ಸದ್ಗುರುವಿನಿಂದಲೇ ಜಗದ್ಗುರು ಭಾರತ
“ಸದ್ಗುರುವಿನಿಂದಲೇ ಜಗದ್ಗುರು ಭಾರತ” ಇದು ರಾಷ್ಟ್ರಶಕ್ತಿ ಕೇಂದ್ರದಿಂದ ಜಿಗಣಿಯಲ್ಲಿ ಜರುಗಿದ ಒಂದು ದಿನದ ಶಿಕ್ಷಕರ ತರಬೇತಿ ಶಿಬಿರಕ್ಕೆ ನಾವಿಟ್ಟ ಶೀರ್ಷಿಕೆ.
ಗಿರಿನಗರ ಯೋಗಾಶ್ರಮದ “ಸ್ವಾಮಿ ಯೋಗೇಶ್ವರಾನಂದ ಜೀ ಮಹಾರಾಜ್” ಭಾರತ ಮಾತೆಯ ಭೂ ಪಟದ ಮೇಲೆ ಇಡಲಾಗಿದ್ದ ಹಣತೆಯನ್ನು ಬೆಳೆಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ “ಶಿಕ್ಷಕ, ಗುರುವಾಗುವ ಬಗೆಯನ್ನು” ಗಾಯನ-ಪ್ರವಚನದ ಮೂಲಕ ವಿವರಿಸಿದರು. ಸದೃಡ ರಾಷ್ಟ್ರದ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಎಷ್ಟಿದೆ ಎಂಬುದನ್ನು ಅವರು ಇತಿಹಾಸದ ಪುಟಗಳಿಂದ, ಉಪನಿಷತ್ತ್ ವಚನಗಳಿಂದ ಎಳೆ ಎಳೆಯಾಗಿ ವಿವರಿಸಿದರು. ಇದು ಶಿಬಿರದ ಮೊದಲ ಅವಧಿಯ ಹೂರಣ.
ನಂತರ ಶಿಕ್ಷಕರಿಗೆ ತರಗತಿ ತೆಗೆದುಕೊಂಡವರು ರಮಣಶ್ರೀ ಸಮೂಹ ಸಂಸ್ಥೆಯ ಅಧ್ಯಕ್ಷರಾದ, ಕ್ಷಣ ಹೊತ್ತು ಅಣಿ ಮುತ್ತು ಖ್ಯಾತಿಯ ಷಡಕ್ಷರಿಯವರು. ಅದೊಂತರಹ ಪ್ರಾಕ್ಟಿಕಲ್ ಕ್ಲಾಸು. ಪ್ರೊಜೆಕ್ಟರ್ ಬಳಸಿ ಷಡಕ್ಷರಿ ಮೇಷ್ಟ್ರು ತೆಗೆದುಕೊಂಡ ಕ್ಲಾಸು. “ನವಿರಾದ ಹಾಸ್ಯದ ಜತೆಗೆ ಗಂಭಿರವಾದ ವಿಚಾರವನ್ನು ನಮ್ಮ ಮುಂದಿಟ್ಟ ಷಡಕ್ಷರಿ ಓರ್ವ ಬರಹಗಾರರೆಂದು ಗೊತ್ತಿತ್ತು. ಮಾತುಗಾರರು ಎಂಬುದನ್ನು ಕೇಳಿದ್ದೆವು. ಆದರೆ ಒಬ್ಬ ಶಿಕ್ಷಕ ಎಂಬುದನ್ನು ಕಣ್ಣಾರೆ ಕಂಡೆವು” ಷಡಕ್ಷರಿ ಉಪನ್ಯಾಸ ಮುಗಿದ ನಂತರ ಶಿಬಿರದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯ ಶಿಕ್ಷಕ ಡಿ.ಎಲ್.ಎನ್ ಮೇಷ್ಟ್ರು ಉದ್ಗರಿಸಿದ ಸಾಲುಗಳಿವು. “ಬದುಕು ಬದಲಾಯಿಸಬಲ್ಲ ಶಿಕ್ಷಕ” ಇದು ಷಡಕ್ಷರಿಯವರ ಉಪನ್ಯಾಸದ ವಿಚಾರ. ಬದುಕು ಬದಲಾಯಿಸಬಲ್ಲ ಶಿಕ್ಷಕ ತರಗತಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಯಶಸ್ವಿ ಶಿಕ್ಷಕರ ಉದಾಹರಣೆಗಳೊಂದಿಗೆ ವಿವರಿಸುತ್ತಿದ್ದರೆ ಕುಳಿತವರಿಗೆ ಘಂಟೆ ೧.೩೦ ಆಗಿದ್ದು ತಿಳಿಯಲೇ ಇಲ್ಲ! ಕೊನೆಗೆ ಷಡಕ್ಷರಿಯವರೇ ೧.೩೦ ಆಯಿತು ಈಗ ಊಟದ ಸಮಯ ಅಂತಾ ಉಪನ್ಯಾಸ ನಿಲ್ಲಿಸಿದರು. ಸುಮಾರು ೧.೪೫ ಘಂಟೆ ಕಾಲದ ಉಪನ್ಯಾಸವಾದರೂ ಹೇಳಿದ ವಿಚಾರಗಳು ಜೀವನ ಪರ್ಯಂತಕ್ಕೂ ಸಾಕಾಗುವಷ್ಟು.
ಪ್ರಶಾಂತಿ ಕುಟೀರ ಹೆಸರಿಗೆ ತಕ್ಕಂತೆ ಪ್ರಶಾಂತವಾದ ಕುಟೀರ. ಜಿಗಣಿಯಿಂದ ಮೈಲು ದೂರದಲ್ಲಿರುವ ವಿವೇಕಾನಂದ ಯೋಗ ಅನುಸಂದಾನ ವಿಶ್ವವಿದ್ಯಾನಿಲಯದ ಇನ್ನೊಂದು ಹೆಸರೇ ಪ್ರಶಾಂತಿ ಕುಟೀರ. ಅಲ್ಲಿನ ವಾತವರಣವೇ ಒಂತರಹ ಋಷಿ ಮುನಿಗಳ ಕಾಲದ ಪರಿಸರ. ಪುಟ್ಟ,ಪುಟ್ಟ ಕುಟೀರಗಳು, ನಡುನಡುವೆ ಪ್ರಾರ್ಥನಾ ಮಂದಿರ….ಒಂದು ಅದ್ಬುತ ಸ್ಥಳವದು. ಅಲ್ಲಿನ ಊಟೋಪಚಾರವೂ ಯೋಗಕ್ಕೆ ತಕ್ಕಂತಹದ್ದೇ. ಊಟ ಮುಗಿದ ನಂತರ ಸಂಗೀತ ರಸಮಂಜರಿ.
ಹೊಡಿಮಗ, ಹೊಡಿಮಗ ಬಿಡಬೇಡ ಅವನ್ನಾ….ರಸಮಂಜರಿ ಅಂದ್ರೆ ಇಂತಹದ್ದೆ ಗೀತೆಗಳಲ್ವಾ? “ಸಾರ್ ನಮಗೆ ಈ ತರಹದ್ದು ಒಂದು ಸಂಗೀತ ರಸ ಮಂಜರಿ ನಡೆಸಬಹುದು ಅಂತಾ ಗೊತ್ತೆ ಇರಲಿಲ್ಲ. ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಇಂತಹದ್ದೆ ರಸಮಂಜರಿ ಆಯೋಜಿಸುತ್ತೇವೆ” ಶಂಕರ್ ಶ್ಯಾನುಬೋಗರ ದೇಶಭಕ್ತಿಗೀತೆಗಳ ರಸ ಮಂಜರಿ ಸವಿದ ನಂತರ ಪ್ರಾಧ್ಯಾಪರೊಬ್ಬರು ಹೇಳಿದ ಸಾಲಿದು. “ವಂದೇ ಮಾತರಂ’ ಎಂಬ ಅದ್ಬುತವಾದ ರಾಷ್ಟ್ರಪ್ರೇಮ ಸಾರುವ ವಿಭಿನ್ನ ದೇಶ ಭಕ್ತಿಗೀತೆಗಳ ರಸಮಂಜರಿಯಿಂದ ಖ್ಯಾತರಾದ ಗಾಯಕ ಶಂಕರ್ಶ್ಯಾನುಬೋಗ್ ನಡೆಸಿಕೊಟ್ಟ ಸುಮಾರು ಒಂದುವರೆ ತಾಸುಗಳ ದೇಶಭಕ್ತಿ ಗೀತೆ ಗಾಯನ ಇಡೀ ಕಾರ್ಯಕ್ರಮದ ಯಶಸ್ಸಿನ ಘಟ್ಟ ಬಿಡ್ರಿ ಅಂತಾ ಶಿಕ್ಷರೊಬ್ಬರು ಉದ್ಗಾರ ತೆಗೆಯುವ ಹೊತ್ತಿಗೆ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಆರಂಭವಾಗಿತ್ತು.
“ಸಮರ್ಥ ಶಿಕ್ಷಕ-ರಾಷ್ಟ್ರ ರಕ್ಷಕ” ವಿಚಾರವಾಗಿ ಮಾತನಾಡಿದ ಸೂಲಿಬೆಲೆ ಎಲ್ಲರ ಕಣ್ಣಲ್ಲೂ ನೀರಿಳಿಸಿದರು. “ಅವರ ಭಾಷಣ ಅದೆಷ್ಟು ಪ್ರಖರವಾಗಿತ್ತೆಂದರೆ ನಾನು ನಾಲ್ಕು ಜನರ ಕಣ್ಣಲ್ಲಿ ಕಣ್ಣೀರು ಕಂಡೆ. ಮಾತ್ರವಲ್ಲ ನಾನು ಕಣ್ಣಿರು ಹಾಕಿದೆ” ಎಂದು ಶಂಕರ್ಶ್ಯಾನುಬೋಗ್ ನಂತರ ಹೀಗೆ ಮಾತಾಡುತ್ತಾ ಹೇಳಿದರು. ಶಿಕ್ಷಕರ ಅಂತಸತ್ವವನ್ನು ಜಾಗೃತಗೊಳಿಸುವಲ್ಲಿ ಚಕ್ರವರ್ತಿಗಿಂತ ಅದ್ಬುತ ಮಾತುಗಾರ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಎಂಬುದು ನಮ್ಮ ಭಾವ. ಇದು ಹೊಗಳಿಕೆಯ ಮಾತಲ್ಲ ಶಿಕ್ಷಕರುಗಳು ಚಕ್ರವರ್ತಿ ಮಾತಾಡಿದ ನಂತರ ಹಂಚಿಕೊಂಡ ಅನುಭವದಿಂದ ಆಯ್ದ ಮಾತು.
ಶಿಕ್ಷಕರ ಅನುಭವ ಹಂಚಿಕೆ ಶಿಬಿರದ ಕೊನೆ ಭಾಗ. ಎಷ್ಟೋ ಜನ ಶಿಕ್ಷಕರಿಗೆ ಅನುಭವ ಹಂಚಿಕೊಳ್ಳಲು ಅವಕಾಶವೇ ಸಿಗಲಿಲ್ಲ ಸಮಯದ ಅಭಾವದಿಂದ. ಒಟ್ಟಿನಲ್ಲಿ ಒಂದು ಯಶಸ್ವಿ ಕಾರ್ಯಕ್ರಮ ಈ ಶಿಬಿರ. “ಸಾರ್ ಇಂತಹದ್ದೊಂದು ಕಾರ್ಯಕ್ರಮ ನಮ್ಮ ಶಾಲೆಯಲ್ಲೂ ನಡೆಯಬೇಕು. ನೀವೇ ಬಂದು ನಡೆಸಿಕೊಡಬೇಕ. ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಸೇರಿಸ್ತೇವೆ. ಹಣದ ಬಗ್ಗೆಯೂ ಚಿಂತೆಯಿಲ್ಲ, ಸ್ವತಃ ನಾವೇ ಹಾಕಿಕೊಂಡು ಏರ್ಪಾಡು ಮಾಡ್ತೇವೆ…” ಎಂದು ಕೋರಿರುವ ಮುಖ್ಯಶಿಕ್ಷಕರ ಮಾತುಗಳೇ ಶಿಬಿರದ ಯಶಸ್ಸಿಗೆ ಹಿಡಿದ ಕನ್ನಡಿ. ಈ ಶಿಬಿರದ ಯಶಸ್ಸಿನ ಹಿಂದೆ ರಾಷ್ಟ್ರಶಕ್ತಿ ಕೇಂದ್ರದ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವಿದೆ. ಮತ್ತು ಕಾರ್ಯಕ್ರಮದಿಂದಾಗಿ ಕೇಂದ್ರದ ಜವಬ್ದಾರಿಯೂ ಮತ್ತಷ್ಟು ಹೆಚ್ಚಾಗಿದೆ.
~ ಪಯಣಿಗ
It is very pleasurable to read the above article, the same kind of programmes should have to take in all nuke and corner of country ,so each and every teacher should realise his immense potential.If at all we want to free this world from all the ills like corruption ,is the teacher who can contribute maximum by teaching way of life to students.