿದ್ದು ಹೌದು… ಮನಸ್ಸು ಕಹಿಯಾಗಿದ್ದೂ ಹೌದು.

ಇಲ್ಲಿ ಮೂರು ಚಿತ್ರಗಳನ್ನು ಕೊಡುತ್ತಿದ್ದೇನೆ ನೋಡಿ. ಒಂದು ಅವನೀಂದ್ರ ಠಾಕುರ್ ಅವರು ರಚಿಸಿದ್ದು. ಇನ್ನೊಂದು ಮಕ್ಬೂಲ್ ಫಿದಾ ಹುಸೇನರ ರಚನೆ. ಮತ್ತೊಂದು- ಮೂಲ ಚಿತ್ರಕಾರರ ಹೆಸರು ಗೊತ್ತಿಲ್ಲದ, ಇಂದು ಎಲ್ಲೆಡೆ ಕಂಡು ಬರುವ ಭಾರತ ಮಾತೆಯ ಚಿತ್ರ. ಇಲ್ಲಿ ಎರಡು ಚಿತ್ರಗಳು ಸುಸಂಸ್ಕೃತ ಹಿನ್ನೆಲೆಯದ್ದಾಗಿದ್ದು, ಒಂದು ತನ್ನ ಚಿತ್ರಕಾರನ ಕಲಾವಂತಿಕೆಯ ‘ಔನ್ನತ್ಯ’ವನ್ನು ಸೂಚಿಸುತ್ತದೆ. ಆತ ಭಾರತಮಾತೆಯನ್ನು ಯಾವ ಬಗೆಯಲ್ಲಿ ನೋಡುವವ ಎಂದು ಸಾರುತ್ತದೆ. ಅದು ಯಾವುದು ಅನ್ನೋದನ್ನ ನಾನು ಬಾಯಿ ಬಿಟ್ಟು ಹೇಳಬೇಕಿಲ್ಲ ಅಲ್ಲವೇ?

ಅವನೀಂದ್ರನಾಥ ಠಾಕೂರ್  

ಇರಲಿ. ಕೊಚ್ಚೆಗೆ ಕಲ್ಲೆಸೆಯಲು ಇದು ಕಾಲವಲ್ಲ. ನಾವು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಆಗಸ್ಟ್ ಹದಿನೇಳರಂದು ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ಯುವ ಸಮಾವೇಶವಿದೆ. ಮುಗಿಸಿಕೊಂಡು ಮತ್ತೆ ಹಾಜರಾಗುತ್ತೇನೆ. ಈ ಬ್ಲಾಗಿಗೆ ಮತ್ತೊಂದು ಕೈ ಬೇಕಿದೆ. ಅದನ್ನೂ ಆದಷ್ಟು ಬೇಗ ಹುಡುಕಿ ತರ್ತೇನೆ!

~

ರಾಷ್ಟ್ರ ಹಬ್ಬಕ್ಕಾಗಿ ನಿಮಗಿದೋ ರಾಷ್ಟ್ರಗಾನ…

ದಯವಿಟ್ಟು ಒಂದೊಮ್ಮೆ ಸಂಪೂರ್ಣ ಓದಿಕೊಳ್ಳಿ. ಭಾರತ ಮಾತೆಯ ವೈಭವವನ್ನು ನೆನೆಯಿರಿ.

~

ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯಶ್ಯಾಮಲಾಂ ಮಾತರಮ್ ||

ಶುಭ್ರಜ್ಯೊತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ಧ್ರುಮದಲ ಶೊಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ||

ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೆ
ಕೋಟಿ ಕೋಟಿ  ಭುಜೈರ್ಧೃತ ಖರಕರವಾಲೆ
ಅಬಲಾ ಕೆನೊ ಮಾ ಎತೊ ಬಲೇ
ಬಹುಬಲಧಾರಿಣೀಂ ನಮಾಮಿ ತಾರಿಣೀಂ
ರಿಪುದಲವಾರಿಣೀಂ ಮಾತರಂ ||

ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ 
ತ್ವಂ ಹಿ ಪ್ರಾಣಾಃ ಶರೀರೇ
ಭಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಈ ಪ್ರತಿಮಾ ಗಡಿ
ಮಂದಿರೇ ಮಂದಿರೇ ||

ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ
ಕಮಲಾ ಕಮಲದಲ ವಿಹಾರಿಣೀ
ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ ||

ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಂ |
ವಂದೇ ಮಾತರಂ

~ ಬಂಕಿಮ ಚಂದ್ರ ಚಟರ್ಜಿ

ಸ್ವಾತಂತ್ರ್ಯೋತ್ಸವಕ್ಕೆ ಮುನ್ನ…

Posted in ನಮ್ಮ ಇತಿಹಾಸ by yuvashakti on ಆಗಷ್ಟ್ 7, 2008

ಇನ್ನೊಂದು ವಾರ ಅನ್ನುವಷ್ಟರಲ್ಲಿ ನಮ್ಮ ಸ್ವಾತಂತ್ರ್ಯೋತ್ಸವ ಬರಲಿದೆ. ಅದಕ್ಕೆ ಮುನ್ನ ಹೀಗೊಂದು  ಅವಲೋಕನ ಮಾಡಿಕೊಳ್ಳೋಣವೆನಿಸಿ ಬರೆಯುತ್ತಿದ್ದೇನೆ.

ಭಾರತ ಸ್ವಾತಂತ್ರ್ಯ ಹೋರಾಟ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು ಬಹುದೊಡ್ಡ ಪ್ರಕ್ರಿಯೆ. ಅದೇನೂ ಧಿಡೀರನೆ ಬಂದು ಕದ ತಟ್ಟಿದ್ದಲ್ಲ.
“ಆಂಗ್ಲರು ನಮ್ಮನ್ನು ಲೂಟಿ ಮಾಡಬಹುದಾಗಿದ್ದಷ್ಟನ್ನೂ ಮಾಡಿ ಮುಗಿಸಿ, ಇನ್ನು ಇಲ್ಲೇನೂ ದಕ್ಕುವುದಿಲ್ಲ ಎಂದು ಅರಿವಾದ ನಂತರವಷ್ಟೆ ಕಾಲು ಕಿತ್ತಿದ್ದು” ಎಂದು ಯುವಕನೊಬ್ಬ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹಾಗಾದರೆ…?
ಹಾಗಾದರೆ ನಮ್ಮವರು ಅಷ್ಟೆಲ್ಲ ಹೋರಾಡುವ ಅಗತ್ಯವೇ ಇರಲಿಲ್ಲವಾ?  ಹೇಗಿದ್ದರೂ ಮೆದ್ದು ಮುಗಿದ ನಂತರ ಅವರೇ ಜಾಗ ಖಾಲಿ ಮಾಡುತ್ತಿದ್ದರಲ್ಲ!?
– ಹೀಗಂತ ಯೋಚಿಸುವುದೇ ಬೇಡವೆನಿಸಿತು. ಏಕೆಂದರೆ “ಭಾರತದಲ್ಲಿ ಇನ್ನು ಏನೂ ಉಳಿದಿಲ್ಲ” ಅನ್ನೋದು ಆ ಯುವಕನ ತಪ್ಪು ತಿಳುವಳಿಕೆ ಮಾತ್ರ.
ನಿಜ… ನಮ್ಮಲ್ಲಿ ಅಮೆರಿಕೆಯಲ್ಲಿರುವಂಥ ರೋಡುಗಳಿಲ್ಲ. ಇಂಗ್ಲೆಂಡಿನಲ್ಲಿರುವಂಥ ಮೂಲಭೂತ ಸೌಕರ್ಯಗಳಿಲ್ಲ. ದೊಡ್ಡ ದೊಡ್ಡ ಕಟ್ಟಡಗಳಿಲ್ಲ.
ಆದರೆ…
ಆದರೆ,
ನಮ್ಮಲ್ಲಿ ಸಂತೃಪ್ತಿ ಇದೆ. ನಮ್ಮಲ್ಲಿ ಆಧ್ಯಾತ್ಮಿಕತೆ ಇದೆ. ಯೋಗವಿದೆ. ಬುದ್ಧಿವಂತಿಕೆಯಿದೆ. ಕೌಶಲ್ಯವಿದೆ. ಕುಟುಂಬಗಳಿವೆ! ಬಾಂಧವ್ಯಗಳು ಗಟ್ಟಿಯಾಗಿವೆ!! ( ಈಗೀಗ ಹೊಂದಾಣಿಕೆ ಕಡಿಮೆಯಾಗಿ ಛಿದ್ರವಾಗ್ತಿದೇವೆಂದರೂ ಅದು ಮೇರೆ ಮೀರಿ ಹೋಗಿಲ್ಲ ಅನ್ನುವುದು ವಾಸ್ತವ ಸತ್ಯ) ಕಳ್ಳ- ಕಾಕರು, ಭ್ರಷ್ಟರು, ಬಡ- ಭಿಕ್ಷುಕರು ಬಿಡಿ, ಎಲ್ಲೆಡೆಯೂ ಇರುವರು. ಅಮೆರಿಕ- ಯುರೋಪುಗಳಲ್ಲೂ! (ಅವೇನೂ ದೇವಲೋಕಗಳಲ್ಲ ಅನ್ನೋದು ನೆನಪಿರಲಿ)
ಅದೆಲ್ಲ ಯಾಕೆ? ನಮಗೆ ಇನ್ಯಾರೂ ಹೇಳಿಕೊಳ್ಳಲಾಗದಷ್ಟು ಭವ್ಯವಾದ ಇತಿಹಾಸವಿದೆ! ಆದರೆ ನಾವದನ್ನು ಹಳೆಯ ಪ್ರತಿಷ್ಠೆಗಳ ಗೋರಿ ಎಂದು ಬಗೆಯದೆ ಸದೃಢ ರಾಷ್ಟ್ರ ನಿರ್ಮಾಣದ ಬುನಾದಿ ಎಂದರಿತು ಸಾಗಿದರೆ ಯಶಸ್ಸು ಸದಾ ನಮ್ಮ ಜತೆಗಿರುತ್ತದೆ.

ಹೌದು. ಕಳೆದ ಸಾರ್ತಿಯೋ, ಅದರ ಹಿಂದಿನ ಸರ್ತಿಯೋ ಮನ ಮೋಹನ ಸಿಂಗರು ಹೇಳಿದ್ದರು. ಬ್ರಿಟಿಷರು ಬಾರದಿದ್ದರೆ ನಾವು ಇಷ್ಟೆಲ್ಲ ಮುಂದುವರೆಯುತ್ತಿರಲಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಇದು, “ಈಗ್ಯಾಕೆ ಮತ್ತೆ ಸಿಂಗ್ ಹೆಳಿದ ವಿಷಯ ಕೆದಕಬೇಕು?” ಅಂದು ಸುಮ್ಮನಾಗುವ ಸಂಗತಿಯಲ್ಲ… ಏಕೆಂದರೆ ರಾಷ್ಟ್ರದ ಜಾವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬನ ಇಂತಹ ಅಪ್ರಬುದ್ಧ ಹೇಳಿಕೆ ಅದೆಷ್ಟು ಜನರನ್ನು ಅದೇ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುತ್ತದೆ ಅನ್ನುವ ಅರಿವು ಇದೆಯೆ?
ವಾಸ್ತವವಾಗಿ ನಮಗೂ ಕೂಡ ಬಾಲ್ಯದಲ್ಲಿ (ಕಾನ್ವೆಂಟಿನಲ್ಲಿ) ಹೀಗೇ ಹೇಳಿಕೊಡಲಾಗಿತ್ತು. ನಾನು, ನನ್ನಂಥಲಕ್ಷ ಲಕ್ಷ ವಿದ್ಯಾರ್ಥಿನಿಯರು ಅದನ್ನೆ ನೆಚ್ಚಿಕೊಂಡಿದ್ದೆವು. ಆದರೆ, ಯಾವಾಗ ಸಂಸ್ಕೃತದ ಪರಿಚಯವಾಯ್ತೋ, ಜಾನಪದದ ಅಧ್ಯಯನ ಶುರುವಾಯ್ತೋ, ಆಯುರ್ವೇದ- ಮನೆ ಮದ್ದುಗಳ, ಹಳ್ಳಿ ಜನರ ತಾಂತ್ರಿಕ ಕೌಶಲಗಳ, ಹಳೆ ಹಳೆಯ ಗ್ರಂಥಗಳ ಪರಿಚಯವಾಯ್ತೋ ನನ್ನ ಆವರೆಗಿನ ತಿಳುವಳಿಕೆ ಬಗ್ಗೆ ಅತೀವ ನಾಚಿಕೆ ಶುರುವಾಯ್ತು.

ಮೆಹರೂಲಿ ಕಂಬ, ಕುತುಬ್ ಮಿನಾರ್, ಭವ್ಯ ದೇವಾಲಯಗಳು, ಏಕ ಶಿಲಾ ವಿಗ್ರಹಗಳು, ಕೋಟೆ ಕೊತ್ತಲಗಳು… ಇವೆಲ್ಲ ಆಂಗ್ಲರಿಗಿಂತ ಮೊದಲೇ ನಿರ್ಮಿಸಲ್ಪಟ್ಟಿದ್ದಲ್ಲವೆ?
ನಾಗಾರ್ಜುನ (ರಾಸಾಯನ ಶಾಸ್ತ್ರ), ಆರ್ಯಭಟ (ಖಗೋಳ), ಭಾಸ್ಕರ (ಗಣಿತ), ಕಲ್ಹಣ (ಇತಿಹಸಕಾರ), ಚರಕ, ಸುಶ್ರುತ (ಆಯುರ್ವೇದ) ಇವರೆಲ್ಲ ಈ ಕ್ಷಣಕ್ಕೆ ನೆನಪಾಗುವ ಹೆಸರುಗಳಾದರೆ, ಜ್ಯಮಿತಿ ತತ್ತ್ವಗಳಿಗನುಗುಣವಾಗಿ ಯಜ್ಞವೇದಿಗಳನ್ನು ರಚಿಸುತ್ತಿದ್ದ ಋಷಿ ಮುನಿಗಳು, ವಾಸ್ತು ಕಲೆಯಲ್ಲಿ ನಿಪುಣರಾಗಿದ್ದ ಸಾಮಾನ್ಯ ಶಿಲ್ಪಿಗಳು, ಬಿಡುವಿನ ವೇಳೆಯಲ್ಲಿ ಬ್ರಹ್ಮ ತತ್ತ್ವ ಹರಟುತ್ತಿದ್ದ ಬ್ರಹ್ಮವಾದಿನಿಯರು…ಇವರೆಲ್ಲ ಯವ ಆಂಗ್ಲ ಶಿಕ್ಷಣವನ್ನೂ ಪಡೆದವರಾಗಿರಲಿಲ್ಲ!

ಆದರೂ… ನಮ್ಮ ಪೀಳಿಗೆ ಹೇಳುತ್ತದೆ, ಇಂಗ್ಲೀಷಿಲ್ಲದಿದ್ದರೆ ನಾವು ಮುಂದುವರೆಯೋದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳೋದು ಸಾಧ್ಯವಾಗ್ತಲೇ ಇರಲಿಲ್ಲ!
ಹ್ಹ! ಜಪಾನ್, ಚೀನಾ, ಅರಬ್ ರಾಷ್ಟ್ರಗಳು, ಇಸ್ರೇಲ್… ಮತ್ತೂ ಉದಾಹರಣೆ ಬೇಕೆ, ಇಂಗ್ಲೀಶಿಗೆ ಮಣೆ ಹಾಕದೆ ಪ್ರಗತಿದೆಸೆಯಲ್ಲಿ ದಾಪುಗಾಲಿಕ್ಕುತ್ತಿರುವುದಕ್ಕೆ? ಹಾಗೆಂದು ಇಲ್ಲಿ ಪ್ರ ಭಾಷೆಗಳ ಕಲಿಕೆಗೆ ಯಾರ ವಿರೋಧವೂ ಇಲ್ಲ. ಆದರೆ ಆ ನೆವದಲ್ಲಿ ನಮ್ಮದನ್ನು ಕೀಳಾಗಿ ಕಂಡು ಹಳಿಯೋದಿದೆಯಲ್ಲ… ಅದು ಶುದ್ಧ ಮೂರ್ಖತನದ ಮಾತು.

ನಮ್ಮ ಮೊದಲ ಪ್ರಧಾನಿ ನೆಹರೂಗಂತೂ ಭಾರತದ ರಾಷ್ಟ್ರ ಭಾಷೆ ಇಂಗ್ಲೀಶ್ ಆಗಬೇಕು ಅನ್ನುವ ಕನಸಿತ್ತು. ನಮ್ಮ ಸುಕೃತ! ಅದು ಕನಸಾಗಿಯೆ ಉಳಿದುಬಿಡ್ತು!!
ಇಷ್ಟಕ್ಕೂ, ನಮ್ಮ ದೇಶದಿಂದ ‘ಸೊನ್ನೆ’ಯನ್ನು ಜಗತ್ತು ಎರವಲು ಪಡೆಯಿತಲ್ಲ, ಆಗ ನಾವದನ್ನ ಇಂಗ್ಲೀಶಲ್ಲಿ ಬರೆದಿಟ್ಟಿದ್ದೆವಾ? ಗ್ರೀಕಿನೊಂದಿಗೆ ವ್ಯಾಪಾರ ಸಂಬಂಧವಿರಿಸಿಕೊಂಡಿದ್ದೆವಲ್ಲ, ಆಗ ಇಂಗ್ಲೀಶ್ ಕಲಿತಿದ್ದೆವಾ? ಯಾವ ನಮ್ಮ ಮಸ್ಲಿನ್ ಬಟ್ಟೆಗೋಸ್ಕರ, ಮಸಾಲಾ ಪದಾರ್ಥಗಳಿಗೋಸ್ಕರ, ಚಿನ್ನ-ಮುತ್ತು-ವಜ್ರಗಳಿಗೋಸ್ಕರ ಅನ್ಯರು ಮತ್ತೆ ಮತ್ತೆ ದುರಾಕ್ರಮಣ ಮಾಡಿ ಕೊಳ್ಳೆ ಹೊಡೆದು ಹೋದರಲ್ಲ, ಆಗ ಅವರಿಗೆಲ್ಲ ನಮ್ಮಲ್ಲಿ ಸಂಪತ್ತಿರುವ ಮಾಹಿತಿ ಇಂಗ್ಲೀಶಿನ ಮೂಲಕವೇ ತಿಳಿದುದಾಗಿತ್ತಾ!?
ಇಷ್ಟಕ್ಕೂ ಈಗ ನಾವು ಇಂಗ್ಲಿಶ್ ಕಲಿತು ಕಡಿಯುತ್ತಿರೋದೇನು? ಪಾಶ್ಚಾತ್ಯರ ಗುಲಾಮಗಿರಿ! ಕಾಲ್ ಸೆಂಟರು, ಬಿಪಿಓಗಳಲ್ಲಿ ಪರಿಚಾರಿಕೆ!! ಪರಿಣಾಮ? ಕಷ್ಟ ಪಡದೆ ಉದ್ಯೋಗ, ಕೈ ತುಂಬಿ ಚೆಲ್ಲುವಷ್ಟು ಹಣ, ಮೌಲ್ಯಗಳ ಕುಸಿತ, ಪ್ರಗತಿಯಲ್ಲಿ ಇಳಿಕೆ!
ಇತ್ತೀಚೆಗೆ ಟೆಕಿಗಳು, ಕಾಲ್ಸೆಂಟರಿನ ಯುವಕರು ಒಂದಷ್ಟು ಸಮಾಜ ಮುಖಿ ಕೆಲಸಗಳಲ್ಲಿ ಆಸಕ್ತಿ ತೋರಿಸ್ತಿರೋದು ಒಳ್ಳೆಯ ಬೆಳವಣಿಗೆ. ಆದರೆ ಆ ಉದ್ಯೋಗಗಳಿಂದಾಗ್ತಿರೋ ಸೈಡ್ ಎಫೆಕ್ಟ್ ಗಳಿಗೆ ಅಷ್ಟು ಮಾತ್ರ ಸಾಲದು. ಆ ಬಗೆಯ ಉದ್ಯೋಗಿಗಳಲ್ಲಿ ರಾಷ್ಟ್ರ ಪ್ರಜ್ಞೆ ವ್ಯಾಪಕವಾಗಿ ಬೆಳೆಯಬೇಕು.

ಸದ್ಯಕ್ಕೆ ಈ ಹರಟೆ ನಿಲ್ಲಿಸುವೆ. ಅದಕ್ಕೆ ಮುನ್ನ, ಮೆಕಾಲೆ ಎನ್ನುವ ಆಂಗ್ಲನೊಬ್ಬ ನಮ್ಮ ರಾಷ್ಟ್ರವನ್ನು ನೋಡಿ ದಂಗುಬಡಿದು ಬಡಬಡಿಸಿದ್ದನ್ನು ಇಲ್ಲಿ ನೀಡುತ್ತಿರುವೆ.

                                                     

“ನಾನು ಭಾರತದ ಉದ್ದಗಲಕ್ಕೂ ಸಂಚರಿಸಿದೆ. ಆದರೆ ಎಲ್ಲೂ ನನಗೆ ಒಬ್ಬ ಭಿಕ್ಷುಕನಾಗಲೀ ಕಳ್ಳನಾಗಲೀ ಕಾಣಸಿಗಲಿಲ್ಲ. ಈ ದೇಶದಲ್ಲಿ ನಾನು ಎಷ್ಟೊಂದು ಸಂಪತ್ತನ್ನು, ನೈತಿಕ ಮೌಲ್ಯಗಳನ್ನು, ಜನರ ಔದಾರ್ಯವನ್ನು, ಕೌಶಲ್ಯವನ್ನು ಕಂಡೆನೆಂದರೆ, ಈ ದೇಶದ ಬೆನ್ನೆಲುಬಾಗಿರುವ ಆಧ್ಯಾತ್ಮ ಮತ್ತು ಸಂಸ್ಕೃತಿಗಳನ್ನು ಮುರಿಯದೆ ನಾವು ಇದನ್ನು ವಶಪಡಿಸಿಕೊಳ್ಳೋದು ಸಾಧ್ಯವೇ ಇಲ್ಲ ಎಂದೆನಿಸುತ್ತದೆ. ಆದ್ದರಿಂದ ನನ್ನ ಸೂಚನೆಯೇನೆಂದರೆ, ನಾವು ಭಾರತದ ಶಿಕ್ಷಣ ಪದ್ಧತಿ ಮತ್ತು ಸಂಸ್ಕೃತಿಯ ಜಾಗದಲ್ಲಿ ನಮ್ಮದನ್ನು ತಂದು, ಭಾರತೀಯರೆಲ್ಲರೂ ಪರದೇಶದ ಮತ್ತು ಇಂಗ್ಲೀಶಿನ ಎಲ್ಲವೂ ನಮ್ಮದಕ್ಕಿಂತ ಉತ್ಕೃಷ್ಟ ಎಂದು ಯೋಚಿಸುವಂತಾಗಬೇಕು. ಆಗ ಖಚಿತವಾಗಿಯೂ ಅವರು ತಮ್ಮ ಸ್ವಾಭಿಮಾನ ಮತ್ತು ಸಂಸ್ಕೃತಿಗಳನ್ನು ಕಳೆದುಕೊಂಡು, ನಾವು ಬಯಸುವಂತೆ ನಿಜವಾಗಿಯೂ ನಮ್ಮ ಹಿಡಿತಕ್ಕೆ ಸಿಗುತ್ತಾರೆ”

ಹಾಗಾದರೆ… ಮೆಕಾಲೆ ಬಿತ್ತಿದ ವಿಷ ಬೀಜ  ನಿರಂತರವಾಗಿ ವಿಷ ಫಲಗಳನ್ನು ನೀಡುತ್ತಿರುವಂತೆ ನಾವು ಜತನದಿಂದ ಕಾಪಾಡಿಕೊಂದು ಬರುತ್ತಿದ್ದೇವಾ?

(ಚಿತ್ರ ಕೃಪೆ, moralstories.wordpress.com)

ನದೀ… ಜೀವ ನಾಡಿ…

Posted in ನಮ್ಮ ಇತಿಹಾಸ by yuvashakti on ಆಗಷ್ಟ್ 1, 2008

ಭಾರತೀಯರಿಗೆ, ‘ನದಿ’ ಬರೀ ಹರಿಯುವ ನೀರು ಮಾತ್ರವಲ್ಲ. ಆಕೆ ‘ನದೀ’ ದೇವತೆ. ಹೀಗಾಗಿ ವೇದ ವ್ಯಾಸರು ನದಿಗಳನ್ನು ವಿಶ್ವ ಮಾತರಃ ಎಂದಿದ್ದಾರೆ. ಋಗ್ವೇದದಲ್ಲಿ ನದಿಗಳನ್ನು ‘ಆಪೋ ದೇವತಾ’ ಎಂದು ಕರೆದು ಗೌರವಿಸಿದ್ದಾರೆ. ಅದು ಪಾವನ ತೀರ್ಥ. ಮೈಮನ ಶುದ್ಧಗೊಳಿಸುವ ಪವಿತ್ರ ಸಾಧನ. ಹಾಗಾಗಿ ನಮ್ಮ ಪ್ರಯಾಣಗಳೆಲ್ಲವು ತೀರ್ಥಯಾತ್ರೆ. ನಮ್ಮ ಯಾತ್ರೆಗಳಲೆಲ್ಲಾ ತೀರ್ಥಸ್ನಾನಕ್ಕೆ ಬಹು ಪ್ರಾಮುಖ್ಯತೆ.
 ನಮ್ಮ ರಾಷ್ಟ್ರದ ಎಲ್ಲಾ ನದಿಗಳು, ಅಷ್ಟ ಕುಲ ಪರ್ವತಗಳಲ್ಲಿ ಜನ್ಮ ತಾಳುತ್ತವೆ. ಇಲ್ಲಿ ಕೆಲವು ವೇದ-ಪುರಾಣೋಕ್ತ ನದಿಗಳ ಪುರಾತನ ಹಾಗೂ ಇಂದಿನ ಬಳಕೆಯ ಹೆಸರುಗಳನ್ನು ನೀಡಲಾಗಿದೆ.

ಹಿಮಾಲಯ

“ದೇವತಾತ್ಮಾ ಹಿಮಲಯಃ” ಎಂದು ಹಿಮಾಲಯ ಪರ್ವತ ಶ್ರೇಣಿಯನ್ನು ಶಾಸ್ತ್ರಗಳು ಬಣ್ಣಿಸಿವೆ.  ಹಿಮಾಲಯದಲ್ಲಿ ಜನ್ಮ ತಳೆವ ನದಿಗಳು, ಪೂರ್ವ ಹಾಗೂ ಪಶ್ಚಿಮಗಳೆರಡೂ ದಿಕ್ಕಿಗೆ ಹರಿಯುವುದು ವಿಶೇಷವಾಗಿದೆ.

ಪೂರ್ವಾಭಿಮುಖ ನದಿಗಳು: ಗಂಗಾ, ಯಮುನಾ, ಗೋಮತಿ, ಸರಯೂ (ಗೋಗ್ರ),
ರಕ್ಷು (ರಾಮ ಗಂಗಾ) ಗಂಡಕಿ, ಕೌಶಿಕಿ (ಕೇಶಿ) ಲೋಹಿತ್ಯಾ (ಬ್ರಹ್ಮಪುತ್ರಾ)

ಪಶ್ಮಿಮಾಭಿಮುಖ ನದಿಗಳು : ಸರಸ್ವತಿ, ಸಿಂಧೂ, ಚಂದ್ರಭಾಗಾ (ಜೀನಬ್) ಶತ್ರುರಿ, (ಸಟ್ಲೇಜ್) ವಿತಸ್ತಾ (ಝೇಲಂ) ಇರಾವತಿ (ರಾವಿ) ತೂಹು, ಬಹುರಾ (ರಾಸಿ) ವೃಷಧೃತಿ (ಚಿತುಗಾ) ವಿಶಾಸಾ (ಬಿಯಾಸ್) ದೇವಿಕಾ (ಡೇನ್)

ಅರಾವಳಿ ಅಥವಾ ಪಾರಿಯಾತ್ರ

ಇಲ್ಲಿ ಹುಟ್ಟುವ ಎಲ್ಲಾ ಪ್ರವಾಹಗಳು ಪಶ್ಚಿಮ ಸಮುದ್ರ ಸೇರುತ್ತವೆ. ಹಲವು ನದಿಗಳು, ಪ್ರಮುಖ ಪ್ರವಾಹಗಳಲ್ಲಿ ಒಂದಾಗಿ, ಸಮುದ್ರ ಸೇರುತ್ತವೆ. ಹಿಮಾಲಯದ ನದಿಗಳಿಗೆ ಹೋಲಿಸಿದಾಗ ಉದ್ದ ಹೆಚ್ಚೇನೂ ಇಲ್ಲವಾದರೂ, ಇವು ಹರಿಯುವ ಪಾತ್ರದ ಪರಿಸರ ಅತ್ಯಂತ ರಮಣೀಯವಾಗಿ ಕಂಗೊಳಿಸುತ್ತದೆ.
 ವೇದಸ್ಮೃತಿ (ಬನಾಸ್), ವೇದವತಿ (ಬೀರಫ್) ವೃತ್ರಘ್ನ (ಉತ್ತಂಗನ) ವೇಣ್ಯ, ನಂದಿನಿ (ಸಾಬರ ಮತಿ), ಸದಾನೀರ್ (ಪಾರ್ವತಿ), ಚರ್ಮಣ್ಯತಿ (ಚಂಬಲ್) ವಿದುಶ (ಬೇಸ್) ವೇಣುಮತಿ (ಬೇತಾರ್) ಸತ್ತಾ ಅಥವಾ ಆವಂತಿ ಮೊದಲಾದವು ಅರಾವಳಿಯಿಂದ ಹುಟ್ಟುತ್ತವೆ.

ಋಕ್ಷ ಪರ್ವತ

 ಮಂದಾಕಿನಿ, ದಶಾರ್ಣ (ಧಸಾನ್), ಚಿತ್ರಕೂಟ, ತಮಸಾ (ತೋಸ್) ಪಿಪ್ಪಲಿ, ಶ್ರೇಣಿ, (ದೈಸುನೇ) ಪಿಶಾಚಿಕಾ, ಕರಮೋದಾ (ಕರ್ಮನಾಶಾ), ನೀಲೋತ್ಪಲಾ, ವಿಮಲಾ (ಬೇರಾಸ್), ಚಂಚಲಾ (ಜಮ್ನಿ), ಬಾಲುವಾಹಿನಿ, ಶ್ರುತಿ  ಮಿತಿ, ಶಕುಲಿ, ತ್ರಿದಿವಾ ಮೊದಲಾದ ವೇದೋಕ್ತ, ಪುರಾಣೋಕ್ತ ಪುಣ್ಯ ಪ್ರವಾಹಗಳು, ಇಲ್ಲಿಂದ ಹುಟ್ಟಿ ಹರಿಯುತ್ತವೆ.
 ಇವುಗಳು, ನೇರವಾಗಿ, ಸಾಗರ ಸೇರುವುದಿಲ್ಲ. ಬದಲಾಗಿ, ಮುಖ್ಯ ಪ್ರವಾಹಗಳೊಂದಿಗೆ ಸಂಗಮಿಸಿ, ಸಂಭ್ರಮಿಸುತ್ತವೆ. ರಾಮಾಯಣಾದಿ ಇತಿಹಾಸ ಘಟನೆಗಳು, ಪುರಾಣೋಕ್ತ ವಿವಿಧ ಪ್ರಸಂಗಗಳಿಗೆ ಈ ನದಿಗಳು ಸಾಕ್ಷಿಯಾಗಿರುವುದರಿಂದ, ಜನ ಮಾನಸದಲ್ಲಿ ಶ್ರದ್ಧಾ ಕೇಂದ್ರಗಳಾಗಿ ವಿಕಸಿತವಾಗಿವೆ.

ವಿಂಧ್ಯ ಪರ್ವತ

ವಿಂಧ್ಯ ಪರ್ವತದ ಪ್ರವಾಹಗಳು, ದಕ್ಷಿಣಾಭಿಮುಖವಾಗಿ ಪೂರ್ವ ದಿಕ್ಕಿಗೆ ಹರಿಯುವಂತೆ, ಕೆಲವು ಉತ್ತರಾಭಿಮುಖಿಯಾಗಿ ಪಶ್ಚಿಮದ ಕಡೆಗೆ ಹರಿಯುತ್ತವೆ. ಇದಲ್ಲದೆ ಸಮ ದಿಕ್ಕಿನಲ್ಲಿ ಹರಿದು, ಪೂರ್ವ, ಪಶ್ಚಿಮ ಸಮುದ್ರಗಳೆರಡೂ ಸೇರುತ್ತವೆ. ಈ ದೃಷ್ಟಿಯಿಂದ ಇವು ಹಿಮಾಲಯದ ನದಿಗಳಂತೆ ವಿಶೇಷವಾಗಿವೆ. ಪಾತ್ರದಲ್ಲಿ ಹಲವು ನದಿಗಳು, ಹಿಮಾಲಯದ ನದಿಗಳಂತೆ, ಅಗಲವೂ, ಉದ್ದವೂ ಆಗಿವೆ.
 ಪಯೋಷ್ಟೋ, ನಿಬೇಂದ್ಯ (ಸೇವೋಜ್), ತಾಪಿ, ನೀಷಧಾವತಿ ವೇಣೂ (ವೈಣ ಗಂಗಾ) ವೈತರಣೀ (ಚೇತೃಣಿ) ಕುಮದ್ವತಿ (ಪೂರ್ಣರೇಖಾ) ತೇಯಾ (ಬ್ರಹ್ಮಶ್ರೀ) ಮಹಾಗೌರೇ (ದಾಮೋದರ) ಪೂರ್ಣಶೋಣ (ಸೇನಾ), ಮಹಾನದಿ, ನರ್ಮದಾ, ಇವು ವಿಂಧ್ಯಜನ್ಯ ಪ್ರಮುಖ ನದಿಗಳಾಗಿವೆ. ನರ್ಮದೆಯು ಉತ್ತರಾಭಿಮುಖವಾಗಿ ಹರಿದು, ಗುಜರಾತ್‌ನಲ್ಲಿ ಪಶ್ಚಿಮ ಸಮುದ್ರ ಸೇರುತ್ತಾಳೆ. ಜಗತ್ತಿನಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಏಕಮಾತ್ರ ನದಿ ಇದಾಗಿದೆ.

ಸಹ್ಯ ಪರ್ವತ ನದಿಗಳು

ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.
 ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ  ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!

ಮಲಯ ಪರ್ವತ

ಕೃತಮಾಲಾ (ಬೈಗಾಯೀ) ತಾಮ್ರ ಪರ್ಣಿ, ಪುಷ್ಪಜಾ (ಪಂಬೇಲ್) ಸತ್ಫಲಾವತಿ, ಪೂರ್ಣಾ (ಪೇರಿಯಾಲ್) ಮೊದಲಾದ ನದಿಗಳು, ‘ಮಲಯ’ ಪ್ರದೇಶದ ಪುಣ್ಯ ತೀರ್ಥಗಳೆಂದು ಹೆಸರಾಗಿವೆ. ಇವೆಲ್ಲವೂ ದಕ್ಷಿಣಾಭಿಮುಖವಾಗಿ, ಪಶ್ಚಿಮ ಸಮುದ್ರವನ್ನು ಸೇರುತ್ತವೆ. ನೈಸರ್ಗಿಕ ಗಿಡ ಮೂಲಿಕಾ ಪ್ರದೇಶಗಳಲ್ಲಿ ಹರಿದು ಬರುವುದು ಇವುಗಳ ವಿಶೇಷವಾಗಿದೆ. ಬಹು ಅಪರೂಪವಾದ ದೇವತಾರ್ಚನ ವಿಧಿಗಳು, ಇಲ್ಲಿ ರೂಢಿಗತವಾಗಿವೆ. ಆಯುರ್ವೇದಾದಿ ಔಷಧಿ eನಗಳ ದೇವತೆ ‘ಧನ್ವಂತರಿ’ಯ ಆವಾಸಸ್ಥಾನ ಮಲಯ ಪರ್ವತವಾಗಿದ್ದು, ಆತನ ದೇವಾಲಯ ಸಹ ಇಲ್ಲಿರುವುದು ವಿಶೇಷ. (ಕಾಲಟಿಯಿಂದ ೧೦ ಕಿ.ಮಿ ದೂರ)

ಮಹೇಂದ್ರ ಪರ್ವತ

 ತ್ರಿಸಾಮಾ, ಋಷ ಕುಲ್ಯಾ, ಇಕ್ಷುಲಾ, ವೇಗವತಿ, ಲಾರಿ ಗೂಲಿನ, ಮಂಶಾಧಾರಾ, ಮಹೇಂದ್ರ ತನಯಾ, ಮುಂತಾದ ನದಿಗಳು ಹುಟ್ಟುತ್ತವೆ. ಉನ್ನತವಾದ ಜಲಪಾತಗಳನ್ನು ಅವು ಸೃಷ್ಪಿಸುತ್ತವೆ. ಭೋರ್ಗರತ ಇವುಗಳ ಪ್ರಮುಖ ಲಕ್ಷಣ. ಅನೇಕ ಋಷಿಗಳು ಇವುಗಳ ತೀರದಲ್ಲಿ ತಪೋನಿರತರಾಗಿದ್ದು, ಆಶ್ರಮ ನಿರ್ಮಿಸಿಕೊಂಡು ಮಂತ್ರ ದ್ರಷ್ಟಾರರೆನಿಸಿದ್ದರು.

ಶಕ್ತಿ ಪರ್ವತ

ಋಷಕಾ, ಸುಕುಮಾರಿ, ಮದಂಗಾ, ಮಂದವಾಹಿನಿ, ಕೃಪಾಮಾಶಿನಿ ಹಾಗೂ ವಾಮನ ಇಲ್ಲಿನ ಪ್ರಮುಖ ನದಿಗಳು, ಕಾಲಾನುಕ್ರಮದಲ್ಲಿ ಶಕ್ತಿ ಪರ್ವತ ಧಾರೆಗಳು, ವಿವಿಧ ಹೆಸರಿನಿಂದ ಕರೆಯಲ್ಪಟ್ಟಿವೆ. ಅದೆಷ್ಟೋ ನದಿಗಳು, ಇಂಗಿ ಹೋಗಿವೆ. ಶಕ್ತಿ ಪರ್ವತದ ಧಾರೆಗಳು, ಜಲಚರಗಳ, ವಿಶೇಷ ಆವಾಸಸ್ಥಾನವಾಗಿವೆ. ಉತ್ಕಲ ಪ್ರದೇಶದಲ್ಲಿ, ಸಮುದ್ರ ಸೇರುವ ದೊಡ್ಡ ನದಿಗಳಿಗೆ ಇವು ಉಪನದಿಗಳಾಗಿವೆ.

ನೀಲಾಂಜನರ ತಿದ್ದುಪಡಿ…

“ಭೀಮರಥ (ಭೀಮಾ), ಕೃಷ್ಣವೇಣ್ಯ (ಕೃಷ್ಣ) ವೇಣ್ಯ (ವೇಣೂ), ತುಂಗಾ (ಪಂಪಾ), ಭದ್ರಾ, ಕಾಳಿ, ಲೋಕಪಾವನೆ, ಸುಪ್ರಿಯೋಗ (ಹಗರಿ) ಬಾಹ್ಯಾ (ವರದಾ), ಕಾವೇರಿ ಮುಂತಾದವು ಪ್ರಮುಖ ನದಿಗಳು. ಈ ಎಲ್ಲಾ ನದಿಗಳು ದಕ್ಷಿಣಾಭಿಮುಖವಾಗಿಯೇ ಹರಿದು, ಪೂರ್ವ ಸಮುದ್ರ ಸೇರುತ್ತವೆ.”

ಇಲ್ಲಿ ಒಂದೆರಡು ತಪ್ಪು ನುಸುಳಿವೆ.
೧. ನದಿಗಳ ಹೆಸರು ಭೀಮರಥೀ, ಕೃಷ್ಣವೇಣೀ ಎಂದು ಈಕಾರಾಂತವಾಗಿರಬೇಕಿತ್ತಲ್ವೇ?
೨. ಕಾಳಿ, ಪೂರ್ವಸಮುದ್ರವನ್ನು ಸೇರುವುದಿಲ್ಲ್. ಒಂದಷ್ಟು ದೂರ ಪೂರ್ವಕ್ಕೆ ಹರಿದು, ನಂತರ ಪಶ್ಚಿಮಕ್ಕೆ ತಿರುಗಿ ಪಶ್ಚಿಮ ಸಮುದ್ರ ಸೇರುತ್ತದೆ.

ಮತ್ತೆ ಹೀಗಂದಿರಿ:
“ತನ್ನ ಪ್ರವಾಹದ ದಿಕ್ಕನ್ನೇ, ಸರಕ್ಕನೇ ಬದಲಾಯಿಸಿ, ಸಂಪೂರ್ಣ ಹಿಂತಿರುಗಿ ಸ್ವಲ್ಪ ದೂರ ಹರಿದು, ಮತ್ತೆ, ಸರಿ ದಿಕ್ಕಿಗೆ ಚಲಿಸುವ ‘ಪಶ್ಚಿಮ ವಾಹಿನಿ’ ಹೆಸರಿನ ಮಹಾ ಕೌತಕವನ್ನು ಹೋಲುವ ‘ಕಾವೇರಿ’ ಈ ಭಾಗದ ಪ್ರಮುಖ ಜೀವನದಿ. ಈ ರೀತಿ ವಿಲಕ್ಷಣ ತಿರುವಿನ ಪ್ರವಾಹ ಕಾವೇರಿ ಹೊರತು ಇನ್ನಾವ ನದಿಗೂ ಇಲ್ಲ!”

ಈ ಸಾಲು ಅಷ್ಟು ಸರಿ ಇಲ್ಲ. ಕಾವೇರಿ ಹಲವು ಕಡೆ ಪಶ್ಚಿಮಕ್ಕೆ ತಿರುಗಿ ಹರಿಯುವುದಾದರೂ ಅದ್ಯಾವುದೂ ಬಹಳ ದೂರ ಇಲ್ಲ. ಮತ್ತೆ, ಕಾಳಿಯಂತೆ, ಪೂರ್ತಿ ೧೮೦ ಡಿಗ್ರಿ ತಿರುಗಿ ಮಶ್ಚಿಮದ ಕಡಲು ಸೇರುವುದೂ ಇಲ್ಲ.

ಬಹುಶಃ ಪೂರ್ವಕ್ಕೆ ಹರಿಯುತ್ತಿರುವ ನದಿಗಳಲ್ಲಿ, ಅದು ಎಲ್ಲಾದರೂ ಪಶ್ಚಿಮಕ್ಕೆ ಹರಿಯುತ್ತಿರುವ ಜಾಗವಿದ್ದರೆ, ಅದು ವಿಶೇಷವೆಂದೂ ಪವಿತ್ರವೆಂದೂ ಪೂಜಿಸುವ ಸಂಪ್ರದಾಯವಿತ್ತೇನೋ. ಅತಿ ಪ್ರಸಿದ್ಧ ಶ್ರೀರಂಗ ಪಟ್ಟಣದ ಪಶ್ಚಿಮವಾಹಿನಿಯೇ ಅಲ್ಲದೆ, ಇನ್ನೂ ಹಲವು ಕಡೆ ಕಾವೇರಿ ಪಶ್ಚಿಮವಾಹಿನಿಯಾಗಿದ್ದಾಳೆ. ಹಾಗೇ ಹೇಮಾವತಿಯೂ ಕೂಡ. ಇವಲ್ಲದೇ ಬೇರೆ ನದಿಗಳು ಹೀಗೆ ತಿರುಗಿರುವ ಸಂದರ್ಭಗಳೂ ಇದ್ದೇ ಇರುತ್ತವೆ ಎಂದು ನನ್ನೆಣಿಕೆ. ಇಲ್ಲವೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ.

-ನೀಲಾಂಜನ